5
ಬೆಳಕಿನಲ್ಲಿ ಬದುಕಿರಿ
1 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು.
2 ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.
3 ಆದರೆ ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿರಕೂಡದು. ಯಾವ ಬಗೆಯ ದುಷ್ಟತ್ವವಾಗಲಿ ಸ್ವಾರ್ಥತೆಯಾಗಲಿ ಇರಕೂಡದು. ಏಕೆಂದರೆ ಅವುಗಳು ದೇವರ ಪರಿಶುದ್ಧ ಜನರಿಗೆ ಯೋಗ್ಯವಾದವುಗಳಲ್ಲ.
4 ಅಲ್ಲದೆ ನಿಮ್ಮ ಮಧ್ಯದಲ್ಲಿ ಕೆಟ್ಟಮಾತುಗಳು ಇರಕೂಡದು. ನೀವು ಮೂರ್ಖತನದಿಂದ ಮಾತಾಡಕೂಡದು ಮತ್ತು ಹೊಲಸಾದ ಹಾಸ್ಯನುಡಿಗಳನ್ನು ಹೇಳಕೂಡದು. ಇವುಗಳು ನಿಮಗೆ ಯೋಗ್ಯವಾದವುಗಳಲ್ಲ. ಆದರೆ ನೀವು ದೇವರಿಗೆ ಸ್ತೋತ್ರ ಸಲ್ಲಿಸುವವರಾಗಿರಬೇಕು.
5 ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.
6 ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ.
7 ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ.
8 ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ.
9 ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ.
10 ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.
11 ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ.
12 ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ.
13 ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ.
14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ:
“ನಿದ್ರೆಮಾಡುವವನೇ, ಎಚ್ಚರವಾಗು!
ಸತ್ತವರನ್ನು ಬಿಟ್ಟು ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”
15 ಆದ್ದರಿಂದ ನೀವು ಹೇಗೆ ಜೀವಿಸುತ್ತಿದ್ದೀರಿ ಎಂಬುದರ ಬಗ್ಗೆ ಬಹು ಎಚ್ಚರಿಕೆಯಿಂದಿರಿ. ಅವಿವೇಕಿಗಳಂತೆ ಜೀವಿಸದೆ ವಿವೇಕಿಗಳಾಗಿ ಜೀವಿಸಿರಿ.
16 ಈ ದಿನಗಳು ಕೆಟ್ಟವುಗಳಾಗಿವೆ. ಆದ್ದರಿಂದ ನಿಮಗಿರುವ ಪ್ರತಿಯೊಂದು ಅವಕಾಶವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿರಿ.
17 ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ.
18 ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ.
19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ.
20 ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.
ಗಂಡ ಹೆಂಡತಿಯರು
21 ನೀವು ಒಬ್ಬರಿಗೊಬ್ಬರು ವಿಧೇಯರಾಗಿರಬೇಕು. ಏಕೆಂದರೆ ನೀವು ಕ್ರಿಸ್ತನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು.
22 ಸ್ತ್ರೀಯರೇ, ನೀವು ಪ್ರಭುವಿಗೆ ಅಧೀನರಾಗಿರುವಂತೆ ನಿಮ್ಮ ಗಂಡಂದಿರಿಗೂ ಅಧೀನರಾಗಿರಿ.
23 ಕ್ರಿಸ್ತನು ಸಭೆಗೆ ಶಿರಸ್ಸಾಗಿರುವಂತೆ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಸಭೆಯು ಕ್ರಿಸ್ತನ ದೇಹವಾಗಿದೆ. ಕ್ರಿಸ್ತನು ಆ ದೇಹದ ರಕ್ಷಕನಾಗಿದ್ದಾನೆ.
24 ಸಭೆಯು ಕ್ರಿಸ್ತನ ಅಧೀನದಲ್ಲಿದೆ. ಇದೇ ನಿಯಮವು ಸ್ತ್ರೀಯರಿಗೆ ಅನ್ವಯಿಸುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ಸ್ತ್ರೀಯರು ತಮ್ಮ ಗಂಡಂದಿರಿಗೆ ಅಧೀನರಾಗಿರಬೇಕು.
25 ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆ ನೀವು ನಿಮ್ಮ ಹೆಂಡತಿಯರನ್ನು ಪ್ರೀತಿಸಬೇಕು.
26 ಕ್ರಿಸ್ತನು ಸಭೆಯನ್ನು ಪರಿಶುದ್ಧಗೊಳಿಸುವುದಕ್ಕಾಗಿ ಪ್ರಾಣಕೊಟ್ಟನು. ಸುವಾರ್ತೆಯನ್ನು ತಿಳಿಸುವುದರ ಮೂಲಕ ಜಲಸ್ನಾನವನ್ನು ಮಾಡಿಸಿ ಆತನು ಸಭೆಯನ್ನು ಶುದ್ಧಗೊಳಿಸಿದನು.
27 ಮಹಿಮಾಪೂರ್ಣಳಾದ ಕನ್ನಿಕೆಯೋ ಎಂಬಂತಿರುವ ಸಭೆಯನ್ನು ತನಗೇ ಕೊಡಬೇಕೆಂದು ಆತನು ಪ್ರಾಣಕೊಟ್ಟನು. ಸಭೆಯು ದೋಷವಿಲ್ಲದೆ ಶುದ್ಧವಾಗಿರಬೇಕೆಂದು ಮತ್ತು ದುಷ್ಟತ್ವವಾಗಲಿ ಪಾಪವಾಗಲಿ ಅಥವಾ ಬೇರೆ ಯಾವುದೇ ತಪ್ಪಾಗಲಿ ಸಭೆಯಲ್ಲಿರಕೂಡದೆಂದು ಆತನು ಪ್ರಾಣಕೊಟ್ಟನು.
28 ಆದ್ದರಿಂದ ಪುರುಷರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸುವಂತೆ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುವವನಾಗಿದ್ದಾನೆ.
29 ಏಕೆಂದರೆ ಯಾವನೂ ತನ್ನ ದೇಹವನ್ನು ದ್ವೇಷಿಸುವುದಿಲ್ಲ. ಪ್ರತಿಯೊಬ್ಬನು ತನ್ನ ದೇಹವನ್ನು ಪೋಷಿಸಿ ಜಾಗ್ರತೆಯಿಂದ ನೋಡಿಕೊಳ್ಳುತ್ತಾನೆ. ಕ್ರಿಸ್ತನು ಸಭೆಗೋಸ್ಕರ ಮಾಡುವಂಥದ್ದು ಅದೇ ಆಗಿದೆ.
30 ಏಕೆಂದರೆ ನಾವು ಆತನ ದೇಹದ ಅಂಗಗಳಾಗಿದ್ದೇವೆ.
31 ಪವಿತ್ರ ಗ್ರಂಥವು ಹೇಳುವಂತೆ, “ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ದೇಹವಾಗುವರು.”
32 ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತಾಡುತ್ತಿದ್ದೇನೆ. ರಹಸ್ಯವಾದ ಈ ಸತ್ಯವು ಬಹು ಮುಖ್ಯವಾದದ್ದು.
33 ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ತಾನು ಪ್ರೀತಿಸುವಂತೆ ತನ್ನ ಹೆಂಡತಿಯನ್ನು ಪ್ರೀತಿಸಬೇಕು ಮತ್ತು ಸ್ತ್ರೀಯು ತನ್ನ ಗಂಡನಿಗೆ ಭಯಭಕ್ತಿಯಿಂದರಬೇಕು.