ಪೇತ್ರನು
ಬರೆದ ಎರಡನೆ ಪತ್ರ
1
ಯೇಸು ಕ್ರಿಸ್ತನ ಸೇವಕನೂ ಅಪೊಸ್ತಲನೂ ಆದ ಸಿಮೆಯೋನ ಪೇತ್ರನು ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಹೊಂದಿರುವ ಜನರೆಲ್ಲರಿಗೂ ಬರೆಯುವ ಪತ್ರ. ನಮ್ಮ ದೇವರೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನು ನೀತಿವಂತನಾಗಿರುವುದರಿಂದ ನೀವು ಆ ನಂಬಿಕೆಯನ್ನು ಪಡೆದುಕೊಂಡಿರಿ. ಆತನು ಯೋಗ್ಯವಾದದ್ದನ್ನೇ ಮಾಡುತ್ತಾನೆ.
ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ. ದೇವರನ್ನು ಮತ್ತು ನಮ್ಮ ಪ್ರಭುವಾದ ಯೇಸುವನ್ನು ನೀವು ನಿಜವಾಗಿಯೂ ತಿಳಿದಿರುವುದರಿಂದ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ.
ನಮಗೆ ಬೇಕಾದುದನ್ನೆಲ್ಲಾ ದೇವರು ದಯಪಾಲಿಸಿದ್ದಾನೆ
ಯೇಸುವಿಗೆ ದೇವರ ಶಕ್ತಿಯಿದೆ. ಜೀವಿಸಲು ಮತ್ತು ದೇವರ ಸೇವೆ ಮಾಡಲು ಬೇಕಾದ ಪ್ರತಿಯೊಂದನ್ನು ಆತನ ಶಕ್ತಿಯು ನಮಗೆ ಒದಗಿಸಿದೆ. ನಾವು ಆತನನ್ನು ಬಲ್ಲವರಾದ್ದರಿಂದಲೇ ಅವುಗಳನ್ನು ಪಡೆದುಕೊಂಡಿದ್ದೇವೆ. ಯೇಸು ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ ನಮ್ಮನ್ನು ಕರೆದನು. ಯೇಸು ತಾನು ಮಾಡಿದ ವಾಗ್ದಾನದಂತೆ, ತನ್ನ ಪ್ರಭಾವ ಮತ್ತು ಗುಣಾತಿಶಯಗಳ ಮೂಲಕ ನಮಗೆ ಅಮೂಲ್ಯವಾದ ಹಾಗೂ ಉತ್ಕೃಷ್ಟವಾದ ವರಗಳನ್ನು ದಯಪಾಲಿಸಿರುವನು. ಆ ವರಗಳಿಂದ ನೀವು ದೇವರ ಗುಣಾತಿಶಯದಲ್ಲಿ ಪಾಲುಗಾರರಾಗಲು ಸಾಧ್ಯ. ಹೀಗಿರಲಾಗಿ ನೀವು ಈ ಲೋಕದಲ್ಲಿ ದುರಾಶೆಯಿಂದುಂಟಾಗುವ ಕೆಟ್ಟತನಕ್ಕೆ ತಪ್ಪಿಸಿಕೊಂಡವರಾಗಿದ್ದೀರಿ.
ನೀವು ಈ ಆಶೀರ್ವಾದಗಳನ್ನು ಹೊಂದಿರುವುದರಿಂದ ಅವುಗಳನ್ನು ನಿಮ್ಮ ಜೀವಿತಕ್ಕೆ ಅಳವಡಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ನಿಮ್ಮ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ದೇವರ ಸೇವೆಯನ್ನೂ ದೇವರ ಸೇವೆಗೆ ಸಹೋದರ ಸ್ನೇಹವನ್ನೂ ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಸೇರಿಸಿರಿ ಇವೆಲ್ಲವೂ ನಿಮ್ಮಲ್ಲಿದ್ದು ಬೆಳೆಯುತ್ತಿದ್ದರೆ, ನೀವು ಎಂದಿಗೂ ನಿರರ್ಥಕರಾಗದಂತೆ ಇವು ನಿಮಗೆ ಸಹಾಯ ಮಾಡುತ್ತವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಜ್ಞಾನದಲ್ಲಿ ಎಂದಿಗೂ ಅಯೋಗ್ಯರೆನಿಸಿಕೊಳ್ಳದಂತೆ ಇವು ನಿಮಗೆ ಸಹಾಯಮಾಡುತ್ತವೆ. ಆದರೆ ಇವು ಯಾವನಲ್ಲಿ ಇರುವುದಿಲ್ಲವೋ ಅವನು ಸ್ಪಷ್ಟವಾಗಿ ನೋಡಲಾರನು. ಅವನು ಕುರುಡನಾಗಿದ್ದಾನೆ; ತಾನು ಶುದ್ಧನಾದದ್ದನ್ನು ಮರೆತವನಾಗಿದ್ದಾನೆ.
10 ನನ್ನ ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ತನ್ನವರನ್ನಾಗಿ ಆರಿಸಿಕೊಳ್ಳಲು ಕರೆದನು. ಆದ್ದರಿಂದಲೇ ನೀವು ದೇವರಿಂದ ನಿಜವಾಗಿಯೂ ಕರೆಯಲ್ಪಟ್ಟವರೆಂದೂ ಆರಿಸಲ್ಪಟ್ಟವೆರೆಂದೂ ತೋರಿಸಲು ಬಹಳವಾಗಿ ಪ್ರಯತ್ನಿಸಿರಿ. ಹೀಗೆ ನೀವು ಮಾಡಿದರೆ ಎಂದಿಗೂ ಎಡವಿಬೀಳುವುದಿಲ್ಲ. 11 ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸುಕ್ರಿಸ್ತನ ರಾಜ್ಯದಲ್ಲಿ ನಿಮಗೆ ಮಹಾ ಸ್ವಾಗತವನ್ನು ನೀಡಲಾಗುವುದು. ಆ ರಾಜ್ಯವು ಶಾಶ್ವತವಾದದ್ದು.
12 ಇವೆಲ್ಲವೂ ನಿಮಗೆ ತಿಳಿದಿದೆ. ನಿಮ್ಮಲ್ಲಿರುವ ಸತ್ಯದಲ್ಲಿ ನೀವು ಸ್ಥಿರವಾಗಿದ್ದೀರಿ. ಆದರೆ ಇವುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳುವಂತೆ ನಾನು ನಿಮಗೆ ಯಾವಾಗಲೂ ಸಹಾಯ ಮಾಡುತ್ತೇನೆ. 13 ನಾನು ಈ ಲೋಕದಲ್ಲಿ ಇನ್ನೂ ಜೀವದಿಂದಿರುವಾಗಲೇ ಇವುಗಳನ್ನು ನಿಮ್ಮ ನೆನಪಿಗೆ ತರುವುದು ಯೋಗ್ಯವಾದದ್ದೆಂಬುದು ನನ್ನ ಆಲೋಚನೆ. 14 ನಾನು ಬಹುಬೇಗ ಈ ದೇಹವನ್ನು ತ್ಯಜಿಸಬೇಕೆಂಬುದೂ ನನಗೆ ತಿಳಿದಿದೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಅದನ್ನು ತೋರ್ಪಡಿಸಿದ್ದಾನೆ. 15 ನೀವು ಇವುಗಳನ್ನು ಯಾವಾಗಲೂ ನೆನಪು ಮಾಡಿಕೊಳ್ಳಲು ನಿಮಗೆ ನನ್ನಿಂದಾದಷ್ಟು ಸಹಾಯಮಾಡಲು ನಾನು ಪ್ರಯತ್ನಿಸುತ್ತೇನೆ. ನಾನು ಈ ಲೋಕವನ್ನು ಬಿಟ್ಟುಹೋದ ನಂತರವೂ ನೀವು ಈ ಸಂಗತಿಗಳನ್ನು ನೆನಪು ಮಾಡಿಕೊಳ್ಳಲು ಸಮರ್ಥರಾಗಿರಬೇಕೆಂಬುದು ನನ್ನ ಅಪೇಕ್ಷೆ.
ಕ್ರಿಸ್ತನ ಮಹಿಮೆಯನ್ನು ನಾವು ನೋಡಿದೆವು
16 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಕ್ತಿಯ ಕುರಿತಾಗಿ ಮತ್ತು ಆತನ ಬರುವಿಕೆಯ ಕುರಿತಾಗಿ ನಿಮಗೆ ತಿಳಿಸಿದ್ದೇವೆ. ಆ ಸಂಗತಿಗಳು ಜನರಿಂದ ಕಲ್ಪಿತವಾದ ಜಾಣ್ಮೆಯ ಕಥೆಗಳಲ್ಲ. ಯೇಸುವಿನ ಮಹಿಮೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. 17 ಆತನು ಅತ್ಯಂತ ಪ್ರಭಾವವುಳ್ಳ (ದೇವರ) ಸ್ವರವನ್ನು ಕೇಳಿದನು. ಆಗಲೇ ಆತನು ತಂದೆಯಾದ ದೇವರಿಂದ ಮಾನವನ್ನೂ ಪ್ರಭಾವವನ್ನೂ ಹೊಂದಿಕೊಂಡನು. ಆ ಸ್ವರವು, “ಈತನು ನನ್ನ ಪ್ರಿಯ ಮಗ. ಈತನನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು. 18 ನಾವು ಪವಿತ್ರ ಪರ್ವತದ ಮೇಲೆ ಯೇಸುವಿನ ಜೊತೆಯಲ್ಲಿದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೂ ಕೇಳಿದೆವು.*
19 ಪ್ರವಾದಿಗಳು ಹೇಳಿದ ಸಂಗತಿಗಳನ್ನು ಇದು ನಮಗೆ ಮತ್ತಷ್ಟು ಖಚಿತಪಡಿಸಿತು. ಅವರು ಹೇಳಿದ್ದನ್ನು ನೀವು ಚಾಚು ತಪ್ಪದೆ ಅನುಸರಿಸುವುದು ಒಳ್ಳೆಯದೇ ಸರಿ. ಅವರು ಹೇಳಿದ ಸಂಗತಿಗಳು ಅಂಧಕಾರದಲ್ಲಿ ಪ್ರಕಾಶಿಸುವ ಬೆಳಕಿನಂತಿವೆ. ನಿಮ್ಮ ಹೃದಯಗಳಲ್ಲಿ ಹಗಲು ಆರಂಭವಾಗಿ, ಮುಂಜಾನೆಯ ನಕ್ಷತ್ರವು ಮೂಡುವವರೆಗೂ ಆ ಬೆಳಕು ಪ್ರಕಾಶಿಸುತ್ತದೆ. 20 ನೀವು ಅರ್ಥಮಾಡಿಕೊಳ್ಳಬೇಕಾದ ಮುಖ್ಯವಾದ ಸಂಗತಿಯೇನೆಂದರೆ, ಪವಿತ್ರ ಗ್ರಂಥದಲ್ಲಿರುವ ಯಾವ ಪ್ರವಾದನವಾಕ್ಯವೂ ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಣೆಯಿಂದ ಬಂದಿಲ್ಲ. 21 ಯಾವ ಪ್ರವಾದನೆಯೇ ಆಗಲಿ ಮನುಷ್ಯನ ಚಿತ್ತದಿಂದ ಬಂದಿಲ್ಲ. ಆದರೆ ಜನರು ಪವಿತ್ರಾತ್ಮನಿಂದ ನಡೆಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತನಾಡಿದರು.
* 1:18 ನೋಡಿರಿ: ಮತ್ತಾಯ 17:1-9.