9
ಯೆಹೋವನು ಇಸ್ರೇಲರೊಂದಿಗಿರುವನು
1 “ಇಸ್ರೇಲ್ ಜನರೇ, ಕೇಳಿರಿ. ಈ ದಿನ ನೀವು ಜೋರ್ಡನ್ ನದಿಯನ್ನು ದಾಟಿ ಆ ದೇಶವನ್ನು ಪ್ರವೇಶಿಸಿ ನಿಮಗಿಂತ ಬಲಿಷ್ಠವಾದ ಜನಾಂಗವನ್ನು ಹೊಡೆದೋಡಿಸುವಿರಿ. ಅವರ ಪಟ್ಟಣಗಳು ದೊಡ್ಡದಾಗಿವೆ; ಅದರ ಗೋಡೆಗಳು ಆಕಾಶದಷ್ಟು ಎತ್ತರವಾಗಿವೆ;
2 ಅಲ್ಲಿಯ ಜನರು ಬಲಿಷ್ಠರಾಗಿದ್ದಾರೆ. ಅನಾಕ್ಯರು ಎತ್ತರವಾಗಿ ಬೆಳೆದವರು ಎಂದು ಆ ದೇಶಕ್ಕೆ ಹೋದ ಗೂಢಚಾರರು ನಿಮಗೆ ತಿಳಿಸಿದ್ದು ನೆನಪಿಲ್ಲವೇ? ‘ಅನಾಕ್ಯರ ಮುಂದೆ ಯಾರೂ ನಿಲ್ಲಲಾರರು’ ಎಂದು ಅವರು ಹೇಳಿದರು.
3 ಆದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ನದಿಯನ್ನು ದಾಟುತ್ತಾನೆಂಬುದು ನಿಮಗೆ ನಿಶ್ಚಯವಾಗಿ ತಿಳಿದಿರಲಿ. ಆತನು ದಹಿಸುವ ಬೆಂಕಿಯಂತಿದ್ದಾನೆ. ಆತನು ಆ ಜನಾಂಗಗಳನ್ನು ಬೇಗನೆ ನಾಶಪಡಿಸುವನು; ನಿಮ್ಮ ಎದುರಿನಲ್ಲಿ ಅವರು ಬಿದ್ದುಹೋಗುವಂತೆ ಮಾಡುವನು. ಇದು ನೆರವೇರುವುದಾಗಿ ಯೆಹೋವನೇ ನಿಮಗೆ ವಾಗ್ದಾನ ಮಾಡಿದ್ದಾನೆ.
4 “ಅಲ್ಲಿಯ ಜನರನ್ನು ದೇವರಾದ ಯೆಹೋವನು ಹೊಡೆದೋಡಿಸುವನು. ಆದರೆ ನೀವು ನಿಮ್ಮ ಮನಸ್ಸಿನಲ್ಲಿ, ‘ನಾವು ನೀತಿವಂತರಾಗಿದುದ್ದರಿಂದ ಮತ್ತು ಒಳ್ಳೆಯವರಾಗಿದ್ದುದರಿಂದ ಆತನು ನಮ್ಮನ್ನು ಈ ಒಳ್ಳೆಯ ದೇಶಕ್ಕೆ ತಂದನು’ ಎಂದು ನೆನಸಿಕೊಳ್ಳಬೇಡಿ. ಅದು ಕಾರಣವಲ್ಲ. ಅಲ್ಲಿಯ ಜನರು ಬಹು ಕೆಟ್ಟವರಾಗಿದ್ದ ಕಾರಣ ಯೆಹೋವನು ಅವರನ್ನು ಹೊರಡಿಸಿದನು.
5 ನೀವು ಉತ್ತಮ ರೀತಿಯಲ್ಲಿ ಜೀವಿಸುವಿರಿ ಎಂದು ದೇವರು ನಿಮಗೆ ಆ ದೇಶವನ್ನು ಕೊಡುವುದಿಲ್ಲ. ಅವರು ಕೆಟ್ಟದ್ದಾಗಿ ಜೀವಿಸುತ್ತಿರುವುದರಿಂದ ದೇವರು ಅವರನ್ನು ಹೊರಡಿಸಿ ನೀವು ಆ ದೇಶವನ್ನು ಅನುಭವಿಸುವಂತೆ ಮಾಡಿದನು; ಆತನು ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕೊಟ್ಟಿರುವ ವಾಗ್ದಾನಗಳನ್ನು ನೆರವೇರಿಸುವುದಕ್ಕಾಗಿ ನಿಮಗೆ ಆ ದೇಶವನ್ನು ಕೊಡುವನು.
6 ನಿಮ್ಮ ದೇವರಾದ ಯೆಹೋವನು ಆ ಉತ್ತಮವಾದ ದೇಶವನ್ನು ನಿಮಗೆ ವಾಸಿಸಲು ಕೊಡುವನು. ನೀವು ಒಳ್ಳೆಯವರು ಎಂಬುದಾಗಿ ಅಲ್ಲ. ನಿಜವಾಗಿ ಹೇಳಬೇಕಾದರೆ ನೀವು ಹಠಮಾರಿಗಳು.
ಯೆಹೋವನ ಕೋಪವನ್ನು ನೆನಪಿಗೆ ತಂದುಕೊಳ್ಳಿರಿ
7 “ನೀವು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಿಮ್ಮ ದೇವರಾದ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸಿದ್ದನ್ನು ಮರೆಯಬೇಡಿರಿ. ನೀವು ಈಜಿಪ್ಟ್ ದೇಶವನ್ನು ಬಿಟ್ಟುಬಂದಂದಿನಿಂದ ಈ ದಿನದ ತನಕವೂ ಆತನ ಮಾತನ್ನು ಅನುಸರಿಸಲು ನಿರಾಕರಿಸಿರುವಿರಿ.
8 ನೀವು ಹೋರೇಬ್ ಎಂಬ ಸೀನಾಯ್ ಬೆಟ್ಟದಲ್ಲಿ ಯೆಹೋವನನ್ನು ಬಹಳ ಸಿಟ್ಟಿಗೆಬ್ಬಿಸಿದ್ದೀರಿ. ಯೆಹೋವನು ನಿಮ್ಮನ್ನು ನಾಶಪಡಿಸುವಷ್ಟು ಕೋಪಗೊಂಡಿದ್ದನು.
9 ನಾನು ಕಲ್ಲಿನ ಹಲಗೆಗಳನ್ನು ತೆಗೆದುಕೊಂಡು ಬರಲು ಬೆಟ್ಟದ ಮೇಲೇರಿದ್ದೆನು. ಯೆಹೋವ ದೇವರು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆ ಆ ಹಲಗೆಯ ಮೇಲೆ ಬರೆಯಲ್ಪಟ್ಟಿತ್ತು. ನಾನು ಆ ಬೆಟ್ಟದ ಮೇಲೆ ನಲವತ್ತು ದಿವಸ ಹಗಲಿರುಳು ಕಳೆದೆನು. ನಾನು ಅನ್ನವನ್ನಾಗಲಿ ನೀರನ್ನಾಗಲಿ ತೆಗೆದುಕೊಳ್ಳಲಿಲ್ಲ.
10 ಯೆಹೋವನು ತನ್ನ ಬೆರಳಿನಿಂದ ಕಲ್ಲಿನ ಹಲಗೆಗಳ ಮೇಲೆ ಆಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಸೀನಾಯ್ ಬೆಟ್ಟದ ಬಳಿ ಸಮೂಹವಾಗಿ ಸೇರಿಬಂದಿದ್ದಾಗ ಆತನು ಬೆಂಕಿಯ ಜ್ವಾಲೆಯೊಳಗಿಂದ ನಿಮಗೆ ತಿಳಿಸಿದ ಪ್ರತಿಯೊಂದನ್ನೂ ಬರೆದಿದ್ದನು.
11 “ಹಾಗೆ ನಲವತ್ತು ದಿನಗಳ ಅಂತ್ಯದಲ್ಲಿ ಯೆಹೋವನು ಒಡಂಬಡಿಕೆಯನ್ನು ಬರೆದಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ನನಗೆ ಕೊಟ್ಟನು.
12 ಆಗ ಆತನು ನನಗೆ, ‘ಎದ್ದು ಬೇಗನೆ ಕೆಳಗಿಳಿ. ಯಾಕೆಂದರೆ ನೀನು ಈಜಿಪ್ಟಿನಿಂದ ಬಿಡಿಸಿತಂದ ಜನರು ತಮ್ಮನ್ನು ತಾವೇ ಕೆಡಿಸಿಕೊಂಡಿದ್ದಾರೆ. ಇಷ್ಟು ಬೇಗನೆ ಅವರು ನನ್ನ ಆಜ್ಞೆಗಳನ್ನು ಮೀರಿದ್ದಾರೆ. ಅವರು ಬಂಗಾರವನ್ನು ಕರಗಿಸಿ ತಮಗಾಗಿ ವಿಗ್ರಹವನ್ನು ಮಾಡಿಕೊಂಡಿದ್ದಾರೆ’ ಎಂದು ಹೇಳಿದನು.
13 “ಅಲ್ಲದೆ ಯೆಹೋವನು ನನಗೆ, ‘ನಾನು ಈ ಜನರನ್ನು ಗಮನಿಸುತ್ತಿದ್ದೇನೆ. ಇವರು ತುಂಬಾ ಹಠಮಾರಿಗಳು.
14 ಇವರನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಅವರ ಹೆಸರುಗಳನ್ನು ಯಾರೂ ನೆನಪಿನಲ್ಲಿಟ್ಟುಕೊಳ್ಳದಂತೆ ಮಾಡುತ್ತೇನೆ. ಆಮೇಲೆ ನಾನು ನಿನ್ನಿಂದ ಬಲಿಷ್ಠವಾದ ಮಹಾಜನಾಂಗವನ್ನು ನಿರ್ಮಿಸುತ್ತೇನೆ’ ಎಂದು ಹೇಳಿದನು.
ಬಂಗಾರದ ಬಸವ
15 “ನಾನು ಕೂಡಲೇ ಬೆಟ್ಟದಿಂದ ಹಿಂತಿರುಗಿ ಬಂದೆನು. ಅದು ಬೆಂಕಿಯಿಂದ ಸುಡುತ್ತಲಿತ್ತು ಮತ್ತು ಒಡಂಬಡಿಕೆಯ ಕಲ್ಲಿನ ಹಲಗೆಗಳು ನನ್ನ ಬಳಿಯಲ್ಲಿ ಇದ್ದವು.
16 ನಾನು ಕೆಳಗೆ ನೋಡಿದಾಗ ಬಂಗಾರದಿಂದ ಬಸವನನ್ನು ಮಾಡಿಕೊಂಡು ಯೆಹೋವನ ವಿರುದ್ಧವಾಗಿ ಪಾಪ ಮಾಡಿದ್ದಿರಿ. ಯೆಹೋವನ ಆಜ್ಞೆಯನ್ನು ಅಷ್ಟು ಬೇಗನೇ ನೀವು ಉಲ್ಲಂಘಿಸಿದ್ದಿರಿ.
17 ನನ್ನ ಬಳಿಯಲ್ಲಿದ್ದ ಆ ಕಲ್ಲಿನ ಹಲಗೆಗಳನ್ನು ನಾನು ನೆಲಕ್ಕೆ ಅಪ್ಪಳಿಸಿದೆನು. ನಿಮ್ಮ ಕಣ್ಣೆದುರಿನಲ್ಲಿ ಅವುಗಳನ್ನು ತುಂಡುತುಂಡಾಗಿ ಮಾಡಿದೆನು.
18 ಆಮೇಲೆ ನಾನು ನಲವತ್ತು ದಿನ ಹಗಲಿರುಳು ಯೆಹೋವನ ಮುಂದೆ ಬೋರಲ ಬಿದ್ದಿದ್ದೆನು. ನಾನು ಊಟ ಮಾಡಲಿಲ್ಲ, ನೀರನ್ನು ಕುಡಿಯಲಿಲ್ಲ ಯಾಕೆಂದರೆ ನೀವು ಪಾಪಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ ಆತನು ಕೋಪಗೊಂಡಿದ್ದನು.
19 ಯೆಹೋವನ ಭಯಂಕರ ಕೋಪಕ್ಕೆ ನಾನು ಹೆದರಿದ್ದೆನು. ನಿಮ್ಮನ್ನು ನಾಶಮಾಡುವಷ್ಟರ ತನಕ ಆತನು ಕೋಪಗೊಂಡಿದ್ದನು. ಆದರೆ ಆತನು ನನ್ನ ಬಿನ್ನಹಗಳನ್ನು ಲಾಲಿಸಿದನು.
20 ಯೆಹೋವನು ಆರೋನನನ್ನು ನಾಶಪಡಿಸುವಷ್ಟು ಕೋಪೋದ್ರಿಕ್ತನಾಗಿದ್ದನು. ನಾನು ಅವನಿಗಾಗಿ ಪ್ರಾರ್ಥಿಸಿದೆನು.
21 ನೀವು ಮಾಡಿದ ಬಂಗಾರದ ಬಸವನನ್ನು ತೆಗೆದುಕೊಂಡು ಚೂರುಚೂರು ಮಾಡಿ, ಬೆಂಕಿಯಲ್ಲಿ ಸುಟ್ಟುಬಿಟ್ಟೆನು. ಮತ್ತೆ ಅದನ್ನು ಒಡೆದು ಧೂಳನ್ನಾಗಿ ಮಾಡಿ ಆ ಧೂಳನ್ನು ಬೆಟ್ಟದಿಂದ ಹರಿಯುತ್ತಿದ್ದ ನದಿಯಲ್ಲಿ ಬಿಟ್ಟೆನು.
ಇಸ್ರೇಲರನ್ನು ಮನ್ನಿಸಲು ದೇವರಿಗೆ ಮೋಶೆಯ ಬಿನ್ನಹ
22 “ಅದೇ ಪ್ರಕಾರ ತಬೇರಾ, ಮಸ್ಸಾ ಮತ್ತು ಕಿಬ್ರೋತ್ಹತಾವಾಗಳಲ್ಲಿಯೂ ನೀವು ಯೆಹೋವನನ್ನು ಸಿಟ್ಟಿಗೆಬ್ಬಿಸಿದ್ದಿರಿ.
23 ಕಾದೇಶ್ಬರ್ನೇಯದಿಂದ ಹೊರಡಲು ಆತನು ನಿಮಗೆ ಹೇಳಿದಾಗ ನೀವು ಆತನಿಗೆ ವಿಧೇಯರಾಗಲಿಲ್ಲ. ಆತನು ನಿಮಗೆ, ‘ನೀವು ಬೆಟ್ಟಪ್ರದೇಶವನ್ನು ಹತ್ತಿಹೋಗಿ ನಾನು ನಿಮಗೆ ಕೊಡುವ ದೇಶವನ್ನು ವಶಪಡಿಸಿಕೊಳ್ಳಿ’ ಎಂದು ಹೇಳಿದಾಗ ನಿಮ್ಮ ದೇವರಾದ ಯೆಹೋವನಿಗೆ ವಿಧೇಯರಾಗಲಿಲ್ಲ. ನೀವು ಆತನಲ್ಲಿ ಭರವಸೆ ಇಡಲಿಲ್ಲ. ನೀವು ಆತನ ಆಜ್ಞೆಗೆ ಕಿವಿಗೊಡಲಿಲ್ಲ.
24 ನಾನು ನಿಮ್ಮನ್ನು ತಿಳಿದಿರುವ ಕಾಲದಿಂದ ನೀವು ಯೆಹೋವನಿಗೆ ಅವಿಧೇಯರಾಗಿಯೇ ಇದ್ದೀರಿ.
25 “ನಾನು ಯೆಹೋವನ ಮುಂದೆ ನಲವತ್ತು ದಿನ ಹಗಲಿರುಳು ಬೋರಲಬಿದ್ದು ಆತನು ನಾಶಮಾಡಬೇಕೆಂದಿದ್ದ ನಿಮಗಾಗಿ ಪ್ರಾರ್ಥಿಸಿದೆನು.
26 ‘ನನ್ನ ಒಡೆಯನೇ, ಯೆಹೋವನೇ, ನಿನ್ನ ಜನರನ್ನು ನೀನು ನಾಶಮಾಡಬೇಡ. ಅವರು ನಿನ್ನ ಜನಾಂಗ. ನಿನ್ನ ಪರಾಕ್ರಮದಿಂದ ನೀನು ಈಜಿಪ್ಟಿನಿಂದ ಅವರನ್ನು ಬಿಡಿಸಿ ಹೊರತಂದಿರುವೆ.
27 ಯೆಹೋವನೇ, ನೀನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಮಾಡಿದ ವಾಗ್ದಾನವನ್ನು ನಿನ್ನ ನೆನಪಿಗೆ ತಂದುಕೊ. ಇವರು ಎಷ್ಟು ಹಠಮಾರಿಗಳೆಂಬುದನ್ನು ಮರೆತುಬಿಡು. ಅವರ ಪಾಪಮಾರ್ಗವನ್ನಾಗಲಿ ಪಾಪಗಳನ್ನಾಗಲಿ ನೋಡಬೇಡ.
28 ನೀನು ಇವರಿಗೆ ಶಿಕ್ಷೆಕೊಟ್ಟರೆ ಈಜಿಪ್ಟಿನವರು, ‘ದೇವರು ತನ್ನ ಜನರನ್ನು ತಾನು ವಾಗ್ದಾನ ಮಾಡಿದ ದೇಶಕ್ಕೆ ನಡೆಸಲು ಅಸಮರ್ಥನಾದನು. ಆತನು ಅವರನ್ನು ದ್ವೇಷಿಸುತ್ತಾನೆ; ಆದ್ದರಿಂದ ಅವರನ್ನು ಮರುಭೂಮಿಯಲ್ಲಿ ಹತಮಾಡಲು ಕೊಂಡೊಯ್ದಿದ್ದಾನೆ’ ಎಂದು ಹೇಳುವರು.
29 ಆದರೆ ಅವರು ನಿನ್ನ ಜನರಾಗಿದ್ದಾರೆ. ಅವರು ನಿನಗೆ ಸಂಬಂಧಪಟ್ಟವರಾಗಿದ್ದಾರೆ; ನಿನ್ನ ಬಲಪರಾಕ್ರಮದಿಂದ ಅವರನ್ನು ದಾಸತ್ವದಿಂದ ಬಿಡುಗಡೆ ಮಾಡಿರುವೆ.’