24
— 19 —
1 ಕೆಡುಕರ ವಿಷಯದಲ್ಲಿ ಹೊಟ್ಟೆಕಿಚ್ಚುಪಡಬೇಡ; ಅವರೊಂದಿಗಿರಲು ಅಪೇಕ್ಷಿಸಬೇಡ.
2 ಅವರು ಕೇಡು ಮಾಡಲು ತಮ್ಮ ಹೃದಯಗಳಲ್ಲಿ ಆಲೋಚಿಸಿಕೊಳ್ಳುವರು; ಅವರು ಕೇಡನ್ನೇ ಕುರಿತು ಮಾತಾಡುವರು.
— 20 —
3 ಒಳ್ಳೆಯ ಮನೆಯು ಜ್ಞಾನದ ಮೇಲೂ ವಿವೇಕದ ಮೇಲೂ ಕಟ್ಟಲ್ಪಟ್ಟಿರುವುದು.
4 ಅದರ ಕೋಣೆಗಳು ಅಮೂಲ್ಯವಾದ ಭಂಡಾರಗಳಿಂದ ತುಂಬಿರುವುದು ಜ್ಞಾನದಿಂದಲೇ.
— 21 —
5 ಜ್ಞಾನವು ಮನುಷ್ಯನನ್ನು ಬಲಿಷ್ಠನನ್ನಾಗಿ ಮಾಡುವುದು. ವಿವೇಕವು ಮನುಷ್ಯನಿಗೆ ಬಲವನ್ನು ಕೊಡುತ್ತದೆ.
6 ಯುದ್ಧವನ್ನು ಆರಂಭಿಸುವ ಮೊದಲೇ ಎಚ್ಚರಿಕೆಯಿಂದ ಆಲೋಚಿಸು. ಜಯವನ್ನು ಗಳಿಸಬೇಕಾದರೆ ನಿನಗೆ ಅನೇಕ ಒಳ್ಳೆಯ ಆಲೋಚನೆಗಾರರು ಅಗತ್ಯ.
— 22 —
7 ಮೂಢರು ಜ್ಞಾನವನ್ನು ಅರ್ಥಮಾಡಿಕೊಳ್ಳಲಾರರು; ಮುಖ್ಯವಾದ ವಿಷಯಗಳನ್ನು ಚರ್ಚಿಸುವಾಗ ಮೂಢನು ಏನೂ ಹೇಳಲಾರ.
— 23 —
8 ಕೇಡುಮಾಡುವವನನ್ನು ಜನರು “ಕೆಡುಕ” ಎಂದು ಕರೆಯುವರು.
9 ಮೂಢನ ಆಲೋಚನೆಗಳೆಲ್ಲಾ ಪಾಪಮಯ. ದುರಾಭಿಮಾನಿಯು ಜನರಿಗೆ ಅಸಹ್ಯ.
— 24 —
10 ಕಷ್ಟದ ಸಮಯಗಳಲ್ಲಿ ನೀನು ಬಲಹೀನನಾಗಿದ್ದರೆ, ನೀನು ನಿಜವಾಗಿಯೂ ಬಲಹೀನ.
— 25 —
11 ಜನರು ಯಾರನ್ನಾದರೂ ಕೊಲ್ಲಬೇಕೆಂದಿದ್ದರೆ, ಅವನನ್ನು ಉಳಿಸಲು ಪ್ರಯತ್ನಿಸು.
12 “ಇದರ ಬಗ್ಗೆ ನನಗೆ ಗೊತ್ತಿರಲಿಲ್ಲ” ಎಂದು ನೀನು ಹೇಳಲಾಗದು. ಯೆಹೋವನಿಗೆ ಪ್ರತಿಯೊಂದು ತಿಳಿದಿದೆ. ನಿನ್ನ ಕಾರ್ಯಗಳ ಉದ್ದೇಶವೂ ಆತನಿಗೆ ತಿಳಿದಿದೆ. ಯೆಹೋವನು ನಿನ್ನನ್ನು ಗಮನಿಸಿ ನಿನ್ನ ಕಾರ್ಯಗಳಿಗೆ ಪ್ರತಿಫಲ ಕೊಡುವನು.
— 26 —
13 ನನ್ನ ಮಗನೇ, ಜೇನುತುಪ್ಪವನ್ನು ತಿನ್ನು, ಅದು ಒಳ್ಳೆಯದು. ಜೇನುಗೂಡಿನ ಜೇನುತುಪ್ಪ ಸಿಹಿ.
14 ಅದೇರೀತಿ ಜ್ಞಾನವು ನಿನ್ನ ಆತ್ಮಕ್ಕೆ ಒಳ್ಳೆಯದು. ನೀನು ಅದನ್ನು ಕಂಡುಕೊಂಡರೆ ನಿನಗೆ ಒಳ್ಳೆಯ ಭವಿಷ್ಯವಿರುವುದು; ನಿನ್ನ ನಿರೀಕ್ಷೆ ಎಂದಿಗೂ ಕೊನೆಗೊಳ್ಳುವುದಿಲ್ಲ.
— 27 —
15 ಒಳ್ಳೆಯವನಿಂದ ಕದ್ದುಕೊಳ್ಳುವ ಅಥವಾ ಅವನ ಮನೆಯನ್ನೇ ತೆಗೆದುಕೊಳ್ಳುವ ಕಳ್ಳನಂತೆ ಇರಬೇಡ.
16 ಒಳ್ಳೆಯವನು ಏಳುಸಲ ಬಿದ್ದರೂ ಅವನು ಮತ್ತೆ ಎದ್ದುನಿಲ್ಲುವನು. ಆದರೆ ಕೆಡುಕರು ಒಂದೇ ಆಪತ್ತಿನಿಂದ ಶಾಶ್ವತವಾಗಿ ಸೋತುಹೋಗುವರು.
— 28 —
17 ನಿನ್ನ ವೈರಿ ತೊಂದರೆಯಲ್ಲಿರುವಾಗ ಸಂತೋಷಪಡಬೇಡ; ಅವನು ಬೀಳುವಾಗಲೂ ಸಂತೋಷಪಡಬೇಡ.
18 ಇಲ್ಲವಾದರೆ, ಯೆಹೋವನು ನಿನ್ನ ಮೇಲೆ ಕೋಪಗೊಂಡು ನಿನ್ನ ವೈರಿಯನ್ನು ದಂಡಿಸದೆ ಹೋಗಬಹುದು.
— 29 —
19 ಕೆಡುಕರ ಬಗ್ಗೆ ಅತಿಯಾಗಿ ಬೇಸರಗೊಳ್ಳಬೇಡ, ಅವರ ಮೇಲೆ ಹೊಟ್ಟೆಕಿಚ್ಚುಪಡಬೇಡ.
20 ಆ ಕೆಡುಕರಿಗೆ ನಿರೀಕ್ಷೆಯಿಲ್ಲ. ಅವರ ಬೆಳಕು ಕತ್ತಲೆಯಾಗುವುದು.
— 30 —
21 ಮಗನೇ, ಯೆಹೋವನನ್ನೂ ರಾಜನನ್ನೂ ಗೌರವಿಸು. ಅವರನ್ನು ವಿರೋಧಿಸುವವರ ಜೊತೆ ಸೇರಬೇಡ.
22 ಯಾಕೆಂದರೆ ಅವರು ಬೇಗನೆ ನಾಶವಾಗುವರು. ದೇವರು ಮತ್ತು ರಾಜನು ತಮ್ಮ ವೈರಿಗಳಿಗೆ ಎಷ್ಟು ಕೇಡುಮಾಡಬಲ್ಲರೆಂಬುದು ನಿನಗೆ ತಿಳಿಯದು.
ಮತ್ತಷ್ಟು ಜ್ಞಾನೋಕ್ತಿಗಳು
23 ಇವು ಸಹ ಜ್ಞಾನಿಗಳ ಮಾತುಗಳು:
ನ್ಯಾಯಾಧಿಪತಿ ನ್ಯಾಯವಂತನಾಗಿರಬೇಕು. ಅವನು ಕೇವಲ ಪರಿಚಯದ ನಿಮಿತ್ತ ಯಾರಿಗೂ ಸಹಾಯ ಮಾಡಕೂಡದು.
24 ನ್ಯಾಯಾಧೀಶನು ಅಪರಾಧಿಗೆ, “ನೀನು ನಿರಪರಾಧಿ” ಎಂದು ಹೇಳಿದರೆ, ಜನರು ನ್ಯಾಯಾಧೀಶನನ್ನು ಶಪಿಸುವರು; ಜನಾಂಗಗಳು ಅವನನ್ನು ಖಂಡಿಸುವವು.
25 ಆದರೆ ನ್ಯಾಯಾಧೀಶನು ಅಪರಾಧಿಯನ್ನು ದಂಡಿಸಿದರೆ, ಜನರೆಲ್ಲರೂ ಅವನನ್ನು ಮೆಚ್ಚಿಕೊಳ್ಳುವರು; ಅವನಿಗೆ ಮಹಾ ಆಶೀರ್ವಾದ ದೊರೆಯುವುದು.
26 ಯಥಾರ್ಥವಾದ ಉತ್ತರ ಜನರೆಲ್ಲರನ್ನು ಸಂತೋಷಗೊಳಿಸುವುದು; ಅದು ತುಟಿಯ ಮೇಲಿನ ಮುದ್ದಿನಂತಿದೆ.
27 ಹೊಲಗಳಲ್ಲಿ ಬಿತ್ತುವ ಮೊದಲು ಮನೆಯನ್ನು ಕಟ್ಟಬೇಡ. ವಾಸಕ್ಕಾಗಿ ಮನೆಯನ್ನು ಕಟ್ಟುವ ಮೊದಲೇ ನೀನು ಬೇಸಾಯ ಮಾಡಲು ಸಿದ್ಧನಾಗಿರುವಿಯೋ ಎಂಬುದನ್ನು ಖಾತರಿಪಡಿಸಿಕೊ.
28 ಬೇರೊಬ್ಬನ ವಿರೋಧವಾಗಿ ಸಕಾರಣವಿಲ್ಲದೆ ಸಾಕ್ಷಿ ಹೇಳಬೇಡ, ಸುಳ್ಳನ್ನೂ ಹೇಳಬೇಡ.
29 “ಅವನು ನನಗೆ ಕೇಡುಮಾಡಿದನು. ಆದ್ದರಿಂದ ನಾನೂ ಅವನಿಗೆ ಕೇಡುಮಾಡುವೆ. ಅವನು ಮಾಡಿದ ಕೇಡುಗಳಿಗಾಗಿ ಸೇಡು ತೀರಿಸಿಕೊಳ್ಳುವೆ” ಎಂದು ಹೇಳಬೇಡ.
30 ಸೋಮಾರಿಯ ಹೊಲದ ಸಮೀಪದಲ್ಲೂ ಅಜ್ಞಾನಿಯ ದ್ರಾಕ್ಷಿತೋಟದ ಬಳಿಯಲ್ಲೂ ನಡೆದುಹೋದೆನು.
31 ಆ ಹೊಲಗಳಲ್ಲಿ ಮುಳ್ಳುಗಿಡಗಳೂ ಉಪಯೋಗವಿಲ್ಲದ ಸಸಿಗಳೂ ಬೆಳೆಯುತ್ತಿದ್ದವು. ಹೊಲಗಳ ಸುತ್ತಲೂ ಇದ್ದ ಗೋಡೆ ಒಡೆದುಹೋಗಿತ್ತು; ಕುಸಿದು ಬೀಳುತ್ತಿತ್ತು.
32 ಅದನ್ನು ನೋಡಿ, ಆಲೋಚಿಸಿದೆ; ಒಂದು ಪಾಠವನ್ನು ಕಲಿತುಕೊಂಡೆ;
33 ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ವಿಶ್ರಾಂತಿ, ಇನ್ನು ಸ್ವಲ್ಪ ಕೈಮುದುರಿಕೊಳ್ಳುವೆ, ಮಧ್ಯಾಹ್ನ ಇನ್ನು ಸ್ವಲ್ಪ ನಿದ್ರೆ ಮಾಡುವೆ ಎನ್ನುವೆಯಾ?
34 ಇವು ನಿನ್ನನ್ನು ಬೇಗನೆ ಬಡವನನ್ನಾಗಿ ಮಾಡಿ ಬರಿದು ಮಾಡುತ್ತದೆ; ಇದ್ದಕ್ಕಿದ್ದಂತೆ ಬಂದು ಎಲ್ಲವನ್ನು ದೋಚಿಕೊಂಡು ಹೋಗುವ ಕಳ್ಳನಂತಿವೆ.