2
ಜೀವಂತವಾದ ಕಲ್ಲು ಮತ್ತು ಪವಿತ್ರವಾದ ದೇಶ
1 ಆದ್ದರಿಂದ ಇತರ ಜನರಿಗೆ ಕೇಡುಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ.
2 ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ.
3 ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ.
4 ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ.
5 ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ.
6 ಪವಿತ್ರ ಗ್ರಂಥವು ಹೇಳುವುದೇನೆಂದರೆ,
“ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ.
ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ” ಯೆಶಾಯ 28:16
7 ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ:
“ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
ಮೂಲೆಗಲ್ಲಾಯಿತು.” ಕೀರ್ತನೆ. 118:22
8 ನಂಬದಿರುವ ಜನರಿಗೆ ಆತನು:
“ಜನರನ್ನು ಮುಗ್ಗರಿಸುವ ಕಲ್ಲೂ
ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.” ಯೆಶಾಯ 8:14
ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.
9 ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.
10 ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ.
ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ.
ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.
ದೇವರಿಗಾಗಿ ಜೀವಿಸಿ
11 ಪ್ರಿಯ ಸ್ನೇಹಿತರೇ, ನೀವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಪರದೇಶದವರಂತೆ ಇದ್ದೀರಿ. ಆದ್ದರಿಂದ ನಿಮ್ಮ ದೇಹಗಳಿಗೆ ಇಷ್ಟವಾದ ಕೆಟ್ಟಸಂಗತಿಗಳಿಂದ ದೂರವಾಗಿರಿ. ಇವು ನಿಮ್ಮ ಜೀವಾತ್ಮಕ್ಕೆ ವಿರುದ್ಧವಾಗಿ ಹೋರಾಡುತ್ತವೆ.
12 ನಂಬಿಕೆಯಿಲ್ಲದ ಜನರು ನಿಮ್ಮ ಸುತ್ತಮುತ್ತಲೆಲ್ಲಾ ವಾಸಿಸುತ್ತಿದ್ದಾರೆ. ನೀವು ತಪ್ಪು ಮಾಡುತ್ತಿರುವಿರೆಂದು ಅವರು ಹೇಳುವ ಸಾಧ್ಯತೆಯಿದೆ. ಆದ್ದರಿಂದ ಒಳ್ಳೆಯವರಾಗಿ ಬಾಳಿರಿ. ನೀವು ಮಾಡುವ ಒಳ್ಳೆಯ ಕಾರ್ಯಗಳನ್ನು ಅವರು ನೋಡುವರು ಮತ್ತು ದೇವರು ಪ್ರತ್ಯಕ್ಷನಾದ ದಿನದಂದು ಆತನನ್ನು ಕೊಂಡಾಡುವರು.
ಈ ಲೋಕದ ಪ್ರತಿಯೊಬ್ಬ ಅಧಿಕಾರಿಗೂ ವಿಧೇಯರಾಗಿರಿ
13 ಈ ಲೋಕದ ಅಧಿಕಾರಿಗಳಿಗೆ ವಿಧೇಯರಾಗಿರಿ. ಪ್ರಭುವಿಗಾಗಿ ಇದನ್ನು ಮಾಡಿರಿ. ಸರ್ವಾಧಿಕಾರಿಯಾದ ರಾಜನಿಗೆ ವಿಧೇಯರಾಗಿರಿ.
14 ರಾಜನು ಕಳುಹಿಸುವ ಅಧಿಕಾರಿಗಳಿಗೆ ವಿಧೇಯರಾಗಿರಿ. ತಪ್ಪು ಮಾಡಿದವರನ್ನು ದಂಡಿಸಲೂ ಒಳ್ಳೆಯದನ್ನು ಮಾಡಿದವರನ್ನು ಹೊಗಳಲೂ ಅವರನ್ನು ಕಳುಹಿಸಲಾಗಿದೆ.
15 ನೀವು ಒಳ್ಳೆಯದನ್ನು ಮಾಡುವಾಗ ನಿಮ್ಮನ್ನು ಕುರಿತು ಕೆಟ್ಟಮಾತುಗಳನ್ನು ಆಡಲು ಮೂಢರಿಗೆ ಸಾಧ್ಯವಾಗುವುದಿಲ್ಲ. ದೇವರ ಅಪೇಕ್ಷೆಯೂ ಇದೇ ಆಗಿದೆ.
16 ಸ್ವತಂತ್ರ ಹೊಂದಿದವರಂತೆ ಜೀವಿಸಿರಿ. ಆದರೆ ನೀವು ಮಾಡುವ ಕೆಟ್ಟಕಾರ್ಯಗಳನ್ನು ಮರೆಮಾಡಲು ಆ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿ. ನೀವು ದೇವರ ಸೇವೆಯನ್ನು ಮಾಡುತ್ತಾ ಜೀವಿಸಿರಿ.
17 ಜನರೆಲ್ಲರಿಗೂ ಗೌರವವನ್ನು ತೋರಿಸಿರಿ. ದೇವರ ಕುಟುಂಬದ ಸಹೋದರ ಸಹೋದರಿಯರೆಲ್ಲರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ ಮತ್ತು ರಾಜನನ್ನು ಗೌರವಿಸಿರಿ.
ಕ್ರಿಸ್ತನ ಸಂಕಟದ ಉದಾಹರಣೆ
18 ಸೇವಕರೇ, ನಿಮ್ಮ ಒಡೆಯರ ಅಧಿಕಾರವನ್ನು ಒಪ್ಪಿಕೊಳ್ಳಿರಿ. ಇದನ್ನು ತುಂಬಾ ಗೌರವದಿಂದ ಮಾಡಿರಿ. ಒಳ್ಳೆಯವರಾದ ಮತ್ತು ದಯಾಪರರಾದ ಒಡೆಯರಿಗೆ ನೀವು ವಿಧೇಯರಾಗಿರಬೇಕು ಮತ್ತು ಕೆಟ್ಟವರಾದ ಒಡೆಯರಿಗೂ ವಿಧೇಯರಾಗಿರಬೇಕು.
19 ಒಬ್ಬನು ಅನ್ಯಾಯವಾಗಿ ಸಂಕಟಕ್ಕೆ ಒಳಗಾದಾಗ ದೇವರಿಗಾಗಿ ಅದನ್ನು ಸಹಿಸಿಕೊಂಡರೆ ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
20 ಆದರೆ ನಿಮ್ಮ ತಪ್ಪಿಗಾಗಿ ನೀವು ದಂಡಿಸಲ್ಪಟ್ಟರೆ ಆ ದಂಡನೆಯನ್ನು ನೀವು ಅನುಭವಿಸಿದ್ದಕ್ಕೆ ನಿಮಗೇನೂ ಕೀರ್ತಿ ಬರುವುದಿಲ್ಲ. ಆದರೆ ನೀವು ಒಳ್ಳೆಯದನ್ನು ಮಾಡಿದ್ದರಿಂದ ಸಂಕಟಕ್ಕೆ ಒಳಗಾಗಿ ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಅದು ದೇವರನ್ನು ಸಂತೋಷ ಪಡಿಸುತ್ತದೆ.
21 ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು. ನೀವು ಅನುಸರಿಸತಕ್ಕ ಮಾದರಿಯು ಕ್ರಿಸ್ತನೇ ಆಗಿದ್ದಾನೆ. ಆತನು ಮಾಡಿದಂತೆ ನೀವೂ ಮಾಡಿರಿ. ನೀವು ಸಂಕಟವನ್ನು ಅನುಭವಿಸುವಾಗ ತಾಳ್ಮೆಯಿಂದಿರಬೇಕು, ಏಕೆಂದರೆ ಕ್ರಿಸ್ತನು ನಿಮಗಾಗಿ ಸಂಕಟಪಟ್ಟನು.
22 “ಆತನು (ಕ್ರಿಸ್ತನು) ಪಾಪವನ್ನು ಮಾಡಲಿಲ್ಲ.
ಆತನ ಬಾಯಿಂದ ಯಾವ ಸುಳ್ಳು ಮಾತೂ ಬರಲಿಲ್ಲ.” ಯೆಶಾಯ 53:9
23 ಜನರು ಕ್ರಿಸ್ತನನ್ನು ಬಯ್ದರೂ ಆತನು ಅವರನ್ನು ಬಯ್ಯಲಿಲ್ಲ. ಆತನು ಸಂಕಟವನ್ನು ಅನುಭವಿಸಿದರೂ ಜನರನ್ನು ಹೆದರಿಸಲಿಲ್ಲ. ಆತನು ತನ್ನ ಕಾರ್ಯವನ್ನು ದೇವರಿಗೆ ವಹಿಸಿದನು. ಸರಿಯಾದ ನ್ಯಾಯತೀರ್ಪು ನೀಡುವಾತನು ದೇವರೊಬ್ಬನೇ.
24 ಕ್ರಿಸ್ತನು ನಮ್ಮ ಪಾಪಗಳನ್ನೆಲ್ಲಾ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನೇರಿದನು. ನಾವು ಪಾಪಕ್ಕೋಸ್ಕರ ಜೀವಿಸದೆ, ನೀತಿವಂತರಾಗಿ ಜೀವಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಆತನ (ಕ್ರಿಸ್ತನ) ಬಾಸುಂಡೆಗಳಿಂದ ನಿಮಗೆ ಗುಣವಾಯಿತು.
25 ನೀವು ದಾರಿ ತಪ್ಪಿದ ಕುರಿಗಳಾಗಿದ್ದಿರಿ. ಆದರೆ ಈಗ ನೀವು ನಿಮ್ಮ ಕುರುಬನ ಬಳಿಗೆ ಅಂದರೆ ನಿಮ್ಮ ಆತ್ಮಗಳನ್ನು ಕಾಪಾಡುವಾತನ ಬಳಿಗೆ ಹಿಂತಿರುಗಿ ಬಂದಿರುವಿರಿ.