3
ಯೇಸು ಮತ್ತೆ ಪ್ರತ್ಯಕ್ಷನಾಗುತ್ತಾನೆ
1 ನನ್ನ ಸ್ನೇಹಿತರೇ, ನಾನು ನಿಮಗೆ ಬರೆಯುತ್ತಿರುವ ಎರಡನೆ ಪತ್ರವಿದು. ನಿಮ್ಮ ಯಥಾರ್ಥವಾದ ಮನಸ್ಸು ಮತ್ತೆ ನೆನಪು ಮಾಡಿಕೊಳ್ಳಲಿ ಎಂದು ನಾನು ಈ ಎರಡು ಪತ್ರಗಳನ್ನು ಬರೆದಿದ್ದೇನೆ.
2 ಪರಿಶುದ್ಧರಾದ ಪ್ರವಾದಿಗಳು ಹಿಂದಿನಕಾಲದಲ್ಲಿ ಹೇಳಿದ್ದನ್ನು ನೀವು ಜ್ಞಾಪಿಸಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ. ನಮ್ಮ ರಕ್ಷಕನಾದ ಪ್ರಭುವು ನಿಮ್ಮ ಅಪೊಸ್ತಲರ ಮೂಲಕ ನೀಡಿದ ಆಜ್ಞೆಯನ್ನು ನೆನಪು ಮಾಡಿಕೊಳ್ಳಿರಿ.
3 ಅಂತಿಮ ದಿನಗಳಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಜನರು ನಿಮ್ಮನ್ನು ನೋಡಿ ಕುಚೋದ್ಯ ಮಾಡುವರು. ಅವರು ತಮ್ಮ ಇಚ್ಛೆಗನುಸಾರವಾದ ಕೆಟ್ಟಕಾರ್ಯಗಳನ್ನೇ ಮಾಡುತ್ತಾ ಜೀವಿಸುತ್ತಾರೆ.
4 ಆ ಜನರು, “ಆತನು ಮತ್ತೆ ಬರುವುದಾಗಿ ವಾಗ್ದಾನ ಮಾಡಿದ್ದನು. ಆತನು ಎಲ್ಲಿದ್ದಾನೆ? ನಮ್ಮ ಪಿತೃಗಳು ಸತ್ತುಹೋದರು. ಆದರೆ ಈ ಲೋಕವು ಆದಿಯಿಂದಲೂ ಇದ್ದ ರೀತಿಯಲ್ಲಿಯೇ ಇದೆ” ಎಂದು ಹೇಳುವರು.
5 ಆದರೆ ಬಹಕಾಲದ ಹಿಂದೆ ಏನು ನಡೆಯಿತೆಂಬುದನ್ನು ನೆನಪು ಮಾಡಿಕೊಳ್ಳಲು ಅವರಿಗೆ ಇಷ್ಟವಿಲ್ಲ. ಆದಿಯಲ್ಲಿ ದೇವರು ಆಕಾಶವನ್ನು ಸೃಷ್ಟಿಸಿದನು. ದೇವರು ಲೋಕವನ್ನು ನೀರೊಳಗಿಂದ ಮತ್ತು ನೀರಿನಿಂದ ಸೃಷ್ಟಿಸಿದನು. ದೇವರ ವಾಕ್ಯದಿಂದ ಇವೆಲ್ಲಾ ಸಂಭವಿಸಿದವು.
6 ಬಳಿಕ ಆ ಲೋಕವು ಜಲಪ್ರಳಯದಿಂದ ನಾಶವಾಯಿತು.
7 ಈಗಿರುವ ಆಕಾಶಕ್ಕೂ ಭೂಮಿಗೂ ಅದೇ ದೇವರ ವಾಕ್ಯವು ಆಧಾರವಾಗಿದೆ. ಆಕಾಶ ಮತ್ತು ಭೂಮಿಗಳು ಬೆಂಕಿಯಿಂದ ನಾಶಗೊಳ್ಳಲು ಇಡಲ್ಪಟ್ಟಿವೆ. ದೇವರಿಗೆ ವಿರುದ್ಧವಾಗಿರುವ ಜನರೆಲ್ಲರಿಗೆ ಆಗುವ ನ್ಯಾಯತೀರ್ಪಿನ ದಿನಕ್ಕಾಗಿಯೂ ನಾಶನಕ್ಕಾಗಿಯೂ ಭೂಮ್ಯಾಕಾಶಗಳು ಇಡಲ್ಪಟ್ಟಿವೆ.
8 ಆದರೆ ಪ್ರಿಯ ಸ್ನೇಹಿತರೇ, ಇದೊಂದನ್ನು ಮಾತ್ರ ಮರೆಯದಿರಿ. ಪ್ರಭುವಿಗೆ ಒಂದು ದಿನವು ಸಾವಿರ ವರ್ಷಗಳಂತಿದೆ ಮತ್ತು ಸಾವಿರ ವರ್ಷಗಳು ಒಂದು ದಿನದಂತಿದೆ.
9 ಕೆಲವು ಜನರು ತಿಳಿದುಕೊಂಡಿರುವಂತೆ, ಪ್ರಭುವು ತಾನು ವಾಗ್ದಾನ ಮಾಡಿದ್ದನ್ನು ತಡವಾಗಿ ನೆರವೇರಿಸುವುದಿಲ್ಲ. ದೇವರು ನಿಮ್ಮ ವಿಷಯದಲ್ಲಿ ಇನ್ನೂ ತಾಳ್ಮೆಯಿಂದಿದ್ದಾನಷ್ಟೆ. ಯಾವ ವ್ಯಕ್ತಿಯೂ ಕಳೆದುಹೋಗಬಾರದೆಂಬುದು ದೇವರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯಗಳನ್ನು ಪರಿವರ್ತಿಸಿಕೊಂಡು, ಪಾಪ ಮಾಡುವುದನ್ನು ನಿಲ್ಲಿಸಬೇಕೆಂಬುದು ದೇವರ ಅಪೇಕ್ಷೆ.
10 ಆದರೆ ಪ್ರಭುವು ಮತ್ತೆ ಪ್ರತ್ಯಕ್ಷನಾಗುವ ದಿನವು ಕಳ್ಳನು ಬರುವಂತೆ ಅನಿರೀಕ್ಷಿತವಾಗಿ ಬರುತ್ತದೆ. ಆಕಾಶವು ಮಹಾ ಘೋಷದೊಂದಿಗೆ ಅದೃಶ್ಯವಾಗುತ್ತದೆ. ಆಕಾಶಮಂಡಲದಲ್ಲಿರುವ ಎಲ್ಲಾ ಸೃಷ್ಟಿಗಳು ಬೆಂಕಿಯಿಂದ ನಾಶವಾಗುತ್ತವೆ. ಈ ಲೋಕವೂ ಅದರಲ್ಲಿರುವ ಸಮಸ್ತವೂ ಸುಟ್ಟುಹೋಗುತ್ತದೆ.
11 ನಾನು ನಿಮಗೆ ಹೇಳಿದಂತಹ ರೀತಿಯಲ್ಲಿಯೇ ಎಲ್ಲವೂ ನಾಶಗೊಳ್ಳುತ್ತವೆ. ಆದ್ದರಿಂದ ನೀವು ಎಂತಹ ಜನರಾಗಿರಬೇಕು? ನೀವು ಪರಿಶುದ್ಧರಾಗಿರಬೇಕು ಮತ್ತು ಭಕ್ತಿವುಳ್ಳವರಾಗಿರಬೇಕು.
12 ನೀವು ದೇವರ ದಿನಕ್ಕಾಗಿ ಅಪೇಕ್ಷಿಸುತ್ತಾ ಎದುರು ನೋಡುತ್ತಿರಬೇಕು. ಆ ದಿನವು ಬಂದಾಗ, ಆಕಾಶವು ಬೆಂಕಿಯಿಂದ ನಾಶವಾಗುತ್ತದೆ ಮತ್ತು ಆಕಾಶದಲ್ಲಿರುವ ಪ್ರತಿಯೊಂದೂ ಬೆಂಕಿಯಿಂದ ಕರಗಿ ಹೋಗುತ್ತದೆ.
13 ನಾವಾದರೋ ದೇವರು ವಾಗ್ದಾನ ಮಾಡಿರುವ ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರುನೋಡುತ್ತಿದ್ದೇವೆ. ನೀತಿಯು ಅವುಗಳಲ್ಲಿ ವಾಸವಾಗಿರುವುದು.
14 ಪ್ರಿಯ ಸ್ನೇಹಿತರೇ, ಇವುಗಳಿಗಾಗಿಯೇ ನಾವು ಎದುರುನೋಡುತ್ತಿದ್ದೇವೆ. ಆದ್ದರಿಂದ ನೀವು ಪಾಪವಿಲ್ಲದವರಾಗಿರಲು ಮತ್ತು ತಪ್ಪಿಲ್ಲದವರಾಗಿರಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿರಿ. ದೇವರೊಂದಿಗೆ ಸಮಾಧಾನದಿಂದಿರಲು ಪ್ರಯತ್ನಿಸಿರಿ.
15 ನಾವು ರಕ್ಷಣೆ ಹೊಂದಿಕೊಂಡದ್ದು ನಮ್ಮ ಪ್ರಭುವಿನ ತಾಳ್ಮೆಯಿಂದಲೇ ಎಂಬುದನ್ನು ನೆನಪು ಮಾಡಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ದೇವರಿಂದ ತನಗೆ ದೊರೆತ ಜ್ಞಾನದಿಂದ ನಿಮಗೆ ಪತ್ರ ಬರೆದಾಗ ಇದನ್ನೇ ತಿಳಿಸಿದನು.
16 ಪೌಲನು ತನ್ನ ಎಲ್ಲ ಪತ್ರಗಳಲ್ಲಿಯೂ ಇವುಗಳನ್ನು ಕುರಿತು ಇದೇ ರೀತಿ ಬರೆಯುತ್ತಾನೆ. ಕೆಲವು ಸಂದರ್ಭಗಳಲ್ಲಿ ಪೌಲನ ಪತ್ರಗಳಲ್ಲಿರುವವುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೆಲವರು ಅವುಗಳನ್ನು ಬೇಕೆಂದೇ ತಪ್ಪಾಗಿ ಅರ್ಥೈಸುತ್ತಾರೆ. ಅವರು ಮೂಢರಾಗಿದ್ದಾರೆ ಮತ್ತು ನಂಬಿಕೆಯಲ್ಲಿ ಬಲಹೀನರಾಗಿದ್ದಾರೆ. ಅವರು ಪವಿತ್ರ ಗ್ರಂಥದ ಇತರ ಭಾಗಗಳನ್ನೂ ತಪ್ಪಾಗಿ ವಿವರಿಸುತ್ತಾರೆ. ಹೀಗೆ ಅವರು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ.
17 ಪ್ರಿಯ ಸ್ನೇಹಿತರೇ, ನೀವು ಈಗಾಗಲೇ ಇದರ ಬಗ್ಗೆ ತಿಳಿದಿರುವಿರಿ. ಆದ್ದರಿಂದ ನೀವು ಎಚ್ಚರದಿಂದಿರಿ. ಆ ಕೆಟ್ಟಜನರು ತಾವು ಮಾಡುವ ಕೆಟ್ಟಕಾರ್ಯಗಳಿಂದ ನಿಮ್ಮನ್ನು ದಾರಿತಪ್ಪಿಸದಂತೆ ನೋಡಿಕೊಳ್ಳಿರಿ. ನಿಮ್ಮ ಬಲವಾದ ನಂಬಿಕೆಯನ್ನು ತೊರೆದುಬಿಡದಂತೆ ಎಚ್ಚರಿಕೆಯಾಗಿರಿ.
18 ನಿಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಲ್ಲಿಯೂ ತಿಳುವಳಿಕೆಯಲ್ಲಿಯೂ ಬೆಳೆಯುತ್ತಲೇ ಇರಿ. ಆತನಿಗೆ ಈಗಲೂ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.