19
ಪೌಲ ಎಫೆಸದಲ್ಲಿ
ಅಪೊಲ್ಲೋಸನು ಕೊರಿಂಥ ಪಟ್ಟಣದಲ್ಲಿದ್ದಾಗ ಪೌಲನು ಎಫೆಸ ಪಟ್ಟಣಕ್ಕೆ ಪ್ರಯಾಣ ಮಾಡುತ್ತಾ ದಾರಿಯಲ್ಲಿ ಸಿಕ್ಕಿದ ಕೆಲವು ಊರುಗಳನ್ನು ಸಂದರ್ಶಿಸಿದನು. ಅವನು ಎಫೆಸ ಪಟ್ಟಣವನ್ನು ತಲುಪಿದಾಗ, ಕೆಲವು ಮಂದಿ ಶಿಷ್ಯರನ್ನು ಕಂಡು, “ನೀವು ನಂಬಿಕೊಂಡಾಗ ಪವಿತ್ರಾತ್ಮನನ್ನು ಹೊಂದಿಕೊಂಡಿರಾ?” ಎಂದು ಕೇಳಿದನು.
ಆ ಶಿಷ್ಯರು ಅವನಿಗೆ, “ಪವಿತ್ರಾತ್ಮನು ಇದ್ದಾನೆ ಎಂಬುದನ್ನು ನಾವು ಇದುವರೆಗೆ ಕೇಳಿಯೂ ಇಲ್ಲ!” ಎಂದರು.
ಪೌಲನು ಅವರಿಗೆ, “ನೀವು ಯಾವ ಬಗೆಯ ದೀಕ್ಷಾಸ್ನಾನ ಪಡೆದಿರಿ?” ಎಂದು ಕೇಳಿದನು.
ಅವರು, “ಯೋಹಾನನು ಬೋಧಿಸಿದ ದೀಕ್ಷಾಸ್ನಾನವನ್ನು ನಾವು ಮಾಡಿಸಿಕೊಂಡೆವು” ಎಂದು ಹೇಳಿದರು.
ಅದಕ್ಕೆ ಪೌಲನು, “ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದನು. ಅಲ್ಲದೆ ತನ್ನ ತರುವಾಯ ಬರುವಾತನಲ್ಲಿ ನಂಬಿಕೆ ಇಡಬೇಕೆಂದು ಅವರಿಗೆ ಹೇಳಿದನು. ಆ ವ್ಯಕ್ತಿಯೇ ಯೇಸು” ಎಂದನು.
ಇದನ್ನು ಕೇಳಿದಾಗ ಆ ಶಿಷ್ಯರು ಪ್ರಭುವಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು. ಬಳಿಕ ಪೌಲನು ಅವರ ಮೇಲೆ ತನ್ನ ಕೈಗಳನ್ನಿಟ್ಟಾಗ ಅವರು ಪವಿತ್ರಾತ್ಮಭರಿತರಾದರು. ಅವರು ವಿವಿಧ ಭಾಷೆಗಳಲ್ಲಿ ಮಾತಾಡಿದರು ಮತ್ತು ಪ್ರವಾದನೆ ಮಾಡಿದರು. ಈ ಗುಂಪಿನಲ್ಲಿ ಸುಮಾರು ಹನ್ನೆರಡು ಮಂದಿ ಇದ್ದರು.
ಅನಂತರ ಮೂರು ತಿಂಗಳ ಕಾಲ ಪೌಲನು ಸಭಾಮಂದಿರಕ್ಕೆ ಹೋಗಿ ಬಹು ಧೈರ್ಯದಿಂದ ಮಾತಾಡಿದನು. ಅವನು ಯೆಹೂದ್ಯರಿಗೆ ದೇವರ ರಾಜ್ಯದ ಸಂಗತಿಗಳನ್ನು ತಿಳಿಸಿ ಅವರನ್ನು ಒಡಂಬಡಿಸಲು ಪ್ರಯತ್ನಿಸಿದನು. ಆದರೆ ಆ ಯೆಹೂದ್ಯರಲ್ಲಿ ಕೆಲವರು ಮೊಂಡರಾದರು. ಅವರು ನಂಬದೆ ದೇವರ ಮಾರ್ಗವನ್ನು ಜನರೆಲ್ಲರ ಎದುರಿನಲ್ಲಿ ದೂಷಿಸಿದರು. ಆದ್ದರಿಂದ ಪೌಲನು ಏಷ್ಯಾ ಪ್ರಾಂತ್ಯದ ಆ ಯೆಹೂದ್ಯರನ್ನೆಲ್ಲ ಬಿಟ್ಟು, ಯೇಸುವಿನ ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ತುರನ್ನನ ಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸಿದನು. 10 ಹೀಗೆ ಎರಡು ವರ್ಷಗಳು ಕಳೆದವು. ಇದರಿಂದಾಗಿ, ಏಷ್ಯಾದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರು ಮತ್ತು ಗ್ರೀಕರು ಪ್ರಭುವಿನ ವಾಕ್ಯವನ್ನು ಕೇಳಿದರು.
ಸ್ಕೇವನ ಗಂಡುಮಕ್ಕಳು
11 ದೇವರು ಪೌಲನ ಕೈಯಿಂದ ಬಹು ವಿಶೇಷವಾದ ಮಹತ್ಕಾರ್ಯಗಳನ್ನು ಮಾಡಿಸುತ್ತಿದ್ದನು. 12 ಪೌಲನ ಕರವಸ್ತ್ರಗಳನ್ನು ಮತ್ತು ಬಟ್ಟೆಗಳನ್ನು ಕೆಲವರು ತೆಗೆದುಕೊಂಡು ಹೋಗಿ ರೋಗಿಗಳ ಮೇಲೆ ಹಾಕುತ್ತಿದ್ದರು. ಆ ಕೂಡಲೇ ರೋಗಿಗಳು ಗುಣಹೊಂದುತ್ತಿದ್ದರು. ದೆವ್ವಗಳಿಂದ ಪೀಡಿತರಾಗಿದ್ದವರನ್ನು ದೆವ್ವಗಳು ಬಿಟ್ಟುಹೋಗುತ್ತಿದ್ದವು.
13-14 ಕೆಲವು ಯೆಹೂದ್ಯರು ಸಹ ಊರೂರುಗಳಿಗೆ ಸಂಚರಿಸುತ್ತಾ ದೆವ್ವದಿಂದ ಪೀಡಿತರಾಗಿದ್ದ ಜನರೊಳಗಿಂದ ದೆವ್ವಗಳನ್ನು ಯೇಸುವಿನ ಹೆಸರಿನ ಮೂಲಕ ಹೊರಡಿಸುತ್ತಿದ್ದರು. ಸ್ಕೇವ ಎಂಬವನ ಏಳು ಮಂದಿ ಗಂಡುಮಕ್ಕಳೂ ಹೀಗೇ ಮಾಡುತ್ತಿದ್ದರು. (ಸ್ಕೇವನು ಪ್ರಧಾನಯಾಜಕನಾಗಿದ್ದನು.) ಅವರೆಲ್ಲರೂ, “ಪೌಲನು ಯಾವ ಯೇಸುವಿನ ಬಗ್ಗೆ ಹೇಳುತ್ತಿದ್ದಾನೋ ಆ ಯೇಸುವಿನ ಹೆಸರಿನಿಂದಲೇ ನೀನು ಹೊರಗೆ ಬರಬೇಕೆಂದು ನಾವು ಆಜ್ಞಾಪಿಸುತ್ತೇವೆ” ಎಂದು ಹೇಳುತ್ತಿದ್ದರು.
15 ಆದರೆ ಒಂದು ಸಲ ದೆವ್ವವೊಂದು ಅವರಿಗೆ, “ನನಗೆ ಯೇಸುವೂ ಗೊತ್ತು ಪೌಲನೂ ಗೊತ್ತು. ಆದರೆ ನೀವು ಯಾರು?” ಎಂದು ಪ್ರತ್ಯುತ್ತರ ಕೊಟ್ಟಿತು.
16 ಬಳಿಕ ದೆವ್ವಪೀಡಿತನಾಗಿದ್ದ ಆ ಮನುಷ್ಯನು ಈ ಯೆಹೂದ್ಯರ ಮೇಲೆ ಹಾರಿಬಿದ್ದನು. ಅವನು ಅವರಿಗಿಂತ ಹೆಚ್ಚು ಬಲವುಳ್ಳವನಾಗಿದ್ದನು. ಅವನು ಅವರಿಗೆ ಹೊಡೆದು ಅವರ ಬಟ್ಟೆಗಳನ್ನು ಹರಿದು ಹಾಕಿದನು. ಅವರು ಆ ಮನೆಯಿಂದ ಓಡಿಹೋದರು.
17 ಎಫೆಸದಲ್ಲಿದ್ದ ಯೆಹೂದ್ಯರು ಮತ್ತು ಗ್ರೀಕರು ಇದನ್ನು ಕೇಳಿ ಭಯಗ್ರಸ್ತರಾದರು ಮತ್ತು ಪ್ರಭು ಯೇಸುವಿನ ಹೆಸರನ್ನು ಸನ್ಮಾನಿಸಿದರು. 18 ವಿಶ್ವಾಸಿಗಳಲ್ಲಿ ಅನೇಕರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡತೊಡಗಿದರು. 19 ವಿಶ್ವಾಸಿಗಳಲ್ಲಿ ಕೆಲವರು ಮಂತ್ರಗಳನ್ನು ಮಾಡುತ್ತಿದ್ದರು. ಈ ವಿಶ್ವಾಸಿಗಳು ತಮ್ಮ ಮಂತ್ರ ಪುಸ್ತಕಗಳನ್ನು ತೆಗೆದುಕೊಂಡು ಬಂದು ಜನರೆಲ್ಲರ ಮುಂದೆ ಅವುಗಳನ್ನು ಸುಟ್ಟುಹಾಕಿದರು. ಈ ಪುಸ್ತಕಗಳ ಬೆಲೆಯು ಸುಮಾರು ಐವತ್ತು ಸಾವಿರ ಬೆಳ್ಳಿನಾಣ್ಯಗಳು. 20 ಹೀಗೆ ಪ್ರಭುವಿನ ವಾಕ್ಯವು ಶಕ್ತಿಯುತವಾದ ರೀತಿಯಲ್ಲಿ ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದಾಗಿ ಹೆಚ್ಚುಹೆಚ್ಚು ಜನರು ನಂಬಿಕೊಂಡರು.
ಪ್ರಯಾಣಕ್ಕೆ ಪೌಲನ ಯೋಜನೆ
21 ಈ ಘಟನೆಗಳ ನಂತರ ಪೌಲನು ಮಕೆದೋನಿಯ ಮತ್ತು ಅಖಾಯ ದೇಶಗಳ ಮೂಲಕ ಜೆರುಸಲೇಮಿಗೆ ಹೋಗಲು ಯೋಜನೆ ಮಾಡಿದನು. “ನಾನು ಜೆರುಸಲೇಮನ್ನು ಸಂದರ್ಶಿಸಿದ ಮೇಲೆ ರೋಮ್ ನಗರವನ್ನು ಸಹ ಸಂದರ್ಶಿಸಬೇಕು” ಎಂದು ಪೌಲನು ಯೋಚಿಸಿಕೊಂಡನು. 22 ತಿಮೊಥೆ ಮತ್ತು ಎರಸ್ತ ಎಂಬುವರು ಪೌಲನ ಸಹಾಯಕರಾಗಿದ್ದರು. ಪೌಲನು ಅವರನ್ನು ಮಕೆದೋನಿಯ ದೇಶಕ್ಕೆ ಮುಂಚಿತವಾಗಿಯೇ ಕಳುಹಿಸಿದನು. ಪೌಲನು ಇನ್ನೂ ಸ್ವಲ್ಪಕಾಲ ಏಷ್ಯಾದಲ್ಲಿ ತಂಗಿದನು.
ಎಫೆಸದಲ್ಲಿ ಗಲಭೆ
23 ಆದರೆ ಆ ಸಮಯದಲ್ಲಿ ದೇವರ ಮಾರ್ಗದ ಬಗ್ಗೆ ತೀವ್ರ ಗಲಭೆಯೊಂದು ಎಫೆಸದಲ್ಲಿ ಉಂಟಾಯಿತು. ಅದು ನಡೆದ ರೀತಿ ಇಂತಿದೆ: 24 ಅಲ್ಲಿ ದೇಮೇತ್ರಿಯನೆಂಬ ಒಬ್ಬ ವ್ಯಕ್ತಿಯಿದ್ದನು. ಅವನು ಅಕ್ಕಸಾಲಿಗನಾಗಿದ್ದನು. ಅರ್ತೆಮಿ* ದೇವತೆಯ ಗುಡಿಯಾಕಾರದಲ್ಲಿ ಬೆಳ್ಳಿಯಿಂದ ಚಿಕ್ಕಚಿಕ್ಕ ಗುಡಿಗಳನ್ನು ಅವನು ತಯಾರಿಸುತ್ತಿದ್ದನು. ಈ ಕಸುಬನ್ನು ಮಾಡುತ್ತಿದ್ದ ಜನರು ಬಹಳವಾಗಿ ಹಣ ಸಂಪಾದಿಸಿದರು.
25 ದೇಮೇತ್ರಿಯನು ಈ ಜನರನ್ನು ಮತ್ತು ಇದೇ ರೀತಿಯ ಕಸುಬನ್ನು ಮಾಡುತ್ತಿದ್ದ ಇತರ ಜನರನ್ನು ಸಭೆಸೇರಿಸಿ ಅವರಿಗೆ, “ಜನರೇ, ನಮ್ಮ ಈ ಕಸುಬಿನಿಂದ ನಾವು ಬಹಳ ಹಣವನ್ನು ಗಳಿಸುತ್ತಿದ್ದೇವೆ ಎಂಬುದು ನಿಮಗೆ ಗೊತ್ತೇ ಇದೆ. 26 ಆದರೆ ಪೌಲ ಎಂಬುವನು ಏನು ಮಾಡುತ್ತಿದ್ದಾನೆಂಬುದನ್ನು ನೋಡಿರಿ! ಅವನು ಏನು ಹೇಳುತ್ತಿದ್ದಾನೆಂಬುದನ್ನು ಕೇಳಿರಿ! ಪೌಲನು ಅನೇಕ ಜನರ ಮೇಲೆ ಪ್ರಭಾವಬೀರಿ ಅವರನ್ನು ಪರಿವರ್ತಿಸಿದ್ದಾನೆ. ಅವನು ಎಫೆಸದಲ್ಲಿಯೂ ಏಷ್ಯಾ ದೇಶದ ಎಲ್ಲಾ ಕಡೆಗಳಲ್ಲಿಯೂ ಹೀಗೆಯೇ ಮಾಡಿದ್ದಾನೆ. ಮನುಷ್ಯರು ತಯಾರಿಸುವ ದೇವರುಗಳು ನಿಜವಾದ ದೇವರುಗಳಲ್ಲ ಎಂದು ಹೇಳುತ್ತಿದ್ದಾನೆ. 27 ಇದರಿಂದಾಗಿ ಜನರು ನಮ್ಮ ಕೆಲಸದ ವಿರುದ್ಧ ರೊಚ್ಚಿಗೇಳಬಹುದು. ಅಷ್ಟೇ ಅಲ್ಲ, ಮಹಾದೇವತೆಯಾದ ಅರ್ತೆಮಿಯ ಗುಡಿಯನ್ನು ಜನರು ಕಡೆಗಣಿಸುವ ಸಾಧ್ಯತೆಯೂ ಇದೆ. ಆಗ, ಏಷ್ಯಾದಲ್ಲಿ ಮತ್ತು ಇಡೀ ಪ್ರಪಂಚದಲ್ಲಿ ಪೂಜಿಸಲ್ಪಡುತ್ತಿರುವ ಅರ್ತೆಮಿಯ ದೇವತೆಯ ವೈಭವ ಅಳಿದುಹೋಗುವುದು” ಎಂದನು.
28 ಈ ಮಾತುಗಳನ್ನು ಕೇಳಿದ ಜನರು ಬಹು ಕೋಪಗೊಂಡು, “ಎಫೆಸದ ಅರ್ತೆಮಿದೇವಿಯೇ ಮಹಾದೇವಿ!” ಎಂದು ಕೂಗಿದರು. 29 ಪಟ್ಟಣದಲ್ಲಿದ್ದ ಜನರೆಲ್ಲಾ ಗಲಿಬಿಲಿಗೊಂಡರು. ಜನರು ಗಾಯ ಮತ್ತು ಅರಿಸ್ತಾರ್ಕ ಎಂಬವರನ್ನು ಹಿಡಿದುಕೊಂಡರು. (ಇವರಿಬ್ಬರು ಮಕೆದೋನಿಯದವರು ಮತ್ತು ಪೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು.) ಬಳಿಕ ಜನರೆಲ್ಲರು ಕ್ರೀಡಾಂಗಣಕ್ಕೆ ಓಡಿಹೋದರು. 30 ಇದನ್ನು ತಿಳಿದ ಪೌಲನು ಒಳಗೆ ಹೋಗಿ ಜನರೊಂದಿಗೆ ಮಾತಾಡಬೇಕೆಂದಿದ್ದನು. ಆದರೆ ಯೇಸುವಿನ ಶಿಷ್ಯರು ಅವನನ್ನು ಹೋಗಗೊಡಿಸಲಿಲ್ಲ. 31 ಅಲ್ಲದೆ, ಪೌಲನ ಸ್ನೇಹಿತರಾಗಿದ್ದ ಈ ದೇಶದ ನಾಯಕರುಗಳಲ್ಲಿ ಕೆಲವರು ಅವನಿಗೆ ಒಂದು ಸಂದೇಶವನ್ನು ಕಳುಹಿಸಿ ಕ್ರೀಡಾಂಗಣದೊಳಗೆ ಹೋಗಬಾರದೆಂದು ತಿಳಿಸಿದರು.
32 ಕೆಲವು ಜನರು ಒಂದು ವಿಷಯದ ಬಗ್ಗೆ ಬೊಬ್ಬೆ ಹಾಕುತ್ತಿದ್ದರೆ, ಉಳಿದ ಜನರು ಬೇರೆ ವಿಷಯಗಳ ಬಗ್ಗೆ ಕೂಗಾಡುತ್ತಿದ್ದರು. ಸಭೆಯು ಬಹಳ ಗಲಿಬಿಲಿಗೊಳಗಾಯಿತು. ತಾವು ಅಲ್ಲಿಗೆ ಯಾಕೆ ಬಂದಿದ್ದೇವೆ ಎಂಬುದೇ ಅನೇಕ ಜನರಿಗೆ ತಿಳಿದಿರಲಿಲ್ಲ. 33 ಯೆಹೂದ್ಯರು ಅಲೆಕ್ಸಾಂಡರ್ ಎಂಬವನನ್ನು ಜನರ ಮುಂದೆ ನೂಕಿ ಮಾತಾಡಲು ಪುಸಲಾಯಿಸಿದರು. ಅವನು ಜನರಿಗೆ ಮೌನವಾಗಿರುವಂತೆ ಕೈಸನ್ನೆಮಾಡಿ ಜನರ ಪರವಾಗಿ ವಾದಿಸಬೇಕೆಂದಿದ್ದನು. 34 ಆದರೆ ಅಲೆಕ್ಸಾಂಡರನು ಯೆಹೂದ್ಯನೆಂದು ತಿಳಿದಾಗ ಜನರೆಲ್ಲರು, “ಎಫೆಸದ ಅರ್ತೆಮಿಯು ಮಹಾದೇವಿ! ಎಫೆಸದ ಅರ್ತೆಮಿಯು ಮಹಾದೇವಿ! ಅರ್ತೆಮಿಯು ಮಹಾದೇವಿ…!” ಎಂದು ಒಂದೇಸಮನೆ ಎರಡು ತಾಸುಗಳವರೆಗೆ ಕೂಗಿದರು.
35 ಬಳಿಕ ಪಟ್ಟಣದ ಅಧಿಕಾರಿಯು ಜನಸಮೂಹವನ್ನು ಶಾಂತಗೊಳಿಸಿ ಅವರಿಗೆ, “ಎಫೆಸದ ಜನರೇ, ಮಹಾದೇವತೆಯಾದ ಅರ್ತೆಮಿ ದೇವಿಯ ಗುಡಿಯನ್ನು ಎಫೆಸ ಪಟ್ಟಣವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ತಿಳಿದಿದೆ. ಆಕೆಯ ಪವಿತ್ರ ಕಲ್ಲನ್ನು ಸಹ ನಾವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ಗೊತ್ತಿದೆ. 36 ಇದು ಸತ್ಯವಲ್ಲವೆಂದು ಯಾರೂ ಹೇಳಲಾಗದು. ಆದ್ದರಿಂದ ಮೌನದಿಂದಿರಬೇಕು. ನೀವು ಏನನ್ನೇ ಮಾಡುವುದಕ್ಕಿಂತ ಮೊದಲು ಸಮಾಧಾನದಿಂದ ಯೋಚಿಸಬೇಕು.
37 “ನೀವು ಈ ಜನರನ್ನು ಹಿಡಿದುಕೊಂಡು ಬಂದಿದ್ದೀರಿ. ಆದರೆ ಇವರು ನಮ್ಮ ದೇವತೆಯ ವಿರೋಧವಾಗಿ ಯಾವ ಕೆಟ್ಟದ್ದನ್ನೂ ಹೇಳಿಲ್ಲ. ಅವರು ಆಕೆಯ ಗುಡಿಯಿಂದ ಏನನ್ನೂ ಕದ್ದುಕೊಂಡಿಲ್ಲ. 38 ನಮ್ಮಲ್ಲಿ ನ್ಯಾಯಾಲಯಗಳಿವೆ ಮತ್ತು ನ್ಯಾಯಾಧೀಶರುಗಳು ಇದ್ದಾರೆ. ದೇಮೇತ್ರಿಯನಿಗಾಗಲಿ ಮತ್ತು ಅವನೊಂದಿಗೆ ಕೆಲಸ ಮಾಡುವ ಜನರಿಗಾಗಲಿ ಯಾರ ಮೇಲಾದರೂ ದೂರುಗಳಿವೆಯೇ? ದೂರುಗಳಿದ್ದರೆ, ಅವರು ನ್ಯಾಯಾಲಯಗಳಿಗೆ ಹೋಗಬೇಕು! ಅವರು ಪರಸ್ಪರ ವಾದ ಮಾಡಲು ಅದೇ ತಕ್ಕ ಸ್ಥಳ!
39 “ನೀವು ಬೇರೆ ಏನನ್ನಾದರೂ ಕುರಿತು ಮಾತಾಡಬೇಕೆಂದಿದ್ದೀರಾ? ಮಾತಾಡಬೇಕೆಂದಿದ್ದರೆ, ಕಾನೂನುಬದ್ಧವಾದ ನಗರಸಭೆಗೆ ಬನ್ನಿರಿ. ಅಲ್ಲಿ ಅದನ್ನು ನಿರ್ಧರಿಸಬಹುದು. 40 ನಾನು ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಇಂದಿನ ಗಲಭೆಯನ್ನು ಕಂಡ ಕೆಲವು ಜನರು ನಾವು ದಂಗೆ ಏಳುತ್ತಿದ್ದೇವೆಂದು ಹೇಳುವ ಸಾಧ್ಯತೆಯಿದೆ. ನಾವು ಈ ಗಲಭೆಯನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಯಾಕೆಂದರೆ ಈ ಸಭೆಗೆ ಸರಿಯಾದ ಕಾರಣವೇ ಇಲ್ಲ” ಎಂದು ಹೇಳಿದನು. 41 ಪಟ್ಟಣದ ಅಧಿಕಾರಿಯು ಈ ಸಂಗತಿಗಳನ್ನು ಹೇಳಿದ ಬಳಿಕ ಮನೆಗೆ ಹೋಗಬೇಕೆಂದು ಜನರಿಗೆ ತಿಳಿಸಿದನು. ಆಗ ಅವರೆಲ್ಲರು ಹೊರಟುಹೋದರು.
* 19:24 ಅರ್ತೆಮಿ ಗ್ರೀಕರ ದೇವತೆ. ಏಷ್ಯಾ ಮೈನರಿನ ಜನರು ಈಕೆಯನ್ನು ಆರಾಧಿಸುತ್ತಿದ್ದರು. 19:35 ಪವಿತ್ರ ಕಲ್ಲು ಅರ್ತೆಮಿ ದೇವಿಯೆಂದು ಜನರು ಆರಾಧಿಸುತ್ತಿದ್ದ ಕಲ್ಲಿನ ಪ್ರತಿಮೆ.