12
ಪವಿತ್ರಾತ್ಮನ ವರಗಳು
ಸಹೋದರ ಸಹೋದರಿಯರೇ, ಆತ್ಮಿಕ ವರಗಳ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. ನೀವು ವಿಶ್ವಾಸಿಗಳಾಗುವುದಕ್ಕಿಂತ ಮುಂಚೆ ನಿಮ್ಮ ಜೀವಿತವು ಹೇಗಿತ್ತೆಂಬುದನ್ನು ಜ್ಞಾಪಿಸಿಕೊಳ್ಳಿರಿ. ನಿಮಗಿಷ್ಟ ಬಂದಂತೆ ನಿರ್ಜೀವ ವಸ್ತುಗಳಾದ ವಿಗ್ರಹಗಳನ್ನು ಆರಾಧಿಸುತ್ತಿದ್ದಿರಿ. ಹೀಗಿರಲಾಗಿ, ನಾನು ನಿಮಗೆ ಹೇಳುವುದೇನೆಂದರೆ, ದೇವರಾತ್ಮನ ಸಹಾಯದಿಂದ ಮಾತಾಡುವ ಯಾವ ವ್ಯಕ್ತಿಯೇ ಆಗಲಿ, “ಯೇಸು ಶಾಪಗ್ರಸ್ತನಾಗಲಿ” ಎಂದು ಹೇಳುವುದಿಲ್ಲ. ಅಂತೆಯೇ ಪವಿತ್ರಾತ್ಮನ ಸಹಾಯವಿಲ್ಲದೆ ಯಾವ ವ್ಯಕ್ತಿಯೇ ಆಗಲಿ, “ಯೇಸುವೇ ಪ್ರಭು” ಎಂದು ಹೇಳಲಾರನು.
ಅನೇಕ ರೀತಿಯ ಆತ್ಮಿಕ ವರಗಳಿವೆ. ಆದರೆ ಅವುಗಳೆಲ್ಲ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. ಸೇವೆಮಾಡಲು ವಿವಿಧ ಮಾರ್ಗಗಳಿವೆ, ಆದರೆ ಅವುಗಳೆಲ್ಲಾ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ. ದೇವರು ಜನರಲ್ಲಿ ಮಾಡುವ ಕಾರ್ಯಗಳಿಗೂ ವಿವಿಧ ಮಾರ್ಗಗಳಿವೆ. ಆದರೆ ಅವುಗಳೆಲ್ಲಾ ಒಬ್ಬನೇ ದೇವರಿಂದ ಬಂದಂಥವುಗಳಾಗಿವೆ.
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪವಿತ್ರಾತ್ಮನ ವರವು ಕಾಣಬಲ್ಲದು. ಇತರರಿಗೆ ಸಹಾಯ ಮಾಡಲೆಂದು ಪವಿತ್ರಾತ್ಮನು ವರವನ್ನು ಕೊಡುತ್ತಾನೆ. ಆತನು ಒಬ್ಬನಿಗೆ ಜ್ಞಾನದಿಂದ ಮಾತಾಡುವ ವರವನ್ನೂ ಮತ್ತೊಬ್ಬನಿಗೆ ತಿಳುವಳಿಕೆಯಿಂದ ಮಾತಾಡುವ ವರವನ್ನೂ ಕೊಡುತ್ತಾನೆ. ಒಬ್ಬನಿಗೆ ನಂಬಿಕೆಯನ್ನೂ ಮತ್ತೊಬ್ಬನಿಗೆ ಸ್ವಸ್ಥಪಡಿಸುವ ವರವನ್ನೂ ಕೊಡುತ್ತಾನೆ; 10 ಮತ್ತೊಬ್ಬನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯನ್ನೂ ಇನ್ನೊಬ್ಬನಿಗೆ ಪ್ರವಾದಿಸುವ ಸಾಮರ್ಥ್ಯವನ್ನೂ ಇನ್ನೊಬ್ಬನಿಗೆ ಒಳ್ಳೆಯ ಮತ್ತು ಕೆಟ್ಟ ಆತ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನೂ ಕೊಡುತ್ತಾನೆ; ಒಬ್ಬನಿಗೆ ಅನೇಕ ಭಾಷೆಗಳನ್ನು ಮಾತಾಡುವ ಸಾಮರ್ಥ್ಯವನ್ನೂ ಮತ್ತೊಬ್ಬನಿಗೆ ಆ ಭಾಷೆಗಳನ್ನು ಅನುವಾದಿಸುವ ಸಾಮರ್ಥ್ಯವನ್ನೂ ಕೊಡುತ್ತಾನೆ. 11 ಪವಿತ್ರಾತ್ಮನು ಒಬ್ಬನೇ. ಆತನೇ ಎಲ್ಲಾ ವರಗಳನ್ನು ತನ್ನ ಚಿತ್ತಕ್ಕನುಸಾರವಾಗಿ ಪ್ರತಿಯೊಬ್ಬನಿಗೂ ಹಂಚಿಕೊಟ್ಟು ನಡೆಸುತ್ತಾನೆ.
ಕ್ರಿಸ್ತನ ದೇಹ
12 ದೇಹವು ಒಂದೇ, ಆದರೆ ಅದು ಅನೇಕ ಅಂಗಗಳನ್ನು ಪಡೆದಿದೆ. ಹೌದು, ದೇಹದಲ್ಲಿ ಅನೇಕ ಅಂಗಗಳಿವೆ, ಆದರೆ ಆ ಎಲ್ಲಾ ಅಂಗಗಳಿಂದ ಒಂದೇ ಒಂದು ದೇಹವು ರೂಪಿತವಾಗುತ್ತದೆ. ಅಂತೆಯೇ ಕ್ರಿಸ್ತನು. 13 ನಮ್ಮಲ್ಲಿ ಕೆಲವರು ಯೆಹೂದ್ಯರಿದ್ದಾರೆ, ಕೆಲವರು ಗ್ರೀಕರಿದ್ದಾರೆ, ಕೆಲವರು ಗುಲಾಮರಿದ್ದಾರೆ, ಕೆಲವರು ಸ್ವತಂತ್ರರಿದ್ದಾರೆ, ಆದರೆ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಬ್ಬನೇ ಪವಿತ್ರಾತ್ಮನ ಮೂಲಕ ದೀಕ್ಷಾಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬನೇ ಪವಿತ್ರಾತ್ಮನನ್ನು ಕೊಡಲಾಯಿತು.*
14 ದೇಹವು ಒಂದು ಅಂಗಕ್ಕಿಂತಲೂ ಹೆಚ್ಚು ಅಂಗಗಳನ್ನು ಪಡೆದಿದೆ. ಅದು ಅನೇಕ ಅಂಗಗಳನ್ನು ಪಡೆದಿದೆ. 15 ಪಾದವು, “ನಾನು ಕೈಯಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಪಾದವು ದೇಹದಿಂದ ಹೊರತಾಗಲಿಲ್ಲ. 16 ಕಿವಿಯು, “ನಾನು ಕಣ್ಣಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಕಿವಿಯು ದೇಹದಿಂದ ಹೊರತಾಗಲಿಲ್ಲ. 17 ಇಡೀ ದೇಹವೇ ಕಣ್ಣಾಗಿದ್ದರೆ, ಕೇಳಿಸಿಕೊಳ್ಳಲು ದೇಹಕ್ಕೆ ಸಾಧ್ಯವಿರುತ್ತಿರಲಿಲ್ಲ. ಇಡೀ ದೇಹವೇ ಕಿವಿಯಾಗಿದ್ದರೆ, ದೇಹವು ಯಾವುದರ ವಾಸನೆಯನ್ನೂ ತಿಳಿದುಕೊಳ್ಳಲಾಗುತ್ತಿರಲಿಲ್ಲ. 18-19 ದೇಹದ ಪ್ರತಿಯೊಂದು ಅಂಗವು ಒಂದೇ ರೀತಿಯ ಅಂಗವಾಗಿದ್ದರೆ, ಆಗ ದೇಹವೇ ಇರುತ್ತಿರಲಿಲ್ಲ. ಆದರೆ ದೇವರು ತನ್ನ ಇಚ್ಛೆಗನುಸಾರವಾಗಿ ದೇಹದಲ್ಲಿ ಅಂಗಾಂಗಗಳನ್ನು ಇಟ್ಟಿದ್ದಾನೆ. ಆತನು ಅವುಗಳಲ್ಲಿ ಪ್ರತಿಯೊಂದಕ್ಕೂ ಸ್ಥಳವನ್ನು ಗೊತ್ತುಪಡಿಸಿದ್ದಾನೆ. 20 ಆದ್ದರಿಂದ ಅಂಗಗಳು ಅನೇಕವಿದ್ದರೂ ದೇಹವು ಒಂದೇ.
21 ಕಣ್ಣು, “ನೀನು ನನಗೆ ಅವಶ್ಯವಿಲ್ಲ” ಎಂದು ಕೈಗೆ ಹೇಳಲಾರದು ಮತ್ತು ತಲೆಯು, “ನೀನು ನನಗೆ ಅವಶ್ಯವಿಲ್ಲ” ಎಂದು ಪಾದಕ್ಕೆ ಹೇಳಲಾರದು. 22 ಅಲ್ಲದೆ ದೇಹದಲ್ಲಿ ಬಲಹೀನವಾಗಿ ತೋರುವ ಅಂಗಗಳು ನಿಜವಾಗಿಯೂ ಬಹಳ ಅವಶ್ಯವಾಗಿವೆ. 23 ನಾವು ದೇಹದ ಯಾವ ಅಂಗಗಳನ್ನು ಅಲ್ಪವಾದುವುಗಳೆಂದು ಎಣಿಸುತ್ತೇವೋ ಆ ಅಂಗಗಳ ಬಗ್ಗೆ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ಯಾವ ಅಂಗಗಳನ್ನು ತೋರಿಸಬಯಸುವುದಿಲ್ಲವೋ ಆ ಅಂಗಗಳನ್ನು ವಿಶೇಷವಾದ ರೀತಿಯಲ್ಲಿ ಸಂರಕ್ಷಿಸುತ್ತೇವೆ. 24 ಬಹು ಸುಂದರವಾದ ಅಂಗಗಳಿಗೆ ಇಂಥ ವಿಶೇಷ ಸಂರಕ್ಷಣೆಯ ಅಗತ್ಯವಿರುವುದಿಲ್ಲ. ಆದರೆ ದೇವರು ಅಂಗಗಳನ್ನು ಒಟ್ಟಾಗಿ ಸೇರಿಸಿದ್ದಾನೆ ಮತ್ತು ಕೊರತೆಯಲ್ಲಿರುವ ಅಂಗಗಳಿಗೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟಿದ್ದಾನೆ. 25 ನಮ್ಮ ದೇಹವು ವಿಭಜನೆಯಾಗದಂತೆ ಅಂಗಗಳು ಒಂದಕ್ಕೊಂದರ ಹಿತವನ್ನು ಸರಿಸಮನಾಗಿ ಗಮನಿಸುವಂತೆ ದೇವರು ಮಾಡಿದ್ದಾನೆ. 26 ಒಂದು ಅಂಗಕ್ಕೆ ನೋವಾದರೆ, ಉಳಿದೆಲ್ಲ ಅಂಗಗಳು ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ಸನ್ಮಾನ ದೊರೆತರೆ, ಉಳಿದೆಲ್ಲ ಅಂಗಗಳು ಅದರ ಸನ್ಮಾನದಲ್ಲಿ ಪಾಲುಗಾರರಾಗುತ್ತವೆ.
27 ನೀವೆಲ್ಲರೂ ಒಂದುಗೂಡಿ ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ ಅಂಗವಾಗಿದ್ದೀರಿ. 28 ದೇವರು ಸಭೆಯಲ್ಲಿ ಅಪೊಸ್ತಲರಿಗೆ ಮೊದಲನೆಯ ಸ್ಥಾನವನ್ನೂ ಪ್ರವಾದಿಗಳಿಗೆ ಎರಡನೆಯ ಸ್ಥಾನವನ್ನೂ ಉಪದೇಶಕರಿಗೆ ಮೂರನೆಯ ಸ್ಥಾನವನ್ನೂ ಇಟ್ಟಿದ್ದಾನೆ. ಇದಲ್ಲದೆ ದೇವರು, ಅದ್ಭುತಕಾರ್ಯಗಳನ್ನು ಮಾಡುವ ಜನರಿಗೂ ಸ್ಪಸ್ಥಪಡಿಸುವ ಜನರಿಗೂ ಇತರರಿಗೆ ಸಹಾಯಮಾಡುವ ಜನರಿಗೂ ಮುನ್ನಡೆಸಬಲ್ಲ ಜನರಿಗೂ ವಿವಿಧ ಭಾಷೆಗಳನ್ನು ಮಾತಾಡಬಲ್ಲ ಜನರಿಗೂ ಸಭೆಯಲ್ಲಿ ಸ್ಥಾನವನ್ನು ಕೊಟ್ಟಿದ್ದಾನೆ. 29 ಎಲ್ಲಾ ಜನರು ಅಪೊಸ್ತಲರುಗಳಲ್ಲ. ಎಲ್ಲಾ ಜನರು ಪ್ರವಾದಿಗಳಲ್ಲ. ಎಲ್ಲಾ ಜನರು ಉಪದೇಶಕರುಗಳಲ್ಲ. ಎಲ್ಲಾ ಜನರು ಅದ್ಭುತಕಾರ್ಯಗಳನ್ನು ಮಾಡುವುದಿಲ್ಲ. 30 ಎಲ್ಲಾ ಜನರು ಗುಣಪಡಿಸುವ ವರವನ್ನು ಹೊಂದಿಲ್ಲ. ಎಲ್ಲಾ ಜನರು ವಿವಿಧ ಭಾಷೆಗಳನ್ನು ಮಾತಾಡುವುದಿಲ್ಲ. ಎಲ್ಲಾ ಜನರು ಆ ಭಾಷೆಗಳನ್ನು ಅನುವಾದಿಸುವುದಿಲ್ಲ. 31 ಆದರೆ ನೀವು ಪವಿತ್ರಾತ್ಮನ ಇನ್ನೂ ಶ್ರೇಷ್ಠವಾದ ವರಗಳನ್ನು ಯಥಾರ್ಥವಾಗಿ ಅಪೇಕ್ಷಿಸತಕ್ಕದ್ದು. ಈಗ ನಾನು ನಿಮಗೆ ಎಲ್ಲಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.
* 12:13 ಕೊಡಲಾಯಿತು ಅಕ್ಷರಶಃ, “ಪಾನಕ್ಕಾಗಿ ಕೊಡಲ್ಪಟ್ಟನು.”