17
ಕಳಂಕ, ದೋಷವಿಲ್ಲದ ಪ್ರಾಣಿಗಳನ್ನೇ ಬಲಿಕೊಡಿರಿ
1 “ನಿಮ್ಮ ದೇವರಾದ ಯೆಹೋವನಿಗೆ ನೀವು ಪಶುಗಳನ್ನಾಗಲಿ ಆಡುಕುರಿಮರಿಗಳನ್ನಾಗಲಿ ಸಮರ್ಪಿಸುವಾಗ ಅವು ಕಳಂಕವಿಲ್ಲದೆ ಪೂರ್ಣಾಂಗವಾಗಿರಬೇಕು; ದೋಷಪೂರಿತ ಯಜ್ಞವನ್ನು ಆತನು ದ್ವೇಷಿಸುತ್ತಾನೆ.
ವಿಗ್ರಹಾರಾಧನೆ ಮಾಡಿದರೆ ದೊರಕುವ ಶಿಕ್ಷೆ
2 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಒಂದು ಪಟ್ಟಣದಲ್ಲಿ ನೀವು ಕೆಟ್ಟ ಸುದ್ದಿಯೊಂದನ್ನು ಅಂದರೆ ಒಬ್ಬ ಸ್ತ್ರೀಯಾಗಲಿ ಅಥವಾ ಪುರುಷನಾಗಲಿ ದೇವರೊಂದಿಗೆ ಮಾಡಿದ ಒಡಂಬಡಿಕೆಯನ್ನು ಮುರಿದು ಆತನಿಗೆ ವಿರುದ್ಧವಾಗಿ ಪಾಪಮಾಡಿ
3 ಅವರು ಬೇರೆ ದೇವರುಗಳನ್ನಾಗಲಿ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ ಪೂಜಿಸುತ್ತಾರೆ ಎಂಬ ಸುದ್ದಿಯನ್ನು ನೀವು ಕೇಳಿದರೂ ಕೇಳಬಹುದು, ಅದು ದೇವರ ಕಟ್ಟಳೆಗೆ ವಿರುದ್ಧವಾದದ್ದು.
4 ಇಂಥಾ ಕೆಟ್ಟ ಸುದ್ದಿಯನ್ನು ನೀವು ಕೇಳಿದರೆ ಮೊಟ್ಟಮೊದಲಾಗಿ ಅದು ಸತ್ಯವೋ ಸುಳ್ಳೋ ಎಂಬುದನ್ನು ಸರಿಯಾಗಿ ಪರಿಶೀಲಿಸಬೇಕು. ಅಂಥ ಭಯಂಕರ ಸಂಗತಿಯು ಇಸ್ರೇಲಿನಲ್ಲಿ ಸಂಭವಿಸಿದ್ದು ನಿಜವಾಗಿದ್ದಲ್ಲಿ,
5 ಆ ಪಾಪಮಾಡಿದವನಿಗೆ ಶಿಕ್ಷೆಯನ್ನು ವಿಧಿಸಬೇಕು. ಪಟ್ಟಣದ ಹೆಬ್ಬಾಗಿಲ ಹೊರಗಿರುವ ಬಯಲಿಗೆ ಆ ತಪ್ಪು ಮಾಡಿದ ಸ್ತ್ರೀಯನ್ನೂ, ಪುರುಷನನ್ನೂ ತೆಗೆದುಕೊಂಡು ಹೋಗಿ ಅಲ್ಲಿ ಅವರನ್ನು ಕಲ್ಲೆಸೆದು ಸಾಯಿಸಬೇಕು.
6 ಅವರು ವಿಗ್ರಹಾರಾಧನೆ ಮಾಡಿದ್ದಕ್ಕೆ ಒಂದೇ ಸಾಕ್ಷಿ ಇರುವುದಾದರೆ ಅವರಿಗೆ ಮರಣಶಿಕ್ಷೆಯಾಗಬಾರದು. ಆದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳು ಅವರು ವಿಗ್ರಹಾರಾಧನೆ ಮಾಡಿದ್ದು ಸತ್ಯವೆಂದು ಹೇಳಿದರೆ ಮಾತ್ರ ಅವರನ್ನು ಸಾಯಿಸಬೇಕು.
7 ಸತ್ಯವೆಂದು ಹೇಳಿದ ಸಾಕ್ಷಿಗಳು ಮೊದಲು ಅವರ ಮೇಲೆ ಕಲ್ಲೆಸೆಯಬೇಕು. ಅನಂತರ ಬೇರೆಯವರು ಕಲ್ಲೆಸೆದು ಅವರನ್ನು ಸಾಯಿಸಬೇಕು. ಈ ರೀತಿಯಾಗಿ ನಿಮ್ಮ ಮಧ್ಯೆ ಇದ್ದ ದುಷ್ಕೃತ್ಯವನ್ನು ತೆಗೆದುಹಾಕಬೇಕು.
ನ್ಯಾಯಸ್ಥಾನದಲ್ಲಿ ಬಗೆಹರಿಸಲಾಗದ ವಿಷಯಗಳು
8 “ನಿಮ್ಮ ನ್ಯಾಯಸ್ಥಾನದಲ್ಲಿ ನ್ಯಾಯತೀರಿಸಲಾಗದ ಕಷ್ಟದ ಸಮಸ್ಯೆಗಳು ಬರುವವು. ಅವು ಕೊಲೆ ಅಥವಾ ಇಬ್ಬರ ಮಧ್ಯೆ ವಿವಾದವಿರಬಹುದು; ಅಥವಾ ಜಗಳಮಾಡಿ ಗಾಯಗೊಂಡಿರುವ ಪ್ರಕರಣವಾಗಿರಬಹುದು. ನಿಮ್ಮ ಪಟ್ಟಣಗಳ ನ್ಯಾಯಸ್ಥಾನದಲ್ಲಿ ಈ ಪ್ರಕರಣಗಳ ವಿಚಾರಣೆ ನಡಿಸುವಾಗ ಸರಿಯಾದ ಇತ್ಯರ್ಥಮಾಡಿ ತೀರ್ಪುಮಾಡಲು ಕಷ್ಟವಾದಲ್ಲಿ ನೀವು ದೇವರು ಆರಿಸುವ ಸ್ಥಳಕ್ಕೆ ಹೋಗಬೇಕು.
9 ಲೇವಿಕುಲದ ಯಾಜಕರ ಬಳಿಗೂ ಅಲ್ಲಿ ಆ ಸಮಯದಲ್ಲಿರುವ ನ್ಯಾಯಾಧೀಶನ ಬಳಿಗೂ ಹೋಗಿ ಅವರಿಗೆ ವಿಷಯವನ್ನು ತಿಳಿಸಬೇಕು. ಅವರು ನಿಮ್ಮ ಮುಂದಿರುವ ಬಗೆಹರಿಯಲಾಗದ ಪ್ರಕರಣವನ್ನು ಆಲೈಸಿ, ವಿಚಾರಿಸಿ,
10 ಯೆಹೋವನ ವಿಶೇಷವಾದ ಸ್ಥಳದಲ್ಲಿ ತಮ್ಮ ತೀರ್ಪನ್ನು ಕೊಡುವರು. ಅವರು ಏನು ಹೇಳುತ್ತಾರೋ ಅದಕ್ಕೆ ಸಂಪೂರ್ಣವಾಗಿ ಒಪ್ಪಿಗೆ ನೀಡಬೇಕು. ನೀವು ಏನು ಮಾಡಬೇಕೆಂದು ಅವರು ಹೇಳುತ್ತಾರೋ ಅದನ್ನು ನೀವು ಮಾಡಲೇಬೇಕು.
11 ಅವರು ಹೇಳಿದ ಹಾಗೆ ಎಲ್ಲವನ್ನು ಅಕ್ಷರಶಃ ಪರಿಪಾಲಿಸಬೇಕು. ಅವರ ತೀರ್ಪನ್ನು ಬದಲಾಯಿಸಬಾರದು.
12 “ನಿಮ್ಮ ದೇವರಾದ ಯೆಹೋವನ ಸೇವೆಮಾಡುತ್ತಿರುವ ಯಾಜಕನಾಗಲಿ ನ್ಯಾಯಾಧೀಶನಾಗಲಿ ಹೇಳಿದ ತೀರ್ಪನ್ನು ಉಲ್ಲಂಘಿಸಿದವನಿಗೆ ಮರಣದಂಡನೆ ಆಗಬೇಕು. ನೀವು ಆ ದುಷ್ಟನನ್ನು ಇಸ್ರೇಲಿನಿಂದ ನಿರ್ಮೂಲ ಮಾಡಬೇಕು.
13 ಈ ದಂಡನೆಯ ಬಗ್ಗೆ ಜನರು ಕೇಳಿ ಭಯಪಟ್ಟು ಅಂಥ ಕೆಟ್ಟ ಕೃತ್ಯಗಳನ್ನು ಮಾಡದಿರುವರು.
ಅರಸನನ್ನು ಆರಿಸುವ ರೀತಿ
14 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಪ್ರವೇಶಿಸುವಿರಿ. ಆ ಸ್ಥಳಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ನೆಲೆಸುವಿರಿ. ಆಗ ನೀವು ‘ನಮ್ಮ ಸುತ್ತಲಿನ ದೇಶದಲ್ಲಿರುವಂತೆಯೇ ನಮಗೂ ಒಬ್ಬ ರಾಜನು ಬೇಕು’ ಎಂದು ಹೇಳುವಿರಿ.
15 ಅಂಥ ಸಮಯದಲ್ಲಿ ಯೆಹೋವನು ಆರಿಸಿಕೊಂಡವನನ್ನೇ ನೀವು ರಾಜನನ್ನಾಗಿ ಆರಿಸಿಕೊಳ್ಳಬೇಕು; ಅವನು ನಿಮ್ಮ ಸ್ವಂತ ಜನರಲ್ಲಿ ಒಬ್ಬನಾಗಿರಬೇಕು; ಪರದೇಶಸ್ಥನನ್ನು ನೀವು ನಿಮ್ಮ ರಾಜನನ್ನಾಗಿ ಆರಿಸಬಾರದು.
16 ಅರಸನು ತನ್ನ ಉಪಯೋಗಕ್ಕಾಗಿ ಹೆಚ್ಚೆಚ್ಚಾಗಿ ಕುದುರೆಗಳನ್ನು ಖರೀದಿಸಬಾರದು; ಜನರನ್ನು ಈಜಿಪ್ಟಿಗೆ ಕಳುಹಿಸಿ ಅಲ್ಲಿಂದ ಹೆಚ್ಚುಹೆಚ್ಚು ಕುದುರೆಗಳನ್ನು ತರಿಸಬಾರದು; ಯಾಕೆಂದರೆ, ‘ನೀವು ಆ ಮಾರ್ಗದಲ್ಲಿ ಹಿಂದಕ್ಕೆ ಹೋಗಲೇಬಾರದು’ ಎಂದು ಯೆಹೋವನು ಹೇಳಿದ್ದಾನೆ.
17 ಅರಸನಿಗೆ ಮಿತಿಮೀರಿ ಪತ್ನಿಯರು ಇರಬಾರದು. ಯಾಕೆಂದರೆ ಅವರು ಅರಸನನ್ನು ಯೆಹೋವನ ಮಾರ್ಗದಲ್ಲಿ ನಡೆಯದಂತೆ ಮಾಡಿ ಬೇರೆ ಕಡೆಗೆ ತಿರುಗಿಸುವರು. ರಾಜನು ಬೆಳ್ಳಿಬಂಗಾರಗಳನ್ನು ಶೇಖರಿಸಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಳ್ಳಬಾರದು.
18 “ರಾಜನು ರಾಜ್ಯವಾಳಲು ಆರಂಭಿಸುವಾಗ, ಯಾಜಕರ ಮತ್ತು ಲೇವಿಯರ ಪುಸ್ತಕಗಳಿಂದ ಧರ್ಮಶಾಸ್ತ್ರವನ್ನು ತನಗಾಗಿ ಪುಸ್ತಕ ರೂಪದಲ್ಲಿ ಬರೆಸಿಟ್ಟುಕೊಳ್ಳಬೇಕು.
19 ಅವನು ಆ ಪುಸ್ತಕವನ್ನು ತನ್ನೊಂದಿಗಿಟ್ಟುಕೊಂಡು ಅದನ್ನು ತನ್ನ ಜೀವಮಾನ ಪೂರ್ತಿ ಪದೇಪದೇ ಓದುತ್ತಿರಬೇಕು. ಯಾಕೆಂದರೆ ಧರ್ಮಶಾಸ್ತ್ರವು ಆಜ್ಞಾಪಿಸುವ ಪ್ರತಿಯೊಂದಕ್ಕೂ ಸಂಪೂರ್ಣವಾಗಿ ವಿಧೇಯನಾಗಲು ಅವನು ಕಲಿತುಕೊಳ್ಳಬೇಕು.
20 ಆಗ ಅರಸನು ತನ್ನ ಪ್ರಜೆಗಳಿಗಿಂತ ತಾನು ಉತ್ತಮನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ಧರ್ಮಶಾಸ್ತ್ರಕ್ಕೆ ವಿಮುಖನಾಗದೆ ಅದನ್ನು ಚಾಚೂತಪ್ಪದೆ ಅನುಸರಿಸುವನು. ಆಗ ರಾಜನೂ ಅವನ ಸಂತತಿಯವರೂ ಇಸ್ರೇಲ್ ರಾಜ್ಯವನ್ನು ಬಹುಕಾಲ ಆಳುವರು.