33
ನೀತಿವಂತರೆ, ಯೆಹೋವನಲ್ಲಿ ಉಲ್ಲಾಸಪಡಿರಿ.
ಯಥಾರ್ಥವಂತರು ಆತನನ್ನು ಸ್ತುತಿಸುವುದು ಯೋಗ್ಯವಾಗಿದೆ.
ಲೈರ್‌* ವಾದ್ಯವನ್ನು ನುಡಿಸುತ್ತಾ ಯೆಹೋವನನ್ನು ಸ್ತುತಿಸಿರಿ!
ಹತ್ತುತಂತಿಗಳ ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ಆತನನ್ನು ಕೊಂಡಾಡಿರಿ.
ಆತನಿಗೆ ಹೊಸ ಹಾಡನ್ನು ಹಾಡಿರಿ!
ಹಾರ್ಪ್‌ವಾದ್ಯಗಳನ್ನು ಇಂಪಾಗಿ ನುಡಿಸುತ್ತಾ ಆನಂದದಿಂದ ಆರ್ಭಟಿಸಿರಿ.
ಯೆಹೋವನ ವಾಕ್ಯವು ಸತ್ಯವಾದದ್ದು!
ಆತನ ಕಾರ್ಯಗಳೆಲ್ಲಾ ಭರವಸೆಗೆ ಯೋಗ್ಯವಾಗಿವೆ.
ಆತನು ನೀತಿಯನ್ನೂ ನ್ಯಾಯವನ್ನೂ ಪ್ರೀತಿಸುವನು.
ಯೆಹೋವನ ಶಾಶ್ವತವಾದ ಪ್ರೀತಿಯು ಭೂಲೋಕವನ್ನೆಲ್ಲಾ ತುಂಬಿಕೊಂಡಿದೆ.
ಯೆಹೋವನು ಆಜ್ಞಾಪಿಸಲು ಆಕಾಶವು ಸೃಷ್ಟಿಯಾಯಿತು!
ಆತನ ಉಸಿರು ಭೂಮಿಯ ಮೇಲಿರುವ ಸಮಸ್ತವನ್ನು ಸೃಷ್ಟಿಸಿತು.
ಆತನು ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ನಿರ್ಮಿಸಿದನು;
ಮಹಾಸಾಗರಕ್ಕೆ ಸ್ಥಳವನ್ನು ಗೊತ್ತುಪಡಿಸಿದನು.
ಭೂಲೋಕದವರೆಲ್ಲರೂ ಯೆಹೋವನಲ್ಲಿ ಭಯಭಕ್ತಿಯಿಂದಿರಲಿ.
ಭೂನಿವಾಸಿಗಳೆಲ್ಲರೂ ಆತನಿಗೆ ಭಯಪಡಲಿ.
ಯಾಕೆಂದರೆ ಆತನು ನುಡಿದಾಗ ಭೂಲೋಕವು ಸೃಷ್ಟಿಯಾಯಿತು;
ಆತನು ಆಜ್ಞಾಪಿಸಿದಾಗ ಸಮಸ್ತವು ಉಂಟಾಯಿತು.
10 ಯೆಹೋವನು ಜನಾಂಗಗಳ ಉದ್ದೇಶಗಳನ್ನು ವ್ಯರ್ಥಗೊಳಿಸಬಲ್ಲನು;
ಅವರ ಆಲೋಚನೆಗಳನ್ನು ನಿಷ್ಪಲ ಮಾಡಬಲ್ಲನು.
11 ಆದರೆ ಯೆಹೋವನ ಯೋಜನೆಗಳು ಶಾಶ್ವತವಾಗಿವೆ.
ಆತನ ಆಲೋಚನೆಗಳು ಸದಾಕಾಲಕ್ಕೂ ಒಳ್ಳೆಯದಾಗಿವೆ.
12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.
 
* 33:2 ಲೈರ್ ಹಾರ್ಪ್‌ವಾದ್ಯದಂತೆ ಹಲವಾರು ತಂತಿಗಳಿರುವ ವಾದ್ಯ. 33:3 ಹೊಸ ಹಾಡು ದೇವರು ತನ್ನ ಜನರಿಗಾಗಿ ಯಾವುದಾದರೂ ಹೊಸದಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡಿದಾಗಲೆಲ್ಲಾ ಅದರ ಬಗ್ಗೆ ಅವರು ಹೊಸ ಹಾಡನ್ನು ಬರೆಯುತ್ತಿದ್ದರು. ಆದ್ದರಿಂದ ದೇವರು ತನ್ನ ಜನರಿಗಾಗಿ ಹೊಸ ಕಾರ್ಯವನ್ನು ಮಾಡಿದ್ದಾನೆಂದು ಇದು ತೋರಿಸುತ್ತದೆ.