8
1 ಯೆಹೋವನು ಹೀಗೆನ್ನುತ್ತಾನೆ: “ಆಗ ಜನರು ಯೆಹೂದದ ರಾಜರ ಮತ್ತು ಪ್ರಮುಖ ಅಧಿಪತಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಯಾಜಕರ ಮತ್ತು ಪ್ರವಾದಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಜೆರುಸಲೇಮಿನ ಎಲ್ಲಾ ಜನರ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು.
2 ಜೆರುಸಲೇಮಿನ ಜನರು ಸೂರ್ಯನನ್ನು, ಚಂದ್ರನನ್ನು, ನಕ್ಷತ್ರಗಣಗಳನ್ನು ಪ್ರೀತಿಸಿ, ಅನುಸರಿಸಿ, ವಿಚಾರಿಸಿ, ಪೂಜಿಸಿದ್ದರಿಂದ ಅವರ ಎಲುಬುಗಳನ್ನು ಅವುಗಳ ಕೆಳಗೆ ಭೂಮಿಯ ಮೇಲೆ ಹರಡುವರು. ಯಾರೊಬ್ಬರೂ ಆ ಎಲುಬುಗಳನ್ನು ಪುನಃ ಒಂದೆಡೆ ಸೇರಿಸಿ ಹೂಳುವುದಿಲ್ಲ. ಆ ಎಲುಬುಗಳು ಭೂಮಿಯ ಮೇಲೆ ಎಸೆದ ಸಗಣಿಯಂತಾಗುವವು.
3 “ಯೆಹೂದದ ಜನರು ತಮ್ಮ ಮನೆಗಳನ್ನು ಮತ್ತು ಪ್ರದೇಶವನ್ನು ಬಿಡುವಂತೆ ಮಾಡುತ್ತೇನೆ. ಆ ಜನರನ್ನು ಪರದೇಶಕ್ಕೆ ಒಯ್ಯಲಾಗುವುದು. ಯುದ್ಧದಲ್ಲಿ ಮರಣ ಹೊಂದದೆ ಅಳಿದುಳಿದ ಕೆಲವು ಮಂದಿ ಯೆಹೂದಿಯರು ತಾವು ಸತ್ತುಹೋಗಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುವರು.” ಇದು ಯೆಹೋವನ ನುಡಿ.
ಪಾಪ ಮತ್ತು ಶಿಕ್ಷೆ
4 “ಯೆರೆಮೀಯನೇ, ಯೆಹೂದದ ಜನರಿಗೆ ಹೀಗೆ ಹೇಳು: ‘ಯೆಹೋವನು ಈ ಮಾತನ್ನು ಹೇಳುತ್ತಾನೆ.
“ ‘ಒಬ್ಬ ಮನುಷ್ಯನು ಕೆಳಗೆ ಬಿದ್ದರೆ
ಪುನಃ ಅವನು ಮೇಲಕ್ಕೆ ಏಳುತ್ತಾನೆ;
ಒಬ್ಬ ಮನುಷ್ಯನು ತಪ್ಪುದಾರಿ ಹಿಡಿದರೆ
ಅವನು ಹಿಂತಿರುಗಿ ಬರುತ್ತಾನೆಂಬುದು ನಿಮಗೆ ಗೊತ್ತು.
5 ಯೆಹೂದದ ಜನರು ತಪ್ಪುದಾರಿಯನ್ನು ಹಿಡಿದಿದ್ದಾರೆ.
ಆದರೆ ಜೆರುಸಲೇಮಿನ ಜನರು ಆ ತಪ್ಪು ದಾರಿಯ ಮೇಲೆ ನಡೆಯುವದನ್ನು ಏಕೆ ಮುಂದುವರಿಸಿದ್ದಾರೆ?
ತಮ್ಮ ಸುಳ್ಳುಗಳನ್ನೇ ಅವರು ನಂಬಿದ್ದಾರೆ,
ಅವರು ಹಿಂತಿರುಗಿ ಬರಲು ಸಿದ್ಧರಿಲ್ಲ.
6 ನಾನು ಎಚ್ಚರವಹಿಸಿ ಅವರು ಹೇಳುವದನ್ನು ಕೇಳಿದ್ದೇನೆ.
ಆದರೆ ಅವರು ಸರಿಯಾದುದನ್ನು ಹೇಳುವದಿಲ್ಲ.
ತಾವು ಮಾಡಿದ ಪಾಪಕ್ಕಾಗಿ ಅವರು ಪಶ್ಚಾತ್ತಾಪಪಡುವದಿಲ್ಲ.
ಅವರು ಮಾಡಿದ ದುಷ್ಕೃತ್ಯದ ಬಗ್ಗೆ ಅವರು ಯೋಚಿಸುವದಿಲ್ಲ.
ಜನರು ವಿಚಾರ ಮಾಡದೆ ಕೆಲಸಮಾಡುತ್ತಾರೆ.
ಅವರು ಯುದ್ಧದಲ್ಲಿ ಓಡುವ ಕುದುರೆಯಂತಿದ್ದಾರೆ.
7 ಆಕಾಶದಲ್ಲಿ ಹಾರಾಡುವ ಬಕಪಕ್ಷಿಗಳಿಗೂ ಸಹ
ಆಯಾ ಕೆಲಸ ಮಾಡುವ ಸರಿಯಾದ ಸಮಯ ಗೊತ್ತಿದೆ.
ಬೆಳವಕ್ಕಿಯೂ ಬಾನಕ್ಕಿಯೂ ಕೊಕ್ಕರೆಯೂ
ಹೊಸ ಮನೆಗೆ ಹೋಗಬೇಕಾದ ಕಾಲವನ್ನು ಬಲ್ಲವು.
ಆದರೆ ನನ್ನ ಜನರಿಗೆ ತಮ್ಮ ಯೆಹೋವನು ಅವರಿಂದ ಏನನ್ನು ಬಯಸುತ್ತಾನೆ ಎಂಬುದು ಗೊತ್ತಿಲ್ಲ.
8 “ ‘ “ಯೆಹೋವನ ಧರ್ಮಶಾಸ್ತ್ರವು ನಮ್ಮಲ್ಲಿ ಇದೆ. ಆದ್ದರಿಂದ ನಾವು ಜ್ಞಾನಿಗಳು” ಎಂದು ನೀವು ಹೇಳುವಿರಿ.
ಆದರೆ ಅದು ನಿಜವಲ್ಲ. ಏಕೆಂದರೆ ಲಿಪಿಗಾರರು ತಮ್ಮ ಲೇಖನಿಯಿಂದ ಸುಳ್ಳು ಬರೆದಿದ್ದಾರೆ.
9 ಆ “ಜ್ಞಾನಿಗಳು” ಯೆಹೋವನ ಉಪದೇಶವನ್ನು ಕೇಳಲು ಒಪ್ಪಲಿಲ್ಲ.
ಆದ್ದರಿಂದ ಅವರು ನಿಜವಾದ ಜ್ಞಾನಿಗಳಲ್ಲವೇ ಅಲ್ಲ.
ಆ “ಜ್ಞಾನಿಗಳು” ಸಿಕ್ಕಿಹಾಕಿಕೊಂಡಿದ್ದಾರೆ.
ಅವರು ಗಾಬರಿಪಟ್ಟಿದ್ದಾರೆ ಮತ್ತು ನಾಚಿಕೆಪಟ್ಟಿದ್ದಾರೆ. ಅವರ ಜ್ಞಾನವು ಅಪ್ರಯೋಜಕವಾಗಿದೆ.
10 ಆದ್ದರಿಂದ ನಾನು ಅವರ ಹೆಂಡಂದಿರನ್ನು ಬೇರೆಯವರಿಗೆ ಕೊಡುತ್ತೇನೆ.
ನಾನು ಅವರ ಹೊಲಗಳನ್ನು ಬೇರೆಯವರಿಗೆ ಕೊಡುತ್ತೇನೆ.
ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಸಾಮಾನ್ಯರನ್ನು ಮೊದಲುಗೊಂಡು ಅತ್ಯಂತ ಮುಖ್ಯರಾದವರೆಲ್ಲರೂ ಹೀಗೇ ಇದ್ದಾರೆ.
ಪ್ರವಾದಿಗಳಿಂದ ಹಿಡಿದು ಯಾಜಕರವರೆಗೆ ಎಲ್ಲರೂ ಸುಳ್ಳು ಹೇಳುತ್ತಾರೆ.
11 ಪ್ರವಾದಿಗಳು ಮತ್ತು ಯಾಜಕರು ನಮ್ಮ ಜನರ ಆಳವಾದ ಗಾಯಗಳನ್ನು
ಕೇವಲ ಅಲ್ಪಗಾಯಗಳಂತೆ ಪರಿಗಣಿಸಿ ಚಿಕಿತ್ಸೆ ಕೊಡುತ್ತಿದ್ದಾರೆ.
“ಎಲ್ಲಾ ಚೆನ್ನಾಗಿದೆ, ಎಲ್ಲಾ ಚೆನ್ನಾಗಿದೆ” ಎಂದು ಅವರು ಹೇಳುತ್ತಾರೆ.
ಆದರೆ ಎಲ್ಲಾ ಚೆನ್ನಾಗಿಲ್ಲ.
12 ಅವರು ತಮ್ಮ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ಸ್ವಲ್ಪವೂ ನಾಚಿಕೆಪಡುವುದಿಲ್ಲ.
ಅವರಿಗೆ ನಾಚಿಕೆ ಎಂಬುದೇ ತಿಳಿದಿಲ್ಲ.
ಆದ್ದರಿಂದ ಉಳಿದೆಲ್ಲರಂತೆ ಅವರಿಗೂ ಶಿಕ್ಷೆ ವಿಧಿಸಲಾಗುವುದು.
ನಾನು ಅವರನ್ನು ಶಿಕ್ಷಿಸುವಾಗ ಅವರು ಮುಗ್ಗರಿಸಿ ಬೀಳುವರು.’ ”
ಯೆಹೋವನ ನುಡಿಗಳಿವು.
13 “ನಾನು ಅವರ ಹಣ್ಣುಗಳನ್ನೂ ಬೆಳೆಗಳನ್ನೂ ಕಿತ್ತುಕೊಂಡು
ಅವರಿಗೆ ಸುಗ್ಗಿಯಾಗದಂತೆ ಮಾಡುತ್ತೇನೆ.” ಇದು ಯೆಹೋವನ ನುಡಿ.
ದ್ರಾಕ್ಷಿಬಳ್ಳಿಯಲ್ಲಿ ದ್ರಾಕ್ಷಿಗಳಿರುವದಿಲ್ಲ. ಅಂಜೂರದ ಮರದಲ್ಲಿ ಒಂದಾದರೂ ಅಂಜೂರದ ಹಣ್ಣು ಇರುವದಿಲ್ಲ.
ಎಲೆಗಳು ಸಹ ಒಣಗಿ ಉದುರುವವು.
ನಾನು ಅವರಿಗೆ ಕೊಟ್ಟ ವಸ್ತುಗಳನ್ನು ಕಿತ್ತುಕೊಳ್ಳುವೆನು.
14 “ನಾವು ಇಲ್ಲಿ ಸುಮ್ಮನೆ ಕುಳಿತುಕೊಂಡಿರುವುದೇಕೆ?
ಬನ್ನಿ, ನಾವು ಭದ್ರವಾದ ಪಟ್ಟಣಗಳಿಗೆ ಓಡಿಹೋಗೋಣ.
ನಮ್ಮ ದೇವರಾದ ಯೆಹೋವನು ನಮ್ಮನ್ನು ಸಾಯುವಂತೆ ಮಾಡಿದರೆ ಅಲ್ಲಿಯೇ ಸತ್ತುಹೋಗೋಣ.
ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ.
ಆದ್ದರಿಂದ ಆತನು ನಮಗೆ ಕುಡಿಯಲು ವಿಷಮಿಶ್ರಿತ ನೀರನ್ನು ಕೊಟ್ಟಿದ್ದಾನೆ.
15 ನಾವು ಶಾಂತಿಯನ್ನು ನಿರೀಕ್ಷಿಸಿದ್ದೆವು.
ಆದರೆ ಒಳ್ಳೆಯದೇನೂ ಆಗಲಿಲ್ಲ.
ಅವನು ನಮ್ಮನ್ನು ಗುಣಪಡಿಸುವ ಸಮಯಕ್ಕಾಗಿ ಕಾದುಕೊಂಡಿದ್ದೆವು.
ಆದರೆ ಕೇವಲ ವಿನಾಶ ಮಾತ್ರ ಬಂದಿತು.
16 ದಾನ್ಕುಲದವರ ಪ್ರದೇಶದಿಂದ
ನಾವು ಶತ್ರುಗಳ ಕುದುರೆಗಳ ಕೆನೆತವನ್ನು ಕೇಳುತ್ತಿದ್ದೇವೆ.
ಅವುಗಳ ಪಾದಗಳ ಬಡಿತದಿಂದ ಭೂಮಿ ನಡುಗುತ್ತಿದೆ.
ಅವರು ನಮ್ಮ ಪ್ರದೇಶವನ್ನು
ಮತ್ತು ಅಲ್ಲಿದ್ದ ಎಲ್ಲವನ್ನು ಹಾಳುಮಾಡಲು ಬಂದಿದ್ದಾರೆ.
ಅವರು ನಗರವನ್ನು ಮತ್ತು ಅಲ್ಲಿದ್ದ ಎಲ್ಲಾ ಜನರನ್ನು
ಹಾಳುಮಾಡಲು ಬಂದಿದ್ದಾರೆ.
17 “ಯೆಹೂದದ ಜನರೇ, ನಿಮ್ಮನ್ನು ಕಚ್ಚುವದಕ್ಕಾಗಿ ವಿಷಪೂರಿತ ಹಾವುಗಳನ್ನು ಕಳಿಸುತ್ತಿದ್ದೇನೆ.
ಆ ಹಾವುಗಳನ್ನು ತಡೆಯಲಾಗದು.
ಅವುಗಳು ನಿಮ್ಮನ್ನು ಕಚ್ಚುವವು.”
ಇದು ಯೆಹೋವನ ನುಡಿ.
18 ದೇವರೇ, ನಾನು ದುಃಖಿತನಾಗಿದ್ದೇನೆ, ಭಯಭೀತನಾಗಿದ್ದೇನೆ.
19 ನನ್ನ ಜನರ ಮೊರೆಯನ್ನು ಆಲಿಸು.
ದೇಶದ ಎಲ್ಲೆಡೆಯಲ್ಲಿಯೂ ಅವರು ಸಹಾಯಕ್ಕಾಗಿ ಕೂಗುತ್ತಿದ್ದಾರೆ.
“ಈಗಲೂ ಯೆಹೋವನು ಚೀಯೋನಿನಲ್ಲಿದ್ದಾನೆಯೇ?
ಚೀಯೋನಿನ ರಾಜನು ಈಗಲೂ ಅಲ್ಲಿದ್ದಾನೆಯೇ?” ಎಂದು ಅವರು ಕೇಳುತ್ತಾರೆ.
ದೇವರು ಹೀಗೆನ್ನುತ್ತಾನೆ: “ಯೆಹೂದದ ಜನರು ತಮ್ಮ ವಿಗ್ರಹಗಳನ್ನು ಪೂಜಿಸಿ ನನ್ನ ಕೋಪವನ್ನು ಏಕೆ ಕೆರಳಿಸುತ್ತಾರೆ?
ಅವರು ನಿಷ್ಪ್ರಯೋಜಕವಾದ ಅನ್ಯದೇವರ ವಿಗ್ರಹಗಳನ್ನು ಪೂಜಿಸಿದರು.”
20 “ಸುಗ್ಗಿಯ ಕಾಲ ಮುಗಿಯಿತು,
ಬೇಸಿಗೆ ಕಾಲ ಹೋಯಿತು,
ಆದರೆ ನಮಗಿನ್ನೂ ರಕ್ಷಣೆ ಆಗಲಿಲ್ಲ” ಎಂದು ಜನರು ಅನ್ನುತ್ತಾರೆ.
21 ನನ್ನ ಜನರು ಗಾಯಗೊಂಡಿದ್ದಾರೆ. ಆದ್ದರಿಂದ ನಾನೂ ಗಾಯಗೊಂಡಿದ್ದೇನೆ.
ಈಗ ಗಾಯಗೊಂಡ ಜನರ ಬಗ್ಗೆ ಯೋಚಿಸುತ್ತ ನಾನು ದುಃಖದಿಂದ ಮೌನವಾಗಿದ್ದೇನೆ.
22 ಗಿಲ್ಯಾದಿನಲ್ಲಿ ಖಂಡಿತವಾಗಿಯೂ ಔಷಧವಿದೆ.
ಖಂಡಿತವಾಗಿಯೂ ಅಲ್ಲಿ ಒಬ್ಬ ವೈದ್ಯನಿದ್ದಾನೆ.
ಆದರೆ ನನ್ನ ಜನರ ಗಾಯಗಳು ಗುಣವಾಗಲಿಲ್ಲವೇಕೆ?