14
ಯಾಜಕನಾದ ಎಲ್ಲಾಜಾರನು, ನೂನನ ಮಗನಾದ ಯೆಹೋಶುವನು ಮತ್ತು ಇಸ್ರೇಲಿನ ಕುಲಗಳ ನಾಯಕರು, ಇಸ್ರೇಲರಿಗೆ ಕಾನಾನ್ ನಾಡಿನ ಯಾವಯಾವ ಭಾಗವನ್ನು ಕೊಡಬೇಕೆಂಬುದನ್ನು ತೀರ್ಮಾನಿಸಿದರು. ಜನರು ತಮ್ಮ ಪ್ರದೇಶವನ್ನು ಯಾವ ವಿಧಾನದಿಂದ ಆರಿಸಿಕೊಳ್ಳಬೇಕೆಂಬುದರ ಬಗ್ಗೆ ಬಹುಕಾಲದ ಹಿಂದೆಯೇ ಯೆಹೋವನು ಮೋಶೆಗೆ ತಿಳಿಸಿದ್ದನು. ತಮ್ಮತಮ್ಮ ಪ್ರದೇಶಗಳನ್ನು ನಿರ್ಣಯಿಸಲು ಇಸ್ರೇಲಿನ ಒಂಭತ್ತುವರೆ ಕುಲಗಳ ಜನರು ಚೀಟುಹಾಕಿದರು. ಎರಡುವರೆ ಕುಲಗಳ ಜನರಿಗೆ ಮೋಶೆಯು ಜೋರ್ಡನ್ ನದಿಯ ಪೂರ್ವದಿಕ್ಕಿನ ಪ್ರದೇಶವನ್ನು ಕೊಟ್ಟಿದ್ದನು. ಆದರೆ ಲೇವಿಯ ಕುಲದವರಿಗೆ ಉಳಿದವರಂತೆ ಯಾವ ಪ್ರದೇಶವನ್ನೂ ಕೊಡಲಿಲ್ಲ. ಹನ್ನೆರಡು ಕುಲಗಳಿಗೆ ಅವರವರ ಪ್ರದೇಶಗಳ ಪೂರ್ಣಸ್ವಾಸ್ತ್ಯವನ್ನು ಕೊಡಲಾಯಿತು. ಯೋಸೇಫನ ಮನೆತನದವರು ಮನಸ್ಸೆ ಮತ್ತು ಎಫ್ರಾಯೀಮ್ ಎಂಬ ಎರಡು ಕುಲಗಳಾಗಿ ವಿಂಗಡಿಸಲ್ಪಟ್ಟಿದ್ದರು. ಪ್ರತಿಯೊಂದು ಕುಲಕ್ಕೂ ಸ್ವಲ್ಪಸ್ವಲ್ಪ ಪ್ರದೇಶ ದೊರೆಯಿತು. ಆದರೆ ಲೇವಿ ಕುಲದ ಜನರಿಗೆ ಯಾವ ಪ್ರದೇಶವನ್ನೂ ಕೊಡಲಿಲ್ಲ. ಅವರಿಗೆ ವಾಸಿಸಲು ಕೆಲವು ಊರುಗಳನ್ನು ಮಾತ್ರ ಕೊಡಲಾಯಿತು. ಈ ಊರುಗಳು ಪ್ರತಿಯೊಂದು ಕುಲದ ಜನರ ಪ್ರದೇಶದಲ್ಲಿ ಇದ್ದವು. ಅವರ ಪಶುಗಳಿಗಾಗಿ ಹುಲ್ಲುಗಾವಲುಗಳನ್ನು ಕೊಡಲಾಯಿತು. ಇಸ್ರೇಲರ ಕುಲಗಳಿಗೆ ಪ್ರದೇಶವನ್ನು ಹೇಗೆ ಹಂಚಬೇಕೆಂಬುದನ್ನು ಯೆಹೋವನು ಮೋಶೆಗೆ ಹೇಳಿದ್ದನು. ಆತನು ಆಜ್ಞಾಪಿಸಿದ ರೀತಿಯಲ್ಲಿಯೇ ಇಸ್ರೇಲರು ಪ್ರದೇಶವನ್ನು ಹಂಚಿಕೊಂಡರು.
ಕಾಲೇಬನಿಗೆ ದೊರೆತ ಪ್ರದೇಶ
ಒಂದು ದಿವಸ ಯೆಹೂದ ಕುಲದ ಕೆಲವರು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಬಳಿಗೆ ಬಂದರು. ಅವರಲ್ಲಿ ಕನಿಜ್ಜೀಯನೂ, ಯೆಫುನ್ನೆಯ ಮಗನೂ ಆದ ಕಾಲೇಬನು ಒಬ್ಬನಾಗಿದ್ದನು. ಕಾಲೇಬನು ಯೆಹೋಶುವನಿಗೆ, “ಕಾದೇಶ್‌ಬರ್ನೇಯದಲ್ಲಿ ಯೆಹೋವನು ತನ್ನ ಸೇವಕನಾದ* ಮೋಶೆಯೊಂದಿಗೆ ನಮ್ಮಿಬ್ಬರ ವಿಷಯವಾಗಿ ಮಾತಾಡಿದ್ದು ನಿನಗೆ ನೆನಪಿದೆಯಷ್ಟೇ. ಯೆಹೋವನ ಸೇವಕನಾದ ಮೋಶೆಯು, ಈ ದೇಶದಲ್ಲಿ ಗೂಢಚರ್ಯ ಮಾಡುವುದಕ್ಕೆ ನನ್ನನ್ನು ಕಳುಹಿಸಿದ್ದನು. ಆಗ ನನಗೆ ನಲವತ್ತು ವರ್ಷವಾಗಿತ್ತು. ನಾನು ಹಿಂತಿರುಗಿ ಬಂದಾಗ ಈ ದೇಶದ ಬಗ್ಗೆ ದೇವರ ವಾಗ್ದಾನಗಳನ್ನು ನಂಬಿ ಯಥಾರ್ಥವಾದ ಸಂಗತಿಗಳನ್ನು ಮೋಶೆಗೆ ಹೇಳಿದೆ. ನನ್ನ ಜೊತೆಯಲ್ಲಿ ಬಂದ ಬೇರೆಯವರು ಭಯವನ್ನುಂಟುಮಾಡುವ ಸಂಗತಿಗಳನ್ನು ಹೇಳಿದರು. ಆದರೆ ಯೆಹೋವನು ಆ ಭೂಮಿಯನ್ನು ನಮಗೆ ಕೊಡುತ್ತಾನೆಂದು ನಾನು ನಿಜವಾಗಿ ನಂಬಿದ್ದೆ. ಆದ್ದರಿಂದ ಮೋಶೆಯು ಅಂದು ನನಗೆ, ‘ನೀನು ಸಂಚರಿಸಿ ನೋಡಿದ ಆ ಭೂಮಿಯು ನಿನ್ನ ಸ್ವಂತ ಭೂಮಿಯಾಗುತ್ತದೆ. ನಿನ್ನ ಮಕ್ಕಳು ಶಾಶ್ವತವಾಗಿ ಅದರ ಸ್ವಾಸ್ತ್ಯವನ್ನು ಹೊಂದಿರುತ್ತಾರೆ. ನೀನು ನನ್ನ ದೇವರಾದ ಯೆಹೋವನಲ್ಲಿ ನಿಜವಾದ ನಂಬಿಕೆ ಇಟ್ಟಿದ್ದಕ್ಕಾಗಿ ಆ ಪ್ರದೇಶವನ್ನು ನಿನಗೆ ಕೊಡುತ್ತೇನೆ’ ಎಂದು ವಾಗ್ದಾನ ಮಾಡಿದನು.
10 “ಯೆಹೋವನು ತಾನು ಹೇಳಿದಂತೆ ನನ್ನನ್ನು ನಲವತ್ತೈದು ವರ್ಷ ಜೀವಂತವಾಗಿ ಉಳಿಸಿದ್ದಾನೆ. ಆ ಸಮಯದಲ್ಲಿ ನಾವೆಲ್ಲರು ಅರಣ್ಯದಲ್ಲಿ ಸುತ್ತಾಡಿದೆವು. ಈಗ ನಾನು ಎಂಭತ್ತೈದು ವರ್ಷದವನಾಗಿದ್ದೇನೆ. 11 ಮೋಶೆಯು ನನ್ನನ್ನು ಕಳುಹಿಸಿ ಕೊಟ್ಟಾಗ ನಾನು ದೃಢಕಾಯನಾಗಿದ್ದಂತೆಯೇ ಈಗಲೂ ಸಹ ದೃಢಕಾಯನಾಗಿದ್ದೇನೆ. ಆಗ ನಾನು ಯುದ್ಧಮಾಡಲು ಹೇಗೆ ಸಿದ್ಧವಾಗಿರುತ್ತಿದ್ದೆನೋ ಅದೇ ರೀತಿ ಈಗಲೂ ಸಿದ್ಧನಾಗಿದ್ದೇನೆ. 12 ಆದ್ದರಿಂದ ಯೆಹೋವನು ನನಗೆ ಬಹಳ ಹಿಂದೆಯೇ ವಾಗ್ದಾನ ಮಾಡಿದ್ದ ಬೆಟ್ಟಪ್ರದೇಶವನ್ನು ಈಗ ನನಗೆ ಕೊಡು. ಬಲಿಷ್ಠರಾದ ಅನಾಕವಂಶಸ್ಥರು ವಾಸವಾಗಿರುವ ಆ ಪಟ್ಟಣಗಳು ಬಹಳ ದೊಡ್ಡದಾಗಿವೆಯೆಂದೂ ಸುಭದ್ರವಾದವುಗಳೆಂದೂ ನೀನು ಕೇಳಿರುವೆ. ಆದರೆ ಯೆಹೋವನು ನನ್ನೊಂದಿಗಿರುವುದರಿಂದ ಆತನು ಹೇಳಿದಂತೆಯೇ ಆ ಪ್ರದೇಶವನ್ನು ನಾನು ತೆಗೆದುಕೊಳ್ಳುತ್ತೇನೆ” ಅಂದನು.
13 ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ ಹೆಬ್ರೋನ್ ನಗರವನ್ನು ಅವನಿಗೆ ಸ್ವಾಸ್ತ್ಯವಾಗಿ ಕೊಟ್ಟನು. 14 ಆ ನಗರ ಈಗಲೂ ಕೆನಿಜ್ಜೀಯನಾದ ಯೆಫುನ್ನೆಯ ಮಗನಾದ ಕಾಲೇಬನ ವಂಶದವರ ಸ್ವಾಸ್ತ್ಯವಾಗಿದೆ. ಏಕೆಂದರೆ ಅವನು ಇಸ್ರೇಲಿನ ದೇವರಾದ ಯೆಹೋವನನ್ನು ನಂಬಿದ್ದನು ಮತ್ತು ಆತನ ಆಜ್ಞೆಯನ್ನು ಪಾಲಿಸಿದನು. 15 ಹಿಂದೆ ಆ ನಗರದ ಹೆಸರು ಕಿರ್ಯಾತ್ ಅರ್ಬ ಎಂದಿತ್ತು. ಅನಾಕ ವಂಶದವರಲ್ಲಿ ಶ್ರೇಷ್ಠನಾದ ಅರ್ಬ ಎಂಬವನ ಸ್ಮರಣಾರ್ಥವಾಗಿ ಆ ನಗರಕ್ಕೆ ಅವನ ಹೆಸರನ್ನೇ ಇಡಲಾಗಿತ್ತು.
ಇದಾದ ಮೇಲೆ, ಆ ಪ್ರದೇಶದಲ್ಲಿ ಶಾಂತಿ ನೆಲೆಸಿತು.
* 14:6 ತನ್ನ ಸೇವಕ ಅಕ್ಷರಶಃ, “ದೇವ ಮನುಷ್ಯ.”