23
ದೇವಾಲಯದಲ್ಲಿ ಲೇವಿಯರ ಸೇವಾಕಾರ್ಯ
1 ದಾವೀದನು ಬಹಳ ಮುದುಕನಾದಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರೇಲರ ಅರಸನನ್ನಾಗಿ ಮಾಡಿದನು.
2 ದಾವೀದನು ರಾಜ್ಯದ ಎಲ್ಲಾ ಮುಖಂಡರುಗಳನ್ನೂ ಯಾಜಕರನ್ನೂ ಲೇವಿಯರನ್ನೂ ಕರೆದನು.
3 ಅವನು ಮೂವತ್ತು ವರ್ಷದ ಮತ್ತು ಅದಕ್ಕಿಂತ ಮೇಲ್ಪಟ್ಟ ಲೇವಿಯರನ್ನು ಲೆಕ್ಕಿಸಿದಾಗ ಒಟ್ಟು ಮೂವತ್ತೆಂಟು ಸಾವಿರ ಮಂದಿ ಪುರುಷರಿದ್ದರು.
4 ದಾವೀದನು, “ಇವರಲ್ಲಿ ಇಪ್ಪತ್ನಾಲ್ಕು ಸಾವಿರ ಮಂದಿ ಲೇವಿಯರು ದೇವಾಲಯದ ಕಟ್ಟಡದ ಮೇಲ್ವಿಚಾರಕರಾಗಿಯೂ ಆರು ಸಾವಿರ ಮಂದಿ ಲೇವಿಯರು ನ್ಯಾಯಾಧೀಶರಾಗಿಯೂ ಕಾನೂನು ಪಾಲಕರಾಗಿಯೂ
5 ನಾಲ್ಕು ಸಾವಿರ ಮಂದಿ ಲೇವಿಯರು ದ್ವಾರಪಾಲಕರಾಗಿಯೂ ನಾಲ್ಕು ಸಾವಿರ ಮಂದಿ ಲೇವಿಯರು ಗಾಯಕರಾಗಿಯೂ ಸೇವೆ ಮಾಡಬೇಕು. ನಾನು ಅವರಿಗಾಗಿ ವಿಶೇಷ ವಾದ್ಯಗಳನ್ನು ತಯಾರಿಸಿಟ್ಟಿರುತ್ತೇನೆ. ಅವರು ಅವುಗಳನ್ನು ನುಡಿಸುತ್ತಾ ದೇವರಿಗೆ ಸ್ತೋತ್ರ ಮಾಡಬೇಕು” ಅಂದನು.
6 ದಾವೀದನು ಲೇವಿಯರನ್ನು ಮೂರು ಗುಂಪುಗಳನ್ನಾಗಿ ಮಾಡಿದನು. ಗೇರ್ಷೋನ್ಯರು, ಕೆಹಾತ್ಯರು ಮತ್ತು ಮೆರಾರೀಯರು.
ಗೇರ್ಷೋನ್ ಕುಲದವರು
7 ಗೇರ್ಷೋನ್ಕುಲದಲ್ಲಿ ಲದ್ದಾನ್ ಮತ್ತು ಶಿಮ್ಮೀ ಎಂಬವರಿದ್ದರು.
8 ಲದ್ದಾನನಿಗೆ ಮೂವರು ಗಂಡುಮಕ್ಕಳು. ಮೊದಲನೆ ಮಗನು ಯೆಹೀಯೇಲ್. ಉಳಿದ ಇನ್ನಿಬ್ಬರು ಜೀತಾಮ್ ಮತ್ತು ಯೋವೇಲ್.
9 ಶಿಮ್ಮೀಯನ ಗಂಡುಮಕ್ಕಳು ಯಾರೆಂದರೆ: ಶೆಲೋಮೋತ್, ಹಜೀಯೇಲ್ ಮತ್ತು ಹಾರಾನ್. ಈ ಮೂವರು ಲದ್ದಾನನ ಸಂತತಿಯವರ ಮುಖಂಡರಾಗಿದ್ದರು.
10 ಶಿಮ್ಮೀಗೆ ನಾಲ್ಕು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಯಹತ್, ಜೀಜ, ಯೆಯೂಷ್ ಮತ್ತು ಬೆರೀಯ.
11 ಯಹತನು ಚೊಚ್ಚಲಮಗನು. ಜೀಜನು ಎರಡನೆಯವನು. ಯೆಯೂಷನಿಗೂ ಬೆರೀಯನಿಗೂ ಹೆಚ್ಚು ಮಕ್ಕಳಿರಲಿಲ್ಲ. ಆದ್ದರಿಂದ ಅವರಿಬ್ಬರನ್ನು ಒಂದೇ ಕುಟುಂಬವೆಂದು ಲೆಕ್ಕಿಸಲಾಯಿತು.
ಕೆಹಾತನ ಕುಲದವರು
12 ಕೆಹಾತನಿಗೆ ನಾಲ್ಕು ಮಂದಿ ಗಂಡುಮಕ್ಕಳು: ಅಮ್ರಾಮ್, ಇಚ್ಚಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
13 ಅಮ್ರಾಮನ ಗಂಡುಮಕ್ಕಳು ಯಾರೆಂದರೆ: ಆರೋನ್ ಮತ್ತು ಮೋಶೆ. ಆರೋನನು ಮತ್ತು ಅವನ ಸಂತತಿಯವರು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು; ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪ ಸುಡುವುದಕ್ಕಾಗಿಯೂ ಆತನ ಸೇವೆಮಾಡುವುದಕ್ಕಾಗಿಯೂ ಯೆಹೋವನ ಹೆಸರಿನಲ್ಲಿ ಜನರನ್ನು ಸದಾಕಾಲ ಆಶೀರ್ವದಿಸುವುದಕ್ಕಾಗಿಯೂ ಆರಿಸಲ್ಪಟ್ಟರು.
14 ಮೋಶೆಯು ದೇವರ ಮನುಷ್ಯನಾಗಿದ್ದನು. ಅವನ ಮಕ್ಕಳು ಲೇವಿಕುಲದಲ್ಲಿ ಸೇರಿಸಲ್ಪಟ್ಟಿದ್ದರು.
15 ಮೋಶೆಯ ಮಕ್ಕಳು ಯಾರೆಂದರೆ: ಗೇರ್ಷೋಮ್ ಮತ್ತು ಎಲೀಯೆಜೆರ್,
16 ಗೇರ್ಷೋಮನ ಚೊಚ್ಚಲ ಮಗನು ಶೆಬೂವೇಲ.
17 ಎಲೀಯೆಜರನ ಚೊಚ್ಚಲ ಮಗನು ರೆಹಬ್ಯ. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಕ್ಕಳಿದ್ದರು.
18 ಇಚ್ಹಾರನ ಚೊಚ್ಚಲಮಗನು ಶೆಲೋಮೋತ್.
19 ಹೆಬ್ರೋನಿನ ಚೊಚ್ಚಲಮಗನು ಯೆರೀಯ. ಎರಡನೆಯ ಮಗನು ಅಮರ್ಯ. ಯಹಜೀಯೇಲನು ಮೂರನೆಯ ಮಗ. ಯೆಕಮ್ಮಾಮನು ನಾಲ್ಕನೆಯ ಮಗ.
20 ಉಜ್ಜೀಯೇಲನ ಚೊಚ್ಚಲಮಗನು ಮೀಕ; ಇಷ್ಷೀಯನು ಅವನ ಎರಡನೆಯ ಮಗ.
ಮೆರಾರೀಯ ಕುಲದವರು
21 ಮಹ್ಲೀ ಮತ್ತು ಮೂಷೀ ಮೆರಾರೀಯ ಗಂಡುಮಕ್ಕಳು. ಮಹ್ಲೀಯ ಮಕ್ಕಳು ಯಾರೆಂದರೆ: ಎಲ್ಲಾಜಾರ್ ಮತ್ತು ಕೀಷ್.
22 ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರವೇ ಇದ್ದರು. ಇವರು ತಮ್ಮ ಸಂಬಂಧಿಕರಲ್ಲಿಯೇ ಮದುವೆಯಾದರು. ಕೀಷನ ಗಂಡುಮಕ್ಕಳು ಅವರ ಸಂಬಂಧಿಕರಾಗಿದ್ದರು.
23 ಮೂಷಿಯ ಗಂಡುಮಕ್ಕಳು ಯಾರೆಂದರೆ: ಮಹ್ಲೀ, ಏದೆರ್ ಮತ್ತು ಯೆರೇಮೋತ್. ಅವನಿಗೆ ಮೂರು ಮಂದಿ ಗಂಡುಮಕ್ಕಳು.
ಲೇವಿಯರ ಕೆಲಸ
24 ಇವರೇ ಲೇವಿಯರ ಸಂತತಿಯವರು. ಇವರೇ ಆಯಾ ಕುಟುಂಬಗಳ ಪ್ರಧಾನರು. ಇವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಲೆಕ್ಕಿಸಲಾಯಿತು. ಅವರು ದೇವಾಲಯದಲ್ಲಿ ಸೇವೆಮಾಡಿದರು.
25 ದಾವೀದನು, “ಇಸ್ರೇಲರ ದೇವರಾದ ಯೆಹೋವನು ತನ್ನ ಜನರಿಗೆ ಸಮಾಧಾನವನ್ನು ಅನುಗ್ರಹಿಸಿದ್ದಾನೆ. ದೇವರು ನಿರಂತರವೂ ಜೆರುಸಲೇಮಿನಲ್ಲಿ ವಾಸಿಸಲು ಬಂದಿರುತ್ತಾನೆ.
26 ಆದ್ದರಿಂದ ಇನ್ನು ಮುಂದೆ ಲೇವಿಯರಿಗೆ ದೇವದರ್ಶನ ಗುಡಾರವನ್ನಾಗಲಿ ಅದರ ಸಾಮಾಗ್ರಿಗಳನ್ನಾಗಲಿ ಹೊರುವ ಅವಶ್ಯವಿಲ್ಲ” ಎಂದು ಹೇಳಿದ್ದನು.
27 ದಾವೀದನ ಕೊನೇ ಆಜ್ಞೆಯ ಪ್ರಕಾರ ಲೇವಿ ವಂಶದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಲೆಕ್ಕಿಸಲಾಯಿತು.
28 ಲೇವಿಯರು ಆರೋನನ ಸಂತತಿಯವರಾದ ಯಾಜಕರಿಗೆ ದೇವಾಲಯದಲ್ಲಿ ಸೇವೆಮಾಡಲು ಸಹಾಯ ಮಾಡುತ್ತಿದ್ದರು. ಇದಲ್ಲದೆ ಅವರು ದೇವಾಲಯದ ಹೊರಗಿನ ಅಂಗಳವನ್ನೂ ದೇವಾಲಯದ ಎಡಬಲಗಡೆಗಳಲ್ಲಿದ್ದ ಕೋಣೆಗಳನ್ನೂ ನೋಡಿಕೊಳ್ಳುತ್ತಿದ್ದರು; ಪರಿಶುದ್ಧ ಸಾಮಾಗ್ರಿಗಳನ್ನು ಯಾವಾಗಲೂ ಶುದ್ಧವಾಗಿಡುತ್ತಿದ್ದರು. ಹೀಗೆ ದೇವಾಲಯದ ಸೇವೆಯನ್ನು ಮಾಡುತ್ತಿದ್ದರು.
29 ಮಾತ್ರವಲ್ಲದೆ ಅವರು ಗೋಧಿಹಿಟ್ಟನ್ನು ಅಳೆದು ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ದೇವಾಲಯದೊಳಗಿರುವ ಮೇಜಿನ ಮೇಲೆ ಇಡುತ್ತಿದ್ದರು.
30 ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ದೇವಾಲಯದೊಳಗೆ ಸ್ತುತಿಗೀತೆಗಳನ್ನು ಹಾಡಿ ದೇವರನ್ನು ಮಹಿಮೆಪಡಿಸುತ್ತಿದ್ದರು.
31 ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಬೇರೆ ವಿಶೇಷ ದಿನಗಳಲ್ಲಿಯೂ ದೇವರಿಗೆ ಸಮರ್ಪಿಸುವ ಸರ್ವಾಂಗಹೋಮವನ್ನು ತಯಾರು ಮಾಡುತ್ತಿದ್ದರು. ಪ್ರತಿದಿನ ಎಷ್ಟು ಮಂದಿ ಲೇವಿಯರು ಸೇವೆಮಾಡಬೇಕೆಂಬುದನ್ನು ಮೊದಲೇ ಗೊತ್ತುಪಡಿಸಲಾಗಿತ್ತು.
32 ಹೀಗೆ ಲೇವಿಯರು ತಾವು ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿದರು. ಅವರು ಪವಿತ್ರ ಗುಡಾರವನ್ನು ಮತ್ತು ಪವಿತ್ರಸ್ಥಳವನ್ನು ನೋಡಿಕೊಂಡರು; ತಮ್ಮ ಸಂಬಂಧಿಕರೂ ಆರೋನನ ಕುಲದವರೂ ಆಗಿದ್ದ ಯಾಜಕರಿಗೆ ಸಹಾಯ ಮಾಡಿದರು.