4
ಎಸ್ತೇರಳು ಸಹಾಯ ಮಾಡಲು ಮೊರ್ದೆಕೈಯ ಒತ್ತಾಯ
1 ನಡೆದ ಎಲ್ಲಾ ಸಂಗತಿಗಳನ್ನು ಮೊರ್ದೆಕೈ ಕೇಳಿಕೊಂಡನು. ಯೆಹೂದ್ಯರನ್ನೆಲ್ಲಾ ಕೊಲ್ಲಲು ರಾಜಾಜ್ಞೆ ಹೊರಟಿದೆ ಎಂದು ಕೇಳಿದಾಗ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು ಶೋಕದ ಬಟ್ಟೆಗಳನ್ನು ಧರಿಸಿ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡನು. ಆಮೇಲೆ ಗಟ್ಟಿಯಾಗಿ ಅಳುತ್ತಾ ನಗರ ಬೀದಿಗಳಲ್ಲಿ ನಡೆದನು.
2 ಅವನು ಶೋಕವನ್ನು ಸೂಚಿಸುವ ಬಟ್ಟೆಗಳನ್ನು ಧರಿಸಿದ್ದ ಕಾರಣ ಅರಮನೆಯ ಹೆಬ್ಬಾಗಿಲ ತನಕ ಮಾತ್ರವೇ ಅವನಿಗೆ ಹೋಗಲು ಸಾಧ್ಯವಾಯಿತು. ಅರಮನೆಯ ಪ್ರಾಕಾರದೊಳಗೆ ಶೋಕವಸ್ತ್ರವನ್ನು ಧರಿಸಿ ಯಾರೂ ಹೋಗುವ ಹಾಗಿಲ್ಲ.
3 ಪ್ರತಿಯೊಂದು ಸಂಸ್ಥಾನದಲ್ಲೂ ರಾಜನ ಆಜ್ಞೆ ಪ್ರಕಟಿಸಲ್ಪಟ್ಟಾಗ ಯೆಹೂದ್ಯರೊಳಗೆ ಕೂಗಾಟವೂ ದುಃಖವೂ ತುಂಬಿತು. ಉಪವಾಸ ಮಾಡುತ್ತಾ ಅವರು ಗಟ್ಟಿಯಾಗಿ ರೋಧಿಸಿದರು. ಎಷ್ಟೋ ಮಂದಿ ಯೆಹೂದ್ಯರು ಶೋಕವಸ್ತ್ರವನ್ನು ಧರಿಸಿ ತಲೆಗೆ ಬೂದಿ ಸುರಿದು ನೆಲದ ಮೇಲೆ ಬಿದ್ದುಕೊಂಡು ಗಟ್ಟಿಯಾಗಿ ಅತ್ತರು.
4 ಎಸ್ತೇರಳ ಸೇವಕಿಯರು ಮತ್ತು ಕಂಚುಕಿಯರು ಮೊರ್ದೆಕೈ ವಿಚಾರವಾಗಿ ಆಕೆಗೆ ತಿಳಿಸಿದರು. ಇದನ್ನು ಕೇಳಿ ಎಸ್ತೇರ್ ರಾಣಿಗೆ ತುಂಬಾ ಗಲಿಬಿಲಿಯೂ ದುಃಖವೂ ಆಯಿತು. ಆಕೆ ಅವನಿಗೋಸ್ಕರ ಬಟ್ಟೆಯನ್ನು ಕಳುಹಿಸಿ ಶೋಕದ ಬಟ್ಟೆಯನ್ನು ತೆಗೆದುಹಾಕಲು ಹೇಳಿಸಿದಳು. ಆದರೆ ಅವನು ಅವಳ ಬಟ್ಟೆಯನ್ನು ಸ್ವೀಕರಿಸಲಿಲ್ಲ.
5 ಆಗ ಎಸ್ತೇರಳು ಹತಾಕನನ್ನು ಬರಹೇಳಿದಳು. ಹತಾಕನು ರಾಜಕಂಚುಕಿಯಾಗಿದ್ದು ಎಸ್ತೇರ್ ರಾಣಿಯ ಸೇವೆಯನ್ನು ಮಾಡುವವನಾಗಿದ್ದನು. ಹತಾಕನಿಗೆ ಹೋಗಿ ಮೊರ್ದೆಕೈಗೆ ಏನು ತೊಂದರೆಯಾಯಿತು; ಅವನು ಯಾತಕ್ಕಾಗಿ ದುಃಖತಪ್ತನಾಗಿದ್ದಾನೆ ಎಂಬುದನ್ನು ವಿಚಾರಿಸಿಕೊಂಡು ಬರಲು ಆಜ್ಞಾಪಿಸಿದಳು.
6 ಅರಮನೆಯ ಹೆಬ್ಬಾಗಿಲು ಎದುರಿನಲ್ಲಿದ್ದ ಬಯಲಿನಲ್ಲಿ ಮೊರ್ದೆಕೈಯನ್ನು ಹತಾಕನು ಸಂಧಿಸಿದಾಗ
7 ಮೊರ್ದೆಕೈ ನಡೆದ ಸಂಗತಿಗಳನ್ನೆಲ್ಲಾ ಹೇಳಿದನು. ಮತ್ತು ಹಾಮಾನನು ರಾಜನಿಗೆ ಯೆಹೂದ್ಯರನ್ನು ಕೊಲ್ಲಿಸಲು ಆಜ್ಞೆ ಹೊರಡಿಸಿದ್ದುದಕ್ಕಾಗಿ ಕೊಟ್ಟ ಹಣದ ಸರಿಯಾದ ಮೊತ್ತವನ್ನು ತಿಳಿಸಿದನು.
8 ಯೆಹೂದ್ಯರನ್ನು ಕೊಲ್ಲಬೇಕೆಂಬುವ ಅರಸನ ಆಜ್ಞಾಪತ್ರದ ಒಂದು ಪ್ರತಿಯನ್ನು ಹತಾಕನ ಕೈಯಲ್ಲಿ ಮೊರ್ದೆಕೈ ಕೊಟ್ಟನು. ಈ ಆಜ್ಞಾಪತ್ರವನ್ನು ಶೂಷನ್ ನಗರದ ಎಲ್ಲೆಡೆಯಲ್ಲಿಯೂ ಕಳುಹಿಸಲ್ಪಟ್ಟಿತ್ತು. ಹತಾಕನು ಆ ಪ್ರತಿಯನ್ನು ಎಸ್ತೇರಳಿಗೆ ತೋರಿಸಿ ಎಲ್ಲವನ್ನು ವಿವರಿಸಬೇಕೆಂದು ಮೊರ್ದೆಕೈ ಉದ್ದೇಶಿಸಿದನು. ಅಷ್ಟೇ ಅಲ್ಲ. ಎಸ್ತೇರ್ ರಾಣಿ ಅರಸನ ಬಳಿಗೆ ಹೋಗಿ ತನಗೂ ಆಕೆಯ ಜನರಿಗೂ ದಯೆ ತೋರಿಸಲು ಅರಸನೊಡನೆ ಬೇಡಲಿ ಎಂದು ಹತಾಕನೊಡನೆ ಹೇಳಿ ಕಳುಹಿಸಿದನು.
9 ಹತಾಕನು ಹಿಂತಿರುಗಿ ಹೋಗಿ ಎಸ್ತೇರಳಿಗೆ ಮೊರ್ದೆಕೈ ಹೇಳಿದ್ದೆಲ್ಲವನ್ನು ತಿಳಿಸಿದನು.
10 ಎಸ್ತೇರಳು ಹತಾಕನಿಗೆ, “ಮೊರ್ದೆಕೈ ಹತ್ತಿರ ಹೋಗಿ ಹೀಗೆ ಹೇಳು:
11 ಮೊರ್ದೆಕೈ, ಸಾಮ್ರಾಜ್ಯದಲ್ಲಿರುವ ಎಲ್ಲಾ ಅಧಿಕಾರಿಗಳಿಗೂ ಪ್ರಜೆಗಳಿಗೂ ತಿಳಿದಿರುವ ಒಂದು ವಿಷಯವೇನೆಂದರೆ, ರಾಜನು ಕರೆಯದೆ ಯಾರಾದರೂ ಆತನ ಬಳಿಗೆ ಹೋದರೆ ಅದಕ್ಕೆ ಮರಣದಂಡನೆಯೇ ಶಿಕ್ಷೆ ಎಂಬುದು. ರಾಜನು ತನ್ನ ಬಂಗಾರದ ದಂಡನ್ನು ಯಾರ ಮೇಲೆ ತೋರಿಸುವನೋ ಅವನು ಮರಣಶಿಕ್ಷೆಯಿಂದ ಪಾರಾಗುವನು. ಈಗ ರಾಜನು ನನ್ನನ್ನು ಕರೆದು ಮೂವತ್ತು ದಿವಸಗಳಾದವು.”
12-13 ಎಸ್ತೇರಳ ಸಂದೇಶವು ಮೊರ್ದೆಕೈಗೆ ತಲುಪಿತು. ಅದಕ್ಕುತ್ತರವಾಗಿ ಮೊರ್ದೆಕೈ ಹೀಗೆ ಹೇಳಿ ಕಳುಹಿಸಿದನು: “ಎಸ್ತೇರಳೇ, ನೀನು ಅರಮನೆಯಲ್ಲಿ ವಾಸವಾಗಿರುವುದರಿಂದ ಯೆಹೂದ್ಯಳಾದ ನೀನೊಬ್ಬಳೇ ಸಾಮೂಹಿಕ ಹತ್ಯೆಯಿಂದ ಪಾರಾಗುವೆ ಎಂದು ನೆನೆಸಬೇಡ.
14 ನೀನು ಈಗ ಸುಮ್ಮನಿದ್ದರೆ ಯೆಹೂದ್ಯರಿಗೆ ಸಹಾಯವೂ ಸ್ವಾತಂತ್ರ್ಯವೂ ಬೇರೆ ದಿಕ್ಕಿನಿಂದ ಬರುವವು. ಆದರೆ ನೀನೂ ನಿನ್ನ ತಂದೆಯ ಬಳಗದವರೆಲ್ಲರೂ ಸಾಯುವರು. ಇಂಥ ಸಮಯದಲ್ಲಿ ನೀನು ರಾಣಿಯಾಗಿ ಆಯ್ಕೆಯಾದದ್ದು ಇದಕ್ಕೋಸ್ಕರವೋ ಎಂದು ಯಾರಿಗೆ ಹೇಳಲು ಸಾಧ್ಯ?”
15-16 ಆಗ ಎಸ್ತೇರಳು ಈ ಉತ್ತರವನ್ನು ಮೊರ್ದೆಕೈಗೆ ಕಳುಹಿಸಿದಳು: “ಮೊರ್ದೆಕೈ, ನೀನು ಹೋಗಿ ಶೂಷನ್ನಲ್ಲಿರುವ ಎಲ್ಲಾ ಯೆಹೂದ್ಯರನ್ನು ಒಟ್ಟಿಗೆ ಸೇರಿಸಿ ನನಗಾಗಿ ಉಪವಾಸವಿರಲು ಅವರಿಗೆ ಹೇಳು. ಮೂರು ದಿನ ಹಗಲುರಾತ್ರಿ ಊಟಮಾಡಲೂಬಾರದು ಕುಡಿಯಲೂಬಾರದು. ನಾನೂ ನಿಮ್ಮ ಹಾಗೆ ಉಪವಾಸದಿಂದಿರುವೆನು. ನನ್ನೊಂದಿಗೆ ನನ್ನ ಸೇವಕಿಯರೂ ಉಪವಾಸ ಮಾಡುವರು. ನಾವು ಉಪವಾಸ ಮಾಡಿದ ಬಳಿಕ ನಾನು ರಾಜನ ಬಳಿಗೆ ಹೋಗುವೆನು. ಆತನು ಕರೆಯದೆ ನಾನು ಆತನ ಬಳಿಗೆ ಹೋಗುವುದು ನ್ಯಾಯಬಾಹಿರ. ಆದರೂ ನಾನು ಹೋಗುವೆನು, ನಾನು ಸಾಯಬೇಕಾದರೆ ಸಾಯುವೆನು.”
17 ಮೊರ್ದೆಕೈ ಹೊರಟುಹೋಗಿ ಎಸ್ತೇರಳು ಹೇಳಿದ ಪ್ರಕಾರ ಮಾಡಿದನು.