32
ಎಲೀಹುವಿನ ವಾದ
1 ಯೋಬನು ತಾನು ನಿರಪರಾಧಿಯೆಂದು ನಂಬಿದ್ದರಿಂದ ಅವನ ಮೂವರು ಗೆಳೆಯರು ಮತ್ತೆ ವಾದ ಮಾಡಲಿಲ್ಲ.
2 ಅಲ್ಲಿ ಯೌವನಸ್ಥನಾದ ಎಲೀಹು ಸಹ ಇದ್ದನು. ಎಲೀಹು ಬರಕೇಲನ ಮಗನು. ಬರಕೇಲನು ಬೂಜ್ ಕುಲದವನು. ಎಲೀಹು, ರಾಮ್ ಸಂತಾನಕ್ಕೆ ಸೇರಿದವನು. ಎಲೀಹುವಿಗೆ ಯೋಬನ ಮೇಲೆ ಬಹು ಕೋಪಬಂದಿತು. ಯಾಕೆಂದರೆ ಯೋಬನು ತಾನು ದೇವರಿಗಿಂತಲೂ ನೀತಿವಂತನೆಂದು ಪ್ರತಿಪಾದಿಸುತ್ತಿದ್ದನು.
3 ಎಲೀಹುವಿಗೆ ಯೋಬನ ಮೂವರ ಸ್ನೇಹಿತರ ಮೇಲೆಯೂ ಬಹು ಕೋಪಬಂದಿತು. ಯಾಕೆಂದರೆ ಯೋಬನ ಪ್ರಶ್ನೆಗಳಿಗೆ ಪರಿಣಾಮಕಾರಿಯಾದ ಉತ್ತರವನ್ನು ಕೊಟ್ಟು ಯೋಬನೇ ತಪ್ಪಿತಸ್ಥನೆಂದು ನಿರೂಪಿಸಲು ಯೋಬನ ಮೂವರು ಗೆಳೆಯರಿಗೆ ಗೊತ್ತಿರಲಿಲ್ಲ. ಆದಕಾರಣ, ದೇವರೇ ತಪ್ಪಿತಸ್ಥನೆಂದು ತೋರಿತು.
4 ಅಲ್ಲಿದ್ದವರೆಲ್ಲರಲ್ಲಿ ಎಲೀಹು ಚಿಕ್ಕವನಾಗಿದ್ದನು. ಆದ್ದರಿಂದ ಪ್ರತಿಯೊಬ್ಬರು ಮಾತಾಡಿ ಮುಗಿಸುವವರೆಗೆ ಅವನು ಕಾದುಕೊಂಡಿದ್ದನು. ಬಳಿಕ ಅವನಿಗೆ ತಾನೂ ಮಾತಾಡಬಹುದೆನಿಸಿತು.
5 ಯೋಬನ ಮೂವರು ಸ್ನೇಹಿತರ ಬಾಯಲ್ಲಿ ಉತ್ತರವಿಲ್ಲದಿರುವುದನ್ನು ಕಂಡು ಎಲೀಹು ಕೋಪಗೊಂಡನು.
6 ಆದ್ದರಿಂದ ಬೂಜ್ ಕುಲಕ್ಕೆ ಸೇರಿದ ಬರಕೇಲನ ಮಗನಾದ ಎಲೀಹು ಮಾತಾಡಲಾರಂಭಿಸಿ ಹೀಗೆಂದನು:
“ನಾನು ವಯಸ್ಸಿನಲ್ಲಿ ಚಿಕ್ಕವನು, ನೀವು ವೃದ್ಧರು.
ಆದಕಾರಣ, ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸಲು ಹಿಂಜರಿದೆನು ಮತ್ತು ಹೆದರಿಕೊಂಡಿದ್ದೆನು.
7 ‘ವೃದ್ಧರು ಮೊದಲು ಮಾತಾಡಬೇಕು.
ಅನೇಕ ವರ್ಷಗಳ ಕಾಲ ಬದುಕಿದ ಜನರು ತಮ್ಮ ಜ್ಞಾನವನ್ನು ಹಂಚಿಕೊಳ್ಳಬೇಕು’ ಎಂದು ನಾನು ನನ್ನೊಳಗೆ ಆಲೋಚಿಸಿಕೊಂಡೆನು.
8 ಆದರೆ ಮನುಷ್ಯರಲ್ಲಿರುವ ದೇವರಾತ್ಮನು
ಅಂದರೆ ಸರ್ವಶಕ್ತನಾದ ದೇವರ ‘ಉಸಿರು’ ಮನುಷ್ಯರಿಗೆ ಜ್ಞಾನವನ್ನು ಕೊಡುತ್ತದೆ.
9 ವೃದ್ದರು ಮಾತ್ರ ಜ್ಞಾನಿಗಳಲ್ಲ,
ಕೇವಲ ವಯಸ್ಸಾದವರು ಮಾತ್ರ ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳುವವರಲ್ಲ.
10 “ಆದಕಾರಣ ಎಲೀಹು ಎಂಬ ನಾನು ಹೇಳುವೆ, ನನಗೆ ಕಿವಿಗೊಡಿರಿ!
ನಾನು ಸಹ ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವೆನು.
11 ನೀವು ಮಾತಾಡುತ್ತಿದ್ದಾಗ ನಾನು ತಾಳ್ಮೆಯಿಂದ ಕಾದುಕೊಂಡಿದ್ದೆನು.
ನೀವು ಹೇಳಲು ಪದಗಳಿಗಾಗಿ ಆಲೋಚಿಸುತ್ತಿರುವಾಗ ನಾನು ನಿಮ್ಮ ವಾದಗಳನ್ನು ಆಲಿಸಿದೆನು.
12 ನಾನು ನಿಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಗಮನವಿಟ್ಟು ಕೇಳಿದೆನು.
ಆದರೆ ಯೋಬನು ತಪ್ಪಿತಸ್ಥನೆಂಬುದನ್ನು ನೀವು ನಿರೂಪಿಸಲಿಲ್ಲ.
ನಿಮ್ಮಲ್ಲಿ ಒಬ್ಬರೂ ಯೋಬನ ವಾದಗಳಿಗೆ ಉತ್ತರಕೊಡಲಿಲ್ಲ.
13 ನೀವು ಮೂವರು, ‘ನಾವು ಜ್ಞಾನವನ್ನು ಕಂಡುಕೊಂಡಿದ್ದೇವೆ,
ಯೋಬನ ವಾದಗಳಿಗೆ ಉತ್ತರವನ್ನು ದೇವರು ಕೊಡಬೇಕೇ ಹೊರತು ಮನುಷ್ಯರಲ್ಲ’ ಎಂದು ಹೇಳಬೇಡಿ.
14 ಯೋಬನು ನನ್ನ ವಿರುದ್ಧವಾಗಿ ಹೇಳಿಕೆಗಳನ್ನು ಹೊರಡಿಸಲಿಲ್ಲ.
ಆದರೆ ನಾನು ಅವನಿಗೆ ನಿಮ್ಮ ವಾದಗಳಿಂದ ಉತ್ತರ ನೀಡುವುದಿಲ್ಲ.
15 “ಯೋಬನೇ, ನಿನ್ನ ಮೂವರು ಸ್ನೇಹಿತರು ವಾದ ಮಾಡಲು ವಿಫಲರಾಗಿದ್ದಾರೆ.
ಹೆಚ್ಚಿಗೆ ಹೇಳಲು ಅವರಲ್ಲಿ ಏನೂ ಉಳಿದಿಲ್ಲ.
ಅವರಲ್ಲಿ ಯಾವ ಉತ್ತರಗಳೂ ಇಲ್ಲ.
16 ಈ ಮೂವರು ಮೌನವಾಗಿ ಅಲ್ಲಿ ನಿಂತಿದ್ದಾರೆ;
ಅವರಲ್ಲಿ ಉತ್ತರವಿಲ್ಲ.
ಹೀಗಿರಲು ನಾನಿನ್ನೂ ಕಾಯುತ್ತಲೇ ಇರಬೇಕೇ?
17 ಇಲ್ಲ! ನಾನು ಸಹ ನನ್ನ ಉತ್ತರವನ್ನು ಕೊಡುವೆನು.
ನಾನು ಸಹ ನನ್ನ ಅಭಿಪ್ರಾಯವನ್ನು ನಿನಗೆ ತಿಳಿಸುವೆನು.
18 ಯಾಕೆಂದರೆ ನನ್ನಲ್ಲಿ ಹೇಳಲು ಬೇಕಾದಷ್ಟಿದೆ.
ನನ್ನ ಅಂತರಾತ್ಮವು ಮಾತಾಡಲು ನನ್ನನ್ನು ಒತ್ತಾಯಿಸುತ್ತಿದೆ.
19 ಆಹಾ, ದ್ರಾಕ್ಷಾರಸವನ್ನು ತುಂಬಿ ಬಾಯಿಕಟ್ಟಿದ ಹೊಸ ಬುದ್ದಲಿಯಂತೆ
ನನ್ನ ಹೊಟ್ಟೆಯು ಒಡೆದುಹೋಗುವ ಸ್ಥಿತಿಯಲ್ಲಿದೆ.
20 ಆದ್ದರಿಂದ ನಾನು ಮಾತಾಡಲೇಬೇಕು; ಆಗ ನನಗೆ ಉಪಶಮನವಾಗುತ್ತದೆ.
ನನ್ನ ತುಟಿಗಳನ್ನು ತೆರೆದು ಯೋಬನ ದೂರುಗಳಿಗೆ ಉತ್ತರ ಕೊಡಲೇಬೇಕು.
21 ಈ ವಾದದಲ್ಲಿ ನಾನು ಮುಖದಾಕ್ಷಿಣ್ಯ ಮಾಡುವುದಿಲ್ಲ;
ಯಾರ ಮುಖಸ್ತುತಿಯನ್ನೂ ಮಾಡುವುದಿಲ್ಲ.
22 ಮುಖಸ್ತುತಿ ಮಾಡುವುದೇ ನನಗೆ ತಿಳಿದಿಲ್ಲ.
ಮುಖಸುತ್ತಿ ಮಾಡುವುದು ನನಗೆ ಗೊತ್ತಿದ್ದರೆ, ನನ್ನ ಸೃಷ್ಟಿಕರ್ತನು ನನ್ನನ್ನು ಬಹು ಬೇಗನೆ ಶಿಕ್ಷಿಸುವನು.