35
ಲೇವಿಯರ ಪಟ್ಟಣಗಳು
1 ಜೆರಿಕೊ ಪಟ್ಟಣದ ಆಚೆಕಡೆಯಲ್ಲಿ ಜೋರ್ಡನ್ ನದಿಯ ತೀರದ ಬಳಿಯಿಂದ ಮೋವಾಬ್ಯರ ಬಯಲಿನಲ್ಲಿ ಯೆಹೋವನು ಮೋಶೆಯೊಡನೆ ಮಾತಾಡಿ ಹೇಳಿದ್ದೇನೆಂದರೆ:
2 “ಇಸ್ರೇಲರು ತಾವು ಹೊಂದುವ ಸ್ವಾಸ್ತ್ಯದಲ್ಲಿ ಕೆಲವು ಊರುಗಳನ್ನೂ ಆ ಊರುಗಳ ಸುತ್ತಲಿರುವ ಭೂಮಿಯನ್ನೂ ಲೇವಿಯರಿಗೆ ಕೊಡಬೇಕೆಂದು ಆಜ್ಞಾಪಿಸು.
3 ಅವರು ಆ ಪಟ್ಟಣಗಳಲ್ಲಿ ವಾಸಿಸುವರು. ಆ ಊರುಗಳು ಲೇವಿಯರ ನಿವಾಸಕ್ಕಾಗಿ, ಸುತ್ತಲಿರುವ ಭೂಮಿಗಳು ಅವರ ಪಶುಗಳಿಗಾಗಿ ಮತ್ತು ಇತರ ಪ್ರಾಣಿಗಳಿಗಾಗಿ ಇರುವವು.
4 ನೀವು ಲೇವಿಯರಿಗೆ ಕೊಡುವ ಹುಲ್ಲುಗಾವಲುಗಳು ಅಂದರೆ ಪಟ್ಟಣಗಳ ಸುತ್ತಲೂ ಇರುವ ಹುಲ್ಲುಗಾವಲುಗಳು ಪಟ್ಟಣದ ಗೋಡೆಯ ಹೊರಗೆ ಎಲ್ಲಾ ದಿಕ್ಕಿನಲ್ಲೂ ಒಂದು ಸಾವಿರ ಮೊಳ ವಿಸ್ತರಿಸಬೇಕು.
5 ಪಟ್ಟಣದ ಹೊರಗೆ ಪ್ರತಿಯೊಂದು ದಿಕ್ಕಿನಲ್ಲಿ ಎರಡು ಸಾವಿರ ಮೊಳಗಳನ್ನು ಅಳೆದು ಪಟ್ಟಣಕ್ಕೆ ಗಡಿಯನ್ನು ಗೊತ್ತುಪಡಿಸಬೇಕು; ಪೂರ್ವದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು; ದಕ್ಷಿಣದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು; ಪಶ್ಚಿಮದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು ಮತ್ತು ಉತ್ತರದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು. ಇವುಗಳ ಮಧ್ಯದಲ್ಲಿ ಪಟ್ಟಣವಿರಬೇಕು. ಅದು ಅವರ ಪಟ್ಟಣಗಳಿಗೆ ಹುಲ್ಲುಗಾವಲುಗಳಾಗಿರುವುದು.
6 ನೀವು ಲೇವಿಯರಿಗೆ ಕೊಡುವ ಆರು ಪಟ್ಟಣಗಳು ಆಶ್ರಯ ನಗರಗಳಾಗಿರುತ್ತವೆ. ಬೇರೊಬ್ಬನನ್ನು ಕೊಂದು ಸಂರಕ್ಷಣೆಗಾಗಿ ಓಡಿಹೋಗುವವರು ಈ ಪಟ್ಟಣಗಳಿಗೆ ಬಂದು ಸಂರಕ್ಷಣೆ ಪಡೆಯಲು ನೀವು ಅವಕಾಶ ಕೊಡಬೇಕು. ಇದಲ್ಲದೆ ಇತರ ನಲವತ್ತೆರಡು ಪಟ್ಟಣಗಳನ್ನು ನೀವು ಲೇವಿಯರಿಗೆ ಕೊಡಬೇಕು.
7 ಅಂದರೆ ನೀವು ಲೇವಿಯರಿಗೆ ಒಟ್ಟು ನಲವತ್ತೆಂಟು ಪಟ್ಟಣಗಳನ್ನು ಅವುಗಳ ಸುತ್ತಲಿರುವ ಹುಲ್ಲುಗಾವಲಿನ ಸಮೇತವಾಗಿ ಕೊಡುತ್ತೀರಿ.
8 ನೀವು ಇತರ ಇಸ್ರೇಲರ ಆಸ್ತಿಯಿಂದ ಲೇವಿಯರಿಗೆ ಪಟ್ಟಣಗಳನ್ನು ಕೊಡುವಾಗ, ಪ್ರತಿಯೊಂದು ಕುಲವು ಹೊಂದಿರುವ ಭೂಮಿಗನುಸಾರವಾಗಿ ಕೊಡಬೇಕು. ದೊಡ್ಡಕುಲಗಳಿಂದ ಹೆಚ್ಚು ಪಟ್ಟಣಗಳನ್ನೂ ಚಿಕ್ಕಕುಲಗಳಿಂದ ಕೆಲವು ಪಟ್ಟಣಗಳನ್ನೂ ತೆಗೆದುಕೊಳ್ಳಿ.”
9 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
10 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನೀವು ಜೋರ್ಡನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದ ನಂತರ
11 ಆಶ್ರಯ ಸ್ಥಳಗಳಾಗುವುದಕ್ಕೆ ಪಟ್ಟಣಗಳನ್ನು ಆರಿಸಿಕೊಳ್ಳಬೇಕು. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು.
12 ಕೊಂದವನು ನ್ಯಾಯ ವಿಚಾರಣಾಸಭೆಯ ಮುಂದೆ ನಿಂತುಕೊಳ್ಳುವುದಕ್ಕಿಂತ ಮೊದಲೇ ಕೊಲ್ಲಲ್ಪಟ್ಟವನ ಸಂಬಂಧಿಕನಿಂದ ಕೊಲ್ಲಲ್ಪಡದೆ ಸುರಕ್ಷಿತನಾಗಿರಲು ಆ ಆಶ್ರಯ ಸ್ಥಳಗಳು ನಿಮ್ಮ ಮಧ್ಯದಲ್ಲಿ ಇರಲೇಬೇಕು.
13-14 ಹೀಗೆ ಆಶ್ರಯ ಸ್ಥಳಗಳಾಗಿರುವುದಕ್ಕೆ ನೀವು ಜೋರ್ಡನ್ ನದಿಯ ಈಚೆ ಮೂರು ಮತ್ತು ಕಾನಾನ್ ದೇಶದಲ್ಲಿ ಮೂರು, ಹೀಗೆ ಒಟ್ಟು ಆರು ಪಟ್ಟಣಗಳನ್ನು ನೇಮಿಸಬೇಕು.
15 ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರೇಲನಾಗಲಿ ಪರದೇಶದವನಾಗಲಿ ನಿಮ್ಮಲ್ಲಿ ಇಳಿದುಕೊಂಡವನಾಗಲಿ, ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯ ಹೊಂದಬಹುದು.
16 “ಯಾವನಾದರೂ ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನನ್ನು ಕೊಲೆಗಾರನೆಂದು ನೀವು ತೀರ್ಮಾನಿಸಬೇಕು. ಅಂಥವನಿಗೆ ಮರಣಶಿಕ್ಷೆಯಾಗಬೇಕು.
17 ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಕಲ್ಲನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನು ನರಹತ್ಯ ಮಾಡಿದವನಾಗಿದ್ದಾನೆ. ಅವನಿಗೆ ಮರಣಶಿಕ್ಷೆಯಾಗಬೇಕು.
18 ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ವಸ್ತುವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನು ಕೊಲೆಗಾರ. ಅವನಿಗೆ ಮರಣಶಿಕ್ಷೆಯಾಗಬೇಕು. ಲೇವಿಯರ ಪಟ್ಟಣಗಳು
19 ಕೊಲ್ಲಲ್ಪಟ್ಟವನ ಸಮೀಪ ಬಂಧುವು ಕೊಲೆಗಾರನನ್ನು ಮರಣಕ್ಕೀಡುಮಾಡಬೇಕು. ಅವನು ಕೊಲೆಗಾರನನ್ನು ಯಾವಾಗ ಕಂಡರೂ ಅವನನ್ನು ಕೊಲ್ಲಬೇಕು.
20 “ಯಾವನಾದರೂ ಮತ್ತೊಬ್ಬನನ್ನು ದ್ವೇಷಿಸಿ ನೂಕುವುದರಿಂದಾಗಲಿ ಉದ್ದೇಶಪೂರ್ವಕವಾಗಿ ಅವನ ಮೇಲೆ ಏನಾದರೂ ಎಸೆಯುವುದರಿಂದಾಗಲಿ
21 ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ, ಅವನು ನರಹತ್ಯ ಮಾಡಿದವನೇ. ಅವನಿಗೆ ಮರಣ ಶಿಕ್ಷೆಯಾಗಬೇಕು. ಹತನಾದವನ ಸಮೀಪ ಬಂಧುವು ಅವನನ್ನು ಎಲ್ಲಿ ಕಂಡರೂ ಕೊಲ್ಲಲಿ.
22 “ಆದರೆ ಒಬ್ಬನು ಯಾವ ದ್ವೇಷವೂ ಇಲ್ಲದೆ ನಿರುದ್ದೇಶದಿಂದ ಎಸೆದ ಯಾವುದೋ ವಸ್ತುವಿನಿಂದ ಒಬ್ಬನನ್ನು ಕೊಂದರೆ,
23 ಅಥವಾ ದೊಡ್ಡ ಕಲ್ಲನ್ನು ತಿಳಿಯದೆ ಬೀಳಿಸಿದ್ದರಿಂದ ಮತ್ತೊಬ್ಬನು ಸತ್ತರೆ, ಅವನು ಕೊಲ್ಲಲ್ಪಟ್ಟವನ ವೈರಿಯಾಗಿರದೆಯೂ ಹಾನಿಯನ್ನು ಮಾಡಬೇಕೆಂಬ ಉದ್ದೇಶವಿಲ್ಲದೆಯೂ ಇದ್ದ ಪಕ್ಷಕ್ಕೆ
24 ಸಭೆಯವರು ಕೊಂದವನಿಗೂ ಕೊಲ್ಲಲ್ಪಟ್ಟವನಿಗೂ ಈ ನಿಯಮಗಳಿಗನುಸಾರವಾಗಿ ನ್ಯಾಯತೀರ್ಪು ನೀಡಬೇಕು.
25 ಕೊಂದವನು ಓಡಿಹೋಗಿದ್ದ ಆಶ್ರಯ ನಗರಕ್ಕೆ ಸಭೆಯವರು ಅವನನ್ನು ಮತ್ತೆ ಕರೆದುಕೊಂಡು ಹೋಗಿ ಕೊಲ್ಲಲ್ಪಟ್ಟವನ ಸಮೀಪಬಂಧುವಿನಿಂದ ರಕ್ಷಿಸಬೇಕು. ಅಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.
26-27 “ಆ ವ್ಯಕ್ತಿಯು ತನ್ನ ಆಶ್ರಯನಗರದ ಮೇರೆಯನ್ನು ಎಂದಿಗೂ ದಾಟಿ ಹೊರಗೆ ಹೋಗಬಾರದು. ಆ ಮೇರೆಗಳನ್ನು ದಾಟಿ ಹೊರಗೆ ಹೋದರೆ, ಹತವಾದವನ ಸಮೀಪಬಂಧುವು ಅವನನ್ನು ಕಂಡು ಕೊಂದುಹಾಕಿದರೆ, ಆಗ ಆ ಸಮೀಪ ಬಂಧುವು ನರಹತ್ಯ ಮಾಡಿದ ದೋಷಿಯಾಗುವುದಿಲ್ಲ.
28 ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೆ ಇರಬೇಕು. ಮಹಾಯಾಜಕನು ತೀರಿಹೋದ ನಂತರ ಅವನು ತನ್ನ ಸ್ವಾಸ್ತ್ಯವಿರುವ ಸ್ಥಳಕ್ಕೆ ಹೋಗಬಹುದು.
29 ನೀವೂ ನಿಮ್ಮ ಸಂತತಿಯವರೂ ನಿಮ್ಮ ಎಲ್ಲಾ ನಿವಾಸಗಳಲ್ಲಿ ಈ ಕಟ್ಟಳೆಗೆ ಅನುಸಾರವಾಗಿ ನ್ಯಾಯತೀರಿಸಬೇಕು.
30 “ಯಾವನಾದರೂ ಮತ್ತೊಬ್ಬನನ್ನು ಕೊಂದರೆ, ಸಾಕ್ಷ್ಯಾಧಾರಗಳು ಇದ್ದರೆ ಮಾತ್ರ ಕೊಂದವನು ಕೊಲ್ಲಲ್ಪಡಬೇಕು.
31 “ಮರಣಶಿಕ್ಷೆಗೆ ಒಳಗಾಗಿರುವ ಕೊಲೆಪಾತಕನನ್ನು ಉಳಿಸಲು ನೀವು ಯಾವ ಈಡನ್ನೂ ತೆಗೆದುಕೊಳ್ಳಕೂಡದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.
32 “ಆಶ್ರಯನಗರಕ್ಕೆ ಓಡಿಹೋದವನಿಂದ ಹಣವನ್ನು ಈಡಾಗಿ ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ತನ್ನ ಸ್ವಂತ ಸ್ಥಳಕ್ಕೆ ಹೋಗಿ ವಾಸಿಸಲು ನೀವು ಅವಕಾಶ ಕೊಡಕೂಡದು.
33 “ನೀವು ವಾಸವಾಗಿರುವ ದೇಶವನ್ನು ಕೆಡಿಸಬಾರದು. ಕೊಲೆಯು ದೇಶವನ್ನು ಕೆಡಿಸುತ್ತದೆ. ಕೊಲೆಯು ನಡೆಯಲ್ಪಟ್ಟಿರುವ ದೇಶಕ್ಕೆ ಕೊಲೆಗಾರನ ರಕ್ತವೇ ಹೊರತು ಬೇರೆ ಯಾವ ಈಡೂ ಇಲ್ಲ.
34 ನಾನು ವಾಸಿಸುವ ದೇಶವನ್ನು ನೀವು ಅಶುದ್ಧಮಾಡಬಾರದು, ಯಾಕೆಂದರೆ ಯೆಹೋವನಾದ ನಾನೇ ಇಸ್ರೇಲರೊಂದಿಗೆ ವಾಸಿಸುತ್ತೇನೆ.”