29
ಜೆರುಸಲೇಮಿನ ಮೇಲೆ ದೇವರ ಪ್ರೀತಿ
1 ದೇವರು ಹೇಳುವುದೇನೆಂದರೆ, “ಅರೀಯೇಲನ್ನು ನೋಡು. ಅಲ್ಲಿ ದಾವೀದನು ಪಾಳೆಯಮಾಡಿಕೊಂಡಿದ್ದನು. ಆಕೆಯ ಹಬ್ಬಗಳು ಪ್ರತಿ ವರ್ಷವೂ ನಡೆಯುತ್ತಿವೆ.
2 ನಾನು ಅರೀಯೇಲನ್ನು ಶಿಕ್ಷಿಸಿದ್ದೇನೆ. ಆ ನಗರವು ದುಃಖರೋಧನಗಳಿಂದ ತುಂಬಿದೆ. ಆದರೆ ಆಕೆ ಯಾವಾಗಲೂ ನನ್ನ ಅರೀಯೇಲಾಗಿದ್ದಾಳೆ.
3 “ನಿನ್ನ ಸುತ್ತಲೂ ನಾನು ಸೈನ್ಯವನ್ನಿಟ್ಟಿದ್ದೇನೆ. ಅರೀಯೇಲೇ, ನಿನಗೆ ವಿರುದ್ಧವಾಗಿ ನಾನು ಯುದ್ಧದ ಬುರುಜನ್ನು ಕಟ್ಟಿಸಿರುತ್ತೇನೆ.
4 ನೀನು ಸೋತುಹೋಗಿರುವೆ ಮತ್ತು ನೆಲದ ಮೇಲೆ ಕೆಡವಲ್ಪಟ್ಟಿರುವೆ. ಈಗ ನಿನ್ನ ಸ್ವರವು ಪ್ರೇತದ ಸ್ವರದಂತೆ ನನಗೆ ಕೇಳಿಸುತ್ತದೆ. ಅದು ಬಲಹೀನವಾದ ಸ್ವರವಾಗಿದೆ.”
5 ನೆಲದ ಮೇಲೆ ಅನೇಕ ಅಪರಿಚಿತರು ಧೂಳಿನ ಕಣಗಳಂತೆ ಇದ್ದಾರೆ. ಅನೇಕ ಮಂದಿ ದುಷ್ಟಜನರು ಗಾಳಿಯಲ್ಲಿ ತೂರಿಹೋಗುವ ಹೊಟ್ಟಿನಂತಿದ್ದಾರೆ.
6 ಸರ್ವಶಕ್ತನಾದ ಯೆಹೋವನು ನಿಮ್ಮನ್ನು ಗುಡುಗು, ಮಹಾಶಬ್ದ, ಬಿರುಗಾಳಿ, ಚಂಡಮಾರುತ, ದಹಿಸುವ ಅಗ್ನಿಜ್ವಾಲೆ ಇವುಗಳಿಂದ ಶಿಕ್ಷಿಸಿದನು.
7 ಅರೀಯೇಲ್ ವಿರುದ್ಧವಾಗಿ ಅನೇಕಾನೇಕ ಜನಾಂಗಗಳು ಯುದ್ಧಮಾಡಿದರು. ಅವೆಲ್ಲಾ ರಾತ್ರಿಕಾಲದ ಭಯಂಕರ ಕನಸುಗಳಂತೆ ಇದ್ದವು. ಸೈನ್ಯವು ಅರೀಯೇಲ್ಗೆ ಮುತ್ತಿಗೆ ಹಾಕಿ ಅದನ್ನು ಶಿಕ್ಷಿಸಿದವು.
8 ಅದು ಕೂಡಾ ಸೈನ್ಯದವರಿಗೆ ಒಂದು ಕನಸಿನಂತಿರುವದು. ಅವರಿಗೆ ಬೇಕಾದದ್ದು ದೊರಕುವದಿಲ್ಲ. ಹಸಿವೆಯಲ್ಲಿರುವ ಒಬ್ಬನು ಆಹಾರದ ಕನಸು ಕಂಡಂತಿರುವದು. ಅವನು ಎಚ್ಚರವಾದಾಗ ಹಸಿವಿನಿಂದಲೇ ಇರುವನು. ಬಾಯಾರಿದ ಮನುಷ್ಯನು ನೀರಿಗಾಗಿ ಕಾಣುವ ಕನಸಿನಂತಿರುವುದು. ಅವನು ಎಚ್ಚರಗೊಂಡಾಗ ಬಾಯಾರಿಕೆಯು ಇನ್ನೂ ಇರುವದು. ಚೀಯೋನಿಗೆ ವಿರುದ್ಧ ಯುದ್ಧಮಾಡುವ ಆ ಜನಾಂಗಗಳ ಗತಿಯು ಅಂತೆಯೇ ಇರುವದು. ಅವರು ತಾವು ಆಶಿಸುವ ವಸ್ತುಗಳನ್ನು ಹೊಂದುವದಿಲ್ಲ.
9 ಆಶ್ಚರ್ಯಪಡಿರಿ! ಬೆರಗಾಗಿರಿ!
ನೀವು ಮತ್ತರಾಗಿರುವಿರಿ! ಆದರೆ ದ್ರಾಕ್ಷಾರಸದಿಂದಲ್ಲ.
ನೋಡಿ, ಆಶ್ಚರ್ಯಪಡಿರಿ!
ನೀವು ಮುಗ್ಗರಿಸಿಬೀಳುವಿರಿ, ಆದರೆ ಮದ್ಯಪಾನದಿಂದಲ್ಲ.
10 ಯೆಹೋವನು ನಿಮಗೆ ತೂಕಡಿಕೆ ಬರಮಾಡುವನು.
ಆತನು ನಿಮ್ಮ ಕಣ್ಣುಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ಕಣ್ಣುಗಳಾಗಿದ್ದಾರೆ.)
ಯೆಹೋವನು ನಿಮ್ಮ ತಲೆಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ತಲೆಗಳಾಗಿದ್ದಾರೆ.)
11 ನಾನು ಖಂಡಿತವಾಗಿ ಹೇಳುತ್ತೇನೆ, ಈ ಸಂಗತಿಗಳು ನೆರವೇರುವವು. ಆದರೆ ನೀವು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ನನ್ನ ಮಾತುಗಳು ಒಂದು ಪುಸ್ತಕದಲ್ಲಿ ಬರೆದು ಮುಚ್ಚಿ ಅದಕ್ಕೆ ಮುದ್ರೆಹಾಕಿ ಇರಿಸಿದಂತಿರುವದು.
12 ಓದುಬರುವವನಿಗೆ ಇದನ್ನು ಓದು ಎಂದು ಹೇಳಿದರೆ ಅವನು, “ಈ ಪುಸ್ತಕ ಮುಚ್ಚಲ್ಪಟ್ಟಿದೆ, ನನಗೆ ತೆರೆಯಲು ಸಾಧ್ಯವಿಲ್ಲ” ಎಂದು ಹೇಳುವನು. ಓದುಬಾರದ ಒಬ್ಬನಿಗೆ ಕೊಟ್ಟರೆ ಅವನು, “ನನಗೆ ಓದಲು ಬರುವದಿಲ್ಲ” ಎಂದು ಹೇಳಿ ಪುಸ್ತಕವನ್ನು ಹಿಂದಕ್ಕೆ ಕೊಡುವನು.
13 ನನ್ನ ಒಡೆಯನು ಹೇಳುವುದೇನೆಂದರೆ, “ನನ್ನನ್ನು ಪ್ರೀತಿಸುವದಾಗಿ ಇವರು ಹೇಳುತ್ತಾರೆ. ಅವರು ತಮ್ಮ ಮಾತುಗಳಿಂದ ನನ್ನನ್ನು ಗೌರವಿಸುತ್ತಾರೆ. ಆದರೆ ಅವರ ಹೃದಯಗಳು ನನ್ನಿಂದ ದೂರವಾಗಿವೆ. ಅವರು ನನಗೆ ತೋರಿಸುವ ಗೌರವವು ಅವರು ಬಾಯಿಪಾಠ ಮಾಡಿದ ಮಾನವ ನಿರ್ಮಿತವಾದ ನಿಯಮಗಳಾಗಿವೆ.
14 ನಾನು ಅದ್ಭುತಕಾರ್ಯಗಳಿಂದ ಅವರನ್ನು ಆಶ್ಚರ್ಯಗೊಳಿಸುತ್ತಾ ಇರುವೆನು. ಅವರ ಜ್ಞಾನಿಗಳು ತಮ್ಮ ಜ್ಞಾನವನ್ನು ಕಳೆದುಕೊಳ್ಳುವರು. ಅವರು ಅರ್ಥಮಾಡಿಕೊಳ್ಳಲಾರರು.”
15 ಯೆಹೋವನಿಗೆ ತಮ್ಮ ಆಲೋಚನೆಗಳು ತಿಳಿಯಬಾರದೆಂದು ಕುತಂತ್ರೋಪಾಯಗಳನ್ನು ಮಾಡಿ, ಕತ್ತಲೆಯಲ್ಲಿ ದುಷ್ಕೃತ್ಯಗಳನ್ನು ಮಾಡುತ್ತಾ, “ನಮ್ಮನ್ನು ಯಾರು ನೋಡಬಲ್ಲರು, ನಮ್ಮನ್ನು ಯಾರು ಗುರುತಿಸಬಲ್ಲರು?” ಎಂದುಕೊಳ್ಳುವವರ ಗತಿಯನ್ನು ಏನು ಹೇಳಲಿ.
16 ನೀವು ಗಲಿಬಿಲಿಗೊಂಡಿದ್ದೀರಿ. ಜೇಡಿಮಣ್ಣು ಕುಂಬಾರನಿಗೆ ಸಮಾನವಾಗಿದೆ ಎಂದು ಯೋಚಿಸುತ್ತೀರಿ. ಒಂದು ವಸ್ತು ಅದರ ನಿರ್ಮಾಣಿಕನಿಗೆ, “ನೀನು ನನ್ನನ್ನು ನಿರ್ಮಿಸಲಿಲ್ಲ” ಎಂದು ಕೇಳಬಹುದು ಎಂದು ನೆನಸುತ್ತೀರಿ. ಒಂದು ಮಡಿಕೆಯು ಅದನ್ನು ಮಾಡಿದವನಿಗೆ, “ನಿನಗೆ ಏನೂ ಗೊತ್ತಿಲ್ಲ” ಎಂದು ಹೇಳಿದ ಹಾಗಾಯಿತು.
ಒಳ್ಳೆಯ ಸಮಯವು ಬರುತ್ತಿದೆ
17 ಇದು ಸತ್ಯ: ಸ್ವಲ್ಪ ಸಮಯದ ನಂತರ, ಕರ್ಮೆಲ್ ಬೆಟ್ಟದಂತೆ ಲೆಬನೋನ್ ಫಲವತ್ತಾಗುವದು. ಕರ್ಮೆಲ್ ಬೆಟ್ಟವು ದಟ್ಟ ಅಡವಿಯಾಗುವದು.
18 ಪುಸ್ತಕದಲ್ಲಿರುವ ಮಾತುಗಳನ್ನು ಕಿವುಡನು ಕೇಳಿಸಿಕೊಳ್ಳುವನು. ಕುರುಡನು ಕತ್ತಲೆಯಲ್ಲಿಯೂ ಮಂಜು ತುಂಬಿದ್ದಾಗಲೂ ನೋಡುವನು.
19 ದೀನರನ್ನು ಯೆಹೋವನು ಸಂತೋಷಿಸುವಂತೆ ಮಾಡುವನು. ಬಡವರು ಇಸ್ರೇಲರ ಪರಿಶುದ್ಧನಲ್ಲಿ ಉಲ್ಲಾಸಿಸುವರು.
20 ಇದು ಕ್ರೂರಿಗಳೂ ದುಷ್ಟರೂ ನಾಶವಾದಾಗ ಆಗುವದು. ಕೆಟ್ಟಕಾರ್ಯಗಳನ್ನು ಮಾಡುವದರಲ್ಲಿ ಸಂತೋಷಿಸುವವರು ಇಲ್ಲದೆ ಹೋದಾಗ ಆ ಕಾರ್ಯಗಳು ನಡಿಯುವವು.
21 (ಅವರು ನೀತಿವಂತರ ವಿಷಯವಾಗಿ ಸುಳ್ಳಾಡುವರು. ನ್ಯಾಯಾಲಯದಲ್ಲಿ ಜನರನ್ನು ಸಿಕ್ಕಿಸಿ ಹಾಕುವರು. ದೀನರನ್ನು ನಾಶಮಾಡಲು ಅವರು ಪ್ರಯತ್ನಿಸುವರು.)
22 ಯೆಹೋವನು ಯಾಕೋಬನ ವಂಶಕ್ಕೆ ಹೀಗೆನ್ನುತ್ತಾನೆ: “ಅಬ್ರಹಾಮನನ್ನು ಬಿಡಿಸಿದ ಯೆಹೋವನೇ ನಾನು. ಈಗ ಯಾಕೋಬಿನ ಜನರು ನಾಚಿಕೆಪಡುವದಿಲ್ಲ ಮತ್ತು ಅವಮಾನ ಹೊಂದುವದಿಲ್ಲ.
23 ಅವನು ತನ್ನ ಎಲ್ಲಾ ಮಕ್ಕಳನ್ನು ನೋಡಿ ‘ಪವಿತ್ರ ಎಂಬುದೇ ನನ್ನ ಹೆಸರು’ ಎಂದು ಹೇಳುವನು. ನನ್ನ ಕೈಗಳಿಂದ ನಾನು ಆ ಮಕ್ಕಳನ್ನು ನಿರ್ಮಿಸಿದೆನು. ಆ ಮಕ್ಕಳು ಯಾಕೋಬನ ಪರಿಶುದ್ಧ ದೇವರು ವಿಶೇಷವಾದವನು ಎಂದು ಹೇಳುವರು. ಆ ಮಕ್ಕಳು ಇಸ್ರೇಲರ ದೇವರನ್ನು ಗೌರವಿಸುವರು.
24 ಅವರಲ್ಲಿ ಅನೇಕರು ಸರಿಯಾಗಿ ತಿಳಿದುಕೊಳ್ಳಲಿಲ್ಲ. ಆದ್ದರಿಂದ ಅವರು ತಪ್ಪಿಹೋದರು. ಆದರೆ ಅವರು ಪಾಠಗಳನ್ನು ಕಲಿತುಕೊಳ್ಳುವರು.”