11
ಯೆಹೋವನನ್ನು ಸ್ಮರಿಸಿರಿ
1 “ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿರಿ. ಆತನು ಹೇಳಿದವುಗಳನ್ನೆಲ್ಲ ಮಾಡಿರಿ. ನೀವು ಕಟ್ಟಳೆಗಳಿಗೆ, ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಯಾವಾಗಲೂ ವಿಧೇಯರಾಗಿರಬೇಕು.
2 ನಿಮಗೆ ಉಪದೇಶ ಮಾಡುವುದಕ್ಕಾಗಿ ನಿಮ್ಮ ದೇವರಾದ ಯೆಹೋವನು ಮಾಡಿದ ಮಹತ್ಕಾರ್ಯಗಳನ್ನು ನೆನಪುಮಾಡಿರಿ. ಆತನ ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಆತನು ಎಂಥಾ ಶಕ್ತಿಶಾಲಿ ಎಂದು ನೀವು ತಿಳಿದಿದ್ದೀರಿ.
3 ಆ ಮಹತ್ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಈಜಿಪ್ಟಿನಲ್ಲಿ ಫರೋಹನಿಗೂ ಅವನ ಸಮಸ್ತ ಪ್ರಜೆಗಳಿಗೂ ಮಾಡಿದ್ದನ್ನು ನೀವು ನೋಡಿದ್ದೀರಿ.
4 ಯೆಹೋವನು ಈಜಿಪ್ಟಿನ ಸೈನಿಕರಿಗೂ ಅವರ ಕುದುರೆ ರಥಗಳಿಗೂ ಮಾಡಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಅವರು ನಿಮ್ಮನ್ನು ಓಡಿಸಿಕೊಂಡು ಬರುತ್ತಿದ್ದರು. ಆದರೆ ಯೆಹೋವನು ಅವರನ್ನು ಸಮುದ್ರದ ನೀರಿನಲ್ಲಿ ಮುಳುಗಿಹೋಗುವಂತೆ ಮಾಡಿದುದ್ದನ್ನು ನೋಡಿದ್ದೀರಿ ಮತ್ತು ಅವರು ಸಂಪೂರ್ಣವಾಗಿ ನಾಶವಾಗುವುದನ್ನು ನೋಡಿದ್ದೀರಿ.
5 ನೀವು ಈ ಸ್ಥಳಕ್ಕೆ ಬರುವತನಕ ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಮರುಭೂಮಿಯಲ್ಲಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳನ್ನು ನೋಡಿದವರು, ನೀವೇ ಹೊರತು ನಿಮ್ಮ ಮಕ್ಕಳಲ್ಲ.
6 ರೂಬೇನ್ ಕುಲದ ಎಲೀಯಾಬನ ಮಕ್ಕಳಾದ ದಾತಾನನಿಗೆ ಮತ್ತು ಅಬೀರಾಮನಿಗೆ ಯೆಹೋವನು ಮಾಡಿದ್ದನ್ನು ನೀವೇ ನೋಡಿದ್ದೀರಿ. ನಿಮ್ಮ ಕಣ್ಣಮುಂದೆಯೇ ಭೂಮಿಯು ಬಾಯಿ ತೆರೆದು ಅವರನ್ನು, ಅವರ ಹೆಂಡತಿಮಕ್ಕಳನ್ನು, ಅವರ ಗುಡಾರವನ್ನು, ಸೇವಕರನ್ನು, ಅವರ ಪಶುಗಳನ್ನು ನುಂಗಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ.
7 ಆತನು ಮಾಡಿದ ಎಲ್ಲಾ ಮಹಾಕೃತ್ಯಗಳನ್ನು ನೋಡಿದವರು ನೀವೇ.
8 “ಆದ್ದರಿಂದ ನಾನು ನಿಮಗೆ ನೀವು ಎಲ್ಲಾ ಕಟ್ಟಳೆಗಳಿಗೆ ವಿಧೇಯರಾಗಿ ನಡೆಯಬೇಕು; ಆಗ ನೀವು ಬಲವನ್ನು ಹೊಂದುವಿರಿ; ಜೋರ್ಡನ್ ನದಿಯನ್ನು ದಾಟಿ ದೇವರು ನಿಮಗೆ ಕೊಟ್ಟಿರುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ.
9 ಆ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ. ಆ ದೇಶವು ಎಲ್ಲಾ ಒಳ್ಳೆಯ ವಸ್ತುಗಳಿಂದ ತುಂಬಿದೆ. ಆ ದೇಶವನ್ನು ನಿಮ್ಮ ಪೂರ್ವಿಕರಿಗೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದಾನೆ.
10 ನಿಮಗೆ ದೊರಕಲಿರುವ ದೇಶವು ನೀವು ಹೊರಟುಬಂದ ಈಜಿಪ್ಟ್ ದೇಶದಂತಿಲ್ಲ. ಈಜಿಪ್ಟಿನಲ್ಲಿ ನೀವು ಬಿತ್ತನೆ ಮಾಡಿದ ಮೇಲೆ ನೀರನ್ನು ಹಾಯಿಸಲು ನಿಮ್ಮ ಕಾಲುಗಳನ್ನು ಬಳಸುತ್ತಿದ್ದಿರಿ. ನಿಮ್ಮ ತರಕಾರಿ ತೋಟಗಳಿಗೆ ನೀರು ಹಾಯಿಸುವಂತೆಯೇ ನಿಮ್ಮ ಗದ್ದೆಗಳಿಗೂ ನೀರನ್ನು ಹಾಯಿಸುತ್ತಿದ್ದಿರಿ.
11 ನಿಮಗೆ ಶೀಘ್ರದಲ್ಲಿಯೇ ದೊರಕಲಿರುವ ಭೂಮಿಯಲ್ಲಿ ಹಾಗಲ್ಲ. ಅದು ಬೆಟ್ಟತಗ್ಗುಗಳ ಪ್ರಾಂತ್ಯ; ಮಳೆಯ ನೀರು ಭೂಮಿಯನ್ನು ತೊಯಿಸುತ್ತದೆ.
12 ನಿಮ್ಮ ದೇವರಾದ ಯೆಹೋವನು ಆ ಭೂಮಿಯನ್ನು ಕಾಯುತ್ತಾನೆ. ಆ ದೇಶವನ್ನು ವರ್ಷದ ಪ್ರಾರಂಭದಿಂದ ಕೊನೆಯ ತನಕ ಪರಿಪಾಲಿಸುತ್ತಾನೆ.
13 “ಯೆಹೋವನು ಹೀಗೆನ್ನುತ್ತಾನೆ: ‘ಇಂದು ನಾನು ನಿಮಗೆ ಕೊಟ್ಟ ಆಜ್ಞೆಗಳನ್ನೆಲ್ಲ ಗಮನವಿಟ್ಟು ಕೇಳಿರಿ: ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕು. ಹೀಗೆ ಮಾಡಿದರೆ
14 ಕಾಲಕಾಲಕ್ಕೆ ಸರಿಯಾಗಿ ನಿಮ್ಮ ದೇಶಕ್ಕೆ ನಾನು ಮಳೆಯನ್ನು ಕಳುಹಿಸುತ್ತೇನೆ. ಹಿಂಗಾರು, ಮುಂಗಾರು ಮಳೆ ತಕ್ಕ ಸಮಯದಲ್ಲಿ ಬೀಳುವುದು. ಆಗ ನೀವು ನಿಮ್ಮ ಧಾನ್ಯಗಳನ್ನು, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಶೇಖರಿಸುವಿರಿ.
15 ನಿಮ್ಮ ಹೊಲಗಳಲ್ಲಿ ಮತ್ತು ನಿಮ್ಮ ಪಶುಗಳಿಗೆ ಹುಲ್ಲು ಹುಲುಸಾಗಿ ಬೆಳೆಯುವಂತೆ ಮಾಡುವೆನು. ನಿಮಗೆ ಆಹಾರವು ಸಮೃದ್ಧಿಕರವಾಗಿರುವುದು.’
16 “ಆದ್ದರಿಂದ ಜಾಗರೂಕರಾಗಿರಿ. ಬೇರೆ ದೇವರುಗಳನ್ನು ಸೇವೆಮಾಡಿ ಆರಾಧಿಸಬೇಡಿ.
17 ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಳ್ಳುವನು; ಆಕಾಶವನ್ನು ಮುಚ್ಚಿ ಮಳೆಬೀಳದಂತೆ ಮಾಡುವನು. ಆಗ ಹೊಲದಲ್ಲಿ ಧಾನ್ಯ ಬೆಳೆಯುವುದಿಲ್ಲ. ಆಗ ಆತನು ಕೊಡುವ ಒಳ್ಳೆಯ ದೇಶದಲ್ಲಿಯೇ ಊಟಕ್ಕಿಲ್ಲದೆ ಸಾಯುವಿರಿ.
18 “ನಾನು ಹೇಳಿದ ಆಜ್ಞೆಗಳನ್ನು ಯಾವಾಗಲೂ ಜ್ಞಾಪಕದಲ್ಲಿಡಿರಿ. ಅದನ್ನು ನಿಮ್ಮ ಹೃದಯದಲ್ಲಿಡಿರಿ. ಅವುಗಳನ್ನು ಬರೆದು ಕೈಗಳಲ್ಲಿ ಮತ್ತು ಹಣೆಯ ಮೇಲೆ ಕಟ್ಟಿರಿ. ಇದು ನಿಮಗೆ ಜ್ಞಾಪಕ ಕೊಡುವುದು.
19 ಈ ಕಟ್ಟಳೆಗಳನ್ನು ನಿಮ್ಮ ಮಕ್ಕಳಿಗೆ ಬೋಧಿಸಿರಿ. ಅವುಗಳ ವಿಷಯವಾಗಿ ನೀವು ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ದಾರಿಯಲ್ಲಿ ನಡೆಯುತ್ತಿರುವಾಗ, ಮಲಗುವಾಗ, ಏಳುವಾಗ ನೀವು ಮಾತನಾಡುತ್ತಾ ಇರಬೇಕು.
20 ಈ ಕಟ್ಟಳೆಗಳನ್ನು ನಿಮ್ಮ ಮನೆಯ ಬಾಗಿಲುಗಳ ಮತ್ತು ನಿಲುವುಗಳ ಮತ್ತು ಹೆಬ್ಬಾಗಿಲುಗಳ ಮೇಲೆ ಬರೆಯಿರಿ.
21 ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಲ್ಪಟ್ಟ ದೇಶದಲ್ಲಿ ಆಗ ನೀವು ಮತ್ತು ನಿಮ್ಮ ಮಕ್ಕಳು ಬಹುಕಾಲ ಬಾಳುವಿರಿ. ಆಕಾಶವು ಭೂಮಿಯ ಮೇಲೆ ಎಷ್ಟು ಕಾಲವಿರುವುದೋ ಅಷ್ಟುಕಾಲ ನೀವು ಬದುಕುವಿರಿ.
22 “ಅನುಸರಿಸಬೇಕೆಂದು ಹೇಳುವ ಪ್ರತಿಯೊಂದು ಕಟ್ಟಳೆಗಳಿಗೆ ವಿಧೇಯರಾಗಿರಿ. ನಿಮ್ಮ ಯೆಹೋವನನ್ನು ಪ್ರೀತಿಸಿ ಆತನ ಮಾರ್ಗದಲ್ಲಿ ನಡೆದು ಆತನಿಗೆ ನಂಬಿಗಸ್ತರಾಗಿರಿ.
23 ಆಗ ನೀವು ಹೋಗುವ ದೇಶದಲ್ಲಿ ವಾಸಿಸುವ ಜನರನ್ನು ಯೆಹೋವನಾದ ನಾನು ಹೊಡೆದೋಡಿಸುವೆನು. ಆ ಜನಾಂಗ ನಿಮಗಿಂತಲೂ ದೊಡ್ಡದು ಮತ್ತು ಬಲಿಷ್ಠವಾದದ್ದು.
24 ನೀವು ಹೆಜ್ಜೆಯಿಡುವ ಭೂಮಿಯೆಲ್ಲಾ ನಿಮ್ಮದಾಗುವುದು. ದಕ್ಷಿಣದ ಮರುಭೂಮಿಯಿಂದ ಹಿಡಿದು ಉತ್ತರದ ಲೆಬನೋನಿನ ತನಕ, ಪೂರ್ವದಲ್ಲಿರುವ ಯೂಫ್ರೇಟೀಸ್ ನದಿಯಿಂದ ಪಶ್ಟಿಮದ ಭೂಮಧ್ಯಸಮುದ್ರ ತೀರದ ತನಕ ವಿಸ್ತಾರವಾಗಿದೆ.
25 ನಿಮ್ಮ ವಿರುದ್ಧವಾಗಿ ಯಾರೂ ನಿಂತುಕೊಳ್ಳಲಾರರು. ನೀವು ಆಕ್ರಮಿಸಿಕೊಳ್ಳುವ ಪ್ರದೇಶದಲ್ಲೆಲ್ಲಾ ಯೆಹೋವನು ಅಲ್ಲಿಯ ಜನರು ನಿಮಗೆ ಭಯಪಡುವಂತೆ ಮಾಡುವನು. ಯೆಹೋವನು ಈ ವಾಗ್ದಾನವನ್ನು ನಿಮಗೆ ಮೊದಲೇ ಕೊಟ್ಟಿದ್ದಾನೆ.
ಆಶೀರ್ವಾದ ಅಥವಾ ಶಾಪ: ಇಸ್ರೇಲರ ಆರಿಸುವಿಕೆ
26 “ಈ ಹೊತ್ತು ನೀವು ಆಶೀರ್ವಾದವನ್ನಾಗಲಿ ಶಾಪವನ್ನಾಗಲಿ ಆರಿಸಬೇಕು.
27 ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾದರೆ ಆತನಿಂದ ಆಶೀರ್ವಾದ ಹೊಂದುವಿರಿ.
28 ಆದರೆ ನೀವು ವಿಧೇಯರಾಗದಿದ್ದರೆ ಶಾಪವನ್ನು ಹೊಂದುವಿರಿ. ನಾನು ನಿಮಗೆ ಕೊಡುವ ಯೆಹೋವನ ನಿಯಮಗಳನ್ನು ಅನುಸರಿಸುವುದನ್ನು ನಿಲ್ಲಿಸಬೇಡಿರಿ. ಅನ್ಯದೇವತೆಗಳನ್ನು ಪೂಜಿಸಬೇಡಿರಿ. ನಾನು ನಿಮಗೆ ಬೋಧಿಸುತ್ತಿರುವುದು ಯೆಹೋವನ ಮಾರ್ಗದ ಕುರಿತೇ ಹೊರತು ಬೇರೆ ದೇವರುಗಳ ಕುರಿತಲ್ಲ.
29 “ದೇವರಾದ ಯೆಹೋವನು ನಿಮ್ಮನ್ನು ನಿಮ್ಮ ದೇಶಕ್ಕೆ ನಡೆಸುವನು. ನೀವು ಬೇಗನೆ ಅದನ್ನು ಸ್ವಾಧೀನ ಮಾಡಿಕೊಳ್ಳುವಿರಿ. ಆ ಸಮಯದಲ್ಲಿ ನೀವು ಗೆರಿಜ್ಜೀಮ್ ಬೆಟ್ಟದ ತುದಿಗೇರಿ ಅಲ್ಲಿಂದ ಆಶೀರ್ವಾದ ವಚನಗಳನ್ನು ನುಡಿಯಿರಿ. ಅನಂತರ ನೀವು ಎಬಾಲ್ ಬೆಟ್ಟದ ಮೇಲೇರಿ ಅಲ್ಲಿಂದ ಜನರಿಗೆ ಶಾಪವಚನಗಳನ್ನು ನುಡಿಯಿರಿ.
30 ಈ ಬೆಟ್ಟಗಳು ಜೋರ್ಡನ್ ನದಿಯ ಆಚೆ ದಡದಲ್ಲಿವೆ. ಇವು ಜೋರ್ಡನ್ ಕಣಿವೆಯಲ್ಲಿ ವಾಸವಾಗಿರುವ ಕಾನಾನ್ಯರ ಪ್ರದೇಶದಲ್ಲಿವೆ. ಈ ಬೆಟ್ಟಗಳು ಪಶ್ಚಿಮ ದಿಕ್ಕಿನಲ್ಲಿವೆ. ಗಿಲ್ಗಾಲ್ ಊರಿನ ಸಮೀಪದಲ್ಲಿರುವ ಓಕ್ ಮರಗಳಿಗೆ ಇವು ದೂರವೇನೂ ಇಲ್ಲ.
31 ನೀವು ಜೋರ್ಡನ್ ನದಿಯನ್ನು ದಾಟಿ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ. ಈ ದೇಶವು ನಿಮ್ಮದೇ.
32 ಈ ದೇಶದಲ್ಲಿ ನೀವು ವಾಸಿಸುವಾಗ ನಾನು ಈ ಹೊತ್ತು ನಿಮಗೆ ಕೊಡುವ ಕಟ್ಟಳೆಗಳನ್ನೂ ವಿಧಿನಿಯಮಗಳನ್ನೂ ತಪ್ಪದೆ ಪರಿಪಾಲಿಸಬೇಕು.