66
ದೇವರು ಎಲ್ಲಾ ಜನಾಂಗಗಳಿಗೆ ತೀರ್ಪು ಕೊಡುವನು
1 ಯೆಹೋವನು ಹೇಳುವುದೇನೆಂದರೆ,
“ಆಕಾಶವೇ ನನ್ನ ಸಿಂಹಾಸನ,
ಭೂಮಿಯೇ ನನ್ನ ಪಾದಪೀಠ.
ಹೀಗಿರಲು, ನೀವು ನನಗೊಂದು ಮನೆಯನ್ನು ಕಟ್ಟಲು ಸಾಧ್ಯವೆಂದು ಯೋಚಿಸುವಿರಾ?
ವಿಶ್ರಮಿಸಿಕೊಳ್ಳಲು ನೀವು ಸ್ಥಳ ಮಾಡುವಿರಾ? ಇಲ್ಲ, ಸಾಧ್ಯವಿಲ್ಲ!
2 ನಾನೇ ಎಲ್ಲವನ್ನು ಉಂಟುಮಾಡಿದೆನು.
ನಾನು ಸೃಷ್ಟಿಸಿದ್ದರಿಂದ ಅವು ಅಸ್ತಿತ್ವದಲ್ಲಿವೆ.”
ಇವು ಯೆಹೋವನ ನುಡಿಗಳು.
“ಎಂಥ ಜನರನ್ನು ನಾನು ಪರಿಪಾಲಿಸುತ್ತೇನೆಂದು ಕೇಳುವಿರಾ?
ಬಡವರ ವಿಷಯದಲ್ಲಿ ನಾನು ಚಿಂತಿಸುತ್ತೇನೆ.
ದುಃಖಿಸುವ ಜನರಿಗಾಗಿ ನಾನು ಚಿಂತಿಸುತ್ತೇನೆ.
ನನ್ನ ಮಾತುಗಳಿಗೆ ವಿಧೇಯರಾಗುವವರಿಗಾಗಿ ನಾನು ಚಿಂತಿಸುತ್ತೇನೆ.
3 ಕೆಲವರು ಒಂದು ಕಡೆಯಲ್ಲಿ ಹೋರಿಯನ್ನು ಯಜ್ಞಮಾಡುವರು.
ಇನ್ನೊಂದು ಕಡೆಯಲ್ಲಿ ಜನರಿಗೆ ಹಿಂಸೆ ಕೊಡುವರು.
ಅವರು ಬಲಿಯರ್ಪಿಸಲು ಕುರಿಗಳನ್ನು ಕೊಯ್ಯುವರು,
ಅದೇ ಸಮಯದಲ್ಲಿ ನಾಯಿಗಳ ಕುತ್ತಿಗೆಗಳನ್ನು ಮುರಿಯುವರು.
ಅವರು ನನಗೆ ಹಂದಿಗಳ ರಕ್ತವನ್ನು ಅರ್ಪಿಸುವರು.
ನನಗೆ ಧೂಪವನ್ನು ಹಾಕಲು ಯಾವಾಗಲೂ ತಯಾರಿರುವರು.
ಅದೇ ಸಮಯದಲ್ಲಿ ಅಯೋಗ್ಯವಾದ ತಮ್ಮ ವಿಗ್ರಹಗಳನ್ನು ಪ್ರೀತಿಸುವರು.
ಅವರು ನನ್ನ ಮಾರ್ಗವನ್ನು ಅನುಸರಿಸದೆ ತಮ್ಮ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ.
ಅವರು ತಮ್ಮ ಭಯಂಕರವಾದ ವಿಗ್ರಹಗಳನ್ನು ಪೂಜಿಸುತ್ತಾರೆ.
4 ಆದ್ದರಿಂದ ನಾನು ಅವರ ಉಪಾಯಗಳನ್ನೇ ಬಳಸಿಕೊಳ್ಳಲು ನಿರ್ಧರಿಸಿದೆನು.
ಅವರು ಬಹು ಭಯಪಡುವ ವಸ್ತುಗಳಿಂದಲೇ ಅವರನ್ನು ಶಿಕ್ಷಿಸಲು ತೀರ್ಮಾನಿಸಿದೆನು.
ಎಕೆಂದರೆ ನಾನು ಅವರನ್ನು ಕರೆದರೂ
ಅವರು ಕಿವಿಗೊಡಲಿಲ್ಲ.
ನಾನು ಅವರೊಂದಿಗೆ ಮಾತಾಡಿದರೂ ಅವರು ಕೇಳಲಿಲ್ಲ.
ಆದ್ದರಿಂದ ನಾನು ಅವರಿಗೆ ಅದನ್ನೇ ಮಾಡುವೆನು.
ನಾನು ಯಾವದನ್ನು ಕೆಟ್ಟದೆಂದು ಪರಿಗಣಿಸಿದ್ದೆನೋ ಅದನ್ನೇ ಅವರು ಮಾಡಿದರು.
ನಾನು ಇಷ್ಟಪಡದ ಸಂಗತಿಗಳನ್ನು ಅವರು ಮಾಡಿದರು.”
5 ಯೆಹೋವನ ಆಜ್ಞೆಗಳನ್ನು ಪರಿಪಾಲಿಸುವ ನೀವು
ಆತನು ಹೇಳುವ ಸಂಗತಿಗಳನ್ನು ಕಿವಿಗೊಟ್ಟು ಕೇಳಬೇಕು.
ಆತನು ಹೇಳುವುದೇನೆಂದರೆ, “ನಿಮ್ಮ ಸಹೋದರರು ನಿಮ್ಮನ್ನು ದ್ವೇಷಿಸಿದರು.
ನೀವು ನನ್ನನ್ನು ಅನುಸರಿಸಿದ್ದರಿಂದ ನಿಮ್ಮ ಮೇಲೆರಗಿದರು.
‘ಯೆಹೋವನು ಸನ್ಮಾನ ಹೊಂದಿದ ಬಳಿಕ ನಿಮ್ಮ ಬಳಿಗೆ ಬರುತ್ತೇವೆ.
ಆಮೇಲೆ ನಿಮ್ಮ ಆನಂದವನ್ನು ಅನುಭವಿಸುತ್ತೇವೆ’ ಎಂದು ನಿಮ್ಮ ಸಹೋದರರು ಅಂದರು.
ಆ ದುಷ್ಟ ಜನರು ಶಿಕ್ಷಿಸಲ್ಪಡುವರು.”
ಶಿಕ್ಷೆ ಮತ್ತು ಹೊಸ ಜನಾಂಗ
6 ಆಲೈಸಿರಿ! ಪಟ್ಟಣದೊಳಗಿಂದ ಮತ್ತು ದೇವಾಲಯದೊಳಗಿಂದ ದೊಡ್ಡ ಶಬ್ದವು ಕೇಳಿಸುತ್ತದೆ. ಯೆಹೋವನು ತನ್ನ ವೈರಿಗಳನ್ನು ಶಿಕ್ಷಿಸುವುದೇ ಆ ಶಬ್ದ. ಅವರಿಗೆ ತಕ್ಕ ಶಿಕ್ಷೆಯನ್ನು ಯೆಹೋವನು ಕೊಡುತ್ತಿದ್ದಾನೆ.
7-8 “ಪ್ರಸವವೇದನೆಗಿಂತ ಮೊದಲು ಸ್ತ್ರೀಯು ಮಗುವನ್ನು ಹೆರುವದಿಲ್ಲ. ತಾನು ಹೆರುವ ಶಿಶುವನ್ನು ನೋಡುವ ಮೊದಲು ಸ್ತ್ರೀಯು ಪ್ರಸವವೇದನೆ ಅನುಭವಿಸಲೇಬೇಕು. ಅದೇ ರೀತಿಯಲ್ಲಿ ಒಂದೇ ದಿನದಲ್ಲಿ ಹೊಸ ಭೂಮ್ಯಾಕಾಶಗಳು ಉಂಟಾಗುವದನ್ನು ಯಾರೂ ನೋಡುವದಿಲ್ಲ. ಒಂದೇ ದಿವಸದಲ್ಲಿ ಉಂಟಾದ ಜನಾಂಗದ ಬಗ್ಗೆ ಯಾರೂ ಕೇಳಲಿಲ್ಲ. ದೇಶವು ಪ್ರಸವವೇದನೆಯಂಥ ಬೇನೆಯನ್ನು ಅನುಭವಿಸಬೇಕು. ಆ ಬಳಿಕ ದೇಶವು ಹೊಸ ಜನಾಂಗವೆಂಬ ಮಕ್ಕಳನ್ನು ಹೆರುವುದು.
9 ಅದೇ ರೀತಿಯಲ್ಲಿ ಹೊಸದಾಗಿ ಹುಟ್ಟುವ ಕಾರಣದಿಂದಲೇ ನಾನು ಬೇನೆಯನ್ನು ನಿಮಗೆ ಕೊಡುವೆನು.”
ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೆ ಹೆರಿಗೆ ಬೇನೆಯನ್ನು ಕೊಡದೆಹೋದರೆ ನೀವು ಹೊಸ ಜನಾಂಗವಾಗಲಾರಿರಿ.” ಇದು ಯೆಹೋವನ ನುಡಿ.
10 ಜೆರುಸಲೇಮೇ, ಹರ್ಷಿಸು. ಜೆರುಸಲೇಮನ್ನು ಪ್ರೀತಿಸುವ ಜನರೇ, ಹರ್ಷಿಸಿರಿ.
ಜೆರುಸಲೇಮಿಗೆ ದುಃಖಕೊಡುವ ವಿಷಯಗಳು ಜರುಗಿದ್ದರಿಂದ ನೀವು ದುಃಖಪಡುತ್ತಿದ್ದೀರಿ. ಆದರೆ ನೀವೀಗ ಸಂತೋಷಪಡಬೇಕು.
11 ಯಾಕೆಂದರೆ ಆಕೆಯ ಎದೆಯಿಂದ ದೊರಕುವ ಹಾಲಿನಂತೆ ನಿಮಗೆ ಕರುಣೆಯು ದೊರಕುವದು.
ಆ ಹಾಲು ನಿಮ್ಮನ್ನು ಪೂರ್ಣವಾಗಿ ತೃಪ್ತಿಗೊಳಿಸುವದು.
ನೀವು ಆ ಹಾಲನ್ನು ಕುಡಿದು ಜೆರುಸಲೇಮಿನ ವೈಭವದಲ್ಲಿ ಆನಂದಿಸುವಿರಿ.
12 ಯೆಹೋವನು ಹೇಳುವುದೇನೆಂದರೆ:
“ಇಗೋ, ನಾನು ನಿನಗೆ ಸಮಾಧಾನವನ್ನು ಕೊಡುತ್ತೇನೆ. ಒಂದು ದೊಡ್ಡ ಹೊಳೆಯು ಹರಿಯುವಂತೆ ನಿನಗೆ ಸಮಾಧಾನವು ಹರಿದುಕೊಂಡು ಬರುವದು.
ಭೂಮಿಯ ಮೇಲಿರುವ ಎಲ್ಲಾ ದೇಶಗಳ ಐಶ್ವರ್ಯವು ನಿನ್ನ ಬಳಿಗೆ ಹರಿದುಬರುವದು. ಅದು ಪ್ರವಾಹದಂತೆ ಹರಿದುಬರುವದು.
ನೀವು ಸಣ್ಣ ಮಕ್ಕಳಂತೆ ಆ ಹಾಲನ್ನು ಕುಡಿಯುವಿರಿ.
ನಾನು ನಿಮ್ಮನ್ನೆತ್ತಿ ಕೈಗಳಲ್ಲಿ ಅಪ್ಪಿಕೊಳ್ಳುವೆನು.
ನನ್ನ ತೊಡೆಯ ಮೇಲೆ ನಿಮ್ಮನ್ನು ಕುಳ್ಳಿರಿಸಿ ಆಟವಾಡಿಸುವೆನು.
13 ನಾನು ನಿಮ್ಮನ್ನು ಜೆರುಸಲೇಮಿನಲ್ಲಿ ಸಂತೈಸುವೆನು.
ತಾಯಿಯು ತನ್ನ ಮಗುವನ್ನು ಸಂತೈಸುವಂತೆ ನಾನು ನಿಮ್ಮನ್ನು ಸಂತೈಸುವೆನು.”
14 ನಿಮ್ಮನ್ನು ಹರ್ಷಗೊಳಿಸುವಂಥ ಸಂಗತಿಗಳನ್ನು ನೀವು ನೋಡುವಿರಿ.
ನೀವು ಸ್ವತಂತ್ರರಾಗಿದ್ದು ಹುಲ್ಲಿನಂತೆ ಹುಲುಸಾಗಿ ಬೆಳೆಯುವಿರಿ.
ಯೆಹೋವನ ಸೇವಕರು ಆತನ ಶಕ್ತಿಯನ್ನು ನೋಡುವರು.
ಆದರೆ ಯೆಹೋವನ ವೈರಿಗಳು ಆತನ ಕೋಪವನ್ನು ಕಾಣುವರು.
15 ಇಗೋ, ಯೆಹೋವನು ಬೆಂಕಿಯೊಂದಿಗೆ ಬರುತ್ತಿದ್ದಾನೆ.
ಯೆಹೋವನ ಸೈನ್ಯಗಳು ಧೂಳಿನ ಮೋಡಗಳೊಂದಿಗೆ ಬರುತ್ತಿವೆ.
ಯೆಹೋವನು ತನ್ನ ಕೋಪದಿಂದ ಆ ಜನರನ್ನು ಶಿಕ್ಷಿಸುವನು.
ಯೆಹೋವನು ಕೋಪದಲ್ಲಿರುವಾಗ ಬೆಂಕಿಯ ನಾಲಿಗೆಗಳಿಂದ ಅವರನ್ನು ಶಿಕ್ಷಿಸುತ್ತಾನೆ.
16 ಯೆಹೋವನು ಜನರಿಗೆ ನ್ಯಾಯತೀರ್ಪು ಮಾಡುವನು.
ಆ ಬಳಿಕ ಯೆಹೋವನು ಜನರನ್ನು ಬೆಂಕಿಯಿಂದಲೂ ಖಡ್ಗದಿಂದಲೂ ನಾಶಮಾಡುವನು.
ಯೆಹೋವನು ಅನೇಕಾನೇಕ ಜನರನ್ನು ನಾಶಮಾಡುವನು.
17 ಅವರು ತಮ್ಮ ವಿಶೇಷವಾದ ತೋಟದೊಳಗೆ ಪೂಜೆಮಾಡಲು ತಮ್ಮನ್ನು ಶುದ್ಧಮಾಡಿಕೊಳ್ಳುವಂತೆ ಸ್ನಾನಮಾಡುವರು. ತಮ್ಮ ವಿಶೇಷ ತೋಟದೊಳಗೆ ಹೋಗಲು ಒಬ್ಬರನ್ನೊಬ್ಬನು ಹಿಂಬಾಲಿಸುವರು. ಅಲ್ಲಿ ಅವರ ವಿಗ್ರಹಗಳನ್ನು ಪೂಜಿಸುವರು. ಆದರೆ ಯೆಹೋವನು ಅವರೆಲ್ಲರನ್ನು ನಾಶಮಾಡುವನು. “ಆ ಜನರು ಹಂದಿ, ಇಲಿ ಮತ್ತು ಇತರ ಅಶುದ್ಧ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. ಆದರೆ ಅವರೆಲ್ಲರೂ ಒಟ್ಟಾಗಿ ನಾಶವಾಗುವರು.” ಇದು ಯೆಹೋವನು ಹೇಳಿದ ಮಾತುಗಳು.
18 “ಆ ಜನರಲ್ಲಿ ಕೆಟ್ಟ ಯೋಜನೆಗಳು ಇದ್ದು ಕೆಟ್ಟದ್ದನ್ನೇ ಮಾಡುವವರಾಗಿದ್ದಾರೆ. ಅದಕ್ಕಾಗಿ ನಾನು ಅವರನ್ನು ಶಿಕ್ಷಿಸಲು ಬರುತ್ತಿದ್ದೇನೆ. ನಾನು ಎಲ್ಲಾ ಜನಾಂಗಗಳನ್ನೂ ಎಲ್ಲಾ ಜನರನ್ನೂ ಒಟ್ಟುಗೂಡಿಸುವೆನು. ಎಲ್ಲಾ ಜನರು ಒಟ್ಟುಗೂಡಿ ನನ್ನ ಸಾಮರ್ಥ್ಯವನ್ನು ನೋಡುವರು.
19 ಅವರಲ್ಲಿ ಕೆಲವರಿಗೆ ನಾನು ಗುರುತು ಹಾಕುವೆನು. ನಾನು ಅವರನ್ನು ರಕ್ಷಿಸುವೆನು. ರಕ್ಷಿಸಲ್ಪಟ್ಟ ಕೆಲವರನ್ನು ನಾನು ತಾರ್ಷೀಷ್, ಲಿಬ್ಯ, ಲೂದ್, ತೂಬಾಲ್, ಗ್ರೀಸ್ ಮತ್ತು ದೂರದೇಶಗಳಿಗೆ ಕಳುಹಿಸುವೆನು. ಅಲ್ಲಿಯ ಜನರು ನನ್ನ ಬೋಧನೆಯನ್ನು ಎಂದೂ ಕೇಳಿರಲಿಲ್ಲ. ಅವರು ನನ್ನ ಮಹಿಮೆಯನ್ನು ಎಂದೂ ಕಂಡಿರಲಿಲ್ಲ. ಆದ್ದರಿಂದ ರಕ್ಷಿಸಲ್ಪಟ್ಟ ಜನರು ನನ್ನ ಮಹಿಮೆಯನ್ನು ಅವರಿಗೆ ತಿಳಿಸುವರು.
20 ಅವರು ನಿಮ್ಮ ಸಹೋದರಸಹೋದರಿಯರನ್ನು ಎಲ್ಲಾ ಜನಾಂಗಗಳೊಳಗಿಂದ ಕರೆದುಕೊಂಡು ನನ್ನ ಪವಿತ್ರ ಪರ್ವತವಾದ ಜೆರುಸಲೇಮಿಗೆ ಬರುವರು. ನಿನ್ನ ಸಹೋದರಸಹೋದರಿಯರು ಕುದುರೆ, ಕತ್ತೆ, ಒಂಟೆ, ರಥ ಮತ್ತು ಗಾಡಿಗಳಲ್ಲಿ ಕುಳಿತುಕೊಂಡು ಬರುವರು. ಯೆಹೋವನ ಮಂದಿರದೊಳಗೆ ಶುದ್ಧವಾದ ತಟ್ಟೆಯ ಮೇಲೆ ಕಾಣಿಕೆಗಳನ್ನು ತರುವಂತೆಯೇ ನಿನ್ನ ಸಹೋದರ ಸಹೋದರಿಯರಾದ ಇಸ್ರೇಲರು ಬರುವರು.
21 ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸುವೆನು.” ಇವು ಯೆಹೋವನ ನುಡಿಗಳು.
ಹೊಸ ಭೂಮ್ಯಾಕಾಶಗಳು
22 “ನಾನು ಹೊಸ ಪ್ರಪಂಚವನ್ನು ಸೃಷ್ಟಿಸುವೆನು; ಹೊಸ ಆಕಾಶವೂ ಹೊಸ ಭೂಮಿಯೂ ಶಾಶ್ವತವಾಗಿರುವವು. ಹಾಗೆಯೇ ನಿಮ್ಮ ಹೆಸರುಗಳು ಯಾವಾಗಲೂ ನನ್ನೊಂದಿಗೆ ಇರುತ್ತವೆ; ನಿಮ್ಮ ಮಕ್ಕಳು ನನ್ನೊಂದಿಗೆ ಯಾವಾಗಲೂ ಇರುತ್ತಾರೆ.
23 ಪ್ರತಿಯೊಂದು ಆರಾಧನಾ ದಿನದಲ್ಲಿ ಪ್ರತಿಯೊಬ್ಬರೂ ಬಂದು ನನ್ನನ್ನು ಆರಾಧಿಸುವರು. ಪ್ರತಿಯೊಂದು ಸಬ್ಬತ್ ದಿನದಲ್ಲೂ ತಿಂಗಳ ಮೊದಲ ದಿನದಲ್ಲೂ ಅವರು ನನ್ನ ಬಳಿಗೆ ಬರುವರು.”
24 “ಅವರು ನನ್ನ ಪವಿತ್ರ ಪಟ್ಟಣದಲ್ಲಿ ವಾಸಿಸುವರು. ಅವರು ಪಟ್ಟಣದಿಂದ ಹೊರಗೆ ಹೋದರೆ ನನಗೆ ವಿರುದ್ಧವಾಗಿ ಪಾಪಮಾಡಿದವರ ಹೆಣಗಳನ್ನು ನೋಡುವರು. ಅವರ ಹೆಣಗಳೊಳಗೆ ಸಾಯದ ಹುಳಗಳಿರುವವು. ಬೆಂಕಿಯು ಆ ಹೆಣಗಳನ್ನು ಸುಟ್ಟುಬಿಡುವುದು. ಆ ಬೆಂಕಿಯು ಆರುವದೇ ಇಲ್ಲ. ಅವು ಜನರ ಮುಂದೆ ಅಸಹ್ಯವಾಗಿರುವವು.”