18
ಕುಂಬಾರ ಮತ್ತು ಜೇಡಿಮಣ್ಣು
ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು: “ಯೆರೆಮೀಯನೇ, ನೀನು ಕುಂಬಾರನ ಮನೆಗೆ ಹೋಗು. ನಾನು ಕುಂಬಾರನ ಮನೆಯಲ್ಲಿಯೇ ನಿನಗೆ ಸಂದೇಶವನ್ನು ಕೊಡುತ್ತೇನೆ.”
ನಾನು ಕುಂಬಾರನ ಮನೆಗೆ ಹೋದೆನು. ಅವನು ಜೇಡಿಮಣ್ಣನ್ನು ಉಪಯೋಗಿಸಿ ಚಕ್ರದಿಂದ ಕೆಲಸ ಮಾಡುವದನ್ನು ನಾನು ಕಂಡೆನು. ಅವನು ಜೇಡಿಮಣ್ಣಿನಿಂದ ಒಂದು ಮಡಕೆಯನ್ನು ಮಾಡುತ್ತಿದ್ದನು. ಆ ಮಡಕೆಯಲ್ಲಿ ಯಾವುದೋ ಒಂದು ದೋಷವಿತ್ತು. ಆದ್ದರಿಂದ ಆ ಕುಂಬಾರನು ಪುನಃ ಆ ಜೇಡಿಮಣ್ಣನ್ನು ಬಳಸಿ ಮತ್ತೊಂದು ಮಡಕೆಯನ್ನು ಮಾಡಿದನು. ಮಡಕೆಗೆ ತಾನು ಬಯಸಿದ ಆಕಾರವನ್ನು ಕೊಡಲು ತನ್ನ ಕೈಗಳನ್ನು ಉಪಯೋಗಿಸಿದನು.
ಆಗ ನನಗೆ ಯೆಹೋವನಿಂದ ಈ ಸಂದೇಶ ಬಂದಿತು: “ಇಸ್ರೇಲ್ ಮನೆತನದವರೇ, ನಾನು ನಿಮಗೆ ಹೀಗೆಯೇ ಮಾಡಲು ಸಾಧ್ಯವೆಂಬುದನ್ನು ನೀವು ಬಲ್ಲಿರಿ. ನೀವು ಕುಂಬಾರನ ಕೈಯಲ್ಲಿದ್ದ ಜೇಡಿಮಣ್ಣಿನಂತಿದ್ದೀರಿ. ನಾನು ಆ ಕುಂಬಾರನಂತಿದ್ದೇನೆ. ಒಮ್ಮೆ ನಾನು ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ಕುರಿತು ಮಾತನಾಡುವಾಗ ಆ ಜನಾಂಗವನ್ನು ನಾನು ಖಂಡಿಸುವೆನೆಂದು ಮತ್ತು ಆ ಜನಾಂಗವನ್ನು ನಾನು ನಾಶಪಡಿಸುವೆನೆಂದು ಹೇಳಬಹುದು. ಆದರೆ ಆ ಜನಾಂಗದ ಜನರು ತಮ್ಮ ಮನಸ್ಸನ್ನು ಮತ್ತು ಜೀವನವನ್ನು ಪರಿವರ್ತಿಸಿಕೊಳ್ಳಬಹುದು. ಆ ಜನಾಂಗದ ಜನರು ಮಾಡುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಆಗ ನಾನು ನನ್ನ ವಿಚಾರವನ್ನು ಬದಲಾಯಿಸಿ, ಆ ಜನಾಂಗವನ್ನು ನಾಶಪಡಿಸಬೇಕೆಂದು ಮಾಡಿದ ನನ್ನ ಮುಂಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರಬಹುದು. ಇನ್ನೊಮ್ಮೆ ಒಂದು ಜನಾಂಗದ ಬಗ್ಗೆ ಹೇಳುವಾಗ ಆ ಜನಾಂಗವನ್ನು ನಾನು ಅಭಿವೃದ್ಧಿಗೆ ತರುತ್ತೇನೆ, ಅದನ್ನು ನೆಟ್ಟು ಕಟ್ಟುತ್ತೇನೆ ಎಂದು ಹೇಳಬಹುದು. 10 ಆದರೆ ಆ ಜನಾಂಗವು ನನ್ನ ಆಜ್ಞಾಪಾಲನೆಯನ್ನು ಮಾಡದೆ ದುಷ್ಕೃತ್ಯಗಳಲ್ಲಿ ತೊಡಗಿದರೆ ಅದನ್ನು ನೋಡಿ ಆ ಜನಾಂಗಕ್ಕೆ ನಾನು ಮಾಡಬೇಕೆಂದಿದ್ದ ಒಳಿತಿನ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಬಹುದು.
11 “ಯೆರೆಮೀಯನೇ, ಯೆಹೂದದ ಜನರಿಗೆ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಜನರಿಗೆ ಯೆಹೋವನು ಹೀಗೆನ್ನುವನು: ‘ಈಗಲೇ ನಾನು ನಿಮಗೋಸ್ಕರ ತೊಂದರೆಗಳನ್ನು ಎಬ್ಬಿಸುತ್ತೇನೆ. ನಿಮ್ಮ ವಿರುದ್ಧ ಯೋಜನೆಗಳನ್ನು ಹಾಕುತ್ತಿದ್ದೇನೆ. ಆದ್ದರಿಂದ ನೀವು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬೇಕು. ಪ್ರತಿಯೊಬ್ಬನು ಪರಿವರ್ತನೆ ಹೊಂದಿ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಾರಂಭಿಸಬೇಕು’ ಎಂದು ಹೇಳು. 12 ಆದರೆ ಯೆಹೂದದ ಜನರು, ‘ಪ್ರಯತ್ನ ಮಾಡುವದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ಮನಸ್ಸಿಗೆ ಬಂದಂತೆ ನಾವು ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ದುಷ್ಟ ಮತ್ತು ಮೊಂಡುಮನಸ್ಸು ಹೇಳಿದಂತೆ ನಡೆಯುವೆವು’ ಎಂಬುದಾಗಿ ಉತ್ತರಿಸುವರು” ಎಂದನು.
 
13 ಯೆಹೋವನು ಹೇಳುವದನ್ನು ಆಲಿಸಿರಿ:
 
“ಬೇರೆ ಜನಾಂಗದ ಜನರಿಗೆ ಈ ಪ್ರಶ್ನೆಯನ್ನು ಕೇಳಿರಿ,
‘ಇಸ್ರೇಲ್ ಮಾಡಿದಂಥ ದುಷ್ಕೃತ್ಯಗಳನ್ನು ಬೇರೆ ಯಾರಾದರೂ ಮಾಡಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ?’
ಇಸ್ರೇಲ್ ದೇಶವು ದೇವರ ವಧುವಿನಂತಿದೆ.
14 ಲೆಬನೋನಿನ ಪರ್ವತಗಳ ಮೇಲಿನ ಹಿಮವು ಇಳಿಜಾರಿನ ಬಂಡೆಯಿಂದ ಎಂದಾದರೂ ಕರಗುವುದೇ?
ಬಹುದೂರದಲ್ಲಿ ಹುಟ್ಟಿ ಹರಿದುಬರುವ ತೊರೆಗಳು ಎಂದಾದರೂ ಹರಿಯದೆ ನಿಂತುಹೋಗುವುದೇ?*
15 ಆದರೆ ನನ್ನ ಜನರು ನನ್ನನ್ನು ಮರೆತಿದ್ದಾರೆ.
ಅವರು ನಿಷ್ಪ್ರಯೋಜಕವಾದ ವಿಗ್ರಹಗಳಿಗೆ ನೈವೇದ್ಯ ಮಾಡುತ್ತಾರೆ.
ನನ್ನ ಜನರು ತಾವು ಮಾಡುವ ಕೆಲಸಗಳಲ್ಲಿ ಮುಗ್ಗರಿಸುತ್ತಾರೆ.
ಅವರು ತಮ್ಮ ಪೂರ್ವಿಕರ ಹಳೆಯ ಹಾದಿಯಲ್ಲಿಯೇ ಮುಗ್ಗರಿಸುತ್ತಾರೆ.
ನನ್ನ ಜನರು ಒಳ್ಳೆಯ ರಾಜಬೀದಿಯ ಮೇಲೆ ನನ್ನನ್ನು ಹಿಂಬಾಲಿಸುವದನ್ನು
ತೊರೆದು ಹಾಳಾದ ಹಾದಿಯನ್ನು ಹಿಡಿಯುತ್ತಾರೆ.
16 ಆದ್ದರಿಂದ ಯೆಹೂದ್ಯರ ದೇಶವು ಬರಿದಾದ ಮರುಭೂಮಿಯಾಗುವುದು.
ಜನರು ಇಲ್ಲಿಂದ ಹಾದುಹೋಗುವಾಗಲೆಲ್ಲಾ ಸಿಳ್ಳುಹಾಕಿ ತಲೆಯಾಡಿಸುವರು. ದೇಶವು ಹಾಳಾದುದನ್ನು ನೋಡಿ ಬೆರಗಾಗುವರು.
17 ಪೂರ್ವದಿಂದ ಬರುವ ಗಾಳಿಯಂತೆ
ಯೆಹೂದದ ಜನರನ್ನು ಅವರ ವೈರಿಗಳ ಎದುರಿನಲ್ಲಿ ಚದರಿಸಿಬಿಡುವೆನು.
ನಾನು ಅವರನ್ನು ನಾಶಮಾಡುವೆನು. ಆ ಸಮಯದಲ್ಲಿ ಅವರಿಗೆ ಸಹಾಯಮಾಡಲು ನಾನು ಬರುವದಿಲ್ಲ.
ಇಲ್ಲ! ನಾನು ಬಿಟ್ಟುಹೋಗುವುದನ್ನು ಅವರು ನೋಡುವರು.”
ಯೆರೆಮೀಯನ ನಾಲ್ಕನೇ ದೂರು
18 ಆಗ ಯೆರೆಮೀಯನ ವೈರಿಗಳು ಹೀಗೆಂದರು: “ಬನ್ನಿ, ನಾವು ಯೆರೆಮೀಯನ ವಿರುದ್ಧ ಒಳಸಂಚು ಮಾಡೋಣ. ಯಾಜಕನಿಂದ ಧರ್ಮೋಪದೇಶವು ತಪ್ಪುವದಿಲ್ಲ, ಇದು ಖಂಡಿತ. ಜ್ಞಾನಿಗಳಿಂದ ಮಂತ್ರಾಲೋಚನೆಯು ಇದ್ದೇ ಇರುತ್ತದೆ. ದೈವೋಕ್ತಿಯು ಪ್ರವಾದಿಯಿಂದ ಎಂದಿಗೂ ತಪ್ಪದು. ಆದ್ದರಿಂದ ಅವನ ಬಗ್ಗೆ ಸುಳ್ಳು ಹೇಳಿ ನಾಶಮಾಡೋಣ. ಅವನು ಹೇಳುವ ಯಾವುದಕ್ಕೂ ನಾವು ಗಮನಕೊಡಬೇಕಾಗಿಲ್ಲ.”
 
19 ಯೆಹೋವನೇ, ನನ್ನ ಮಾತನ್ನು ಆಲಿಸು,
ನನ್ನ ವಾದವನ್ನು ಆಲಿಸಿ ಯಾರು ಹೇಳುವುದು ಸರಿ ಎನ್ನುವುದನ್ನು ನಿರ್ಣಯಿಸು.
20 ನಾನು ಯೆಹೂದದ ಜನರಿಗೆ ಒಳ್ಳೆಯದನ್ನು ಮಾಡಿದೆನು.
ಆದರೆ ಅವರೀಗ ನನಗೆ ಕೆಟ್ಟದ್ದನ್ನು ಮಾಡುತ್ತಿದ್ದಾರೆ.
ಈಗ ಅವರು ನನ್ನನ್ನು ಕೊಲ್ಲುವುದಕ್ಕಾಗಿ ಒಂದು ಗುಂಡಿಯನ್ನು ತೋಡಿದ್ದಾರೆ.
ಯೆಹೋವನೇ, ನಾನು ಮಾಡಿದ್ದು ನಿನ್ನ ಜ್ಞಾಪಕದಲ್ಲಿದೆಯೇ?
ನಾನು ನಿನ್ನ ಎದುರಿಗೆ ನಿಂತುಕೊಂಡು ಈ ಜನರಿಗೆ ಒಳ್ಳೆಯದನ್ನು ಮಾಡೆಂದೂ
ಅವರ ಮೇಲೆ ಕೋಪಗೊಳ್ಳಬಾರದೆಂದೂ ನಿನ್ನಲ್ಲಿ ಕೇಳಿಕೊಂಡೆ.
21 ಆದ್ದರಿಂದ ಈಗ ಅವರ ಮಕ್ಕಳು ಕ್ಷಾಮಪೀಡಿತರಾಗಿ ಉಪವಾಸಬೀಳುವಂತೆ ಮಾಡು.
ಅವರ ಶತ್ರುಗಳು ಅವರನ್ನು ಖಡ್ಗದಿಂದ ಸೋಲಿಸುವಂತೆ ಮಾಡು.
ಅವರ ಹೆಂಡತಿಯರು ಮಕ್ಕಳನ್ನು ಕಳೆದುಕೊಳ್ಳಲಿ ಮತ್ತು ವಿಧವೆಯರಾಗಲಿ.
ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗದಿಂದ ಹತರಾಗಲಿ.
22 ಅವರ ಮನೆಗಳಲ್ಲಿ ರೋಧನದ ಧ್ವನಿ ಬರಲಿ.
ನೀನು ಫಕ್ಕನೆ ಅವರ ಮುಂದೆ ಶತ್ರುವನ್ನು ತಂದು ನಿಲ್ಲಿಸಿದಾಗ ಅವರು ಅಳುವಂತಾಗಲಿ.
ನನ್ನ ವೈರಿಗಳು ನನ್ನನ್ನು ಬಲೆಯಲ್ಲಿ ಸಿಕ್ಕಿಸಬೇಕೆಂದು ಪ್ರಯತ್ನ ಮಾಡಿದ್ದಾರೆ.
ನಾನು ಸಿಕ್ಕಿಹಾಕಿಕೊಳ್ಳುವಂಥ ಮತ್ತು ನನ್ನ ಕಣ್ಣಿಗೆ ಕಾಣದ ಗುಪ್ತವಾದ ಬಲೆಗಳನ್ನು ಅವರು ಹಾಕಿದ್ದಾರೆ.
23 ಯೆಹೋವನೇ, ನನ್ನನ್ನು ಕೊಲ್ಲಲು ಅವರು ಹಾಕಿದ ಯೋಜನೆಗಳನ್ನೆಲ್ಲ ನೀನು ಬಲ್ಲೆ.
ಅವರ ಅಪರಾಧಗಳನ್ನು ಮನ್ನಿಸಬೇಡ.
ಅವರ ಪಾಪಗಳನ್ನು ಅಳಿಸಬೇಡ.
ನನ್ನ ವೈರಿಗಳನ್ನು ನಾಶಪಡಿಸು, ನೀನು ಕೋಪದಲ್ಲಿದ್ದಾಗ ಆ ಜನರನ್ನು ಶಿಕ್ಷಿಸು.
 
* 18:14 ಲೆಬನೋನಿನ … ಹೋಗುವುದೇ ಇದು ಅರ್ಥೈಸಲು ಕಷ್ಟಕರವಾದ ವಚನ. ಅಕ್ಷರಶಃ, “ಲೆಬನೋನಿನ ಹಿಮವು ಶದ್ದಾಯ್ ಬಂಡೆಯಿಂದ ಎಂದಾದರೂ ಕರಗುವುದುಂಟೇ?” “ಶದ್ದಾಯ್” ಮತ್ತು “ಬಂಡೆ” ದೇವರ ಹೆಸರುಗಳಾಗಿವೆ.