2
ದಾವೀದ ರಾಜನ ಮರಣ
1 ದಾವೀದನು ಸಾಯುವ ಕಾಲವು ಹತ್ತಿರವಾಯಿತು. ಆದ್ದರಿಂದ ದಾವೀದನು ಸೊಲೊಮೋನನೊಂದಿಗೆ ಮಾತನಾಡುತ್ತಾ, ಅವನಿಗೆ,
2 “ಎಲ್ಲರಂತೆ ನನಗೂ ಸಾಯುವ ಕಾಲ ಸಮೀಪಿಸಿತು. ನೀನಾದರೋ ಬಲಿಷ್ಠನಾಗಿರು; ಧೈರ್ಯವಂತನಾಗಿರು.
3 ನಿನ್ನ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ಎಚ್ಚರಿಕೆಯಿಂದ ಅನುಸರಿಸು. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಆಜ್ಞೆಗಳಿಗೂ ಕಟ್ಟಳೆಗಳಿಗೂ ನಿರ್ಣಯಗಳಿಗೂ ಒಡಂಬಡಿಕೆಗಳಿಗೂ ವಿಧೇಯನಾಗಿರು. ಆಗ ನೀನು ನಿನ್ನ ಎಲ್ಲ ಕೆಲಸಕಾರ್ಯಗಳಲ್ಲೂ ನೀನು ಹೋಗುವ ಎಲ್ಲಾ ಕಡೆಗಳಲ್ಲೂ ಯಶಸ್ಸನ್ನು ಗಳಿಸುವೆ.
4 ನೀನು ಯೆಹೋವನಿಗೆ ವಿಧೇಯನಾದರೆ, ಆಗ ಯೆಹೋವನು ನನಗೆ ಮಾಡಿದ ವಾಗ್ದಾನವನ್ನು ಈಡೇರಿಸುವನು. ಯೆಹೋವನು ನನಗೆ ಈ ರೀತಿ ವಾಗ್ದಾನ ಮಾಡಿರುವನು: ‘ನಿನ್ನ ಮಕ್ಕಳು ನಂಬಿಗಸ್ತರಾಗಿ ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನನ್ನ ಆಜ್ಞೆಗಳಿಗೆ ವಿಧೇಯರಾಗಿ ಜೀವಿಸುವುದಾಗಿದ್ದರೆ, ನಿನ್ನ ವಂಶದವರಲ್ಲಿ ಒಬ್ಬನು ಯಾವಾಗಲೂ ಇಸ್ರೇಲಿನ ಜನರನ್ನು ಆಳುವವನಾಗಿರುತ್ತಾನೆ.’ ”
5 “ಚೆರೂಯಳ ಮಗನಾದ ಯೋವಾಬನು ನನಗೆ ಮಾಡಿದ್ದನ್ನು ಸಹ ನೀನು ಜ್ಞಾಪಿಸಿಕೊ. ಇಸ್ರೇಲಿನ ಇಬ್ಬರು ಸೇನಾಧಿಪತಿಗಳನ್ನು ಅವನು ಕೊಂದುಹಾಕಿದನು. ಅವರು ಯಾರೆಂದರೆ: ನೇರನ ಮಗನಾದ ಅಬ್ನೇರನು ಮತ್ತು ಯೆತೆರನ ಮಗನಾದ ಅಮಾಸನು. ಈ ಜನರ ರಕ್ತವು ಅವನ ಸೊಂಟಪಟ್ಟಿಯ ಕತ್ತಿ ಹಾಗೂ ಯುದ್ಧಕಾಲದಲ್ಲಿ ತೊಡುವ ಪಾದರಕ್ಷೆಗಳ ಮೇಲೆ ಚಿಮ್ಮಿತು. ಶಾಂತಿಯ ಕಾಲದಲ್ಲಿ ಅವನು ಅವರನ್ನು ಕೊಂದುಹಾಕಿದನು. ಆದ್ದರಿಂದ ನಾನು ಅವನನ್ನು ದಂಡಿಸಬೇಕಾಗಿತ್ತು.
6 ಆದರೆ ಈಗ ನೀನು ರಾಜನಾಗಿರುವೆ. ಆದ್ದರಿಂದ ನಿನ್ನ ಜ್ಞಾನಕ್ಕೆ ಸರಿತೋಚಿದ ರೀತಿಯಲ್ಲಿ ನೀನು ಅವನನ್ನು ದಂಡಿಸು. ಆದರೆ ನೀನು ಅವನನ್ನು ಖಂಡಿತವಾಗಿ ಕೊಲ್ಲಲೇಬೇಕು. ಅವನು ಮುದಿತನದಲ್ಲಿ ಸಮಾಧಾನದಿಂದ ಸಾಯಲು ಬಿಡಬೇಡ!”
7 “ಗಿಲ್ಯಾದಿನವನಾದ ಬರ್ಜಿಲ್ಲ್ಯೆಯನ ಮಕ್ಕಳಿಗೆ ದಯೆಯನ್ನು ತೋರು. ಅವರು ನಿನಗೆ ಸ್ನೇಹಿತರಾಗಿರಲು ಮತ್ತು ನಿನ್ನ ಪಂಕ್ತಿಯಲ್ಲಿ ಊಟಮಾಡಲು ಅವಕಾಶ ಮಾಡು. ನಾನು ನಿನ್ನ ಸೋದರನಾದ ಅಬ್ಷಾಲೋಮನಿಂದ ಓಡಿಹೋದಾಗ ಅವರು ನನಗೆ ಸಹಾಯ ಮಾಡಿದರು.
8 “ಗೇರನ ಮಗನಾದ ಶಿಮ್ಮಿಯು ನಿನ್ನೊಡನೆ ಇಲ್ಲಿದ್ದಾನೆಂಬುದನ್ನು ಜ್ಞಾಪಿಸಿಕೊ. ಅವನು ಬಹುರೀಮಿನ ಬೆನ್ಯಾಮೀನ್ ಕುಲದವನು. ನಾನು ಮಹನಯಿಮಿಗೆ ಓಡಿಹೋದ ಆ ದಿನದಂದು ಅವನು ನನ್ನ ವಿರುದ್ಧವಾಗಿ ಬಹಳವಾಗಿ ಶಪಿಸಿದ್ದನ್ನು ಜ್ಞಾಪಿಸಿಕೊ. ನಂತರ ಅವನು ನನ್ನನ್ನು ಜೋರ್ಡನ್ ನದಿಯ ಹತ್ತಿರ ಭೇಟಿಮಾಡಲು ಬಂದನು. ಆದರೆ ನಾನು ಯೆಹೋವನ ಸನ್ನಿಧಿಯಲ್ಲಿ, ‘ಶಿಮ್ಮಿ ನಾನು ನಿನ್ನನ್ನು ಕೊಲ್ಲುವುದಿಲ್ಲ’ ಎಂದು ವಾಗ್ದಾನ ಮಾಡಿದೆನು.
9 ಅವನನ್ನು ದಂಡಿಸದೆ ಬಿಡಬೇಡ. ನೀನು ಬುದ್ಧಿವಂತ! ಅವನಿಗೆ ಏನು ಮಾಡಬೇಕೆಂಬುದು ನಿನಗೆ ತಿಳಿದಿದೆ. ಆದರೆ ಅವನು ಮುದಿತನದಲ್ಲಿ ಸಮಾಧಾನದಿಂದ ಸಾಯಲು ಬಿಡಬೇಡ” ಎಂದು ಹೇಳಿದನು.
10 ನಂತರ ದಾವೀದನು ತೀರಿಕೊಂಡನು. ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು.
11 ದಾವೀದನು ಇಸ್ರೇಲನ್ನು ನಲವತ್ತು ವರ್ಷಗಳ ಕಾಲ ಆಳಿದನು. ಅವನು ಏಳು ವರ್ಷ ಹೆಬ್ರೋನಿನಲ್ಲೂ ಮೂವತ್ತಮೂರು ವರ್ಷ ಜೆರುಸಲೇಮಿನಲ್ಲೂ ಆಡಳಿತ ನಡೆಸಿದನು.
ಸೊಲೊಮೋನ ಮತ್ತು ಅದೋನೀಯ
12 ಈಗ ಸೊಲೊಮೋನನು ತನ್ನ ತಂದೆಯ ಸಿಂಹಾಸನದ ಮೇಲೆ ಕುಳಿತು ಆಡಳಿತ ನಡೆಸತೊಡಗಿದನು. ರಾಜ್ಯವು ಅವನ ಪೂರ್ಣ ಹತೋಟಿಯಲ್ಲಿ ಇತ್ತು.
13 ಆ ಸಮಯದಲ್ಲಿ ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಹತ್ತಿರಕ್ಕೆ ಹೋದನು. ಬತ್ಷೆಬೆಳು, “ನೀನು ಸಮಾಧಾನದಿಂದ ಬಂದೆಯಾ?” ಎಂದು ಅವನನ್ನು ಕೇಳಿದಳು.
ಅದೋನೀಯನು, “ಹೌದು, ಇದು ಸಮಾಧಾನದ ಭೇಟಿಯಾಗಿದೆ.
14 ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದು ಉತ್ತರಿಸಿದನು.
“ಹಾಗಾದರೆ ಹೇಳು” ಎಂದು ಬತ್ಷೆಬೆಳು ಹೇಳಿದಳು.
15 ಅದೋನೀಯನು, “ಒಂದು ಕಾಲದಲ್ಲಿ ರಾಜ್ಯಾಧಿಕಾರವು ನನ್ನದಾಗಿತ್ತೆಂಬುದು ನಿನ್ನ ನೆನಪಿನಲ್ಲಿದೆ. ಇಸ್ರೇಲಿನ ಜನರೆಲ್ಲರೂ ನಾನೇ ಅವರ ರಾಜನೆಂದು ತಿಳಿದಿದ್ದರು. ಆದರೆ ಸಂಗತಿಗಳು ಬದಲಾದವು. ಈಗ ನನ್ನ ಸೋದರನೇ ರಾಜನು. ಯೆಹೋವನು ಅವನನ್ನು ರಾಜನನ್ನಾಗಿ ಆರಿಸಿದನು.
16 ಆದ್ದರಿಂದ ಈಗ ನನ್ನಲ್ಲಿ ಒಂದು ಕೋರಿಕೆಯಿದೆ, ಅದನ್ನು ನೀನು ನಿರಾಕರಿಸಬೇಡ” ಎಂದನು.
ಬತ್ಷೆಬೆಳು, “ನಿನಗೇನು ಬೇಕಾಗಿದೆ?” ಎಂದು ಕೇಳಿದಳು.
17 ಅದೋನೀಯನು, “ರಾಜನಾದ ಸೊಲೊಮೋನನು ನೀನು ಏನನ್ನು ಕೇಳಿದರೂ ಮಾಡುತ್ತಾನೆಂಬುದು ನನಗೆ ತಿಳಿದಿದೆ. ಆದ್ದರಿಂದ, ಶೂನೇಮಿನ ಅಬೀಷಗ್ ಎಂಬ ಸ್ತ್ರೀಯನ್ನು ನನಗೆ ಕೊಡುವಂತೆ ದಯಮಾಡಿ ನೀನು ಅವನನ್ನು ಕೇಳು. ನಾನು ಅವಳನ್ನು ಮದುವೆಯಾಗುತ್ತೇನೆ” ಎಂದು ಹೇಳಿದನು.
18 ಆಗ ಬತ್ಷೆಬೆಳು, “ಒಳ್ಳೆಯದು, ನಾನು ನಿನಗಾಗಿ ರಾಜನೊಂದಿಗೆ ಮಾತನಾಡುತ್ತೇನೆ” ಎಂದು ಹೇಳಿದಳು.
19 ಬತ್ಷೆಬೆಳು ರಾಜನಾದ ಸೊಲೊಮೋನನೊಂದಿಗೆ ಮಾತನಾಡಲು ಹೋದಳು. ಸೊಲೊಮೋನನು ಆಕೆಯನ್ನು ಕಂಡು ಎದ್ದುನಿಂತು ಅವಳಿಗೆ ಬಾಗಿ ನಮಸ್ಕರಿಸಿ, ಸಿಂಹಾಸನದ ಮೇಲೆ ಕುಳಿತನು. ಅವನು ತನ್ನ ತಾಯಿಗಾಗಿ ಮತ್ತೊಂದು ಸಿಂಹಾಸನವನ್ನು ತರಲು ಕೆಲವು ಸೇವಕರಿಗೆ ಹೇಳಿದನು. ನಂತರ ಅವಳು ಅವನ ಬಲಗಡೆಯಲ್ಲಿ ಕುಳಿತಳು.
20 ಬತ್ಷೆಬೆಳು ಅವನಿಗೆ, “ನಿನ್ನಲ್ಲಿ ಒಂದು ಸಣ್ಣ ಕೋರಿಕೆಯಿದೆ, ಅದನ್ನು ದಯವಿಟ್ಟು ನಿರಾಕರಿಸದಿರು” ಎಂದು ಕೇಳಿದಳು.
ರಾಜನು, “ನನ್ನ ತಾಯಿಯೇ, ನಿನ್ನ ಕೋರಿಕೆಯೇನು? ನಾನು ನಿನ್ನ ಕೋರಿಕೆಯನ್ನು ನಿರಾಕರಿಸುವುದಿಲ್ಲ” ಎಂದು ಉತ್ತರಿಸಿದನು.
21 ಆದ್ದರಿಂದ ಬತ್ಷೆಬೆಳು, “ಶೂನೇಮಿನ ಸ್ತ್ರೀಯಾದ ಅಬೀಷಗಳು ನಿನ್ನ ಸೋದರನಾದ ಅದೋನೀಯನನ್ನು ಮದುವೆಯಾಗಲಿ” ಎಂದಳು.
22 ರಾಜನಾದ ಸೊಲೊಮೋನನು ತನ್ನ ತಾಯಿಗೆ, “ಅಬೀಷಗಳನ್ನು ಅವನಿಗೆ ಕೊಡು ಎಂಬುದಾಗಿ ನೀನೇಕೆ ನನ್ನನ್ನು ಕೇಳುತ್ತಿರುವೆ? ಅವನು ನನ್ನ ಹಿರಿಯಣ್ಣನಾಗಿರುವುದರಿಂದ ಅವನನ್ನೇ ರಾಜನನ್ನಾಗಿ ಮಾಡೆಂದು ನೀನು ಕೇಳದಿರುವುದೇಕೆ? ಯಾಜಕನಾದ ಎಬ್ಯಾತಾರನೂ ಯೋವಾಬನೂ ಅವನಿಗೆ ಬೆಂಬಲವನ್ನು ನೀಡಿದರು!” ಎಂದು ಉತ್ತರಿಸಿದನು.
23 ಆಗ ಸೊಲೊಮೋನನು, “ಯೆಹೋವನಾಣೆ, ಅದೋನೀಯನು ಈ ರೀತಿ ನನ್ನನ್ನು ಕೇಳಿದ್ದಕ್ಕಾಗಿ ಅವನು ತನ್ನ ಜೀವವನ್ನೇ ಬೆಲೆಯಾಗಿ ತೆರಬೇಕಾಗುವುದು!
24 ಯೆಹೋವನು ನನ್ನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದನು. ನನ್ನ ತಂದೆಯಾದ ದಾವೀದನ ಸಿಂಹಾಸನವನ್ನು ಆತನು ನನಗೆ ದಯಪಾಲಿಸಿದನು. ಯೆಹೋವನು ತನ್ನ ವಾಗ್ದಾನದಂತೆ, ನನಗೆ ಮತ್ತು ನನ್ನ ವಂಶಿಕರಿಗೆ ರಾಜ್ಯಾಧಿಕಾರವನ್ನು ನೀಡಿದನು. ಅದೋನೀಯನು ಈ ದಿನವೇ ಸಾಯಬೇಕು ಎಂದು ನಾನು ಈ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
25 ರಾಜನಾದ ಸೊಲೊಮೋನನು ಬೆನಾಯನಿಗೆ ಆಜ್ಞಾಪಿಸಿದನು. ಬೆನಾಯನು ಹೋಗಿ ಅದೋನೀಯನನ್ನು ಕೊಂದುಹಾಕಿದನು.
26 ಆಗ ರಾಜನಾದ ಸೊಲೊಮೋನನು ಯಾಜಕನಾದ ಎಬ್ಯಾತಾರನಿಗೆ, “ನಾನು ನಿನ್ನನ್ನು ಕೊಲ್ಲಲೇಬೇಕು. ಆದರೆ ಅಣತೋತಿನಲ್ಲಿರುವ ನಿನ್ನ ಮನೆಗೆ ಹಿಂತಿರುಗಿ ಹೋಗಲು ನಿನಗೆ ಅವಕಾಶ ಕೊಡುತ್ತೇನೆ. ನಾನು ನಿನ್ನನ್ನು ಕೊಲ್ಲುವುದಿಲ್ಲ ಏಕೆಂದರೆ ನನ್ನ ತಂದೆಯಾದ ದಾವೀದನೊಂದಿಗೆ ನಡೆಯುವಾಗ ಯೆಹೋವನ ಪವಿತ್ರಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ನೀನು ಸಹಾಯ ಮಾಡಿದೆ. ನನ್ನ ತಂದೆಯ ಕಷ್ಟದ ದಿನಗಳಲ್ಲೆಲ್ಲಾ ನೀನೂ ಅವನ ಕಷ್ಟಗಳಲ್ಲಿ ಪಾಲುಗಾರನಾಗಿದ್ದದ್ದು ನನಗೆ ತಿಳಿದಿದೆ” ಎಂದು ಹೇಳಿದನು.
27 ಸೊಲೊಮೋನನು ಎಬ್ಯಾತಾರನಿಗೆ, “ನಾನು ನಿನ್ನನ್ನು ಯೆಹೋವನ ಯಾಜಕನಾಗಿ ಸೇವೆಯಲ್ಲಿ ಮುಂದುವರಿಸುವುದಿಲ್ಲ” ಎಂದು ಹೇಳಿದನು. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಇದು ಶೀಲೋವಿನಲ್ಲಿ ದೇವರು ಯಾಜಕನಾದ ಏಲಿಗೂ ಅವನ ಕುಟುಂಬದವರಿಗೂ ಹೇಳಿದಂತೆಯೇ ಆಯಿತು. ಎಬ್ಯಾತಾರನು ಏಲಿಯ ಗೋತ್ರದವನು.
28 ಯೋವಾಬನು ಈ ಸಂಗತಿಯನ್ನು ಕೇಳಿ ಹೆದರಿದನು. (ಅವನು ಅಬ್ಷಾಲೋಮನಿಗೆ ಬೆಂಬಲ ನೀಡಿಲ್ಲದಿದ್ದರೂ ಅದೋನೀಯನಿಗೆ ಬೆಂಬಲ ನೀಡಿದ್ದನು.) ಯೋವಾಬನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು.
29 ಯೋವಾಬನು ಯೆಹೋವನ ಗುಡಾರದಲ್ಲಿ ಯಜ್ಞವೇದಿಕೆಯ ಹತ್ತಿರ ಇದ್ದಾನೆಂದು ಯಾರೋ ಒಬ್ಬನು ರಾಜನಾದ ಸೊಲೊಮೋನನಿಗೆ ತಿಳಿಸಿದನು. ಆದ್ದರಿಂದ ಸೊಲೊಮೋನನು ಬೆನಾಯನಿಗೆ, ಹೋಗಿ ಅವನನ್ನು ಕೊಂದುಬಿಡುವಂತೆ ಆಜ್ಞಾಪಿಸಿದನು.
30 ಬೆನಾಯನು ಯೆಹೋವನ ಗುಡಾರದೊಳಕ್ಕೆ ಹೋಗಿ ಯೋವಾಬನಿಗೆ, “ರಾಜನ ಆಜ್ಞೆಯಂತೆ ‘ಹೊರಗೆ ಬಾ!’ ” ಎಂದು ಹೇಳಿದನು.
ಆದರೆ ಯೋವಾಬನು, “ಇಲ್ಲ, ನಾನಿಲ್ಲೇ ಸಾಯುತ್ತೇನೆ” ಎಂದನು.
ಆದ್ದರಿಂದ ಬೆನಾಯನು ರಾಜನ ಬಳಿಗೆ ಹಿಂದಿರುಗಿ ಯೋವಾಬನು ಹೇಳಿದ್ದನ್ನು ತಿಳಿಸಿದನು.
31 ಆಗ ರಾಜನು ಬೆನಾಯನಿಗೆ, “ಅವನು ಹೇಳಿದಂತೆ ಮಾಡು! ಅವನನ್ನು ಅಲ್ಲಿಯೇ ಕೊಂದುಬಿಡು. ನಂತರ ಅವನನ್ನು ಸಮಾಧಿ ಮಾಡು. ಆಗ ನನ್ನ ಕುಟುಂಬದವರು ಮತ್ತು ನಾನು ಯೋವಾಬನ ದೋಷದಿಂದ ಮುಕ್ತರಾಗುವೆವು. ಮುಗ್ಧ ಜನರು ಯೋವಾಬನಿಂದ ಕೊಲ್ಲಲ್ಪಟ್ಟ ಕಾರಣ ಈ ದೋಷವುಂಟಾಯಿತು.
32 ಯೋವಾಬನು ತನಗಿಂತಲೂ ಬಹಳಷ್ಟು ಉತ್ತಮರಾದ ಇಬ್ಬರನ್ನು ಕೊಂದುಹಾಕಿದನು. ಅವರು ಯಾರೆಂದರೆ, ನೇರನ ಮಗನಾದ ಅಬ್ನೇರ ಮತ್ತು ಯೆತೆರನ ಮಗನಾದ ಅಮಾಸ. ಅಬ್ನೇರನು ಇಸ್ರೇಲಿನ ಸೇನಾಧಿಪತಿಯಾಗಿದ್ದನು; ಅಮಾಸನು ಯೆಹೂದದ ಸೇನಾಧಿಪತಿಯಾಗಿದ್ದನು. ಯೋವಾಬನು ಅವರನ್ನು ಕೊಂದನೆಂಬುದು ಆ ಸಮಯದಲ್ಲಿ ನನ್ನ ತಂದೆಯಾದ ದಾವೀದನಿಗೆ ತಿಳಿಯಲಿಲ್ಲ. ಯೋವಾಬನು ಅವರನ್ನು ಕೊಂದದ್ದರಿಂದ ಯೆಹೋವನು ಅವನನ್ನು ದಂಡಿಸುತ್ತಾನೆ.
33 ಅವರನ್ನು ಕೊಂದ ಅಪರಾಧವು ಯೋವಾಬನ ಮೇಲೆಯೂ ಅವನ ಕುಟುಂಬದ ಮೇಲೆಯೂ ಶಾಶ್ವತವಾಗಿರಲಿ. ಆದರೆ ದಾವೀದನನ್ನೂ ಅವನ ಸಂತತಿಯವರನ್ನೂ ಅವನ ಸಿಂಹಾಸನವನ್ನೂ ಯೆಹೋವನು ಶಾಶ್ವತವಾಗಿ ಆಶೀರ್ವದಿಸಲಿ” ಎಂದು ಹೇಳಿದನು.
34 ಆದ್ದರಿಂದ ಯೆಹೋಯಾದಾವನ ಮಗನಾದ ಬೆನಾಯನು ಯೋವಾಬನನ್ನು ಕೊಂದನು. ಯೋವಾಬನನ್ನು ಅರಣ್ಯದಲ್ಲಿನ ಅವನ ಮನೆಯ ಸಮೀಪದಲ್ಲೇ ಸಮಾಧಿ ಮಾಡಿದರು.
35 ಆಗ ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನ ಸ್ಥಾನದಲ್ಲಿ ಸೇನಾಧಿಪತಿಯನ್ನಾಗಿ ಸೊಲೊಮೋನನು ನೇಮಿಸಿದನು. ಎಬ್ಯಾತಾರನ ಸ್ಥಾನದಲ್ಲಿ ಚಾದೋಕನನ್ನು ನೂತನ ಪ್ರಧಾನಯಾಜಕನನ್ನಾಗಿ ನೇಮಿಸಿದನು.
36 ನಂತರ ರಾಜನು ಶಿಮ್ಮಿಯನ್ನು ಕರೆತರಲು ಕಳುಹಿಸಿದನು. ರಾಜನು ಅವನಿಗೆ, “ಜೆರುಸಲೇಮಿನಲ್ಲಿ ನಿನಗಾಗಿ ಒಂದು ಮನೆಯನ್ನು ನಿರ್ಮಿಸು. ಆ ಮನೆಯಲ್ಲಿ ವಾಸಮಾಡು, ನಗರವನ್ನು ಬಿಟ್ಟುಹೋಗದಿರು.
37 ನೀನು ನಗರವನ್ನು ಬಿಟ್ಟು ಕಿದ್ರೋನ್ ಹೊಳೆಯ ಹಿಂದಕ್ಕೆ ಹೋದರೆ, ನಿನ್ನನ್ನು ಕೊಲ್ಲಲಾಗುವುದು. ಅದು ನಿನ್ನ ಸ್ವಂತ ತಪ್ಪಾಗುವುದು” ಎಂದು ಹೇಳಿದನು.
38 ಅದಕ್ಕೆ ಶಿಮ್ಮಿಯು, “ನನ್ನ ರಾಜನೇ, ನೀನು ಹೇಳಿದಂತೆಯೇ ಆಗಲಿ. ನಾನು ನಿನಗೆ ವಿಧೇಯನಾಗಿರುವೆನು” ಎಂದು ಉತ್ತರಿಸಿದನು. ಹೀಗೆ ಶಿಮ್ಮಿಯು ಬಹು ದಿನಗಳವರೆಗೆ ಜೆರುಸಲೇಮಿನಲ್ಲಿ ವಾಸವಾಗಿದ್ದನು.
39 ಆದರೆ ಮೂರು ವರ್ಷಗಳ ತರುವಾಯ, ಶಿಮ್ಮಿಯ ಇಬ್ಬರು ಗುಲಾಮರು ಗತ್ ನಗರದ ರಾಜನ ಬಳಿಗೆ ಓಡಿಹೋದರು. ಆ ರಾಜನ ಹೆಸರು: ಮಾಕನ ಮಗನಾದ ಆಕೀಷ. ತನ್ನ ಗುಲಾಮರು ಗತ್ ನಗರದಲ್ಲಿರುವುದು ಶಿಮ್ಮಿಗೆ ತಿಳಿಯಿತು.
40 ಆದ್ದರಿಂದ ಶಿಮ್ಮಿಯು ತಡಿಯನ್ನು ತನ್ನ ಕತ್ತೆಯ ಮೇಲೆ ಹಾಕಿಕೊಂಡು, ಗತ್ನ ರಾಜನಾದ ಆಕೀಷನ ಬಳಿಗೆ ಹೋದನು. ಅವನು ತನ್ನ ಗುಲಾಮರನ್ನು ಅಲ್ಲಿ ಕಂಡುಹಿಡಿದು ತನ್ನ ಮನೆಗೆ ಮತ್ತೆ ಕರೆದುಕೊಂಡು ಬಂದನು.
41 ಆದರೆ ಶಿಮ್ಮಿಯು ಜೆರುಸಲೇಮಿನಿಂದ ಗತ್ಗೆ ಹೋಗಿ ಹಿಂದಿರುಗಿ ಬಂದುದ್ದನ್ನು ಯಾರೋ ಒಬ್ಬರು ಸೊಲೊಮೋನನಿಗೆ ತಿಳಿಸಿದರು.
42 ಸೊಲೊಮೋನನು ಶಿಮ್ಮಿಯನ್ನು ಕರೆಯಿಸಿ, “ನೀನು ಜೆರುಸಲೇಮನ್ನು ಬಿಟ್ಟುಹೋದರೆ ಮರಣಶಿಕ್ಷೆಯಾಗುವುದೆಂದು ನಾನು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದೆನು. ನೀನು ಬೇರೆಲ್ಲಾದರೂ ಹೋದರೆ ಅದು ನಿನ್ನ ಸ್ವಂತ ತಪ್ಪಾಗುವುದೆಂದೂ ನಿನ್ನನ್ನು ಕೊಲ್ಲಲಾಗುವುದೆಂದೂ ನಾನು ನಿನ್ನನ್ನು ಎಚ್ಚರಿಸಿದ್ದೆನು. ಅದಕ್ಕೆ ನೀನೂ ಒಪ್ಪಿಗೆ ನೀಡಿ ನನಗೆ ವಿಧೇಯನಾಗಿರುವುದಾಗಿ ತಿಳಿಸಿದ್ದೆ.
43 ನೀನು ದೇವರಿಗೆ ಮಾಡಿದ ಪ್ರಮಾಣವನ್ನು ಯಾಕೆ ಕೈಕೊಳ್ಳಲಿಲ್ಲ? ನೀನು ನನ್ನ ಆಜ್ಞೆಗೆ ಯಾಕೆ ವಿಧೇಯನಾಗಲಿಲ್ಲ?
44 ನೀನು ನನ್ನ ತಂದೆಯಾದ ದಾವೀದನಿಗೆ ವಿರುದ್ಧವಾಗಿ ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ ಎಂಬುದು ನಿನಗೆ ತಿಳಿದಿದೆ. ಈಗ ನಿನ್ನ ಆ ಕೆಟ್ಟಕಾರ್ಯಗಳಿಗಾಗಿ ಯೆಹೋವನು ನಿನ್ನನ್ನು ದಂಡಿಸುತ್ತಾನೆ.
45 ಆದರೆ ಯೆಹೋವನು ನನ್ನನ್ನು ಆಶೀರ್ವದಿಸುತ್ತಾನೆ. ಆತನು ದಾವೀದನ ಸಿಂಹಾಸನವನ್ನು ಎಂದೆಂದಿಗೂ ಸಂರಕ್ಷಿಸುವನು” ಎಂದು ಹೇಳಿದನು.
46 ನಂತರ ರಾಜನು ಶಿಮ್ಮಿಯನ್ನು ಕೊಲ್ಲಲು ಬೆನಾಯನಿಗೆ ಆಜ್ಞಾಪಿಸಿದನು. ಅಂತೆಯೇ, ಬೆನಾಯನು ಅವನನ್ನು ಸಂಹರಿಸಿದನು. ಹೀಗೆ ಸೊಲೊಮೋನನ ರಾಜ್ಯಾಧಿಕಾರವು ಸ್ಥಿರವಾಯಿತು.