13
ಬೇತೇಲಿಗೆ ದೇವರ ಶಾಪ
1 ಯೆಹೂದ ದೇಶದವನಾದ ಒಬ್ಬ ದೇವಮನುಷ್ಯನು ಯೆಹೋವನ ಆಜ್ಞೆಯಂತೆ ಬೇತೇಲಿಗೆ ಬಂದನು. ಆಗ ಯಾರೊಬ್ಬಾಮನು ಧೂಪವನ್ನು ಅರ್ಪಿಸುತ್ತಾ, ಯಜ್ಞವೇದಿಕೆಯ ಹತ್ತಿರ ನಿಂತಿದ್ದನು.
2 ಯಜ್ಞವೇದಿಕೆಯ ವಿರುದ್ಧ ಮಾತನಾಡುವಂತೆ ಆ ದೇವಮನುಷ್ಯನಿಗೆ ಯೆಹೋವನು ಆಜ್ಞಾಪಿಸಿದನು. ಆಗ ಅವನು ಹೇಳಿದ್ದೇನೆಂದರೆ:
“ಯಜ್ಞವೇದಿಕೆಯೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ: ‘ದಾವೀದನ ವಂಶದಲ್ಲಿ ಯೋಷೀಯನೆಂಬ ಮಗನು ಹುಟ್ಟುವನು. ಈಗ ಈ ಪೂಜಾಸ್ಥಳಗಳಲ್ಲಿ ಧೂಪಸುಡುತ್ತಿರುವ ಈ ಯಾಜಕರನ್ನು ಅವನು ಹಿಡಿದು ಅವರನ್ನು ನಿನ್ನ ಮೇಲೆಯೇ ಕೊಲ್ಲುವನು; ಈಗ ನಿನ್ನ ಮೇಲೆ ಧೂಪಸುಡುತ್ತಿರುವ ಯಾಜಕರನ್ನು ಅವನು ಹಿಡಿದು ಅವರ ಮೂಳೆಗಳನ್ನು ನಿನ್ನ ಮೇಲೆ ಸುಡುವನು.’ ”
3 ಇದಲ್ಲದೆ ದೇವಮನುಷ್ಯನು ಜನರಿಗೆ, “ಯೆಹೋವನು ಇದರ ಬಗ್ಗೆ ನನಗೆ ಹೇಳಿರುವ ಗುರುತೇನೆಂದರೆ, ‘ಯಜ್ಞವೇದಿಕೆಯು ಒಡೆದುಹೋಳಾಗುವುದು, ಬೂದಿಯು ನೆಲದ ಮೇಲೆ ಚೆಲ್ಲಿಹೋಗುವುದು’ ” ಎಂದನು.
4 ಬೇತೇಲಿನ ಯಜ್ಞವೇದಿಕೆಯನ್ನು ಕುರಿತು ದೇವಮನುಷ್ಯನು ಹೇಳಿದ ಸಂದೇಶವು ರಾಜನಾದ ಯಾರೊಬ್ಬಾಮನಿಗೆ ಕೇಳಿಸಿತು. ಅವನು ತನ್ನ ಕೈಯನ್ನು ಯಜ್ಞವೇದಿಕೆಯಿಂದ ಥಟ್ಟನೆ ತೆಗೆದು, ಆ ಮನುಷ್ಯನ ಕಡೆಗೆ ಗುರಿಮಾಡಿ, “ಆ ಮನುಷ್ಯನನ್ನು ಹಿಡಿಯಿರಿ!” ಎಂದು ಹೇಳಿದನು. ಆದರೆ ರಾಜನು ಇದನ್ನು ಹೇಳಿದಾಗ, ಅವನ ಕೈಗೆ ಲಕ್ವ ಹೊಡೆಯಿತು. ಅವನು ಅದನ್ನು ಚಲಿಸಲಾಗಲಿಲ್ಲ,
5 ಯಜ್ಞವೇದಿಕೆಯೂ ಒಡೆದು ಚೂರಾಯಿತು. ಅದರ ಮೇಲಿನ ಬೂದಿಯು ನೆಲದ ಮೇಲೆ ಚೆಲ್ಲಿಹೋಯಿತು. ದೇವರೇ ಆಜ್ಞಾಪಿಸಿದನೆಂದು ದೇವಮನುಷ್ಯನು ಹೇಳಿದ ಸಂಗತಿಗಳಿಗೆ ಇದೇ ಗುರುತಾಗಿತ್ತು.
6 ನಂತರ ರಾಜನಾದ ಯಾರೊಬ್ಬಾಮನು ದೇವಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನಲ್ಲಿ ನನಗಾಗಿ ಪ್ರಾರ್ಥಿಸು. ನನ್ನ ಕೈಯನ್ನು ಗುಣಪಡಿಸುವಂತೆ ಯೆಹೋವನಲ್ಲಿ ಪ್ರಾರ್ಥಿಸು” ಎಂದನು.
ದೇವಮನುಷ್ಯನು ಯೆಹೋವನಿಗೆ ಪ್ರಾರ್ಥಿಸಿದನು. ಆಗ ರಾಜನ ಕೈ ಗುಣವಾಯಿತು. ಅದು ಮತ್ತೆ ಮೊದಲಿನಂತೆ ಆಯಿತು.
7 ಆಗ ರಾಜನು ದೇವಮನುಷ್ಯನಿಗೆ, “ದಯವಿಟ್ಟು ನನ್ನೊಡನೆ ಮನೆಗೆ ಬಾ. ನನ್ನೊಡನೆ ಊಟಮಾಡು. ನಾನು ನಿನಗೆ ಒಂದು ಕಾಣಿಕೆಯನ್ನು ಕೊಡುತ್ತೇನೆ” ಎಂದು ಹೇಳಿದನು.
8 ಆದರೆ ದೇವಮನುಷ್ಯನು ರಾಜನಿಗೆ, “ನಾನು ನಿನ್ನೊಡನೆ ಮನೆಗೆ ಬರುವುದಿಲ್ಲ! ನೀನು ನಿನ್ನ ಅರ್ಧರಾಜ್ಯವನ್ನು ಕೊಟ್ಟರೂ ನಾನು ಬರುವುದಿಲ್ಲ! ನಾನು ಈ ಸ್ಥಳದಲ್ಲಿ ಏನನ್ನೂ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ.
9 ನಾನು ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದೆಂದು ಯೆಹೋವನು ನನಗೆ ಆಜ್ಞಾಪಿಸಿದ್ದಾನೆ. ನಾನು ಇಲ್ಲಿಗೆ ಬಂದ ರಸ್ತೆಯಲ್ಲಿ ಮತ್ತೆ ಹಿಂದಿರುಗಿ ಹೋಗಬಾರದೆಂದು ಯೆಹೋವನು ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.
10 ಆದ್ದರಿಂದ ಅವನು ಬೇರೆ ರಸ್ತೆಯಲ್ಲಿ ಹೋದನು. ಅವನು ಬೇತೇಲಿಗೆ ಬಂದ ರಸ್ತೆಯಲ್ಲಿ ಮತ್ತೆ ಹಿಂದಿರುಗಿಹೋಗಲಿಲ್ಲ.
11 ಬೇತೇಲಿನಲ್ಲಿ ಒಬ್ಬ ವಯಸ್ಸಾದ ಪ್ರವಾದಿಯು ನೆಲೆಸಿದ್ದನು. ಬೇತೇಲಿನಲ್ಲಿ ದೇವಮನುಷ್ಯನು ಮಾಡಿದ್ದನ್ನು ಅವನ ಮಕ್ಕಳು ಬಂದು ಅವನಿಗೆ ಹೇಳಿದರು. ದೇವಮನುಷ್ಯನು ರಾಜನಾದ ಯಾರೊಬ್ಬಾಮನಿಗೆ ಹೇಳಿದುದ್ದನ್ನು ಅವರು ತಮ್ಮ ತಂದೆಗೆ ಹೇಳಿದರು.
12 ಆ ವಯಸ್ಸಾದ ಪ್ರವಾದಿಯು, “ಅವನು ಬಿಟ್ಟುಹೋಗುವಾಗ ಯಾವ ರಸ್ತೆಯಲ್ಲಿ ಹೋದನು?” ಎಂದು ಕೇಳಿದನು. ಯೆಹೂದ ದೇಶದವನಾದ ದೇವಮನುಷ್ಯನು ಯಾವ ರಸ್ತೆಯಲ್ಲಿ ಹಿಂದಿರುಗಿ ಹೋದನೆಂಬುದನ್ನು ಅವನ ಮಕ್ಕಳು ತಂದೆಗೆ ತೋರಿಸಿದರು.
13 ಆ ಪ್ರವಾದಿಯು ತನ್ನ ಕತ್ತೆಯ ಮೇಲೆ ತಡಿಯೊಂದನ್ನು ಹಾಕಲು ಮಕ್ಕಳಿಗೆ ಹೇಳಿದನು. ಅವರು ಕತ್ತೆಯ ಮೇಲೆ ತಡಿಯನ್ನು ಹಾಕಿದರು. ಆಗ ಆ ಪ್ರವಾದಿಯು ತನ್ನ ಕತ್ತೆಯ ಮೇಲೆ ಹೋದನು.
14 ಆ ಪ್ರವಾದಿಯು ದೇವಮನುಷ್ಯನನ್ನು ಹಿಂಬಾಲಿಸಿ ಹೋಗಿ ಓಕ್ ಮರದ ಕೆಳಗೆ ಕುಳಿತಿದ್ದ ಅವನನ್ನು ಕಂಡು, “ನೀನು ಯೆಹೂದದಿಂದ ಬಂದ ದೇವಮನುಷ್ಯನೋ?” ಎಂದು ಕೇಳಿದನು.
ದೇವಮನುಷ್ಯನು, “ಹೌದು, ನಾನೇ” ಎಂದನು.
15 ವಯಸ್ಸಾದ ಪ್ರವಾದಿಯು, “ದಯವಿಟ್ಟು ಮನೆಗೆ ಬಂದು ನನ್ನೊಂದಿಗೆ ಊಟಮಾಡು” ಎಂದನು.
16 ಆದರೆ ದೇವಮನುಷ್ಯನು, “ನಾನು ನಿನ್ನ ಜೊತೆಯಲ್ಲಿ ಮನೆಗೆ ಬರಲು ಸಾಧ್ಯವಿಲ್ಲ. ನಾನು ಈ ಸ್ಥಳದಲ್ಲಿ ನಿನ್ನೊಂದಿಗೆ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ.
17 ಯೆಹೋವನು ನನಗೆ, ‘ನೀನು ಆ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಕೂಡದು; ನೀನು ಅಲ್ಲಿಗೆ ಹೋದ ರಸ್ತೆಯಲ್ಲಿ ಮತ್ತೆ ಹಿಂದಿರುಗಬಾರದು’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಿಸಿದನು.
18 ಆಗ ಆ ಪ್ರವಾದಿಯು, “ಆದರೆ ನಾನೂ ನಿನ್ನಂತೆಯೇ ಒಬ್ಬ ಪ್ರವಾದಿ” ಎಂದು ಹೇಳಿದನು. ನಂತರ ವಯಸ್ಸಾದ ಪ್ರವಾದಿಯು ಅವನಿಗೆ “ಯೆಹೋವನಿಂದ ಒಬ್ಬ ದೇವದೂತನು ನನ್ನ ಬಳಿಗೆ ಬಂದಿದ್ದನು. ಆ ದೂತನು ನಿನ್ನನ್ನು ನನ್ನ ಮನೆಗೆ ಕರೆತರಲು ನಿನ್ನೊಂದಿಗೆ ಅನ್ನಪಾನಗಳನ್ನು ತೆಗೆದುಕೊಳ್ಳಲು ನನಗೆ ತಿಳಿಸಿದನು” ಎಂದು ಸುಳ್ಳು ಹೇಳಿದನು.
19 ಆದ್ದರಿಂದ ಆ ಪ್ರವಾದಿಯ ಮನೆಗೆ ದೇವಮನುಷ್ಯನು ಹೋಗಿ, ಅವನ ಸಂಗಡ ಅನ್ನಪಾನಗಳನ್ನು ತೆಗೆದುಕೊಂಡನು.
20 ಅವರು ಮೇಜಿನ ಮುಂದೆ ಕುಳಿತಿದ್ದಾಗ, ಯೆಹೋವನು ಆ ಪ್ರವಾದಿಯೊಂದಿಗೆ ಮಾತನಾಡಿದನು.
21 ಆ ಪ್ರವಾದಿಯು ಯೆಹೂದ ದೇಶದವನಾದ ದೇವಮನುಷ್ಯನಿಗೆ, “ಯೆಹೋವನು ಹೇಳುವುದೇನೆಂದರೆ, ನೀನು ಆತನಿಗೆ ವಿಧೇಯನಾಗಲಿಲ್ಲ. ಆತನ ಆಜ್ಞೆಯನ್ನು ನೀನು ಅನುಸರಿಸಲಿಲ್ಲ.
22 ಈ ಸ್ಥಳದಲ್ಲಿ ನೀನು ಅನ್ನಪಾನಗಳನ್ನು ತೆಗೆದುಕೊಳ್ಳಕೂಡದೆಂದು ಯೆಹೋವನು ನಿನಗೆ ಆಜ್ಞಾಪಿಸಿದ್ದನು. ಆದರೆ ನೀನು ಹಿಂದಿರುಗಿಬಂದು ಅನ್ನಪಾನಗಳನ್ನು ತೆಗೆದುಕೊಂಡೆ. ಆದ್ದರಿಂದ ನಿನ್ನ ವಂಶದ ಸ್ಮಶಾನದಲ್ಲಿ ನಿನ್ನ ದೇಹವನ್ನು ಸಮಾಧಿಮಾಡಲಾಗುವುದಿಲ್ಲ ಎಂದು ಯೆಹೋವನು ಹೇಳುತ್ತಾನೆ” ಎಂದನು.
23 ದೇವಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡ ನಂತರ ಆ ಪ್ರವಾದಿಯು ಅವನಿಗಾಗಿ ಕತ್ತೆಯ ಮೇಲೆ ತಡಿಯನ್ನು ಹಾಕಿದನು. ದೇವಮನುಷ್ಯನು ಅಲ್ಲಿಂದ ಹೊರಟನು.
24 ಅವನು ತನ್ನ ಮನೆಗೆ ಹಿಂತಿರುಗಿ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಸಿಂಹವು ಅವನ ಮೇಲೆರಗಿ ಅವನನ್ನು ಕೊಂದುಹಾಕಿತು. ಪ್ರವಾದಿಯ ದೇಹವು ರಸ್ತೆಯ ಮೇಲೆ ಬಿದ್ದಿತ್ತು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ನಿಂತಿದ್ದವು.
25 ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಲವರು ಆ ದೇಹವನ್ನೂ ಮತ್ತು ಆ ದೇಹದ ಬಳಿ ನಿಂತಿದ್ದ ಸಿಂಹವನ್ನೂ ನೋಡಿದರು. ಆ ಜನರು ಪ್ರವಾದಿಯು ವಾಸಿಸುತ್ತಿದ್ದ ನಗರಕ್ಕೆ ಬಂದು, ಅವರು ರಸ್ತೆಯ ಮೇಲೆ ಕಂಡದ್ದನ್ನು ಹೇಳಿದರು.
26 ಆ ಪ್ರವಾದಿಯು ಆ ಮನುಷ್ಯನನ್ನು ಮೋಸದಿಂದ ಕರೆದು ತಂದಿದ್ದನು. ಅವನಿಗೆ ಸಂಭವಿಸಿದ್ದನ್ನು ಕೇಳಿದಾಗ ಅವನು, “ಯೆಹೋವನ ಆಜ್ಞೆಗಳನ್ನು ಅನುಸರಿಸದಿದ್ದ ದೇವಮನುಷ್ಯನೇ ಅವನಾಗಿರಬೇಕು. ಅವನನ್ನು ಕೊಲ್ಲಲು ಯೆಹೋವನು ಸಿಂಹವನ್ನು ಕಳುಹಿಸಿದನು. ಹೀಗೆ ಮಾಡುವುದಾಗಿ ಯೆಹೋವನೇ ಹೇಳಿದ್ದನು” ಎಂದನು.
27 ನಂತರ ಆ ಪ್ರವಾದಿಯು ತನ್ನ ಮಕ್ಕಳಿಗೆ, “ನನ್ನ ಕತ್ತೆಯ ಮೇಲೆ ತಡಿಯೊಂದನ್ನು ಹಾಕಿ” ಎಂದು ಹೇಳಿದನು. ಆಗ ಅವನ ಮಕ್ಕಳು ಕತ್ತೆಯ ಮೇಲೆ ತಡಿಯನ್ನು ಹಾಕಿದರು.
28 ಪ್ರವಾದಿಯು ಹೋಗಿ ರಸ್ತೆಯ ಮೇಲೆ ಬಿದ್ದಿರುವ ದೇಹವನ್ನು ಕಂಡನು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ಇನ್ನೂ ನಿಂತಿದ್ದವು. ಸಿಂಹವು ಆ ದೇಹವನ್ನು ತಿಂದಿರಲಿಲ್ಲ ಮತ್ತು ಕತ್ತೆಗೆ ತೊಂದರೆಯನ್ನೂ ಮಾಡಿರಲಿಲ್ಲ.
29 ಪ್ರವಾದಿಯು ಆ ದೇಹವನ್ನು ಕತ್ತೆಯ ಮೇಲೆ ಹಾಕಿದನು. ಸತ್ತವನಿಗಾಗಿ ರೋದಿಸಲು ಮತ್ತು ಅದನ್ನು ಸಮಾಧಿಮಾಡಲು ಆ ದೇಹವನ್ನು ನಗರಕ್ಕೆ ತಂದನು.
30 ಪ್ರವಾದಿಯು ತನ್ನ ಕುಟುಂಬದ ಸ್ಮಶಾನದಲ್ಲಿ ಆ ಮನುಷ್ಯನ ದೇಹವನ್ನು ಸಮಾಧಿ ಮಾಡಿದನು. ಪ್ರವಾದಿಯು ಅವನಿಗಾಗಿ ಗೋಳಾಡುತ್ತಾ, “ಅಯ್ಯೋ, ನನ್ನ ಸೋದರನೇ!” ಎಂದು ಹೇಳಿದನು.
31 ಹೀಗೆ ಪ್ರವಾದಿಯು ಆ ದೇಹವನ್ನು ಸಮಾಧಿ ಮಾಡಿದನು. ನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ, ನನ್ನನ್ನು ಅದೇ ಸ್ಮಶಾನದಲ್ಲಿ ಸಮಾಧಿಮಾಡಿ. ಅವನ ಪಕ್ಕದಲ್ಲೇ ನನ್ನ ಮೂಳೆಗಳನ್ನೂ ಹಾಕಿರಿ.
32 ಅವನ ಮೂಲಕ ಯೆಹೋವನು ಹೇಳಿದ ಸಂಗತಿಗಳು ಖಂಡಿತವಾಗಿಯೂ ನಿಜವಾಗುತ್ತವೆ. ಬೇತೇಲಿನ ಯಜ್ಞವೇದಿಕೆಯ ವಿರುದ್ಧವಾಗಿಯೂ ಸಮಾರ್ಯದ ಇತರ ಪಟ್ಟಣಗಳಲ್ಲಿರುವ ಉನ್ನತಸ್ಥಳಗಳ ವಿರುದ್ಧವಾಗಿಯೂ ಯೆಹೋವನು ಅವನ ಮೂಲಕವಾಗಿ ಮಾತನಾಡಿದನು” ಎಂದು ಹೇಳಿದನು.
33 ರಾಜನಾದ ಯಾರೊಬ್ಬಾಮನು ಬದಲಾವಣೆಯಾಗಲಿಲ್ಲ. ಅವನು ಕೆಟ್ಟಕಾರ್ಯಗಳನ್ನು ಮಾಡುತ್ತಲೇ ಇದ್ದನು. ಅವನು ಬೇರೆಬೇರೆ ಕುಲಗಳಿಂದ ಯಾಜಕರನ್ನು ಆರಿಸಿಕೊಳ್ಳುತ್ತಲೇ ಇದ್ದನು. ಆ ಯಾಜಕರು ಎತ್ತರದ ಸ್ಥಳಗಳಲ್ಲಿ ಸೇವೆಯನ್ನು ಮಾಡುತ್ತಿದ್ದರು. ಯಾಜಕನಾಗಬೇಕೆಂದು ಯಾವ ವ್ಯಕ್ತಿಯಾದರೂ ಇಚ್ಛಿಸಿದರೆ, ಯಾಜಕನಾಗಲು ಅವನಿಗೆ ಅವಕಾಶ ಕಲ್ಪಿಸುತ್ತಿದ್ದನು.
34 ಅವನ ರಾಜ್ಯವು ವಿನಾಶಗೊಳ್ಳಲು ಮತ್ತು ಹಾಳಾಗಲು ಆ ಪಾಪವೇ ಕಾರಣವಾಯಿತು.