35
ದೇವರು ತನ್ನ ಜನರನ್ನು ಸಂತೈಸುವನು
1 ಮರಭೂಮಿಯೂ ಒಣನೆಲವೂ ಬಹಳವಾಗಿ ಸಂತೋಷಿಸುವದು. ಅದು ಹರ್ಷಿಸುತ್ತಾ ಪುಷ್ಪದಂತೆ ಫಲಿಸುವುದು.
2 ಮರುಭೂಮಿಯು ಹರ್ಷದಿಂದ ಅರಳಿದ ಹೂಗಳಿಂದ ತುಂಬಿಹೋಗುವುದು. ಸಂತೋಷದಿಂದ, ಕುಣಿದಾಡುವದೋ ಎಂಬಂತೆ ತೋರುವದು. ಲೆಬನೋನಿನ ಅರಣ್ಯದಂತೆಯೂ ಕರ್ಮೆಲ್ ಬೆಟ್ಟದಂತೆಯೂ ಶಾರೋನಿನ ಕಣಿವೆಯಂತೆಯೂ ಮನೋಹರವಾಗಿರುವದು. ಇವೆಲ್ಲಾ ನೆರವೇರುವದು ಯಾಕೆಂದರೆ ಎಲ್ಲಾ ಜನರು ಯೆಹೋವನ ಮಹಿಮೆಯನ್ನು ನಮ್ಮ ದೇವರ ಪ್ರಭಾವವನ್ನೂ ಕಾಣುವರು.
3 ಬಲಹೀನವಾದ ಕೈಗಳನ್ನು ಬಲಗೊಳಿಸಿರಿ, ನಡುಗುವ ಮೊಣಕಾಲುಗಳನ್ನು ಬಲಗೊಳಿಸಿರಿ.
4 ಜನರು ಭಯದಿಂದ ಗಲಿಬಿಲಿಗೊಂಡಿದ್ದಾರೆ. ಅವರಿಗೆ ಹೀಗೆ ಹೇಳು, “ಧೈರ್ಯಗೊಳ್ಳಿರಿ, ಭಯಪಡಬೇಡಿ.” ಇಗೋ, ನಿಮ್ಮ ದೇವರು ಬಂದು ನಿಮ್ಮ ವೈರಿಗಳನ್ನು ಶಿಕ್ಷಿಸುವನು. ಆತನು ಬಂದು ನಿಮಗೆ ಪ್ರತಿಫಲವನ್ನು ಕೊಡುವನು. ಯೆಹೋವನು ನಿಮ್ಮನ್ನು ಕಾಪಾಡುತ್ತಾನೆ.
5 ಆಗ ಕುರುಡರಿಗೆ ದೃಷ್ಟಿ ಬರುವದು. ಅವರ ಕಣ್ಣುಗಳು ತೆರೆಯಲ್ಪಡುವವು. ಆಗ ಕಿವುಡರು ಕೇಳಿಸಿಕೊಳ್ಳುವರು. ಅವರ ಕಿವಿಗಳು ತೆರೆಯಲ್ಪಡುವವು.
6 ಕುಂಟರು ಜಿಂಕೆಯಂತೆ ಜಿಗಿದಾಡುವರು. ಮಾತನಾಡಲು ಸಾಧ್ಯವಾಗದ ಜನರು ಆಗ ಹರ್ಷಗಾನವನ್ನು ಹಾಡುವರು. ಯಾವಾಗ ಮರುಭೂಮಿಯಲ್ಲಿ ತೊರೆಯ ನೀರು ಹರಿಯುವದೋ ಆಗ ಇವೆಲ್ಲಾ ಜರಗುವವು. ಒಣಭೂಮಿಯಲ್ಲಿ ಒರತೆಯ ನೀರು ಹರಿಯುವದು.
7 ಆಗ ಜನರು ಬಿಸುಲ್ಗುದುರೆಯನ್ನು ನೋಡಿ ನೀರು ಎಂದು ಭಾವಿಸುವರು. ಆದರೆ ಆಗ ನೀರಿನ ಕೊಳಗಳೇ ಇರುವವು. ಬೆಂಗಾಡಿನಲ್ಲಿ ಬಾವಿಗಳಿರುವವು. ನೆಲದೊಳಗಿಂದ ನೀರು ಉಕ್ಕುವುದು. ಒಂದು ಕಾಲದಲ್ಲಿ ಕಾಡುಪ್ರಾಣಿಗಳು ವಾಸವಾಗಿದ್ದ ಸ್ಥಳದಲ್ಲಿ ಎತ್ತರವಾದ ನೀರವಂಜಿಗಳು ಬೆಳೆಯುವವು.
8 ಆ ಸಮಯದಲ್ಲಿ ಅಲ್ಲಿ ಮಾರ್ಗವಿರುವದು. ಆ ಹೆದ್ದಾರಿಯು “ಪರಿಶುದ್ಧ” ಮಾರ್ಗವೆಂದು ಕರೆಯಲ್ಪಡುವದು. ದುಷ್ಟಜನರಿಗೆ ಆ ಮಾರ್ಗದಲ್ಲಿ ನಡೆಯಲು ಅನುಮತಿ ಇರುವದಿಲ್ಲ. ಮೂರ್ಖರು ಆ ಮಾರ್ಗದಲ್ಲಿ ನಡೆಯರು. ಆ ಮಾರ್ಗದಲ್ಲಿ ಒಳ್ಳೆಯ ಜನರು ಮಾತ್ರ ನಡೆಯುವರು.
9 ಆ ಮಾರ್ಗದಲ್ಲಿ ಅಪಾಯವಿರುವದಿಲ್ಲ. ಜನರಿಗೆ ಹಾನಿಮಾಡಲು ಸಿಂಹಗಳಾಗಲಿ ಕ್ರೂರಜಂತುಗಳಾಗಲಿ ಆ ಮಾರ್ಗದಲ್ಲಿರುವದಿಲ್ಲ. ದೇವರು ರಕ್ಷಿಸುವ ಜನರಿಗೆ ಮಾತ್ರವೇ ಆ ಮಾರ್ಗವಿರುವುದು.
10 ಯೆಹೋವನು ತನ್ನ ಜನರನ್ನು ಸ್ವತಂತ್ರರನ್ನಾಗಿ ಮಾಡುತ್ತಾನೆ. ಆ ಜನರು ಆತನ ಬಳಿಗೆ ಹಿಂದಿರುಗಿ ಬರುವರು. ಚೀಯೋನಿಗೆ ಜನರು ಬರುವಾಗ ಅವರು ಸಂತೋಷಭರಿತರಾಗುವರು. ಅವರು ನಿತ್ಯವೂ ಸಂತೋಷವಾಗಿರುವರು. ತಲೆಯ ಮೇಲಿನ ಕಿರೀಟದಂತೆ ಅವರ ಸಂತೋಷವಿರುವದು. ಅವರಲ್ಲಿ ಹರ್ಷವೂ ಸಂತಸವೂ ಸಂಪೂರ್ಣವಾಗಿ ತುಂಬಿರುವವು. ದುಃಖವೂ ಚಿಂತೆಯೂ ಬಹು ದೂರವಾಗಿರುವವು.