24
ರಚನೆಗಾರ: ದಾವೀದ.
ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನವೇ.
ಲೋಕವೂ ಅದರ ನಿವಾಸಿಗಳೂ ಆತನವೇ.
ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ.
ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.
 
ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು?
ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು?
ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ
ಶುದ್ಧ ಹೃದಯವುಳ್ಳವರೂ
ನನ್ನ ಹೆಸರಿನಲ್ಲಿ* ಮೋಸ ಪ್ರಮಾಣ ಮಾಡದವರೂ
ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.
 
ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು;
ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
ಆತನನ್ನು ಅನುಸರಿಸುವವರು ಇಂಥವರೇ.
ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.
 
ಹೆಬ್ಬಾಗಿಲುಗಳೇ, ಉನ್ನತವಾಗಿರಿ!
ಪುರಾತನ ದ್ವಾರಗಳೇ, ತೆರದುಕೊಂಡಿರಿ.
ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
ಮಹಿಮಾಸ್ವರೂಪನಾದ ಈ ರಾಜನು ಯಾರು?
ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ
ಯೆಹೋವನೇ ಆತನು.
 
ಹೆಬ್ಬಾಗಿಲುಗಳೇ, ಉನ್ನತವಾಗಿರಿ!
ಪುರಾತನ ದ್ವಾರಗಳೇ, ತೆರೆದುಕೊಂಡಿರಿ.
ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
10 ಮಹಿಮಾಸ್ವರೂಪನಾದ ಈ ರಾಜನು ಯಾರು?
ಸೇನಾಧೀಶ್ವರನಾದ ಯೆಹೋವನೇ ಆ ರಾಜನು. ಮಹಿಮಾಸ್ವರೂಪನಾದ ರಾಜನು ಆತನೇ.
 
* 24:4 ನನ್ನ ಹೆಸರು ಅಕ್ಷರಶಃ, “ನನ್ನ ಪ್ರಾಣ.”