8
ದೀಪಸ್ತಂಭ
1 ಯೆಹೋವನು ಮೋಶೆಗೆ,
2 “ಆರೋನನು ಪವಿತ್ರಗುಡಾರದಲ್ಲಿ ದೀಪಸ್ತಂಭದ ಮೇಲಿನ ದೀಪಗಳನ್ನು ಕ್ರಮಪಡಿಸಲು ಹೇಳು. ಆಗ ದೀಪಸ್ತಂಭದ ಮುಂದಿನ ಸ್ಥಳದಲ್ಲಿ ಬೆಳಕು ಪ್ರಕಾಶಿಸುವುದು” ಎಂದು ಹೇಳಿದನು.
3 ಅಂತೆಯೇ ಆರೋನನು ಮಾಡಿದನು. ಆರೋನನು ದೀಪಗಳನ್ನು ಸರಿಯಾದ ಸ್ಥಳದಲ್ಲಿಟ್ಟು ಅವುಗಳು ದೀಪಸ್ತಂಭದ ಎದುರಿನಲ್ಲಿ ಪ್ರಕಾಶಿಸುವಂತೆ ಮಾಡಿದನು. ಹೀಗೆ ಯೆಹೋವನು ಹೇಳಿದಂತೆಯೇ ಮೋಶೆಯು ಮಾಡಿದನು.
4 ಆ ದೀಪಸ್ತಂಭವನ್ನು ಅದರ ಬುಡದಿಂದ ಪುಷ್ಪಾಲಂಕಾರಗಳವರೆಗೂ ಸಂಪೂರ್ಣವಾಗಿ ಚಿನ್ನದ ತಗಡಿನಿಂದ ಮಾಡಲಾಗಿತ್ತು. ಯೆಹೋವನು ಮೋಶೆಗೆ ತೋರಿಸಿದ ಮಾದರಿಯಂತೆ ಅದು ಮಾಡಲ್ಪಟ್ಟಿತ್ತು.
ಲೇವಿಯರ ಶುದ್ಧೀಕರಣ
5 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
6 “ಇಸ್ರೇಲರಿಂದ ಲೇವಿಯರನ್ನು ಪ್ರತ್ಯೇಕಿಸಿ ಶುದ್ಧೀಕರಿಸು.
7 ಅವರನ್ನು ಶುದ್ಧೀಕರಿಸುವ ಕ್ರಮ ಹೇಗೆಂದರೆ, ನೀನು ಅವರ ಮೇಲೆ ದೋಷಪರಿಹಾರಕ ಜಲವನ್ನು ಚಿಮಿಕಿಸಬೇಕು. ಬಳಿಕ ಅವರು ಸರ್ವಾಂಗಕ್ಷೌರ ಮಾಡಿಸಿಕೊಂಡು ತಮ್ಮ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಹೀಗೆ ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕು.
8 “ತರುವಾಯ ಲೇವಿಯರು ಸರ್ವಾಂಗಹೋಮಕ್ಕಾಗಿ ಒಂದು ಎಳೆಹೋರಿಯನ್ನು ಮತ್ತು ಅದರೊಡನೆ ಸಮರ್ಪಿಸಬೇಕಾದ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಯಹಿಟ್ಟನ್ನು ತೆಗೆದುಕೊಂಡು ಬರಬೇಕು; ನೀನು ಅವರಿಂದ ದೋಷಪರಿಹಾರಕ ಯಜ್ಞಕ್ಕಾಗಿ ಮತ್ತೊಂದು ಎಳೆಹೋರಿಯನ್ನು ತೆಗೆದುಕೊಳ್ಳಬೇಕು.
9 ಲೇವಿಯರನ್ನು ದೇವದರ್ಶನಗುಡಾರದ ಮುಂಭಾಗಕ್ಕೆ ಕರೆದುಕೊಂಡು ಬಂದು ಇಸ್ರೇಲರನ್ನು ಒಟ್ಟಾಗಿ ಸೇರಿಸು.
10 ನೀನು ಲೇವಿಯರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದಾಗ ಇಸ್ರೇಲರು ತಮ್ಮ ಕೈಗಳನ್ನು ಅವರ ತಲೆಯ ಮೇಲಿಡುವರು.
11 ಆಗ ಆರೋನನು ಲೇವಿಯರನ್ನು ಯೆಹೋವನಿಗೆ ಇಸ್ರೇಲರ ಕಾಣಿಕೆಯಾಗಿ ಕೊಡುವನು. ಈ ರೀತಿಯಾಗಿ ಲೇವಿಯರು ಯೆಹೋವನ ಪರಿಚರ್ಯ ಕೆಲಸಕ್ಕಾಗಿ ಸಿದ್ಧರಾಗುವರು.
12 “ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟ ನಂತರ, ನೀನು ಯೆಹೋವನಿಗೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋರಿಯನ್ನೂ ಸರ್ವಾಂಗಹೋಮವಾಗಿ ಇನ್ನೊಂದು ಹೋರಿಯನ್ನೂ ಸಮರ್ಪಿಸಬೇಕು. ಇವು ಲೇವಿಯರಿಗೆ ನೈವೇದ್ಯದ ಸಮರ್ಪಣೆಗಳಾಗಿವೆ.
13 ಈ ರೀತಿಯಲ್ಲಿ ನೀನು ಲೇವಿಯರನ್ನು ಆರೋನ ಮತ್ತು ಅವನ ಪುತ್ರರ ಅಧೀನದಲ್ಲಿ ಸೇವೆ ಮಾಡುವಂತೆ ಮಾಡುವೆ ಮತ್ತು ಲೇವಿಯರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಸಲ್ಲಿಸುವೆ.
14 ನೀನು ಲೇವಿಯರನ್ನು ಇತರ ಇಸ್ರೇಲರಿಂದ ಪ್ರತ್ಯೇಕಿಸಬೇಕು. ಲೇವಿಯರು ನನ್ನ ಆಸ್ತಿಯಾಗಿದ್ದಾರೆ.
15 “ನೀನು ಲೇವಿಯರನ್ನು ಶುದ್ಧೀಕರಿಸಿ ಅವರನ್ನು ವಿಶೇಷ ಕೊಡುಗೆಯಾಗಿ ನನಗೆ ಕೊಟ್ಟ ಮೇಲೆ, ಅವರು ಬಂದು ದೇವದರ್ಶನಗುಡಾರದ ಕೆಲಸವನ್ನು ಮಾಡಬಹುದು.
16 ಯಾಕೆಂದರೆ ಲೇವಿಯರು ಇಸ್ರೇಲರ ಮಧ್ಯದಿಂದ ನನಗಾಗಿ ಸಂಪೂರ್ಣವಾಗಿ ಪ್ರತಿಷ್ಠಿತರಾಗಿದ್ದಾರೆ. ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ನಾನು ಇವರನ್ನೇ ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ.
17 ಇಸ್ರೇಲರಲ್ಲಿ ಚೊಚ್ಚಲಾದ ಮನುಷ್ಯರೂ ಪಶುಗಳೂ ನನ್ನ ಸ್ವತ್ತಾಗಿರುವರು. ಈಜಿಪ್ಟ್ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲ ನಾನು ಸಂಹರಿಸಿದಾಗ ಇಸ್ರೇಲರ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆನಲ್ಲಾ.
18 ಆದರೆ ಈಗ ನಾನು ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಳ್ಳುವೆನು.
19 ಇಸ್ರೇಲರ ಮಧ್ಯದಿಂದ ನಾನು ಲೇವಿಯರನ್ನು ಆರಿಸಿಕೊಂಡಿದ್ದೇನೆ ಮತ್ತು ದೇವದರ್ಶನಗುಡಾರದಲ್ಲಿ ಇಸ್ರೇಲರ ಪರವಾಗಿ ಕೆಲಸ ಮಾಡಲೂ ಮತ್ತು ಇಸ್ರೇಲರಿಗೆ ದೋಷಪರಿಹಾರ ಮಾಡುವುದಕ್ಕೂ ನಾನು ಅವರನ್ನು ಆರೋನ ಮತ್ತು ಅವನ ಪುತ್ರರಿಗೆ ಒಪ್ಪಿಸಿಕೊಟ್ಟಿದ್ದೇನೆ. ಇಸ್ರೇಲರನ್ನು ಶುದ್ಧಿಗೊಳಿಸುವ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಅವರು ಸಹಾಯ ಮಾಡುವರು. ಹೀಗಿರುವುದರಿಂದ ಇಸ್ರೇಲರು ಪವಿತ್ರವಸ್ತುಗಳ ಅತೀ ಸಮೀಪಕ್ಕೆ ಬಂದರೂ ಅವರಿಗೆ ಅಪಾಯವು ಸಂಭವಿಸುವುದಿಲ್ಲ.”
20 ಯೆಹೋವನು ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆ ಮೋಶೆ ಆರೋನರೂ ಇಸ್ರೇಲರ ಸಮೂಹದವರೆಲ್ಲರೂ ಮಾಡಿದರು.
21 ಲೇವಿಯರು ತಮ್ಮನ್ನು ಶುದ್ಧಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಬಳಿಕ ಆರೋನನು ಅವರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಕೊಟ್ಟನು. ಆರೋನನು ಅವರನ್ನು ಶುದ್ಧೀಕರಿಸುವುದಕ್ಕಾಗಿ ದೋಷಪರಿಹಾರ ಮಾಡಿದನು.
22 ಆಗ ಲೇವಿಯರು ದೇವದರ್ಶನಗುಡಾರದಲ್ಲಿ ಆರೋನನ ಮತ್ತು ಅವನ ಪುತ್ರರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲು ಅರ್ಹರಾದರು. ಯೆಹೋವನು ಮೋಶೆಗೆ ಲೇವಿಯರ ಬಗ್ಗೆ ಆಜ್ಞಾಪಿಸಿದ್ದಂತೆಯೇ ಅವರಿಗೆ ಮಾಡಲಾಯಿತು.
23 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
24 “ಲೇವಿಯರು ಅನುಸರಿಸಬೇಕಾದ ಪದ್ಧತಿ ಏನೆಂದರೆ: ಲೇವಿಯರಲ್ಲಿ ಇಪ್ಪತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಗಂಡಸರು ದೇವದರ್ಶನಗುಡಾರದ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾಗಿದ್ದಾರೆ.
25 ಅವರ ವಯಸ್ಸು ಐವತ್ತು ವರ್ಷವಾದ ನಂತರ ಸೇವೆಯಿಂದ ನಿವೃತ್ತರಾಗಬೇಕು; ಪವಿತ್ರ ಗುಡಾರವನ್ನು ವರ್ಗಾವಣೆ ಮಾಡುವ ಭಾರವಾದ ಕೆಲಸವನ್ನು ಅವರೆಂದಿಗೂ ಮಾಡಕೂಡದು.
26 ಅವರು ಕಾವಲುಗಾರರಾಗಿ ದೇವದರ್ಶನಗುಡಾರದ ಬಳಿ ಇತರ ಲೇವಿಯರಿಗೆ ಸಹಾಯ ಮಾಡಬಹುದೇ ಹೊರತು ಭಾರವಾದ ಕೆಲಸವನ್ನು ಮಾಡಲೇಕೂಡದು. ನೀನು ಈ ರೀತಿಯಲ್ಲಿ ಲೇವಿಯರಿಗೆ ಕೆಲಸವನ್ನು ಹಂಚಿಕೊಡಬೇಕು.”