9
ಸೊಲೊಮೋನನಿಗೆ ದೇವದರ್ಶನ
1 ಸೊಲೊಮೋನನು ಯೆಹೋವನ ಆಲಯವನ್ನು ಮತ್ತು ತನ್ನ ಅರಮನೆಯನ್ನು ಕಟ್ಟಿ ಮುಗಿಸಿದನು. ಸೊಲೊಮೋನನು ತಾನು ಕಟ್ಟಬೇಕೆಂದು ಅಪೇಕ್ಷಿಸಿದ ಎಲ್ಲವನ್ನು ಕಟ್ಟಿ ಮುಗಿಸಿದನು.
2 ಆಗ ಯೆಹೋವನು ಸೊಲೊಮೋನನಿಗೆ, ಈ ಮುಂಚೆ ಗಿಬ್ಯೋನ್ ಪಟ್ಟಣದಲ್ಲಿ ಪ್ರತ್ಯಕ್ಷನಾದಂತೆ ಮತ್ತೆ ಪ್ರತ್ಯಕ್ಷನಾದನು.
3 ಯೆಹೋವನು ಅವನಿಗೆ ಹೀಗೆ ಹೇಳಿದನು:
“ನಿನ್ನ ಪ್ರಾರ್ಥನೆಯು ನನಗೆ ಕೇಳಿಸಿತು. ನಿನ್ನ ಬಿನ್ನಹಗಳನ್ನು ಆಲಿಸಿದೆನು. ಈ ಆಲಯವನ್ನು ನೀನು ಕಟ್ಟಿಸಿದೆ. ನಾನು ಅದನ್ನು ಪವಿತ್ರಸ್ಥಳವನ್ನಾಗಿ ಮಾಡಿದೆ. ಆದ್ದರಿಂದ ನಾನಿಲ್ಲಿ ಸದಾಕಾಲ ಸನ್ಮಾನಿಸಲ್ಪಡುವೆನು. ನನ್ನ ದೃಷ್ಟಿಯೂ ಮನಸ್ಸೂ ಸದಾ ಅದರ ಮೇಲಿರುತ್ತದೆ.
4 ನಿನ್ನ ತಂದೆಯಾದ ದಾವೀದನು ಸೇವೆಮಾಡಿದಂತೆ ನೀನೂ ನನ್ನ ಸೇವೆಮಾಡಬೇಕು, ಅವನು ನ್ಯಾಯವಂತನಾಗಿದ್ದನು ಮತ್ತು ಯಥಾರ್ಥವಂತನಾಗಿದ್ದನು; ನೀನು ನನ್ನ ನಿಯಮಗಳಿಗೆ ವಿಧೇಯನಾಗಿರಬೇಕು ಮತ್ತು ನಾನು ನಿನಗೆ ಆಜ್ಞಾಪಿಸಿದವುಗಳನ್ನೆಲ್ಲ ಮಾಡಬೇಕು.
5 ನೀನು ಅವುಗಳನ್ನೆಲ್ಲಾ ಕೈಕೊಂಡು ನಡೆದರೆ ಯಾವಾಗಲೂ ನಿನ್ನ ಕುಟುಂಬದ ಯಾವನಾದರೊಬ್ಬನು ಇಸ್ರೇಲಿನ ರಾಜನಾಗಿರುತ್ತಾನೆಂದು ನಾನು ನಿನಗೆ ವಾಗ್ದಾನ ಮಾಡುತ್ತೇನೆ. ನಿನ್ನ ತಂದೆಯಾದ ದಾವೀದನಿಗೆ ನಾನು ಈ ವಾಗ್ದಾನವನ್ನು ಮಾಡಿದ್ದೆನು. ಯಾವಾಗಲೂ ಅವನ ಸಂತತಿಯವರಲ್ಲಿ ಯಾವನಾದರೊಬ್ಬನು ಇಸ್ರೇಲನ್ನು ಆಳುತ್ತಾನೆಂದು ನಾನು ಅವನಿಗೆ ಹೇಳಿದ್ದೆನು.
6-7 “ಆದರೆ ನೀನಾಗಲಿ ನಿನ್ನ ಮಕ್ಕಳಾಗಲಿ ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿದರೆ, ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀನು ಅನುಸರಿಸದಿದ್ದರೆ, ಅನ್ಯದೇವರುಗಳ ಸೇವೆಯನ್ನಾಗಲಿ ಪೂಜೆಯನ್ನಾಗಲಿ ನೀನು ಮಾಡಿದರೆ, ನಾನು ದಯಪಾಲಿಸಿರುವ ದೇಶವನ್ನು ಬಿಟ್ಟುಹೋಗುವಂತೆ ನಾನು ಇಸ್ರೇಲರನ್ನು ಬಲಾತ್ಕರಿಸುತ್ತೇನೆ. ಅನ್ಯಜನರಿಗೆ ಇಸ್ರೇಲರು ಉದಾಹರಣೆಯಾಗುತ್ತಾರೆ. ಅನ್ಯಜನರು ಇಸ್ರೇಲರನ್ನು ಅಪಹಾಸ್ಯ ಮಾಡುತ್ತಾರೆ. ನಾನು ಈ ಆಲಯವನ್ನು ಪವಿತ್ರವನ್ನಾಗಿಸಿದೆ. ಜನರು ನನ್ನನ್ನು ಗೌರವಿಸುವ ಸ್ಥಳ ಅದಾಗಿದೆ. ಆದರೆ ನೀನು ನನ್ನನ್ನು ಅನುಸರಿಸದೆ ಇದ್ದರೆ, ಆಗ ನಾನದನ್ನು ಧೂಳೀಪಟ ಮಾಡುತ್ತೇನೆ.
8 ಈ ಆಲಯವನ್ನು ನಾಶಗೊಳಿಸುತ್ತೇನೆ. ಇದನ್ನು ನೋಡುವ ಪ್ರತಿಯೊಬ್ಬರೂ ವಿಸ್ಮಿತರಾಗುವರು. ‘ಈ ದೇಶಕ್ಕೂ ಈ ಆಲಯಕ್ಕೂ ಇಂತಹ ಭೀಕರ ಕಾರ್ಯವನ್ನು ಯೆಹೋವನು ಏಕೆ ಮಾಡಿದನು?’ ಎಂದು ಜನರು ಕೇಳುತ್ತಾರೆ.
9 ‘ಇದು ಏಕೆ ಸಂಭವಿಸಿತೆಂದರೆ, ಅವರು ತಮ್ಮ ದೇವರಾದ ಯೆಹೋವನನ್ನು ತ್ಯಜಿಸಿದರು. ಆತನು ಅವರ ಪೂರ್ವಿಕರನ್ನು ಈಜಿಪ್ಟಿನಿಂದ ಬರಮಾಡಿದನು. ಆದರೆ ಅವರು ಅನ್ಯದೇವರುಗಳನ್ನು ಅನುಸರಿಸಲು ತೀರ್ಮಾನಿಸಿದರು. ಅವರು ಆ ದೇವರುಗಳ ಪೂಜೆಯನ್ನೂ ಸೇವೆಯನ್ನೂ ಮಾಡಲಾರಂಭಿಸಿದರು. ಆದಕಾರಣವೇ ಈ ಕೆಟ್ಟಕಾರ್ಯಗಳೆಲ್ಲಾ ಅವರಿಗೆ ಸಂಭವಿಸುವಂತೆ ಯೆಹೋವನು ಮಾಡಿದನು’ ಎಂದು ಅನ್ಯಜನರು ಉತ್ತರಿಸುವರು.”
10 ಯೆಹೋವನ ಆಲಯವನ್ನು ಮತ್ತು ರಾಜನ ಅರಮನೆಯನ್ನು ಕಟ್ಟಲು ರಾಜನಾದ ಸೊಲೊಮೋನನಿಗೆ ಇಪ್ಪತ್ತು ವರ್ಷಗಳು ಹಿಡಿಯಿತು.
11 ರಾಜನಾದ ಸೊಲೊಮೋನನು ಇಪ್ಪತ್ತು ವರ್ಷಗಳ ತರುವಾಯ ಗಲಿಲಾಯದ ಇಪ್ಪತ್ತು ಪಟ್ಟಣಗಳನ್ನು ತೂರಿನ ರಾಜನಾದ ಹೀರಾಮನಿಗೆ ಬಿಟ್ಟುಕೊಟ್ಟನು. ಆಲಯವನ್ನು ಮತ್ತು ಅರಮನೆಯನ್ನು ನಿರ್ಮಿಸಲು ಹೀರಾಮನು ಸಹಾಯ ಮಾಡಿದ್ದರಿಂದ ಸೊಲೊಮೋನನು ಹೀರಾಮನಿಗೆ ಈ ಪಟ್ಟಣಗಳನ್ನು ಕೊಟ್ಟನು. ಸೊಲೊಮೋನನು ಅಪೇಕ್ಷಿಸಿದ ದೇವದಾರು ಮರಗಳನ್ನು, ತುರಾಯಿ ಮರಗಳನ್ನು ಮತ್ತು ಬಂಗಾರವನ್ನು ಹೀರಾಮನು ಕೊಟ್ಟಿದ್ದನು.
12 ಸೊಲೊಮೋನನು ಬಿಟ್ಟುಕೊಟ್ಟ ಪಟ್ಟಣಗಳನ್ನು ನೋಡುವುದಕ್ಕಾಗಿ ಹೀರಾಮನು ತೂರಿನಿಂದ ಬಂದನು. ಹೀರಾಮನು ಆ ಪಟ್ಟಣಗಳನ್ನು ನೋಡಿದಾಗ ಅವನಿಗೆ ತೃಪ್ತಿಯಾಗಲಿಲ್ಲ.
13 ರಾಜನಾದ ಹೀರಾಮನು, “ಸಹೋದರನೇ, ನೀನು ನನಗೆ ಕೊಟ್ಟಿರುವ ಪಟ್ಟಣಗಳು ಏಕೆ ಹೀಗಿವೆ?” ಎಂದು ಕೇಳಿದನು. ರಾಜನಾದ ಹೀರಾಮನು ಆ ದೇಶಕ್ಕೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಆ ಪ್ರದೇಶವನ್ನು ಇಂದಿಗೂ ಕಾಬೂಲ್ ಎಂದೇ ಕರೆಯುತ್ತಾರೆ.
14 ಹೀರಾಮನು ರಾಜನಾದ ಸೊಲೊಮೋನನಿಗೆ ಆಲಯದ ನಿರ್ಮಾಣಕ್ಕೆ ಉಪಯೋಗಿಸಲು ಒಂಭತ್ತು ಸಾವಿರ ಪೌಂಡು ಬಂಗಾರವನ್ನು ಕಳುಹಿಸಿದ್ದನು.
15 ರಾಜನಾದ ಸೊಲೊಮೋನನು ತಾನು ನಿರ್ಮಿಸಿದ್ದ ಆಲಯದ ಮತ್ತು ಅರಮನೆಯ ಕೆಲಸಗಳನ್ನು ಮಾಡಲು ಗುಲಾಮರನ್ನು ಬಲಾತ್ಕರಿಸಿದನು. ರಾಜನಾದ ಸೊಲೊಮೋನನು ಇತರ ಅನೇಕ ಕಟ್ಟಡಗಳ ನಿರ್ಮಾಣಕ್ಕೆ ಬಿಟ್ಟಿಕೆಲಸದವರನ್ನು ಉಪಯೋಗಿಸಿಕೊಂಡನು. ಅವನು ಮಿಲ್ಲೋ ಕೋಟೆಯನ್ನು ನಿರ್ಮಿಸಿದನು; ಜೆರುಸಲೇಮಿನ ಸುತ್ತಲೂ ನಗರದ ಗೋಡೆಯನ್ನು ಕಟ್ಟಿಸಿದನು; ಅಲ್ಲದೆ ಅವನು ಹಾಚೋರ್, ಮೆಗಿದ್ದೋ ಮತ್ತು ಗೆಜೆರ್ ನಗರಗಳನ್ನು ಕಟ್ಟಿಸಿದನು.
16 ಹಿಂದೊಮ್ಮೆ, ಈಜಿಪ್ಟಿನ ರಾಜನು ಗೆಜೆರ್ ನಗರದ ವಿರುದ್ದ ಹೋರಾಟಮಾಡಿ, ಅದನ್ನು ಸುಟ್ಟುಹಾಕಿದ್ದನು. ಅವನು ಅಲ್ಲಿ ನೆಲೆಸಿದ್ದ ಕಾನಾನ್ಯ ಜನರನ್ನು ಕೊಂದು ಹಾಕಿದ್ದನು. ಸೊಲೊಮೋನನು ಫರೋಹನ ಮಗಳನ್ನು ಮದುವೆಯಾದನು. ಆದ್ದರಿಂದ ಫರೋಹನು ಆ ನಗರವನ್ನು ಸೊಲೊಮೋನನಿಗೆ ಮದುವೆಯ ಕೊಡುಗೆಯಾಗಿ ಕೊಟ್ಟನು.
17 ರಾಜನಾದ ಸೊಲೊಮೋನನು ಆ ನಗರವನ್ನು ಮತ್ತೆ ನಿರ್ಮಿಸಿದನು. ಸೊಲೊಮೋನನು ಕೆಳಗಿನ ಬೇತ್ಹೋರೋನ್ ನಗರವನ್ನು ಸಹ ಕಟ್ಟಿಸಿದನು;
18 ಮರಳುಗಾಡಿನಲ್ಲಿರುವ ಬಾಲಾತ್ ಮತ್ತು ತಾಮಾರ್ ನಗರಗಳನ್ನೂ ಕಟ್ಟಿಸಿದನು;
19 ಧಾನ್ಯಗಳನ್ನು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸುವ ಉಗ್ರಾಣನಗರಗಳನ್ನು ಸಹ ಕಟ್ಟಿಸಿದನು; ತನ್ನ ರಥಗಳಿಗೆ ಮತ್ತು ಕುದುರೆಗಳಿಗೆ ತಾಣವಾದ ಸ್ಥಳಗಳನ್ನೂ ಕಟ್ಟಿಸಿದನು; ತಾನು ಆಳುತ್ತಿದ್ದ ಜೆರುಸಲೇಮಿನಲ್ಲಿ, ಲೆಬನೋನಿನಲ್ಲಿ, ಮತ್ತಿತರ ಎಲ್ಲಾ ಸ್ಥಳಗಳಲ್ಲಿ ತಾನು ಅಪೇಕ್ಷಿಸಿದ ಕಟ್ಟಡಗಳನ್ನೆಲ್ಲ ಕಟ್ಟಿಸಿದನು.
20 ಆ ದೇಶದಲ್ಲಿ ಇಸ್ರೇಲರಲ್ಲದ ಅನ್ಯಜನರೂ ಇದ್ದರು. ಆ ಜನರೆಂದರೆ: ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಹಿವ್ವೀಯರು ಮತ್ತು ಯೆಬೂಸಿಯರು.
21 ಇಸ್ರೇಲರು ಈ ಜನರನ್ನು ನಾಶಪಡಿಸಲು ಸಮರ್ಥರಾಗಿರಲಿಲ್ಲ. ಆದರೆ ಸೊಲೊಮೋನನು ಅವರನ್ನು ತನ್ನ ಕೆಲಸ ಮಾಡಲು ಗುಲಾಮರನ್ನಾಗಿ ಇಟ್ಟುಕೊಂಡನು; ಅವರು ಇಂದಿಗೂ ಗುಲಾಮರಾಗಿದ್ದಾರೆ.
22 ಸೊಲೊಮೋನನು ಇಸ್ರೇಲರಾದ ಯಾರನ್ನೂ ತನ್ನ ಗುಲಾಮರಾಗಲು ಬಲಾತ್ಕರಿಸಲಿಲ್ಲ. ಇಸ್ರೇಲಿನ ಜನರು ಸೈನಿಕರಾಗಿದ್ದರು; ಸರ್ಕಾರದ ನೌಕರರಾಗಿದ್ದರು; ಅಧಿಕಾರಿಗಳಾಗಿದ್ದರು; ಸೇನಾಪತಿಗಳಾಗಿದ್ದರು; ರಥಾಶ್ವಗಳಿಗೂ ಅಶ್ವಪೇದೆಗೂ ಮಹಾ ಸೇನಾಧಿಪತಿಗಳಾಗಿದ್ದರು.
23 ಸೊಲೊಮೋನನ ಯೋಜನೆಗಳ ಉಸ್ತುವಾರಿಗೆ ಐನೂರ ಐವತ್ತು ಮಂದಿ ಮೇಲ್ವಿಚಾರಕರಿದ್ದರು. ಅವರು ಕೆಲಸ ಮಾಡುವ ಜನರ ಮೇಲಿನ ಅಧಿಕಾರಿಗಳಾಗಿದ್ದರು.
24 ಫರೋಹನ ಮಗಳು ದಾವೀದ ನಗರವನ್ನು ಬಿಟ್ಟು ಸೊಲೊಮೋನನು ಅವಳಿಗಾಗಿ ಕಟ್ಟಿಸಿದ ದೊಡ್ಡ ಮನೆಗೆ ಹೋದಳು. ಆಗ ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿದನು.
25 ಸೊಲೊಮೋನನು ಪ್ರತಿವರ್ಷದಲ್ಲೂ ಮೂರು ಸಲ ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಯಜ್ಞವೇದಿಕೆಯ ಮೇಲೆ ಅರ್ಪಿಸುತ್ತಿದ್ದನು. ಈ ಯಜ್ಞವೇದಿಕೆಯನ್ನು ಸೊಲೊಮೋನನು ಯೆಹೋವನಿಗಾಗಿ ನಿರ್ಮಿಸಿದನು. ರಾಜನಾದ ಸೊಲೊಮೋನನು ಯೆಹೋವನ ಮುಂದೆ ಸುಗಂಧ ಧೂಪವನ್ನು ಸುಡುತ್ತಿದ್ದನು. ಅವನು ಆಲಯಕ್ಕೆ ಬೇಕಾದ ವಸ್ತುಗಳನ್ನು ಕೊಡುತ್ತಿದ್ದನು.
26 ರಾಜನಾದ ಸೊಲೊಮೋನನು ಏಚ್ಯೋನ್ಗೆಬೆರಿನಲ್ಲಿ ಹಡಗುಗಳನ್ನು ಸಹ ನಿರ್ಮಿಸಿದನು. ಈ ಪಟ್ಟಣವು ಎದೋಮ್ ದೇಶದಲ್ಲಿ ಕೆಂಪು ಸಮುದ್ರತೀರದ ಏಲೋತಿನ ಹತ್ತಿರದಲ್ಲಿದೆ.
27 ಸಮುದ್ರದ ಬಗ್ಗೆ ಹೆಚ್ಚಿಗೆ ತಿಳಿದಿರುವ ಕೆಲವು ಜನರು ರಾಜನಾದ ಹೀರಾಮನ ಹತ್ತಿರ ಇದ್ದರು. ಅವರು ಅನುಭವಸ್ಥ ನಾವಿಕರಾಗಿದ್ದರು. ಸೊಲೊಮೋನನ ಹಡಗುಗಳಲ್ಲಿ ಅವನ ಜನರೊಡನೆ ಕೆಲಸಮಾಡಲು, ರಾಜನಾದ ಹೀರಾಮನು ತನ್ನ ನಿಪುಣರಾದ ಜನರನ್ನು ಕಳುಹಿಸಿದನು.
28 ಸೊಲೊಮೋನನ ಹಡಗುಗಳು ಓಫೀರಿಗೆ ಹೋದವು. ಆ ಹಡಗುಗಳು ರಾಜನಾದ ಸೊಲೊಮೋನನಿಗೆ ಹದಿನಾಲ್ಕು ಸಾವಿರದ ಇನ್ನೂರ ಎಂಭತ್ತು ಕಿಲೋಗ್ರಾಂ ಬಂಗಾರವನ್ನು ಓಫೀರಿನಿಂದ ತೆಗೆದುಕೊಂಡು ಬಂದವು.