9
ಯೆಹೂದ್ಯರಿಗೆ ಜಯ
1 ಹನ್ನೆರಡನೆಯ ತಿಂಗಳಾದ ಆದಾರ್ ಮಾಸದ ಹದಿಮೂರನೇ ದಿವಸದಲ್ಲಿ ಯೆಹೂದ್ಯರ ವೈರಿಗಳು ರಾಜಾಜ್ಞೆಗನುಸಾರವಾಗಿ ಯೆಹೂದ್ಯರನ್ನು ನಿರ್ನಾಮ ಮಾಡಬೇಕಾಗಿತ್ತು. ಅವರು ಆ ದಿವಸಕ್ಕಾಗಿ ಕಾಯುತ್ತಿರುವಾಗ ಪರಿಸ್ಥಿತಿಯು ಬದಲಾಯಿತು. ಯೆಹೂದ್ಯರು ಅವರ ಶತ್ರುಗಳಿಗಿಂತ ಬಲಾಢ್ಯರಾದರು.
2 ರಾಜನಾದ ಅಹಷ್ವೇರೋಷನ ಸಾಮ್ರಾಜ್ಯದ ಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಮ್ಮನ್ನು ಕೊಲ್ಲಲು ಬರುವ ವೈರಿಗಳನ್ನು ಎದುರಿಸಲು ಒಟ್ಟಾಗಿ ಸೇರಿದರು. ಇವರಿಗೆ ವಿರುದ್ಧವಾಗಿ ಬಿದ್ದು ಹೊಡೆದಾಡಲು ಯಾರಿಗೂ ಧೈರ್ಯಸಾಲಲಿಲ್ಲ. ಯೆಹೂದ್ಯರ ಮೇಲೆ ಜನರಿಗೆ ಭೀತಿ ಉಂಟಾಯಿತು.
3 ಅಲ್ಲದೆ ಸಂಸ್ಥಾನಗಳಲ್ಲಿದ್ದ ಅಧಿಕಾರಿಗಳು, ರಾಜ್ಯಪಾಲರು, ಆಡಳಿತಾಧಿಕಾರಿಗಳು ಯೆಹೂದ್ಯರಿಗೆ ನೆರವಾದರು. ಯಾಕೆಂದರೆ ಅವರು ಮೊರ್ದೆಕೈಗೆ ಹೆದರುತ್ತಿದ್ದರು.
4 ಮೊರ್ದೆಕೈ ಅರಮನೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದನು. ಸಂಸ್ಥಾನಗಳಲ್ಲಿರುವವರೆಲ್ಲರೂ ಅವನ ಪ್ರಖ್ಯಾತಿಯ ಬಗ್ಗೆ ಕೇಳಿದ್ದರು. ದಿನೇದಿನೇ ಮೊರ್ದೆಕೈ ಬಲಶಾಲಿಯಾಗುತ್ತಾ ಬಂದನು.
5 ತಮ್ಮ ಶತ್ರುಗಳನ್ನೆಲ್ಲಾ ಯೆಹೂದ್ಯರು ಸೋಲಿಸಿ ತಮ್ಮ ಖಡ್ಗಗಳಿಂದ ನಾಶಮಾಡಿದರು; ತಮ್ಮನ್ನು ದ್ವೇಷಿಸುತ್ತಿದ್ದವರನ್ನು ತಮಗಿಷ್ಟ ಬಂದಂತೆ ಮಾಡಿದರು.
6 ರಾಜಧಾನಿಯಾದ ಶೂಷನ್ನಲ್ಲಿಯೇ ಯೆಹೂದ್ಯರು ಐನೂರು ಮಂದಿ ಶತ್ರುಗಳನ್ನು ಹತಿಸಿದರು.
7 ಅವರು ಹತಿಸಿದವರಾರೆಂದರೆ: ಪರ್ಷಂದಾತ, ದಲ್ಫೋನ್, ಅಸ್ಪಾತ,
8 ಪೋರಾತ, ಅದಲ್ಯ, ಅರೀದಾತ,
9 ಪರ್ಮಷ್ಟ, ಅರೀಸೈ, ಅರಿದೈ ಮತ್ತು ವೈಜಾತ.
10 ಇವರು ಹಾಮಾನನ ಹತ್ತು ಗಂಡುಮಕ್ಕಳಾಗಿದ್ದರು. ಹಾಮಾನನು ಹಮ್ಮೆದಾತನ ಮಗನೂ ಯೆಹೂದ್ಯರ ಶತ್ರುವೂ ಆಗಿದ್ದನು. ಯೆಹೂದ್ಯರು ಅವರನ್ನು ಹತಿಸಿದ್ದು ಮಾತ್ರವೇ, ಹೊರತು ಅವರ ಸೊತ್ತುಗಳನ್ನು ಅಪಹರಿಸಲಿಲ್ಲ.
11 ಶೂಷನ್ ನಗರದಲ್ಲಿ ಆ ದಿವಸ ಎಷ್ಟು ಮಂದಿ ಸತ್ತರು ಎಂದು ಅರಸನು ಕೇಳಿ ತಿಳಿದುಕೊಂಡನು.
12 ಮತ್ತು ರಾಣಿಯಾದ ಎಸ್ತೇರಳಿಗೆ, “ಶೂಷನ್ನಲ್ಲಿ ಯೆಹೂದ್ಯರು ಹಾಮಾನನ ಹತ್ತು ಗಂಡುಮಕ್ಕಳೂ ಸೇರಿಸಿ ಐನೂರು ಮಂದಿಯನ್ನು ಕೊಂದಿದ್ದಾರೆ. ಇನ್ನು ಬೇರೆ ಸಂಸ್ಥಾನಗಳಲ್ಲಿ ನಿನಗೇನಾಗಬೇಕು? ನನಗೆ ಹೇಳು. ನಾನು ಹಾಗೆಯೇ ಮಾಡಿಸುತ್ತೇನೆ” ಎಂದು ಹೇಳಿದನು.
13 ಅದಕ್ಕೆ ಎಸ್ತೇರಳು, “ಅರಸನು ಇಷ್ಟಪಟ್ಟಲ್ಲಿ ನಾಳೆಯೂ ಶೂಷನ್ನಲ್ಲಿರುವ ಯೆಹೂದ್ಯರು ಹೀಗೆಯೇ ಮಾಡಲಿ ಮತ್ತು ಹಾಮಾನನ ಆ ಹತ್ತು ಮಂದಿ ಗಂಡುಮಕ್ಕಳನ್ನು ಗಲ್ಲುಕಂಬದಲ್ಲಿ ನೇತಾಡಿಸಲಿ” ಅಂದಳು.
14 ಅದೇ ರೀತಿ ಅರಸನು ಆಜ್ಞಾಪಿಸಿದನು. ರಾಜಾಜ್ಞೆಯು ಇನ್ನೊಂದು ದಿವಸ ಮುಂದುವರಿಯಿತು ಮತ್ತು ಹಾಮಾನನ ಹತ್ತು ಮಂದಿ ಗಂಡುಮಕ್ಕಳನ್ನು ಗಲ್ಲಿಗೆ ಹಾಕಿದರು.
15 ಶೂಷನ್ ನಗರದಲ್ಲಿದ್ದ ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆಯ ದಿನದಂದು ಒಟ್ಟಾಗಿ ಸೇರಿ ಆ ದಿವಸ ಮುನ್ನೂರು ಮಂದಿಯನ್ನು ಹತಿಸಿದರೆ ಹೊರತು, ಅವರ ಆಸ್ತಿಪಾಸ್ತಿಯನ್ನು ಮುಟ್ಟಲಿಲ್ಲ.
16 ಅದೇ ಸಮಯದಲ್ಲಿ ಇತರ ಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಾವು ಬಲಹೊಂದುವಂತೆ ಒಟ್ಟಾಗಿ ಸೇರಿ ಒಗ್ಗಟ್ಟಿನಲ್ಲಿದ್ದು ತಮ್ಮ ವೈರಿಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದರು. ಹೀಗೆ ಒಟ್ಟು ಎಪ್ಪತ್ತೈದು ಸಾವಿರ ಜನರು ಹತಿಸಲ್ಪಟ್ಟರು. ಆದರೆ ಅವರ ಆಸ್ತಿಯನ್ನು ಸೂರೆ ಮಾಡಲಿಲ್ಲ.
17 ಆದಾರ್ ಮಾಸದ ಹದಿಮೂರನೇ ದಿವಸದಲ್ಲಿ ಈ ಕಾರ್ಯವು ನಡೆಯಿತು. ಹದಿನಾಲ್ಕನೆಯ ದಿವಸದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡರು. ಆ ದಿವಸವನ್ನು ಯೆಹೂದ್ಯರು ತಮ್ಮ ಸಂತಸದ ದಿನವಾಗಿ ಆಚರಿಸಿದರು.
ಪೂರಿಮ್ ಹಬ್ಬ
18 ಆದಾರ್ ತಿಂಗಳಿನ ಹದಿಮೂರನೇ ಮತ್ತು ಹದಿನಾಲ್ಕನೇ ದಿವಸಗಳಲ್ಲಿ ಶೂಷನ್ ನಗರದ ಯೆಹೂದ್ಯರು ಒಟ್ಟಾಗಿ ಸೇರಿಬಂದು ಹದಿನೈದನೆಯ ದಿವಸದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡರು. ಹದಿನೈದನೆಯ ದಿವಸವನ್ನು ಅವರು ಸಂತಸದ ಹಬ್ಬವನ್ನಾಗಿ ಮಾಡಿದರು.
19 ದೇಶದ ಎಲ್ಲಾ ಹಳ್ಳಿಗಳಲ್ಲಿದ್ದ ಯೆಹೂದ್ಯರು ಆದಾರ್ ತಿಂಗಳಿನ ಹದಿನಾಲ್ಕನೆಯ ದಿವಸವನ್ನು ಪೂರಿಮ್ ದಿವಸವನ್ನಾಗಿ ಆಚರಿಸಿದರು. ಹದಿನಾಲ್ಕನೆಯ ದಿವಸವು ಅವರಿಗೆ ಸಂತಸದ ಹಬ್ಬ. ಆ ದಿವಸ ಅವರು ಔತಣಮಾಡಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟು ಕಳುಹಿಸಿದರು.
20 ನಡೆದ ಸಂಗತಿಗಳನ್ನೆಲ್ಲಾ ಮೊರ್ದೆಕೈ ಬರೆದಿಟ್ಟು ಅಹಷ್ವೇರೋಷನ ಸಾಮ್ರಾಜ್ಯದಲ್ಲಿ ವಾಸಿಸಿದ್ದ ಎಲ್ಲಾ ಯೆಹೂದ್ಯರಿಗೆ, ದೂರ ಮತ್ತು ಹತ್ತಿರದಲ್ಲಿರುವ ಯೆಹೂದ್ಯರಿಗೂ ಪತ್ರ ಬರೆಯಿಸಿದನು.
21 ಅದರಲ್ಲಿ ಅವನು ಯೆಹೂದ್ಯರೆಲ್ಲರೂ ಪ್ರತೀ ವರ್ಷ ಆದಾರ್ ತಿಂಗಳಿನ ಹದಿನಾಲ್ಕನೇ ಮತ್ತು ಹದಿನೈದನೇ ದಿವಸಗಳನ್ನು ಪೂರಿಮ್ ದಿವಸಗಳನ್ನಾಗಿ ಆಚರಿಸಬೇಕು ಎಂಬದಾಗಿ ಆದೇಶ ನೀಡಿದನು.
22 ಯಾಕೆಂದರೆ ಆ ದಿವಸದಲ್ಲಿ ಯೆಹೂದ್ಯರು ತಮ್ಮ ಶತ್ರುಗಳನ್ನು ಸದೆಬಡಿದರು. ಆ ದಿವಸದಲ್ಲಿ ಅವರಿಗೆ ಶೋಕದ ಬದಲಾಗಿ ಸಂತಸವು ಒದಗಿಬಂತು. ಮತ್ತು ಆ ದಿವಸದಲ್ಲಿ ಅವರ ರೋಧನವು ಹರ್ಷಧ್ವನಿಯಾಗಿ ಮಾರ್ಪಟ್ಟಿತು. ಮೊರ್ದೆಕೈಯು ಎಲ್ಲಾ ಯೆಹೂದ್ಯರಿಗೆ ಪತ್ರ ಬರೆಯಿಸಿದನು. ಆ ದಿವಸದಲ್ಲಿ ಹಬ್ಬವನ್ನು ಆಚರಿಸಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಡಬೇಕು ಎಂಬುದಾಗಿ ಬರೆಯಿಸಿದನು.
23 ಮೊರ್ದೆಕೈ ಪತ್ರದಲ್ಲಿ ಬರೆದದ್ದನ್ನು ಯೆಹೂದ್ಯರು ಒಪ್ಪಿಕೊಂಡು ಆ ವರ್ಷದಲ್ಲಿ ನಡೆದ ಉತ್ಸವವು ತಮ್ಮಲ್ಲಿ ವಾರ್ಷಿಕೋತ್ಸವವಾಗಬೇಕೆಂದು ನಿರ್ಧರಿಸಿದರು.
24 ಅಗಾನನ ವಂಶದವನಾದ ಹಮ್ಮೆದಾತನ ಮಗನಾದ ಹಾಮಾನನು ಸಮಸ್ತ ಯೆಹೂದ್ಯರ ಶತ್ರುವಾಗಿದ್ದನು. ಯೆಹೂದ್ಯರನ್ನೆಲ್ಲಾ ಸಂಹರಿಸಲು ಆತನು ಒಂದು ದುಷ್ಟ ಹಂಚಿಕೆಯನ್ನು ಹೂಡಿದನು; ಮತ್ತು ಆ ನಿರ್ಧಿಷ್ಟ ದಿನಕ್ಕಾಗಿ ಅವನು ಚೀಟು ಹಾಕಿದನು. ಆ ದಿವಸಗಳಲ್ಲಿ ಚೀಟು ಹಾಕುವುದಕ್ಕೆ “ಪೂರ್” ಎಂದು ಹೇಳುತ್ತಿದ್ದರು. ಹಾಗೆ ಆ ಹಬ್ಬವು “ಪೂರಿಮ್” ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು.
25 ಹಾಮಾನನ ಕುತಂತ್ರವನ್ನು ಎಸ್ತೇರ್ ರಾಣಿಯು ರಾಜನ ಸಂಗಡ ಮಾತಾಡುವುದರ ಮೂಲಕ ನಿರರ್ಥಕಗೊಳಿಸಿ ಅವನಿಗೂ ಅವನ ಕುಟುಂಬಕ್ಕೂ ಮರಣವಾಗುವಂತೆ ಮಾಡಿದಳು. ಹಾಮಾನನೂ ಅವನ ಗಂಡುಮಕ್ಕಳೂ ಗಲ್ಲಿಗೇರಿಸಲ್ಪಟ್ಟರು.
26-27 ಚೀಟು ಹಾಕುವುದಕ್ಕೆ, “ಪೂರಿಮ್” ಎಂದು ಕರೆಯುತ್ತಿದ್ದುದರಿಂದ ಈ ಹಬ್ಬಕ್ಕೆ “ಪೂರಿಮ್” ಎಂದು ಹೆಸರಿಟ್ಟರು. ಮೊರ್ದೆಕೈ ಈ ಹಬ್ಬವನ್ನು ಆಚರಿಸಲು ಯೆಹೂದ್ಯರೆಲ್ಲರಿಗೆ ಪತ್ರದ ಮೂಲಕ ತಿಳಿಸಿದನು. ಅಂದಿನಿಂದ ಪ್ರತಿ ವರ್ಷ ಈ ಎರಡು ದಿನಗಳಲ್ಲಿ ಹಬ್ಬವನ್ನು ಆಚರಿಸುವ ಕ್ರಮವನ್ನು ಇಟ್ಟುಕೊಂಡರು.
28 ತಮ್ಮ ವೈರಿಗಳಿಗಾಗುವ ದಂಡನೆಯನ್ನು ಅವರು ಈ ಹಬ್ಬದ ಸಮಯದಲ್ಲಿ ಜ್ಞಾಪಕ ಮಾಡಿಕೊಳ್ಳುವರು. ಯೆಹೂದ್ಯರ ಎಲ್ಲಾ ಗೋತ್ರಗಳವರು ಮತ್ತು ಅವರ ಪ್ರಾಂತ್ಯಗಳಲ್ಲಿರುವವರು ಈ ದಿನಗಳನ್ನು ಪ್ರತಿ ವರ್ಷ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಈ ಹಬ್ಬವನ್ನು ಪ್ರತಿಯೊಂದು ಪ್ರಾಂತ್ಯಗಳಲ್ಲಿಯೂ ಪ್ರತಿಯೊಂದು ಊರುಗಳಲ್ಲಿಯೂ ನೆನಪುಮಾಡಿಕೊಳ್ಳುವರು. ಇಂದಿಗೂ ಯೆಹೂದ್ಯರು ಈ ದಿನಗಳನ್ನು ನೆನಪುಮಾಡಿಕೊಂಡು ಪೂರಿಮ್ ಹಬ್ಬವನ್ನು ಆಚರಿಸುತ್ತಾರೆ.
29 ಹಾಗೆ, ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಮತ್ತು ಯೆಹೂದಿಯಾದ ಮೊರ್ದೆಕೈಯು ಈ ಪೂರಿಮ್ ಹಬ್ಬದ ಬಗ್ಗೆ ಒಂದು ಅಧಿಕೃತ ಪತ್ರವನ್ನು ಬರೆಯಿಸಿದರು. ಜನರು ಅವರ ಎರಡನೆಯ ಪತ್ರವನ್ನು ಸತ್ಯವೆಂದು ನಂಬುವ ಹಾಗೆ ರಾಜಮುದ್ರೆಯೊಂದಿಗೆ ಕಳುಹಿಸಿದರು.
30 ಅರಸನ ನೂರಿಪ್ಪತ್ತೇಳು ಸಂಸ್ಥಾನಗಳಲ್ಲಿರುವ ಯೆಹೂದ್ಯರಿಗೆಲ್ಲಾ ಪತ್ರವನ್ನು ಕಳುಹಿಸಿದನು. ಅದರಲ್ಲಿ ಆ ಹಬ್ಬವು ಜನರು ಮಧ್ಯದಲ್ಲಿ ಸಮಾಧಾನ ಹುಟ್ಟಿಸಿ ಒಬ್ಬರಮೇಲೊಬ್ಬರ ಮೇಲೆ ನಂಬಿಕೆ ಬೆಳೆಸುವುದು ಎಂದು ಬರೆದಿದ್ದನು.
31 ಮತ್ತು ಪತ್ರದಲ್ಲಿ ಪೂರಿಮ್ ಹಬ್ಬವನ್ನು ಆಚರಿಸಲು ಪ್ರಾರಂಭಿಸಿರಿ ಎಂದೂ ಬರೆದಿದ್ದನು. ಈ ಹಬ್ಬವನ್ನು ಯಾವ ದಿನ ಆಚರಿಸಬೇಕು ಎಂಬುದನ್ನೂ ನಮೂದಿಸಿದನು. ಈ ಎರಡು ವಿಶ್ರಾಂತಿ ದಿನಗಳನ್ನು ತಮಗೂ ತಮ್ಮ ಸಂತಾನಗಳವರಿಗೂ ಖಾಯಂಗೊಳಿಸಲು ಯೆಹೂದಿಯಾದ ಮೊರ್ದೆಕೈಯೂ ರಾಣಿ ಎಸ್ತೇರಳೂ ಯೆಹೂದ್ಯರಿಗೆ ಒಂದು ಆಜ್ಞೆಯನ್ನು ಹೊರಡಿಸಿದರು. ತಮಗೆ ಸಂಬಂಧಿಸಿದ ಕೆಟ್ಟಸಂಗತಿಗಳನ್ನು ನೆನಪಿಗೆ ತಂದುಕೊಂಡು ಬೇರೆ ವಿಶ್ರಾಂತಿ ದಿನಗಳಲ್ಲಿ ಉಪವಾಸವಿದ್ದು ಗೋಳಾಡುವಂತೆ ಈ ಹಬ್ಬದ ದಿನಗಳಲ್ಲಿಯೂ ಅವರು ಮಾಡುವರು.
32 ಎಸ್ತೇರಳ ಈ ಆಜ್ಞೆಯು ಅಧಿಕೃತವಾಗಿದ್ದು ಪುಸ್ತಕದಲ್ಲಿ ಬರೆಯಲ್ಪಟ್ಟಿತು.