8
1 ಆಗ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗಿ ಯೆಹೋವನು ಹೀಗೆನ್ನುತ್ತಾನೆ ಎಂದು ಹೇಳು: ‘ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ.
2 ನನ್ನ ಜನರನ್ನು ನೀನು ಹೋಗಗೊಡಿಸದಿದ್ದರೆ ನಾನು ಈಜಿಪ್ಟನ್ನು ಕಪ್ಪೆಗಳಿಂದ ತುಂಬಿಸುವೆನು.
3 ನೈಲ್ ನದಿಯು ಕಪ್ಪೆಗಳಿಂದ ತುಂಬಿ ಹೋಗುವುದು. ಕಪ್ಪೆಗಳು ನದಿಯಿಂದ ಬಂದು ನಿಮ್ಮ ಮನೆಗಳನ್ನು ಪ್ರವೇಶಿಸುವವು; ನಿಮ್ಮ ಮಲಗುವ ಕೋಣೆಯಲ್ಲಿಯೂ ನಿಮ್ಮ ಹಾಸಿಗೆಗಳಲ್ಲಿಯೂ ನಿಮ್ಮ ಅಧಿಕಾರಿಗಳ ಮನೆಗಳಲ್ಲಿಯೂ ನಿಮ್ಮ ಒಲೆಗಳಲ್ಲಿಯೂ ನೀರಿನ ಜಾಡಿಗಳಲ್ಲಿಯೂ ಹಿಟ್ಟುನಾದುವ ತಟ್ಟೆಗಳಲ್ಲಿಯೂ ಇರುವವು;
4 ನಿನ್ನ ಮೇಲೆಯೂ ನಿನ್ನ ಪ್ರಜೆಗಳ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ಇರುವವು’ ” ಅಂದನು.
5 ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆಗಳ, ಕಾಲುವೆಗಳ ಮತ್ತು ಕೆರೆಗಳ ಮೇಲೆ ಕೈಚಾಚು’ ಎಂದು ಹೇಳು. ಆಗ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳು ಹೊರಬರುವವು” ಎಂದು ಹೇಳಿದನು.
6 ಅಂತೆಯೇ ಆರೋನನು ಈಜಿಪ್ಟಿನ ನೀರುಗಳ ಮೇಲೆ ತನ್ನ ಕೈಯನ್ನು ಚಾಚಿದಾಗ ಕಪ್ಪೆಗಳು ನೀರುಗಳಿಂದ ಹೊರಬಂದು ಈಜಿಪ್ಟ್ ದೇಶವನ್ನು ಆವರಿಸಿಕೊಳ್ಳತೊಡಗಿದವು.
7 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಿ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.
8 ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನನ್ನಿಂದ ಮತ್ತು ನನ್ನ ಜನರ ಮೇಲಿಂದ ಕಪ್ಪೆಗಳನ್ನು ತೊಲಗಿಸಬೇಕೆಂದು ಯೆಹೋವನನ್ನು ಕೇಳಿಕೊಳ್ಳಿರಿ. ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ನಾನು ಆತನ ಜನರನ್ನು ಹೋಗಗೊಡಿಸುವೆನು” ಎಂದು ಹೇಳಿದನು.
9 ಮೋಶೆಯು ಫರೋಹನಿಗೆ, “ಕಪ್ಪೆಗಳು ಯಾವಾಗ ಬಿಟ್ಟುಹೋಗಬೇಕೆಂದು ತಿಳಿಸು. ನಾನು ನಿನಗೋಸ್ಕರ, ನಿನ್ನ ಜನರಿಗೋಸ್ಕರ ಮತ್ತು ನಿನ್ನ ಅಧಿಕಾರಿಗಳಿಗೋಸ್ಕರ ಪ್ರಾರ್ಥಿಸುವೆನು. ಆಗ ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿಯುತ್ತವೆ” ಎಂದು ಹೇಳಿದನು.
10 ಅದಕ್ಕೆ ಫರೋಹನು, “ನಾಳೆ” ಅಂದನು.
ಮೋಶೆ, “ನೀನು ಹೇಳಿದಂತೆಯೇ ಆಗುವುದು. ನಮ್ಮ ದೇವರಾದ ಯೆಹೋವನಿಗೆ ಸಮಾನನಾದ ದೇವರೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ.
11 ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ನಿನ್ನ ಅಧಿಕಾರಿಗಳನ್ನೂ ನಿನ್ನ ಜನರನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿದುಕೊಳ್ಳುವವು” ಎಂದು ಹೇಳಿದನು.
12 ಮೋಶೆ ಆರೋನರು ಫರೋಹನ ಬಳಿಯಿಂದ ಹೋದರು. ಫರೋಹನ ವಿರುದ್ಧವಾಗಿ ಕಳುಹಿಸಿದ ಕಪ್ಪೆಗಳನ್ನು ತೊಲಗಿಸಬೇಕೆಂದು ಮೋಶೆಯು ಯೆಹೋವನಿಗೆ ಪ್ರಾರ್ಥಿಸಿದನು.
13 ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಕಪ್ಪೆಗಳು ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಹೊಲಗಳಲ್ಲಿಯೂ ಸತ್ತುಹೋದವು.
14 ಅವುಗಳನ್ನು ಕೂಡಿಸಿದಾಗ ರಾಶಿರಾಶಿಗಳಾದವು. ದೇಶವು ದುರ್ವಾಸನೆಯಿಂದ ತುಂಬಿಹೋಯಿತು.
15 ಕಪ್ಪೆಗಳಿಂದ ಬಿಡುಗಡೆಯಾದದ್ದನ್ನು ಫರೋಹನು ಕಂಡು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು. ಮೋಶೆ ಆರೋನರ ಬೇಡಿಕೆಯನ್ನು ಅವನು ಈಡೇರಿಸಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ಹೇನುಗಳು
16 ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆ’ ಎಂದು ಹೇಳು. ಆಗ ಧೂಳು ಈಜಿಪ್ಟಿನಲ್ಲೆಲ್ಲಾ ಹೇನುಗಳಾಗುವವು” ಎಂದು ಹೇಳಿದನು.
17 ಅವರು ಹಾಗೆಯೇ ಮಾಡಿದರು. ಆರೋನನು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆದನು. ಆಗ ಈಜಿಪ್ಟಿನ ಪ್ರತಿಯೊಂದು ಸ್ಥಳದ ಧೂಳು ಹೇನುಗಳಾಗಿ ಪ್ರಾಣಿಗಳ ಮೇಲೂ ಜನರ ಮೇಲೂ ಏರಿಕೊಂಡವು.
18 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಲು ಪ್ರಯತ್ನಿಸಿದರೂ ಧೂಳಿನಿಂದ ಹೇನುಗಳನ್ನು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಹೇನುಗಳು ಪ್ರಾಣಿಗಳ ಮೇಲೂ ಜನರ ಮೇಲೂ ಉಳಿದುಕೊಂಡವು.
19 ಆದ್ದರಿಂದ ಮಾಂತ್ರಿಕರು ಫರೋಹನಿಗೆ, “ಇದು ದೇವರ ಕಾರ್ಯವೇ” ಎಂದು ಹೇಳಿದರು. ಆದರೆ ಫರೋಹನು ಅವರ ಮಾತಿಗೆ ಕಿವಿಗೊಡಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ಹುಳಗಳು
20 ಯೆಹೋವನು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಬಳಿಗೆ ಹೋಗು. ಫರೋಹನು ನದಿಗೆ ಹೋಗುವನು. ನೀನು ಅವನಿಗೆ, ‘ಯೆಹೋವನು ಹೀಗೆನ್ನುತ್ತಾನೆ: ನನ್ನ ಜನರು ಹೋಗಿ ನನ್ನನ್ನು ಆರಾಧಿಸಲಿ!
21 ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ಹುಳಗಳು ನಿನ್ನ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ನಿನ್ನ ಜನರ ಮೇಲೆಯೂ ನಿಮ್ಮ ಮನೆಗಳಲ್ಲಿಯೂ ತುಂಬಿಕೊಳ್ಳುವವು; ನೆಲದ ಮೇಲೆಲ್ಲಾ ಇರುವವು.
22 ಆದರೆ ನಾನು ಈಜಿಪ್ಟಿನವರೊಡನೆ ವರ್ತಿಸುವಂತೆ ಇಸ್ರೇಲರೊಡನೆ ವರ್ತಿಸುವುದಿಲ್ಲ. ನನ್ನ ಜನರು ವಾಸಿಸುವ ಗೋಷೆನ್ ಪ್ರದೇಶದಲ್ಲಿ ಯಾವ ಹುಳವೂ ಇರುವುದಿಲ್ಲ. ನಾನೇ ಭೂಲೋಕವನ್ನು ಆಳುವ ಯೆಹೋವನೆಂದು ಆಗ ನೀನು ತಿಳಿದುಕೊಳ್ಳುವೆ.
23 ಆದ್ದರಿಂದ ನಾಳೆ ನನ್ನ ಜನಕ್ಕೂ ನಿನ್ನ ಜನಕ್ಕೂ ವ್ಯತ್ಯಾಸ ಮಾಡುವೆನು. ಅದೇ ನನ್ನ ಸಾಕ್ಷಿ’ ಎಂದು ಹೇಳಬೇಕು” ಎಂದು ಹೇಳಿದನು.
24 ಯೆಹೋವನು ತಾನು ಹೇಳಿದಂತೆಯೇ ಮಾಡಿದನು. ಲೆಕ್ಕವಿಲ್ಲದಷ್ಟು ಹುಳಗಳು ಈಜಿಪ್ಟಿಗೆ ಬಂದು ಫರೋಹನ ಮನೆಯಲ್ಲಿಯೂ ಅವನ ಅಧಿಕಾರಿಗಳ ಮನೆಗಳಲ್ಲಿಯೂ ತುಂಬಿಕೊಂಡವು. ಇಡೀ ಈಜಿಪ್ಟನ್ನೇ ಅವು ತುಂಬಿಕೊಂಡದ್ದರಿಂದ ದೇಶವು ಹಾಳಾಯಿತು.
25 ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನಿಮ್ಮ ದೇವರಿಗೆ ಈ ದೇಶದಲ್ಲಿಯೇ ಯಜ್ಞಗಳನ್ನು ಅರ್ಪಿಸಿರಿ” ಎಂದು ಹೇಳಿದನು.
26 ಅದಕ್ಕೆ ಮೋಶೆ, “ಅದು ಸರಿಯಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಅರ್ಪಿಸುವ ಯಜ್ಞಗಳು ಈಜಿಪ್ಟಿನವರಿಗೆ ನಿಷಿದ್ಧವಾಗಿವೆ. ಹೀಗಿರಲು ಅವರ ಕಣ್ಣೆದುರಿಗೇ ಅಂಥ ಯಜ್ಞಗಳನ್ನು ಅರ್ಪಿಸಿದರೆ, ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವುದಿಲ್ಲವೇ?
27 ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸುವಂತಾಗಲಿ. ಹೀಗೆ ಮಾಡಲು ಯೆಹೋವನೇ ನಮಗೆ ಹೇಳಿದ್ದಾನೆ” ಅಂದನು.
28 ಅದಕ್ಕೆ ಫರೋಹನು, “ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಲು ನಾನು ನಿಮಗೆ ಅಪ್ಪಣೆ ಕೊಡುವೆನು; ಆದರೆ ಬಹುದೂರ ಹೋಗಬೇಡಿ; ಈಗ ಹೋಗಿ ನನಗೋಸ್ಕರ ಪ್ರಾರ್ಥಿಸಿರಿ” ಅಂದನು.
29 ಅದಕ್ಕೆ ಮೋಶೆ, “ನಾನು ಇಲ್ಲಿಂದ ಹೋದಾಗ, ನಿನಗೂ ನಿನ್ನ ಪ್ರಜೆಗಳಿಗೂ ನಿನ್ನ ಅಧಿಕಾರಿಗಳಿಗೂ ಹುಳಗಳ ಬಾಧೆ ನಾಳೆಯಿಂದ ಇರಬಾರದೆಂಬುದಾಗಿ ಯೆಹೋವನಿಗೆ ಪ್ರಾರ್ಥಿಸುವೆನು. ಆದರೆ ಮತ್ತೆ ನೀನು ವಂಚಿಸಿ ಜನರು ಯಜ್ಞಗಳನ್ನು ಸಮರ್ಪಿಸದಂತೆ ತಡೆಯಬಾರದು” ಎಂದು ಹೇಳಿದನು.
30 ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು.
31 ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಯೆಹೋವನು ಫರೋಹನಿಂದಲೂ ಅವನ ಅಧಿಕಾರಿಗಳಿಂದಲೂ ಅವನ ಜನರಿಂದಲೂ ಹುಳಗಳನ್ನು ತೊಲಗಿಸಿದನು. ಯಾವ ಹುಳಗಳೂ ಉಳಿಯಲಿಲ್ಲ.
32 ಆದರೆ ಫರೋಹನು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ಜನರನ್ನು ಹೋಗಗೊಡಿಸಲಿಲ್ಲ.