14
ಕ್ಷಾಮ ಮತ್ತು ಸುಳ್ಳುಪ್ರವಾದಿಗಳು
1 ಇದು ಕ್ಷಾಮದ ಬಗ್ಗೆ ಯೆರೆಮೀಯನಿಗೆ ಯೆಹೋವನು ನುಡಿದ ಸಂದೇಶ:
2 “ಯೆಹೂದ ಜನಾಂಗವು ಸತ್ತುಹೋದವರಿಗಾಗಿ ಗೋಳಾಡುವುದು.
ಯೆಹೂದದ ನಗರಗಳಲ್ಲಿದ್ದ ಜನರು ದಿನೇದಿನೇ ನಿಬರ್ಲರಾಗುತ್ತಾರೆ.
ಆ ಜನರು ನೆಲದ ಮೇಲೆ ಬಿದ್ದು ಬಿಡುತ್ತಾರೆ.
ಜೆರುಸಲೇಮ್ ನಗರದಿಂದ ಜನರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ.
3 ಜನನಾಯಕರು ನೀರು ತರುವದಕ್ಕಾಗಿ ತಮ್ಮ ಸೇವಕರನ್ನು ಕಳುಹಿಸುತ್ತಾರೆ.
ಆ ಸೇವಕರು ನೀರಿರುವ ಸ್ಥಳಗಳಿಗೆ ಹೋಗುತ್ತಾರೆ.
ಆದರೆ ಅಲ್ಲಿ ಅವರಿಗೆ ನೀರು ಸಿಕ್ಕುವದಿಲ್ಲ.
ಸೇವಕರು ಕೇವಲ ಪಾತ್ರೆಗಳನ್ನು ತೆಗೆದುಕೊಂಡು ಹಿಂದಿರುಗಿ ಬರುತ್ತಾರೆ.
ಅವರು ನಾಚಿಕೆಪಟ್ಟುಕೊಳ್ಳುತ್ತಾರೆ ಮತ್ತು ಪೇಚಾಡುತ್ತಾರೆ.
ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
4 ಭೂಮಿಗೆ ಮಳೆ ಬೀಳುವದಿಲ್ಲ.
ಯಾರೂ ಬಿತ್ತನೆಗಾಗಿ ಭೂಮಿಯನ್ನು ಉಳುವದಿಲ್ಲ.
ರೈತರು ಎದೆಗುಂದುತ್ತಾರೆ.
ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
5 ಕಾಡಿನಲ್ಲಿ ಹುಲ್ಲು ಇಲ್ಲದ ಕಾರಣ
ಜಿಂಕೆಯು ತನ್ನ ಮರಿಯನ್ನು ಬಿಟ್ಟುಹೋಗುವದು.
6 ಕಾಡುಕತ್ತೆಗಳು ಬೋಳುಬೆಟ್ಟಗಳ ಮೇಲೆ ನಿಂತು
ನರಿಗಳಂತೆ ಗಾಳಿಯನ್ನು ಮೂಸುತ್ತವೆ.
ಆದರೆ ಅವುಗಳಿಗೆ ಆಹಾರ ಕಾಣಿಸುವದಿಲ್ಲ.
ಏಕೆಂದರೆ ತಿನ್ನಬಹುದಾದ ಸಸಿಗಳು ಬೆಳೆದಿಲ್ಲ.”
7 “ಯೆಹೋವನೇ, ಅದು ನಮ್ಮ ಪಾಪಗಳ ಫಲವೆಂಬುದು ನಮಗೆ ತಿಳಿದಿದೆ.
ನಮ್ಮ ಪಾಪಗಳಿಂದಾಗಿ ನಾವು ಈಗ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ.
ಯೆಹೋವನೇ, ನಿನ್ನ ಒಳ್ಳೆಯ ಹೆಸರಿಗಾಗಿ ನಮಗೇನಾದರೂ ಸಹಾಯಮಾಡು.
ನಾವು ನಿನ್ನನ್ನು ಅನೇಕ ಸಲ ತ್ಯಜಿಸಿದ್ದೇವೆಂದು ಒಪ್ಪಿಕೊಳ್ಳುತ್ತೇವೆ.
ನಾವು ನಿನ್ನ ವಿರುದ್ಧ ಪಾಪಮಾಡಿದ್ದೇವೆ.
8 ಯೆಹೋವನೇ, ನೀನು ಇಸ್ರೇಲರ ಆಶಾಕಿರಣ,
ಕಷ್ಟಕಾಲದಲ್ಲಿ ಇಸ್ರೇಲನ್ನು ನೀನು ಕಾಪಾಡುವೆ.
ಆದರೆ ಈಗ ನೀನು ಈ ದೇಶದಲ್ಲಿ ಪರದೇಶಿಯಂತೆ ಕಾಣುವೆ.
ಕೇವಲ ಒಂದು ರಾತ್ರಿ ಮಾತ್ರ ಉಳಿಯುವ ಪ್ರಯಾಣಿಕನಂತೆ ಕಾಣುವೆ.
9 ನೀನು ಸ್ತಬ್ಧನಾಗಿರುವೆ;
ಯಾರನ್ನೂ ರಕ್ಷಿಸಲಾಗದ ಸೈನಿಕನಂತಾಗಿರುವೆ.
ಯೆಹೋವನೇ, ನೀನಾದರೋ ನಮ್ಮ ಜೊತೆಯಲ್ಲಿರುವೆ.
ನಾವು ನಿನ್ನ ಹೆಸರಿನವರಾಗಿದ್ದೇವೆ. ಆದ್ದರಿಂದ ನಮ್ಮನ್ನು ಕೈಬಿಡಬೇಡ.”
10 ಯೆಹೂದದ ಜನರ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: “ಯೆಹೂದದ ಜನರು ನನ್ನಿಂದ ದೂರವಾಗಲು ಮನಃಪೂರ್ವಕವಾಗಿ ಇಚ್ಛಿಸುತ್ತಾರೆ. ಅವರು ಮೊದಲಿಂದಲೂ ಹೀಗೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಯೆಹೋವನು ಅವರನ್ನು ಸ್ವಿಕರಿಸುವದಿಲ್ಲ. ಆತನು ಅವರ ದುಷ್ಕೃತ್ಯಗಳನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗಾಗಿ ಅವರನ್ನು ದಂಡಿಸುತ್ತಾನೆ.”
11 ಆಗ ಯೆಹೋವನು, “ಯೆರೆಮೀಯನೇ, ಯೆಹೂದದ ಜನರ ಒಳಿತಿಗಾಗಿ ಪ್ರಾರ್ಥಿಸಬೇಡ.
12 ಯೆಹೂದದ ಜನರು ಉಪವಾಸ ವ್ರತವನ್ನು ಕೈಕೊಳ್ಳಬಹುದು ಮತ್ತು ನನಗೆ ಪ್ರಾರ್ಥನೆ ಮಾಡಬಹುದು. ಆದರೆ ನಾನು ಅವರ ಪ್ರಾರ್ಥನೆಗಳನ್ನು ಕೇಳುವದಿಲ್ಲ. ಅವರು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ ಸಹ ನಾನು ಅವರನ್ನು ಸ್ವಿಕರಿಸುವದಿಲ್ಲ. ನಾನು ಯುದ್ಧದಿಂದ ಯೆಹೂದದ ಜನರನ್ನು ನಾಶಮಾಡುತ್ತೇನೆ. ನಾನು ಅವರ ಆಹಾರವನ್ನು ಕಿತ್ತುಕೊಳ್ಳುತ್ತೇನೆ; ಯೆಹೂದದ ಜನರು ಉಪವಾಸದಿಂದ ಸಾಯುವಂತೆ ಮಾಡುತ್ತೇನೆ. ನಾನು ಅವರನ್ನು ಭಯಂಕರವಾದ ವ್ಯಾಧಿಗಳಿಂದ ನಾಶಮಾಡುತ್ತೇನೆ” ಎಂದು ಹೇಳಿದನು.
13 ಆಗ ನಾನು ಯೆಹೋವನಿಗೆ, “ನನ್ನ ಒಡೆಯನಾದ ಯೆಹೋವನೇ, ಪ್ರವಾದಿಗಳು ಜನರಿಗೆ ಬೇರೆಯದನ್ನೇ ಹೇಳಿದರು. ಅವರು ಯೆಹೂದದ ಜನರಿಗೆ, ‘ನೀವು ಶತ್ರುವಿನ ಖಡ್ಗಕ್ಕೆ ತುತ್ತಾಗುವದಿಲ್ಲ. ನೀವೆಂದಿಗೂ ಹಸಿವಿನಿಂದ ಬಳಲುವದಿಲ್ಲ, ಯೆಹೋವನು ಈ ದೇಶದಲ್ಲಿ ನಿಮಗೆ ನೆಮ್ಮದಿಯನ್ನು ದಯಪಾಲಿಸುವನು’ ಎಂದು ಹೇಳುತ್ತಿದ್ದರು” ಎಂದೆನು.
14 ಆಗ ಯೆಹೋವನು ನನಗೆ, “ಯೆರೆಮೀಯನೇ, ಆ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುತ್ತಾರೆ. ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ. ಅವರಿಗೆ ನಾನು ಯಾವ ಅಪ್ಪಣೆಯನ್ನೂ ಕೊಟ್ಟಿಲ್ಲ, ಅವರೊಂದಿಗೆ ನಾನು ಮಾತನ್ನೂ ಆಡಿಲ್ಲ. ಆ ಪ್ರವಾದಿಗಳು ಸುಳ್ಳುದರ್ಶನಗಳನ್ನು ನಿಷ್ಪ್ರಯೋಜಕವಾದ ಮಾಟಮಂತ್ರಗಳನ್ನು ಸಬಕಲ್ಪಿತ ವಿಚಾರಗಳನ್ನೂ ಬೋಧಿಸುತ್ತಿದ್ದಾರೆ.
15 ನನ್ನ ಹೆಸರಿನಲ್ಲಿ ಬೋಧನೆ ಮಾಡುತ್ತಿರುವ ಈ ಪ್ರವಾದಿಗಳ ಬಗ್ಗೆ ನಾನು ಹೇಳುವದು ಇಷ್ಟೇ. ನಾನು ಆ ಪ್ರವಾದಿಗಳನ್ನು ಕಳುಹಿಸಿಲ್ಲ. ಆ ಪ್ರವಾದಿಗಳು ‘ಶತ್ರುಗಳು ಖಡ್ಗಧಾರಿಗಳಾಗಿ ಎಂದಿಗೂ ಈ ದೇಶದ ಮೇಲೆ ಧಾಳಿ ಮಾಡುವದಿಲ್ಲ. ಈ ದೇಶದಲ್ಲಿ ಎಂದೂ ಕ್ಷಾಮ ಕಾಣಿಸಿಕೊಳ್ಳುವದಿಲ್ಲ’ ಎಂದು ಹೇಳಿದ್ದಾರೆ. ಆದರೆ ಆ ಪ್ರವಾದಿಗಳು ಹಸಿವಿನ ತಾಪದಿಂದ ಸಾಯುತ್ತಾರೆ ಮತ್ತು ಶತ್ರುವಿನ ಖಡ್ಗ ಅವರನ್ನು ಕೊಲ್ಲುತ್ತದೆ.
16 ಯಾರಿಗೆ ಪ್ರವಾದಿಗಳು ಬೋಧನೆ ಮಾಡಿದ್ದರೋ ಅವರನ್ನು ಬೀದಿಗಳಲ್ಲಿ ಎಸೆಯಲಾಗುವದು. ಆ ಜನರು ಹಸಿವಿನಿಂದ ಮತ್ತು ಶತ್ರುಗಳ ಖಡ್ಗಗಳಿಂದ ಮಡಿಯುವರು. ಆ ಜನರನ್ನೂ ಅವರ ಹೆಂಡತಿಯರನ್ನೂ ಮಕ್ಕಳನ್ನೂ ಹೂಣಿಡುವದಕ್ಕೆ ಯಾರೂ ಇರುವದಿಲ್ಲ. ನಾನು ಅವರನ್ನು ದಂಡಿಸುತ್ತೇನೆ.
17 “ಯೆರೆಮೀಯನೇ, ಯೆಹೂದದ ಜನರಿಗೆ
ಈ ಸಂದೇಶವನ್ನು ಹೇಳು:
‘ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಾನು ನಿರಂತರವಾಗಿ ಹಗಲಿರುಳು ಅಳುವೆನು.
ನಾನು ನನ್ನ ಕನ್ಯೆಯಾದ ಮಗಳಿಗಾಗಿ ಅಳುವೆನು. ನಾನು ನನ್ನ ಜನರಿಗಾಗಿ ಅಳುವೆನು.
ಏಕೆಂದರೆ ಯಾರೋ ಒಬ್ಬರು ಅವರನ್ನು ಹೊಡೆದು ಸದೆಬಡಿದಿದ್ದಾರೆ,
ಅವರಿಗೆ ಬಹಳ ಗಾಯಗಳಾಗಿವೆ.
18 ನಾನು ನಗರಗಳ ಹೊರಗಡೆ ಹೋದರೆ
ಖಡ್ಗಗಳಿಗೆ ಆಹುತಿಯಾಗಿ ಸತ್ತವರು ನನ್ನ ಕಣ್ಣಿಗೆ ಬೀಳುತ್ತಾರೆ.
ನಾನು ನಗರಗಳಲ್ಲಿ ಹೋದರೆ
ಕ್ಷಾಮದಿಂದ ಬಳಲುವ ಜನರು ನನ್ನ ಕಣ್ಣಿಗೆ ಬೀಳುತ್ತಾರೆ. ಅವರಿಗೆ ತಿನ್ನಲು ಅನ್ನವಿಲ್ಲ.
ಯಾಜಕರನ್ನು ಮತ್ತು ಪ್ರವಾದಿಗಳನ್ನು
ಪರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ.’ ”
19 ಯೆಹೋವನೇ, ನೀನು ಯೆಹೂದ ಜನಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ?
ಯೆಹೋವನೇ, ನೀನು ಚೀಯೋನನ್ನು ದ್ವೇಷಿಸುವೆಯಾ?
ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನ್ನು ಹೊಡೆದು ಗಾಯಗೊಳಿಸಿರುವೆಯಲ್ಲ.
ನೀನು ಹೀಗೇಕೆ ಮಾಡಿದೆ?
ನಾವು ನೆಮ್ಮದಿಯನ್ನು ನಿರೀಕ್ಷಿಸಿದೆವು,
ಆದರೆ ಒಳ್ಳೆಯದೇನೂ ಆಗಲಿಲ್ಲ.
ನಾವು ಕ್ಷೇಮವನ್ನು ಎದುರುನೋಡುತ್ತಿದ್ದೆವು.
ಆದರೆ ಕೇವಲ ಭಯ ನಮ್ಮೆದುರಿಗೆ ಬಂದಿತು.
20 ಯೆಹೋವನೇ, ನಾವು ಬಹಳ ಕೆಟ್ಟ ಜನರೆಂಬುದು ನಮಗೆ ಗೊತ್ತು.
ನಮ್ಮ ಪೂರ್ವಿಕರು ದುಷ್ಕೃತ್ಯಗಳನ್ನು ಮಾಡಿದರೆಂಬುದನ್ನು ನಾವು ಬಲ್ಲೆವು.
ಹೌದು, ನಾವು ನಿನ್ನ ವಿರುದ್ಧ ಪಾಪಮಾಡಿದೆವು.
21 ಯೆಹೋವನೇ, ನಿನ್ನ ಹೆಸರಿನ ಒಳ್ಳೆಯತನ ಉಳಿಸಿಕೊಳ್ಳುವದಕ್ಕಾದರೂ ನಮ್ಮನ್ನು ದೂರ ತಳ್ಳಬೇಡ.
ನಿನ್ನ ಮಹಿಮೆಯ ಸಿಂಹಾಸನದ ಗೌರವವನ್ನು ಕುಂದಿಸಬೇಡ.
ನೀನು ನಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿಕೊ.
ಆ ಒಡಂಬಡಿಕೆಯನ್ನು ಮುರಿಯಬೇಡ.
22 ಅನ್ಯರ ವಿಗ್ರಹಗಳಿಗೆ ಮಳೆ ಸುರಿಸುವ ಸಾಮರ್ಥ್ಯವಿಲ್ಲ.
ಆಕಾಶಕ್ಕೆ ಮಳೆಯನ್ನು ಸುರಿಸುವ ಸಾಮರ್ಥ್ಯವಿಲ್ಲ.
ನೀನೊಬ್ಬನೇ ನಮ್ಮ ಆಶಾಕೇಂದ್ರ.
ನೀನೇ ಈ ಎಲ್ಲವುಗಳನ್ನು ಸೃಷ್ಟಿಸಿದವನು.