10
ಸೂರ್ಯನು ನಿಶ್ಚಲನಾಗಿ ನಿಂತ ದಿನ
1 ಈ ಸಮಯದಲ್ಲಿ ಅದೋನೀಚೆದೆಕನು ಜೆರುಸಲೇಮಿನ ಅರಸನಾಗಿದ್ದನು. ಯೆಹೋಶುವನು ಆಯಿ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮತ್ತು ಅದನ್ನು ಸಂಪೂರ್ಣವಾಗಿ ನಾಶಮಾಡಿದ ಸಂಗತಿಯನ್ನು ಅವನು ಕೇಳಿದ್ದನು. ಜೆರಿಕೊ ಪಟ್ಟಣಕ್ಕೂ ಅದರ ರಾಜನಿಗೂ ಯೆಹೋಶುವನು ಹಾಗೆಯೇ ಮಾಡಿದ್ದನೆಂಬುದನ್ನೂ ಗಿಬ್ಯೋನಿನ ಜನರು ಇಸ್ರೇಲರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದಾರೆಂಬುದನ್ನೂ ಅವನು ಕೇಳಿದ್ದನು. ಅವರು ಜೆರುಸಲೇಮಿಗೆ ಅತೀಸಮೀಪದಲ್ಲಿ ವಾಸವಾಗಿದ್ದರು.
2 ಆದ್ದರಿಂದ ಅದೋನೀಚೆದೆಕನು ಮತ್ತು ಅವನ ಜನರು ಬಹಳ ಹೆದರಿಕೊಂಡರು. ಗಿಬ್ಯೋನ್ “ಆಯಿ”ಯಂತೆ ಸಣ್ಣ ಊರಾಗಿರಲಿಲ್ಲ. ಗಿಬ್ಯೋನ್ ಬಹಳ ದೊಡ್ಡ ನಗರವಾಗಿತ್ತು. ಅದು ರಾಜಧಾನಿಯಷ್ಟು ದೊಡ್ಡ ಪಟ್ಟಣವಾಗಿತ್ತು. ಆ ಪಟ್ಟಣದ ಜನರೆಲ್ಲರೂ ಒಳ್ಳೆಯ ಯೋಧರಾಗಿದ್ದರು. ಆದ್ದರಿಂದ ಆ ಅರಸನು ಭಯಗೊಂಡಿದ್ದನು.
3 ಜೆರುಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನೊಂದಿಗೆ ಮಾತನಾಡಿದನು. ಅವನು ಯರ್ಮೂತಿನ ಅರಸನಾದ ಪಿರಾಮ್, ಲಾಕೀಷಿನ ಅರಸನಾದ ಯಾಫೀಯ ಮತ್ತು ಎಗ್ಲೋನಿನ ಅರಸನಾದ ದೆಬೀರ್ ಇವರೊಂದಿಗೂ ಮಾತನಾಡಿದನು. ಜೆರುಸಲೇಮಿನ ಅರಸನು ಅವರಿಗೆ,
4 “ನನ್ನೊಂದಿಗೆ ಬಂದು ಗಿಬ್ಯೋನಿನ ಮೇಲೆ ಧಾಳಿಮಾಡಲು ಸಹಾಯಮಾಡಿರಿ. ಗಿಬ್ಯೋನ್ ಯೆಹೋಶುವನೊಂದಿಗೂ ಇಸ್ರೇಲರೊಂದಿಗೂ ಶಾಂತಿಒಪ್ಪಂದ ಮಾಡಿಕೊಂಡಿದೆ” ಎಂದು ಬೇಡಿಕೊಂಡನು.
5 ಆಗ ಆ ಐದು ಮಂದಿ ಅಮೋರಿಯರ ಅರಸರು ಸೈನ್ಯವನ್ನು ಸೇರಿಸಿದರು. (ಜೆರುಸಲೇಮಿನ ಅರಸ, ಹೆಬ್ರೋನಿನ ಅರಸ, ಯರ್ಮೂತಿನ ಅರಸ, ಲಾಕೀಷಿನ ಅರಸ ಮತ್ತು ಎಗ್ಲೋನಿನ ಅರಸ; ಇವರೇ ಆ ಐದು ಮಂದಿ ಅರಸರು.) ಆ ಸೈನ್ಯಗಳು ಗಿಬ್ಯೋನಿಗೆ ಹೋಗಿ ಪಟ್ಟಣವನ್ನು ಸುತ್ತುವರಿದು ಅದರ ವಿರುದ್ಧ ಹೋರಾಟ ಪ್ರಾರಂಭಿಸಿದವು.
6 ಗಿಲ್ಗಾಲಿನ ಪಾಳೆಯದಲ್ಲಿದ್ದ ಯೆಹೋಶುವನಿಗೆ ಗಿಬ್ಯೋನ್ ನಗರದ ಜನರು ಒಂದು ಸಂದೇಶವನ್ನು ಕಳಿಸಿದರು. ಆ ಸಂದೇಶ ಹೀಗಿತ್ತು: “ನಾವು ನಿಮ್ಮ ಸೇವಕರಾಗಿದ್ದೇವೆ, ನಮ್ಮನ್ನು ನಿಸ್ಸಹಾಯಕರಾಗಿ ಬಿಡಬೇಡಿರಿ. ಬಂದು ನಮಗೆ ಸಹಾಯ ಮಾಡಿರಿ; ತ್ವರೆಮಾಡಿರಿ; ನಮ್ಮನ್ನು ಉಳಿಸಿರಿ. ಬೆಟ್ಟಪ್ರದೇಶದ ಅಮೋರಿಯರ ಅರಸರೆಲ್ಲಾ ತಮ್ಮ ಸೈನ್ಯವನ್ನು ಒಟ್ಟುಗೂಡಿಸಿ ನಮ್ಮ ವಿರುದ್ಧ ಯುದ್ಧಮಾಡುತ್ತಿದ್ದಾರೆ.”
7 ಆದ್ದರಿಂದ ಯೆಹೋಶುವನು ತನ್ನ ಎಲ್ಲ ಸೈನ್ಯದೊಂದಿಗೆ ಗಿಲ್ಗಾಲಿನಿಂದ ಹೊರಟನು. ಯೆಹೋಶುವನೊಂದಿಗೆ ಅತ್ಯುತ್ತಮವಾದ ಯೋಧರಿದ್ದರು.
8 ಯೆಹೋವನು ಯೆಹೋಶುವನಿಗೆ, “ಆ ಸೈನ್ಯಗಳಿಗೆ ಹೆದರಬೇಡ, ನೀನು ಅವರನ್ನು ಸೋಲಿಸುವಂತೆ ಮಾಡುತ್ತೇನೆ. ಆ ಸೈನ್ಯದ ಯಾರೊಬ್ಬರೂ ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದನು.
9 ಯೆಹೋಶುವನು ಮತ್ತು ಅವನ ಸೈನ್ಯದವರು ಇಡೀರಾತ್ರಿ ಗಿಬ್ಯೋನಿನ ಕಡೆಗೆ ಪ್ರಯಾಣ ಮಾಡಿದರು. ಯೆಹೋಶುವನು ಬರುತ್ತಿದ್ದಾನೆಂಬುದು ವೈರಿಗಳಿಗೆ ಗೊತ್ತಿರಲಿಲ್ಲ. ಯೆಹೋಶುವನು ಅವರ ಮೇಲೆ ಧಾಳಿ ಮಾಡಿದಾಗ ಅವರಿಗೆ ಅತ್ಯಾಶ್ಚರ್ಯವಾಯಿತು.
10 ಇಸ್ರೇಲರು ಧಾಳಿಮಾಡಿದಾಗ ಯೆಹೋವನು ಆ ಶತ್ರು ಸೈನ್ಯವನ್ನು ಗಾಬರಿಗೊಳಿಸಿದನು. ಆದ್ದರಿಂದ ಇಸ್ರೇಲಿನ ಸೈನಿಕರು ಅವರನ್ನು ಸೋಲಿಸಿ ಮಹಾವಿಜಯವನ್ನು ಸಾಧಿಸಿದರು. ಇಸ್ರೇಲರು ಶತ್ರುಗಳನ್ನು ಗಿಬ್ಯೋನಿನಿಂದ ಬೇತ್ಹೋರೋನಿಗೆ ಹೋಗುವ ದಾರಿಯವರೆಗೂ ಬೆನ್ನಟ್ಟಿದರು. ಇಸ್ರೇಲರು ಅಜೇಕ ಮತ್ತು ಮಕ್ಕೇದದವರೆಗೆ ಅವರನ್ನು ಕೊಂದರು.
11 ಬೇತ್ಹೋರೋನ್ ಇಳಿಜಾರಿನಿಂದ ಅಜೇಕದವರೆಗೆ ಅವರನ್ನು ಕೊಂದರು. ಅವರು ಶತ್ರುಗಳನ್ನು ಬೆನ್ನಟ್ಟುತ್ತಿದ್ದಾಗ ಯೆಹೋವನು ಆಕಾಶದಿಂದ ಆಲಿಕಲ್ಲು ಮಳೆ ಸುರಿಯುವಂತೆ ಮಾಡಿದನು. ಬಹಳಷ್ಟು ಮಂದಿ ಶತ್ರುಗಳು ಈ ದೊಡ್ಡ ಆಲಿಕಲ್ಲುಗಳಿಂದಲೇ ಮೃತಪಟ್ಟರು. ಇಸ್ರೇಲರು ತಮ್ಮ ಖಡ್ಗಗಳಿಂದ ಕೊಂದ ಜನರಿಗಿಂತ ಹೆಚ್ಚು ಜನರು ಈ ಆಲಿಕಲ್ಲಿನ ಮಳೆಯಿಂದ ಸತ್ತರು.
12 ಆ ದಿನ ಯೆಹೋವನ ಸಹಾಯದಿಂದ ಇಸ್ರೇಲರು ಅಮೋರಿಯರನ್ನು ಸೋಲಿಸಿದರು. ಅಂದು ಯೆಹೋಶುವನು ಎಲ್ಲ ಜನರ ಎದುರಿಗೆ ನಿಂತುಕೊಂಡು ಯೆಹೋವನಿಗೆ ಹೀಗೆ ಮೊರೆಯಿಟ್ಟನು:
“ಸೂರ್ಯನೇ, ಗಿಬ್ಯೋನಿನ ಆಕಾಶದಲ್ಲಿ ನಿಂತಿರು,
ಚಲಿಸಬೇಡ. ಚಂದ್ರನೇ, ಅಯ್ಯಾಲೋನ್ ಕಣಿವೆಯ ಆಕಾಶದಲ್ಲಿ ನಿಂತಿರು, ಚಲಿಸಬೇಡ.”
13 ಆದ್ದರಿಂದ ಅವರು ಶತ್ರುಗಳನ್ನು ಸೋಲಿಸುವವರೆಗೆ ಸೂರ್ಯನೂ ಚಲಿಸಲಿಲ್ಲ, ಚಂದ್ರನೂ ಚಲಿಸಲಿಲ್ಲ. ಈ ಕಥೆಯು ಯಾಷಾರ್ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಸೂರ್ಯನು ಆಕಾಶದ ಮಧ್ಯದಲ್ಲಿ ನಿಂತನು. ಅವನು ಇಡೀ ದಿನ ಚಲಿಸಲಿಲ್ಲ.
14 ಅದಕ್ಕಿಂತ ಮೊದಲೆಂದೂ ಹೀಗಾಗಿರಲಿಲ್ಲ; ಆಮೇಲೆಯೂ ಆಗಲಿಲ್ಲ. ಯೆಹೋವನು ಒಬ್ಬ ಮಾನವನ ಆಜ್ಞೆಯನ್ನು ಪಾಲಿಸಿದ ದಿನ ಅದಾಗಿತ್ತು. ಇಸ್ರೇಲರಿಗೋಸ್ಕರ ಯೆಹೋವನು ನಿಜವಾಗಿಯೂ ಯುದ್ಧಮಾಡುತ್ತಿದ್ದನು.
15 ಇದಾದ ಮೇಲೆ ಯೆಹೋಶುವನು ಮತ್ತು ಅವನ ಸೈನಿಕರು ಗಿಲ್ಗಾಲಿನ ತಮ್ಮ ಪಾಳೆಯಕ್ಕೆ ಹಿಂದಿರುಗಿ ಹೋದರು.
16 ಯುದ್ಧ ನಡೆದಾಗ ಆ ಐದು ಮಂದಿ ಅರಸರು ಓಡಿಹೋದರು. ಅವರು ಮಕ್ಕೇದದ ಸಮೀಪದಲ್ಲಿದ್ದ ಗುಹೆಯಲ್ಲಿ ಅಡಗಿಕೊಂಡರು.
17 ಆ ಐದುಮಂದಿ ಅರಸರು ಆ ಗುಹೆಯಲ್ಲಿ ಅಡಗಿಕೊಂಡಿದ್ದನ್ನು ಯಾರೋ ನೋಡಿ ಯೆಹೋಶುವನಿಗೆ ತಿಳಿಸಿದರು.
18 ಯೆಹೋಶುವನು ತನ್ನ ಜನರಿಗೆ, “ಗುಹೆಯ ದ್ವಾರವನ್ನು ದೊಡ್ಡ ಕಲ್ಲುಬಂಡೆಗಳಿಂದ ಮುಚ್ಚಿರಿ. ಗುಹೆಯನ್ನು ಕಾಯುವುದಕ್ಕೆ ಕೆಲವು ಜನರು ಇಲ್ಲಿರಲಿ.
19 ಆದರೆ ನೀವು ಅಲ್ಲಿ ನಿಂತುಕೊಳ್ಳಬೇಡಿರಿ; ಶತ್ರುಗಳನ್ನು ಬೆನ್ನಟ್ಟಿ ಅವರ ಮೇಲೆ ಧಾಳಿಮಾಡಿ. ತಮ್ಮ ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಲು ಅವರಿಗೆ ಅವಕಾಶಕೊಡಬೇಡಿ. ನಿಮ್ಮ ದೇವರಾದ ಯೆಹೋವನು ನಿಮಗೆ ಅವರ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆ” ಎಂದು ಆಜ್ಞಾಪಿಸಿದನು.
20 ಯೆಹೋಶುವನು ಮತ್ತು ಇಸ್ರೇಲಿನ ಜನರು ವೈರಿಗಳನ್ನು ಕೊಂದರು. ಆದರೆ ಕೆಲವು ಶತ್ರುಗಳು ಎತ್ತರವಾದ ಗೋಡೆಗಳುಳ್ಳ ತಮ್ಮ ಪಟ್ಟಣಗಳಿಗೆ ಹೋಗಿ ಅಡಗಿಕೊಳ್ಳಲು ಸಾಧ್ಯವಾಯಿತು. ಆ ಜನರು ಕೊಲ್ಲಲ್ಪಡಲಿಲ್ಲ.
21 ಯುದ್ಧದ ತರುವಾಯ ಯೆಹೋಶುವನ ಜನರು ಅವನ ಹತ್ತಿರ ಮಕ್ಕೇದಕ್ಕೆ ಬಂದರು. ಆ ದೇಶದಲ್ಲಿ ಇಸ್ರೇಲರ ವಿರುದ್ಧ ಮಾತಾಡಲು ಯಾರಿಗೂ ಧೈರ್ಯವಿರಲಿಲ್ಲ.
22 ಅನಂತರ ಯೆಹೋಶುವನು ಜನರಿಗೆ, “ಗುಹೆಯ ದ್ವಾರಕ್ಕೆ ಅಡ್ಡಲಾಗಿಟ್ಟ ಕಲ್ಲುಬಂಡೆಗಳನ್ನು ಸರಿಸಿ ಆ ಐದು ಮಂದಿ ಅರಸರನ್ನು ನನ್ನ ಹತ್ತಿರ ತನ್ನಿರಿ” ಎಂದು ಆಜ್ಞಾಪಿಸಿದನು.
23 ಯೆಹೋಶುವನ ಜನರು ಆ ಐದು ಮಂದಿ ಅರಸರನ್ನು ಗುಹೆಯ ಹೊರಗಡೆ ತಂದರು. ಜೆರುಸಲೇಮಿನ ಅರಸ, ಹೆಬ್ರೋನಿನ ಅರಸ, ಯರ್ಮೂತಿನ ಅರಸ, ಲಾಕೀಷಿನ ಅರಸ, ಎಗ್ಲೋನಿನ ಅರಸ ಇವರೇ ಆ ಐದು ಮಂದಿ.
24 ಅವರು ಆ ಐದು ಮಂದಿ ಅರಸರನ್ನು ಯೆಹೋಶುವನಲ್ಲಿಗೆ ತಂದರು. ಯೆಹೋಶುವನು ಇಸ್ರೇಲರನ್ನೆಲ್ಲ ಆ ಸ್ಥಳಕ್ಕೆ ಕರೆಸಿ ತನ್ನ ಸೈನ್ಯದ ಅಧಿಕಾರಿಗಳಿಗೆ “ಇಲ್ಲಿಗೆ ಬನ್ನಿ, ನಿಮ್ಮ ಪಾದಗಳನ್ನು ಈ ಅರಸರ ಕುತ್ತಿಗೆಗಳ ಮೇಲೆ ಇಡಿ” ಎಂದು ಹೇಳಿದನು. ಯೆಹೋಶುವನ ಸೈನ್ಯಾಧಿಕಾರಿಗಳು ಹತ್ತಿರಕ್ಕೆ ಬಂದು ತಮ್ಮ ಪಾದಗಳನ್ನು ಆ ಅರಸರ ಕತ್ತುಗಳ ಮೇಲೆ ಇಟ್ಟರು.
25 ಆಗ ಯೆಹೋಶುವನು ತನ್ನ ಜನರಿಗೆ, “ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ, ಅಂಜಬೇಡಿರಿ, ಇನ್ನು ಮುಂದೆ ನಮ್ಮ ಜೊತೆ ಹೋರಾಡುವ ಎಲ್ಲ ಶತ್ರುಗಳಿಗೆ ಯೆಹೋವನು ಏನು ಮಾಡುತ್ತಾನೆಂಬುದನ್ನು ನಿಮಗೆ ತೋರಿಸುತ್ತೇನೆ” ಎಂದು ಹೇಳಿದನು.
26 ಆಮೇಲೆ ಯೆಹೋಶುವನು ಆ ಐದು ಮಂದಿ ಅರಸರನ್ನು ಕೊಂದುಹಾಕಿದನು. ಅವರ ದೇಹಗಳನ್ನು ಐದು ಮರಗಳಿಗೆ ಸಾಯಂಕಾಲದವರೆಗೂ ನೇತುಹಾಕಿದನು.
27 ಸೂರ್ಯಾಸ್ತಮಾನದ ಹೊತ್ತಿಗೆ ಯೆಹೋಶುವನು ಆ ದೇಹಗಳನ್ನು ಮರದಿಂದ ಕೆಳಗಿಳಿಸಲು ಹೇಳಿದನು. ಆಮೇಲೆ ಅವರು ಎಲ್ಲಿ ಅಡಗಿಕೊಂಡಿದ್ದರೋ ಅದೇ ಗುಹೆಯಲ್ಲಿ ಆ ಶವಗಳನ್ನು ಬಿಸಾಡಿದರು. ಆ ಗುಹೆಯ ದ್ವಾರವನ್ನು ದೊಡ್ಡ ಕಲ್ಲುಬಂಡೆಗಳಿಂದ ಮುಚ್ಚಿದರು. ಆ ದೇಹಗಳು ಇಂದಿಗೂ ಆ ಗುಹೆಯಲ್ಲಿವೆ.
28 ಆ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿಕೊಂಡು ಆ ಪಟ್ಟಣದ ಅರಸನನ್ನು ಮತ್ತು ಜನರನ್ನು ಸಂಹರಿಸಿದನು. ಒಬ್ಬರೂ ಜೀವಂತವಾಗಿ ಉಳಿಯಲಿಲ್ಲ. ಯೆಹೋಶುವನು ಜೆರಿಕೊವಿನ ಅರಸನಿಗೆ ಮಾಡಿದಂತೆಯೇ ಮಕ್ಕೇದದ ಅರಸನಿಗೂ ಮಾಡಿದನು.
ದಕ್ಷಿಣದ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಂಡದ್ದು
29 ಆಗ ಯೆಹೋಶುವನು ಮತ್ತು ಇಸ್ರೇಲರೆಲ್ಲರು ಮಕ್ಕೇದದಿಂದ ಪ್ರಯಾಣ ಮಾಡಿ ಲಿಬ್ನಕ್ಕೆ ಹೋಗಿ ಆ ಪಟ್ಟಣದ ಮೇಲೆ ಧಾಳಿಮಾಡಿದರು.
30 ಇಸ್ರೇಲರು ಆ ಪಟ್ಟಣವನ್ನು ಮತ್ತು ಅದರ ಅರಸನನ್ನು ಸ್ವಾಧೀನಪಡಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಆ ಪಟ್ಟಣದ ಪ್ರತಿಯೊಬ್ಬ ವ್ಯಕ್ತಿಯನ್ನು ಇಸ್ರೇಲರು ಕೊಂದುಹಾಕಿದರು. ಒಬ್ಬರನ್ನೂ ಜೀವಸಹಿತ ಬಿಡಲಿಲ್ಲ. ಅವರು ಜೆರಿಕೊ ನಗರದ ಅರಸನಿಗೆ ಮಾಡಿದಂತೆಯೇ ಆ ಅರಸನಿಗೂ ಮಾಡಿದರು.
31 ಆಮೇಲೆ ಯೆಹೋಶುವನು ಮತ್ತು ಇಸ್ರೇಲರೆಲ್ಲರು ಲಿಬ್ನವನ್ನು ಬಿಟ್ಟು ಲಾಕೀಷಿಗೆ ಹೋದರು. ಯೆಹೋಶುವನು ಮತ್ತು ಅವನ ಜನರು ಲಾಕೀಷಿಗೆ ಮುತ್ತಿಗೆಹಾಕಿ ಅದರ ಮೇಲೆ ಧಾಳಿಮಾಡಿದರು.
32 ಇಸ್ರೇಲರ ಜನರು ಲಾಕೀಷ್ ಪಟ್ಟಣವನ್ನು ವಶಪಡಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಅವರು ಎರಡನೆಯ ದಿನ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡರು. ಇಸ್ರೇಲರು ಆ ಪಟ್ಟಣದಲ್ಲಿದ್ದವರನ್ನೆಲ್ಲಾ ಕೊಂದುಹಾಕಿದರು. ಅವರು ಲಿಬ್ನ ಪಟ್ಟಣಕ್ಕೆ ಮಾಡಿದಂತೆ ಇದಕ್ಕೂ ಮಾಡಿದರು.
33 ಇದೇ ಸಮಯದಲ್ಲಿ ಗೆಜೆರಿನ ಅರಸನಾದ ಹೋರಾಮನು ಲಾಕೀಷಿನವರ ಸಹಾಯಕ್ಕೆ ಬಂದನು. ಯೆಹೋಶುವನು ಅವನನ್ನು ಮತ್ತು ಅವನ ಸೈನ್ಯವನ್ನು ಸೋಲಿಸಿದನು. ಅಲ್ಲಿ ಯಾರನ್ನೂ ಜೀವಸಹಿತ ಬಿಡಲಿಲ್ಲ.
34 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ಲಾಕೀಷಿನಿಂದ ಎಗ್ಲೋನಿಗೆ ಪ್ರಯಾಣ ಮಾಡಿದರು. ಅವರು ಎಗ್ಲೋನ್ ಪಟ್ಟಣಕ್ಕೆ ಮುತ್ತಿಗೆ ಹಾಕಿ ಅದರ ಮೇಲೆ ಧಾಳಿಮಾಡಿದರು.
35 ಆ ದಿವಸ ಅವರು ಆ ನಗರವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿದ್ದ ಎಲ್ಲ ಜನರನ್ನು ಕೊಂದುಹಾಕಿದರು. ಅವರು ಲಾಕೀಷಿನಲ್ಲಿ ಮಾಡಿದಂತೆ ಇಲ್ಲಿಯೂ ಮಾಡಿದರು.
36 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ಎಗ್ಲೋನಿನಿಂದ ಹೆಬ್ರೋನಿಗೆ ಪ್ರಯಾಣ ಮಾಡಿ ಹೆಬ್ರೋನಿನ ಮೇಲೆ ಧಾಳಿಮಾಡಿದರು.
37 ಅವರು ಹೆಬ್ರೋನ್ ಪಟ್ಟಣವನ್ನೂ ಅದರ ರಾಜನನ್ನೂ ಮತ್ತು ಅದರ ಸಮೀಪದಲ್ಲಿದ್ದ ಎಲ್ಲ ಸಣ್ಣಪುಟ್ಟ ಊರುಗಳನ್ನೂ ಸ್ವಾಧೀನಪಡಿಸಿಕೊಂಡರು. ಇಸ್ರೇಲರು ಆ ಪಟ್ಟಣದಲ್ಲಿದ್ದ ಎಲ್ಲರನ್ನೂ ಕೊಂದರು. ಅಲ್ಲಿ ಯಾರೊಬ್ಬರೂ ಜೀವಂತವಾಗಿ ಉಳಿಯಲಿಲ್ಲ. ಅವರು ಎಗ್ಲೋನಿನಲ್ಲಿ ಮಾಡಿದಂತೆಯೇ ಇಲ್ಲಿಯೂ ಮಾಡಿದರು. ಅವರು ಪಟ್ಟಣವನ್ನು ನಾಶಮಾಡಿದರು ಮತ್ತು ಅಲ್ಲಿದ್ದ ಎಲ್ಲ ಜನರನ್ನು ಕೊಂದರು.
38 ಆಮೇಲೆ ಯೆಹೋಶುವನು ಮತ್ತು ಎಲ್ಲ ಇಸ್ರೇಲರು ದೆಬೀರಿಗೆ ಹೋಗಿ ಆ ಪಟ್ಟಣದ ಮೇಲೆ ಧಾಳಿಮಾಡಿದರು.
39 ಅವರು ಆ ಪಟ್ಟಣವನ್ನೂ ಅದರ ಅರಸನನ್ನೂ ದೆಬೀರಿನ ಸಮೀಪದ ಎಲ್ಲ ಸಣ್ಣಪುಟ್ಟ ಊರುಗಳನ್ನೂ ಸ್ವಾಧೀನಪಡಿಸಿಕೊಂಡರು. ಅವರು ಆ ಪಟ್ಟಣದಲ್ಲಿದ್ದ ಎಲ್ಲರನ್ನು ಕೊಂದರು. ಅಲ್ಲಿ ಯಾರೊಬ್ಬರೂ ಸಜೀವವಾಗಿ ಉಳಿಯಲಿಲ್ಲ. ಇಸ್ರೇಲರು ಹೆಬ್ರೋನ್ ಮತ್ತು ಅದರ ಅರಸನಿಗೆ ಮಾಡಿದಂತೆಯೇ ದೆಬೀರ್ ಮತ್ತು ಅದರ ಅರಸನಿಗೆ ಮಾಡಿದರು. ಲಿಬ್ನ ಮತ್ತು ಅದರ ಅರಸನಿಗೂ ಹೀಗೆಯೇ ಮಾಡಲಾಗಿತ್ತು.
40 ಹೀಗೆ ಯೆಹೋಶುವನು ಬೆಟ್ಟದ ಮೇಲಿನ ಪ್ರದೇಶ, ನೆಗೆವ್ ಪ್ರದೇಶ, ಪಶ್ಚಿಮದ ಇಳಕಲಿನ ಪ್ರದೇಶ, ಪೂರ್ವದ ಇಳಕಲಿನ ಪ್ರದೇಶ, ಈ ಎಲ್ಲ ಪ್ರದೇಶಗಳ ಅರಸರನ್ನು ಸೋಲಿಸಿದನು. ಇಸ್ರೇಲಿನ ದೇವರಾದ ಯೆಹೋವನು ಎಲ್ಲಾ ಜನರನ್ನು ಕೊಲ್ಲು ಎಂದು ಯೆಹೋಶುವನಿಗೆ ಹೇಳಿದ್ದನು. ಅದಕ್ಕಾಗಿ ಯೆಹೋಶುವನು ಆ ಸ್ಥಳಗಳಲ್ಲಿ ಯಾರೊಬ್ಬರನ್ನೂ ಸಜೀವವಾಗಿ ಉಳಿಸಲಿಲ್ಲ.
41 ಯೆಹೋಶುವನು ಕಾದೇಶ್ಬರ್ನೇಯದಿಂದ ಗಾಜಾದವರೆಗಿನ ಎಲ್ಲ ಪಟ್ಟಣಗಳನ್ನು ಗೆದ್ದುಕೊಂಡನು. ಅವನು ಈಜಿಪ್ಟಿನ ಗೋಷೆನ್ ಪ್ರಾಂತದಿಂದ ಗಿಬ್ಯೋನಿನವರೆಗೆ ಇದ್ದ ಎಲ್ಲ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಂಡನು.
42 ಯೆಹೋಶುವನು ಆ ಎಲ್ಲ ಪಟ್ಟಣಗಳನ್ನು ಮತ್ತು ಅವುಗಳ ಅರಸರನ್ನು ಒಂದೇ ದಂಡೆಯಾತ್ರೆಯಲ್ಲಿ ಸ್ವಾಧೀನಪಡಿಸಿಕೊಂಡನು. ಇಸ್ರೇಲಿನ ದೇವರಾದ ಯೆಹೋವನು ಇಸ್ರೇಲಿನವರಿಗಾಗಿ ಯುದ್ಧ ಮಾಡುತ್ತಿದ್ದುದರಿಂದ ಯೆಹೋಶುವನಿಗೆ ಇದು ಸಾಧ್ಯವಾಯಿತು.
43 ಆಮೇಲೆ ಯೆಹೋಶುವನು ಮತ್ತು ಇಸ್ರೇಲಿನ ಜನರೆಲ್ಲರು ಗಿಲ್ಗಾಲಿನಲ್ಲಿದ್ದ ತಮ್ಮ ಪಾಳೆಯಕ್ಕೆ ಹಿಂತಿರುಗಿದರು.