11
ಇಸ್ರೇಲು ಯೆಹೋವನನ್ನು ಮರೆತುಬಿಟ್ಟಿದೆ
1 “ಯೆಹೋವನಾದ ನಾನು ಇಸ್ರೇಲನ್ನು ಸಣ್ಣ ಮಗುವಾಗಿದ್ದಾಗಲೇ ಪ್ರೀತಿಸಿದೆನು.
ನನ್ನ ಮಗನನ್ನು ಈಜಿಪ್ಟಿನಿಂದ ಹೊರಕರೆದೆನು.
2 ಎಷ್ಟು ಹೆಚ್ಚಾಗಿ ನಾನು ಇಸ್ರೇಲರನ್ನು ಕರೆದೆನೋ
ಅಷ್ಟೇ ಹೆಚ್ಚಾಗಿ ಅವರು ನನ್ನನ್ನು ತೊರೆದರು.
ಇಸ್ರೇಲರು ಬಾಳನ ವಿಗ್ರಹಗಳಿಗೆ ಯಜ್ಞವನ್ನರ್ಪಿಸಿದರು.
ವಿಗ್ರಹಗಳಿಗೆ ಧೂಪ ಹಾಕಿದರು.
3 “ಆದರೆ ಎಫ್ರಾಯೀಮನಿಗೆ ನಡೆಯಲು ಕಲಿಸಿದ್ದು ನಾನು.
ಇಸ್ರೇಲರನ್ನು ನಾನು ನನ್ನ ತೋಳುಗಳಲ್ಲಿ ಎತ್ತಿಕೊಂಡೆನು.
ನಾನು ಅವರನ್ನು ಗುಣಪಡಿಸಿದೆನು.
ಆದರೆ ಅವರಿಗೆ ಅದು ಗೊತ್ತಿಲ್ಲ.
4 ನಾನು ಅವರನ್ನು ಪ್ರೀತಿ ಎಂಬ ಹಗ್ಗಗಳಿಂದ
ಹತ್ತಿರಕ್ಕೆ ಎಳೆದುಕೊಂಡೆನು.
ಅವರಿಗೆ ಸ್ವತಂತ್ರವನ್ನು ಕೊಟ್ಟೆನು.
ನಾನು ಬಾಗಿ ಅವರಿಗೆ ಉಣಿಸಿದೆನು.
5 “ದೇವರ ಕಡೆಗೆ ಹಿಂದಿರುಗಲು ಇಸ್ರೇಲರಿಗೆ ಮನಸ್ಸಿಲ್ಲ. ಆದ್ದರಿಂದ ಅವರು ಈಜಿಪ್ಟಿಗೆ ಹೋಗುವರು. ಅಶ್ಶೂರದ ಅರಸನು ಅವರಿಗೆ ಅರಸನಾಗುವನು.
6 ಅವರ ನಗರದ ಮೇಲೆ ಖಡ್ಗವು ಬೀಸಲ್ಪಟ್ಟು ಅವರ ಬಲಿಷ್ಠರನ್ನು ಸಾಯಿಸುವದು; ಅವರ ನಾಯಕರನ್ನು ನಾಶಮಾಡುವದು.
7 “ನಾನು ಹಿಂದಿರುಗುವೆನೆಂದು ನನ್ನ ಜನರು ಎದುರು ನೋಡುತ್ತಿದ್ದಾರೆ. ಅವರು ಉನ್ನತದಲ್ಲಿರುವ ದೇವರಿಗೆ ಮೊರೆಯಿಡುತ್ತಿದ್ದಾರೆ. ಆದರೆ ದೇವರು ಅವರಿಗೆ ಸಹಾಯ ಮಾಡುವದಿಲ್ಲ.”
ಇಸ್ರೇಲನ್ನು ನಾಶಮಾಡಲು ಯೆಹೋವನು ಇಷ್ಟಪಡುವದಿಲ್ಲ
8 “ಎಫ್ರಾಯೀಮೇ, ನಿನ್ನನ್ನು ಬಿಟ್ಟುಬಿಡಲು ನನಗೆ ಇಷ್ಟವಿಲ್ಲ.
ಇಸ್ರೇಲೇ, ನಿನ್ನನ್ನು ಸಂರಕ್ಷಿಸಲು ನನಗೆ ಇಷ್ಟ.
ನಿನ್ನನ್ನು ಅದ್ಮದಂತೆ ಮಾಡಲು ನನಗೆ ಮನಸ್ಸಿಲ್ಲ.
ನಿನ್ನನ್ನು ಜೆಬೊಯೀಮಿನಂತೆ ಮಾಡಲು ನನಗೆ ಮನಸ್ಸಿಲ್ಲ.
ನಾನು ನನ್ನ ನಿರ್ಧಾರವನ್ನು ಬದಲಾಯಿಸುತ್ತಿದ್ದೇನೆ.
ನಿನ್ನ ಮೇಲಿರುವ ನನ್ನ ಪ್ರೀತಿಯು ಆಳವಾಗಿದೆ.
9 ನನ್ನ ಭಯಂಕರವಾದ ಕೋಪವು ಮೇಲುಗೈ ಸಾಧಿಸುವದಿಲ್ಲ.
ಎಫ್ರಾಯೀಮನನ್ನು ನಾನು ತಿರುಗಿ ನಾಶಮಾಡುವದಿಲ್ಲ.
ನಾನು ದೇವರು, ನರಮನುಷ್ಯನಲ್ಲ.
ನಾನು ಪವಿತ್ರನು,
ನಿನ್ನೊಂದಿಗಿರುವೆನು.
ನನ್ನ ಕೋಪವನ್ನು ಪ್ರದರ್ಶಿಸೆನು.
10 ನಾನು ಸಿಂಹದಂತೆ ಗರ್ಜಿಸುವೆನು.
ನಾನು ಗರ್ಜಿಸುವಾಗ ನನ್ನ ಮಕ್ಕಳು ಬರುವರು ಮತ್ತು ನನ್ನನ್ನು ಹಿಂಬಾಲಿಸುವರು.
ಪಶ್ಚಿಮದಿಂದ ನನ್ನ ಮಕ್ಕಳು
ಹೆದರಿ ನಡುಗುತ್ತಾ ಬರುವರು.
11 ಈಜಿಪ್ಟಿನಿಂದ ಅವರು ಪಕ್ಷಿಗಳಂತೆ
ನಡುಗುತ್ತಾ ಬರುವರು.
ಅಶ್ಶೂರದಿಂದ ನಡುಗುವ ಪಾರಿವಾಳಗಳ ರೀತಿಯಲ್ಲಿ ಬರುವರು.
ಆಗ ನಾನು ಅವರನ್ನು ಮನೆಗೆ ಕರೆದುಕೊಂಡು ಹೋಗುವೆನು.
ಇದು ಯೆಹೋವನ ನುಡಿ.
12 “ಎಫ್ರಾಯೀಮನು ಸುಳ್ಳುದೇವರುಗಳಿಂದ ನನ್ನನ್ನು ಸುತ್ತುವರಿದನು.
ಇಸ್ರೇಲಿನ ಜನರು ನನಗೆ ವಿರುದ್ಧವಾಗಿ ಎದ್ದರು. ಆದರೆ ಅವರು ನಾಶವಾದರು.
ಯೆಹೂದನು ಈಗಲೂ ದೇವರ ಜೊತೆಯಲ್ಲಿ ನಡೆಯುತ್ತಿದ್ದಾನೆ.
ಯೆಹೂದನು ಪರಿಶುದ್ಧರಿಗೆ ನಿಷ್ಠೆಯಿಂದಿದ್ದಾನೆ.”