28
ರಚನೆಗಾರ: ದಾವೀದ.
ಯೆಹೋವನೇ, ನೀನೇ ನನ್ನ ಬಂಡೆ.
ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ
ಸತ್ತು ಸಮಾಧಿಯಲ್ಲಿರುವವರಂತೆ ಜನರು ನನ್ನನ್ನು ಪರಿಗಣಿಸುವರು.
ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತರೆ.*
ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
ಅವರಿಗೆ ತಕ್ಕ ದಂಡನೆಯನ್ನು ಕೊಡು.
ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
ನಿತ್ಯನಾಶಮಾಡುವನು.
 
ಯೆಹೋವನಿಗೆ ಸ್ತೋತ್ರವಾಗಲಿ!
ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ
ಆತನು ನನಗೆ ಸಹಾಯಮಾಡಿದನು. ಆದಕಾರಣ ನನ್ನ ಹೃದಯವು ಹರ್ಷಿಸುವುದು;
ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
ಯೆಹೋವನು ತನ್ನ ಜನರಿಗೆ ಬಲವೂ
ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.
 
ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.
 
* 28:3 ಅವರು … ಮಾಡುತ್ತಾರೆ ಇದು ಶ್ಲೇಷ ಮಾತುಗಳ ಸರಣಿ. ಹೀಬ್ರೂ ಭಾಷೆಯಲ್ಲಿ “ನೆರೆಯವನು” ಎಂಬ ಪದವು “ದುಷ್ಟನು” ಎಂಬ ಪದದಂತೆ ಕಂಡುಬರುತ್ತದೆ. “ಸಮಾಧಾನ” ಎಂಬ ಪದಕ್ಕೆ ಹೀಬ್ರೂ ಭಾಷೆಯಲ್ಲಿ “ಶಾಲೋಮ್” ಎನ್ನುತ್ತಾರೆ. ಈ ಪದವನ್ನು ಒಬ್ಬರನ್ನೊಬ್ಬರು ಅಭಿನಂದಿಸುವಾಗ ಉಪಯೆಗಿಸುತ್ತಾರೆ.