3
1 ದೇವರು ನನಗೆ, “ನರಪುತ್ರನೇ, ನೀನು ನೋಡುತ್ತಿರುವ ಈ ಸುರುಳಿಯನ್ನು ತಿನ್ನು. ಆಮೇಲೆ ಹೋಗಿ ಇಸ್ರೇಲ್ ವಂಶದವರಿಗೆ ಈ ವಿಷಯಗಳ ಬಗ್ಗೆ ಹೇಳು” ಎಂದು ಅಪ್ಪಣೆಕೊಟ್ಟನು.
2 ಆಗ ನಾನು ನನ್ನ ಬಾಯನ್ನು ತೆರೆಯಲು ಆತನು ಆ ಸುರುಳಿಯನ್ನು ನನ್ನ ಬಾಯೊಳಗೆ ಹಾಕಿದನು.
3 ಆಗ ದೇವರು ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಈ ಸುರುಳಿಯನ್ನು ನಿನಗೆ ಕೊಡುತ್ತೇನೆ. ಇದನ್ನು ನುಂಗು. ಇದು ನಿನ್ನ ಹೊಟ್ಟೆಯನ್ನು ತುಂಬಲಿ.”
ಆಗ ನಾನು ಆ ಸುರುಳಿಯನ್ನು ತಿಂದೆನು. ಅದು ನನ್ನ ಬಾಯಲ್ಲಿ ಜೇನುತುಪ್ಪದ ಸಿಹಿಯಂತೆ ರುಚಿಯಾಗಿತ್ತು.
4 ಆಗ ದೇವರು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲ್ ವಂಶದವರ ಬಳಿಗೆ ಹೋಗಿ ನನ್ನ ಮಾತುಗಳನ್ನು ಅವರಿಗೆ ತಿಳಿಸು.
5 ನೀನು ಕಷ್ಟಕರವಾದ ಭಾಷೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಲಿ ಮಾತನಾಡುವುದಕ್ಕಾಗಲಿ ಪರದೇಶಿಯರ ಬಳಿಗೆ ನಾನು ಕಳುಹಿಸುತ್ತಿಲ್ಲ. ನಾನು ಇಸ್ರೇಲ್ ವಂಶದವರ ಬಳಿಗೆ ನಿನ್ನನ್ನು ಕಳುಹಿಸುತ್ತಿದ್ದೇನೆ.
6 ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾದ ಅಥವಾ ಮಾತಾಡಲು ಕಷ್ಟವಾದ ಅಥವಾ ಪದಗಳನ್ನು ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವಾಗದ ಅನೇಕ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತಿಲ್ಲ. ಆ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸಿದರೆ ಅವರು ಖಂಡಿತವಾಗಿಯೂ ಕಿವಿಗೊಡುವರು.
7 ಆದರೆ ನಾನು ಇಸ್ರೇಲ್ ವಂಶದವರ ಬಳಿಗೆ ನಿನ್ನನ್ನು ಕಳುಹಿಸುತ್ತಿದ್ದೇನೆ. ಇವರಿಗೆ ಮೊಂಡತನವಿರುವದು. ನಿನ್ನ ಮಾತನ್ನು ಕೇಳಲು ನಿರಾಕರಿಸುವರು. ಅವರಿಗೆ ನನ್ನ ಮಾತುಗಳನ್ನು ಕೇಳಲು ಇಷ್ಟವಿಲ್ಲ.
8 ಅವರು ಕಠಿಣರಾಗಿರುವಂತೆಯೇ ನಾನು ನಿನ್ನನ್ನೂ ಕಠಿಣಗೊಳಿಸುತ್ತೇನೆ. ನಿನಗೂ ಅವರಂತೆ ಮೊಂಡತನವನ್ನು ಕೊಡುವೆನು.
9 ವಜ್ರವು ಬಂಡೆಕಲ್ಲಿಗಿಂತ ಗಟ್ಟಿಯಾದ ವಸ್ತು. ಅದೇ ಪ್ರಕಾರ ನಿನ್ನ ತಲೆ ಅವರ ತಲೆಗಿಂತ ಗಟ್ಟಿಯಾಗಿರುವುದು. ಆ ಜನರಿಗೆ ಭಯಪಡಬೇಡ. ಅವರು ದಂಗೆಕೋರರಾಗಿದ್ದರೂ ಅವರ ಸಮ್ಮುಖದಲ್ಲಿ ಭಯಪಡಬೇಡ.”
10 ದೇವರು ನನಗೆ ಮತ್ತೇ ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಹೇಳುವ ಪ್ರತಿಯೊಂದು ಮಾತನ್ನು ನೀನು ಕಿವಿಗೊಟ್ಟು ಕೇಳಬೇಕು. ಆ ಮಾತುಗಳನ್ನು ನೀನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು.
11 ಬಳಿಕ ಸೆರೆವಾಸದಲ್ಲಿರುವ ನಿನ್ನ ಸಬಜನರ ಬಳಿಗೆ ಹೋಗು. ಅವರು ಕೇಳಲಿ, ಕೇಳದಿರಲಿ, ನೀನು ಅವರಿಗೆ, ‘ದೇವರಾದ ಯೆಹೋವನು ಹೀಗೆ ಹೇಳುತ್ತಾನೆ’ ” ಎಂದು ಹೇಳು.
12 ಆಗ ದೇವರಾತ್ಮವು ನನ್ನನ್ನು ಮೇಲಕ್ಕೆ ಎತ್ತಿತು. ಯೆಹೋವನ ಮಹಿಮೆಯು ತನ್ನ ಸ್ಥಳದಿಂದ ಮೇಲೇರಿದಾಗ ನನ್ನ ಹಿಂಭಾಗದಲ್ಲಿ ಮಹಾ ಗುಡುಗುವ ಶಬ್ದವನ್ನು ಕೇಳಿದೆನು. ಅದು ಯೆಹೋವನಿಗೆ ಆತನ ನಿವಾಸದಲ್ಲಿ ಸ್ತೋತ್ರವಾಗಲಿ ಎಂಬ ವಾಣಿಯೊಂದಿಗೆ ಕೇಳಿಸುತ್ತಿತ್ತು.
13 ಅದು ಜೀವಿಗಳು ತಮ್ಮ ರೆಕ್ಕೆಗಳನ್ನು ಒಂದಕ್ಕೊಂದು ಬಡಿದಾಡುವ ಸಪ್ಪಳ ಮತ್ತು ಅವುಗಳ ಪಕ್ಕದಲ್ಲಿದ್ದ ಚಕ್ರಗಳ ಸಪ್ಪಳ.
14 ಆತ್ಮವು ನನ್ನನ್ನು ಅಲ್ಲಿಂದ ಎತ್ತಿಕೊಂಡು ಹೋಯಿತು. ನಾನು ಆಗ ದುಃಖಗೊಂಡು ನನ್ನ ಆತ್ಮದಲ್ಲಿ ತತ್ತರಗೊಂಡೆನು. ಆದರೆ ಯೆಹೋವನ ಶಕ್ತಿಯು ನನ್ನನ್ನು ಸಂಪೂರ್ಣವಾಗಿ ತನ್ನ ಅಧಿನಕ್ಕೆ ತೆಗೆದುಕೊಂಡಿತು.
15 ಕೆಬಾರ್ ಕಾಲುವೆ ಪಕ್ಕದಲ್ಲಿದ್ದ ತೇಲ್ ಆಬೀಬ್ನಲ್ಲಿ ಸೆರೆಯಾಳುಗಳಾಗಿದ್ದ ಇಸ್ರೇಲ್ ಜನರ ಬಳಿಗೆ ನಾನು ಒಯ್ಯಲ್ಪಟ್ಟೆನು. ಅಲ್ಲಿದ್ದ ಜನರ ಮಧ್ಯೆ ನಾನು ಏಳು ದಿವಸ ಸ್ತಬ್ಧನಾಗಿದ್ದೆನು.
ಇಸ್ರೇಲಿಗೆ ಕಾವಲುಗಾರನಾಗಿ
16 ಏಳು ದಿವಸಗಳ ತರುವಾಯ, ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ:
17 “ನರಪುತ್ರನೇ, ನಾನು ನಿನ್ನನ್ನು ಇಸ್ರೇಲರಿಗೆ ಕಾವಲುಗಾರನನ್ನಾಗಿ ಮಾಡಿದ್ದೇನೆ. ನಾನು ಅವರಿಗೆ ಸಂಭವಿಸುವ ಕೆಟ್ಟ ವಿಷಯಗಳನ್ನು ನಿನಗೆ ಹೇಳುತ್ತಿದ್ದೇನೆ. ಮತ್ತು ನೀನು ನನ್ನ ಪರವಾಗಿ ಅವರನ್ನು ಎಚ್ಚರಿಸು.
18 ನಾನು ದುಷ್ಟನಿಗೆ, ‘ನೀನು ಸಾಯುವೆ’ ಎಂದು ಹೇಳುವಾಗ, ನೀನು ಅವನನ್ನು ಎಚ್ಚರಿಸಬೇಕು. ಅವನು ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳುವದಕ್ಕಾಗಿ ತನ್ನ ಜೀವಿತವನ್ನು ಮಾರ್ಪಡಿಸಿಕೊಂಡು ದುಷ್ಕೃತ್ಯ ನಿಲ್ಲಿಸಬೇಕೆಂದು ನೀನು ಅವನಿಗೆ ಹೇಳಬೇಕು. ನೀನು ಅವನನ್ನು ಎಚ್ಚರಿಸದಿದ್ದರೆ ಅವನು ತನ್ನ ಪಾಪದ ದೆಸೆಯಿಂದ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೆ ಹೊಣೆಗಾರನನ್ನಾಗಿ ಮಾಡುತ್ತೇನೆ.
19 “ಒಂದುವೇಳೆ ನೀನು ಒಬ್ಬ ದುಷ್ಟಮನುಷ್ಯನನ್ನು ಎಚ್ಚರಿಸಿ ಅವನು ಪಾಪ ಮಾಡದಂತೆ ಮತ್ತು ಅವನ ಜೀವಿತವನ್ನು ಬದಲಾವಣೆ ಮಾಡಲು ಹೇಳಿದ್ದಲ್ಲಿ ಆ ಮನುಷ್ಯನು ನಿನ್ನ ಮಾತುಗಳನ್ನು ಕೇಳಲು ನಿರಾಕರಿಸಿದರೆ, ಅವನು ಪಾಪ ಮಾಡುವುದರಿಂದ ಸಾಯುವನು. ಆದರೆ ನೀನು ನಿನ್ನ ಜೀವವನ್ನು ರಕ್ಷಿಸಿಕೊಳ್ಳುವಿ.
20 “ಒಳ್ಳೆಯವನು ತನ್ನ ಒಳ್ಳೆಯತನವನ್ನು ತೊರೆದು ಕೆಟ್ಟದ್ದನ್ನು ಮಾಡಿದರೆ, ನಾನು ಅವನ ಹಾದಿಗೆ ತಡೆಯನ್ನು ಹಾಕಿ ಅವನು ಬೀಳುವಂತೆ ಮಾಡುವೆನು; ಅವನು ಸಾಯುವನು. ನೀನು ಅವನನ್ನು ಎಚ್ಚರಿಸಲಿಲ್ಲವಾದ್ದರಿಂದ ಅವನು ತನ್ನ ಪಾಪದ ನಿಮಿತ್ತ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೆ ಹೊಣೆಗಾರನನ್ನಾಗಿ ಮಾಡುತ್ತೇನೆ. ಜನರು ಅವನ ಒಳ್ಳೆಯ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.
21 “ನೀನು ಆ ಒಳ್ಳೆಯವನಿಗೆ ಪಾಪ ಮಾಡದಂತೆ ಎಚ್ಚರಿಸಿದರೆ ಮತ್ತು ಅವನು ಪಾಪ ಮಾಡುವದನ್ನು ನಿಲ್ಲಿಸಿದರೆ, ಆ ಮನುಷ್ಯನು ಸಾಯುವದಿಲ್ಲ; ಯಾಕೆಂದರೆ ಅವನು ನಿನ್ನ ಎಚ್ಚರಿಕೆಗೆ ಕಿವಿಗೊಟ್ಟನು ಮತ್ತು ನೀನು ನಿನ್ನ ಸ್ವಂತ ಪ್ರಾಣವನ್ನು ರಕ್ಷಿಸಿಕೊಂಡಿರುವೆ.”
22 ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಆತನು ನನಗೆ, “ಎದ್ದೇಳು, ಬಯಲು ಸೀಮೆಗೆ ಹೋಗು. ಅಲ್ಲಿ ನಾನು ನಿನ್ನೊಂದಿಗೆ ಮಾತನಾಡುವೆನು” ಎಂದು ಹೇಳಿದನು.
23 ನಾನೆದ್ದು ಬಯಲು ಸೀಮೆಗೆ ಹೋದೆನು. ಕೆಬಾರ್ ನದಿಯ ಪಕ್ಕದಲ್ಲಿ ನಾನು ಕಂಡ ಮಹಿಮೆಯಂತಿದ್ದ ಯೆಹೋವನ ಮಹಿಮೆಯು ಅಲ್ಲಿ ಇತ್ತು. ನಾನು ನನ್ನ ಮುಖವನ್ನು ನೆಲಕ್ಕೆ ತಾಗಿಸಿ ಬಗ್ಗಿ ನಮಸ್ಕರಿಸಿದೆ.
24 ಆಗ ಆತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಕಾಲೂರಿ ನಿಂತುಕೊಳ್ಳುವಂತೆ ಮಾಡಿತು. ಬಳಿಕ ಆತನು ನನಗೆ, “ನೀನು ನಿನ್ನ ಮನೆಯೊಳಗೆ ಹೋಗಿ ಒಳಗಿನಿಂದ ಕದವನ್ನು ಹಾಕಿಕೊ.
25 ನರಪುತ್ರನೇ, ನಿನ್ನ ಸಬಜನರು ಹಗ್ಗ ಹಿಡಿದುಕೊಂಡು ಬಂದು ನಿನ್ನನ್ನು ಕಟ್ಟುವರು. ನಿನ್ನನ್ನು ಜನರ ಮಧ್ಯದಿಂದ ಹೊರಹೋಗದಂತೆ ಮಾಡುವರು.
26 ನಿನ್ನ ನಾಲಿಗೆಯು ಸೇದಿ ಹೋಗುವಂತೆ ಮಾಡುವೆನು. ನಿನಗೆ ಮಾತನಾಡಲು ಆಗದು. ಆದ್ದರಿಂದ ಅವರನ್ನು ಖಂಡಿಸಲು ಯಾರೂ ಇರುವದಿಲ್ಲ. ಯಾಕೆಂದರೆ ಆ ಜನರು ಯಾವಾಗಲೂ ನನ್ನ ವಿರುದ್ಧವಾಗಿ ವರ್ತಿಸುವರು.
27 ಆದರೆ ನಾನು ನಿನ್ನೊಂದಿಗೆ ಮಾತನಾಡುವಾಗ, ನಿನ್ನನ್ನು ಮಾತನಾಡಲಾಗುವಂತೆ ಮಾಡುವೆನು. ಆಗ ನೀನು ಅವರಿಗೆ, ‘ನಮ್ಮ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ’ ಎಂದು ಹೇಳಬೇಕು. ಕೆಲವರು ಕಿವಿಗೊಡುವರು; ಕೆಲವರು ಕಿವಿಗೊಡರು; ಯಾಕೆಂದರೆ ಅವರು ಯಾವಾಗಲೂ ನನಗೆ ವಿರುದ್ಧವಾಗಿಯೇ ಇರುವರು.