27
ಸೈನಿಕ ತಂಡಗಳು
1 ಅರಸನ ಸೈನ್ಯದಲ್ಲಿ ಸೇವೆಮಾಡಿದವರ ಪಟ್ಟಿ. ಒಂದೊಂದು ತಂಡದವರು, ಇಸ್ರೇಲಿನ ಸೈನ್ಯಾಧಿಕಾರಿಗಳು, ಸಹಸ್ರಾಧಿಪತಿಗಳು ಮತ್ತು ಇತರ ಅಧಿಕಾರಿಗಳು ವರ್ಷದ ಆಯಾ ತಿಂಗಳಲ್ಲಿ ತಮ್ಮ ತಂಡದ ಸರದಿಯ ಪ್ರಕಾರ ಅರಸನ ವಿವಿಧ ಸೇವೆಮಾಡುತ್ತಿದ್ದರು. ಸೈನ್ಯದ ಪ್ರತಿಯೊಂದು ತಂಡದಲ್ಲಿ ಇಪ್ಪತ್ನಾಲ್ಕು ಸಾವಿರ ಪುರುಷರಿದ್ದರು.
2 ಮೊದಲನೆಯ ತಿಂಗಳಲ್ಲಿ ಕಾರ್ಯಾಚರಣೆಯಲ್ಲಿರಬೇಕಾದ ತಂಡಕ್ಕೆ ಯಾಷೊಬ್ಬಾಮನು ಮುಖ್ಯಸ್ತನಾಗಿದ್ದನು. ಇವನು ಜಬ್ದೀಯೇಲನ ಮಗನಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.
3 ಯಾಷೊಬ್ಬಾಮನು ಪೆರೆಚನ ಸಂತತಿಯವನಾಗಿದ್ದನು. ಇವನು ವರ್ಷದ ಮೊದಲನೆಯ ತಿಂಗಳಲ್ಲಿ ಸೇವೆಮಾಡುವ ಸೈನ್ಯಾಧಿಕಾರಿಯಾಗಿದ್ದನು.
4 ಎರಡನೆಯ ತಿಂಗಳಿನ ಸೈನ್ಯಾಧಿಕಾರಿ ಅಹೋಹೀಯನಾದ ದೋದೈ. ಮಿಕ್ಲೋತ್ ಎಂಬವನು ಈ ತಂಡದ ನಾಯಕನಾಗಿದ್ದನು. ಒಟ್ಟು ಇಪ್ಪತ್ತನಾಲ್ಕು ಸಾವಿರ ಮಂದಿ ದೋದೈನ ತಂಡದಲ್ಲಿದ್ದರು.
5 ಮೂರನೆಯ ಸೈನ್ಯಾಧಿಪತಿಯು ಬೆನಾಯ. ಇವನು ಯೆಹೋಯಾದನ ಮಗನಾಗಿದ್ದನು. ಇವನು ಮಹಾಯಾಜಕನಾಗಿದ್ದನು. ಇವನೊಂದಿಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಕಾಲಾಳುಗಳು ಇದ್ದರು.
6 ಮೂವತ್ತು ವೀರರಲ್ಲಿ ಒಬ್ಬನಾದ ಬೆನಾಯನೇ ಇವನು. ಬೆನಾಯನು ಅವರ ನಾಯಕನಾಗಿದ್ದನು. ಬೆನಾಯನ ಮಗ ಅಮ್ಮೀಜಾಬಾದನು ಬೆನಾಯನ ತಂಡದ ಅಧಿಪತಿಯಾಗಿದ್ದನು.
7 ನಾಲ್ಕನೆಯ ಸೇನಾಪತಿಯು ಅಸಾಹೇಲ. ಇವನು ವರ್ಷದ ನಾಲ್ಕನೆಯ ತಿಂಗಳಿನಲ್ಲಿ ರಾಜ್ಯದ ಸೈನ್ಯದ ಅಧಿಪತಿಯಾಗಿದ್ದನು. ಇವನು ಯೋವಾಬನ ಸೋದರ. ಇವನ ನಂತರ ಅಸಾಹೇಲನ ಮಗನಾದ ಜೆಬದ್ಯನು ಸೈನ್ಯಾಧಿಕಾರಿಯಾದನು. ಅಸಾಹೇಲನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.
8 ಐದನೆಯ ಸೈನ್ಯಾಧಿಕಾರಿಯು ಶಮ್ಹೂತ. ಇವನು ಇಜ್ರಾಹ್ಯನ ಸಂತತಿಯವನಾಗಿದ್ದನು. ವರ್ಷದ ಐದನೆಯ ತಿಂಗಳಿನ ಸೈನ್ಯದ ಮುಖ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
9 ಆರನೆಯ ಸೈನ್ಯಾಧಿಪತಿಯು ಐರನು. ಇವನು ವರ್ಷದ ಆರನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನು ತೆಕೋವನದ ಇಕ್ಕೇಷನ ಮಗ. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
10 ಹೆಲೆಚನು ಏಳನೆಯ ಸೈನ್ಯಾಧಿಕಾರಿ. ವರ್ಷದ ಏಳನೆಯ ತಿಂಗಳಲ್ಲಿ ಇವನು ಸೈನ್ಯಾಧಿಕಾರಿಯಾಗಿದ್ದನು. ಇವನು ಎಫ್ರಾಯೀಮ್ ಸಂತತಿಯ ಪೆಲೋನ್ಯನಾಗಿದ್ದನು. ಇವನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
11 ಎಂಟನೆಯ ಸೇನಾಧಿಪತಿಯ ಹೆಸರು ಸಿಬ್ಬಕೈ. ಇವನು ಹುಷ ಊರಿನ ಜೆರಹನ ಸಂತತಿಯವನು. ವರ್ಷದ ಎಂಟನೆಯ ತಿಂಗಳಿನ ಸೇನಾಧಿಪತಿ. ಇವನ ಕೈ ಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
12 ಒಂಭತ್ತನೆಯ ಸೇನಾಪತಿ ಅಬೀಯೆಜೆರ್. ಇವನು ಅನತೋತ್ ಊರಿನ ಬೆನ್ಯಾಮೀನ್ ಕುಲದವನು. ವರ್ಷದ ಒಂಭತ್ತನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
13 ಹತ್ತನೆಯ ಸೇನಾಪತಿ ಮಹರೈ. ಇವನು ನೆಟೋಫದ ಜೆರಹನ ಸಂತತಿಯವನು. ವರ್ಷದ ಹತ್ತನೆಯ ತಿಂಗಳಿಗೆ ಇವನು ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
14 ಹನ್ನೊಂದನೆಯ ಸೇನಾಪತಿ ಪಿರ್ರಾತೋನ್ಯನಾದ ಬೆನಾಯ. ಇವನು ಎಫ್ರಾಯೀಮ್ ಕುಲದ ಪಿರ್ರಾತೋನ್ ಎಂಬಲ್ಲಿಂದ ಬಂದವನು. ವರ್ಷದ ಹನ್ನೊಂದನೆಯ ತಿಂಗಳಿಗೆ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಸೈನಿಕರಿದ್ದರು.
15 ಹನ್ನೆರಡನೆಯ ಸೇನಾಪತಿ ಹೆಲ್ದೈ. ಇವನು ನೆಟೋಫ ಊರಿನ ಒತ್ನೀಯೇಲನ ಸಂತತಿಯವನು. ವರ್ಷದ ಹನ್ನೆರಡನೆಯ ತಿಂಗಳಿನಲ್ಲಿ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಸೈನಿಕರಿದ್ದರು.
ಕುಲಪ್ರಧಾನರು
16 ಇಸ್ರೇಲ್ ಕುಲಗಳ ನಾಯಕರು ಯಾರೆಂದರೆ:
ರೂಬೇನ್ಯರಲ್ಲಿ ಜಿಕ್ರೀಯ ಮಗ ಎಲೀಯೆಜರ್.
ಸಿಮೆಯೋನ್ಯರಲ್ಲಿ ಮಾಕನ ಮಗನಾದ ಶೆಫಟ್ಯ.
17 ಲೇವಿಯರಲ್ಲಿ ಕೆಮುವೇಲನ ಮಗನಾದ ಹಷಬ್ಯ.
ಆರೋನ್ಯರಲ್ಲಿ ಚಾದೋಕ್.
18 ಯೆಹೂದ್ಯರಲ್ಲಿ ಎಲೀಹು (ದಾವೀದನ ಅಣ್ಣಂದಿರಲ್ಲೊಬ್ಬನು.)
ಇಸ್ಸಾಕಾರರಲ್ಲಿ ಮೀಕಾಯೇಲನ ಮಗ ಒಮ್ರಿ.
19 ಜೆಬೂಲೂನ್ಯರಲ್ಲಿ ಓಬದ್ಯನ ಮಗನಾದ ಇಷ್ಮಾಯ.
ನಫ್ತಾಲ್ಯರಲ್ಲಿ ಅಜ್ರೀಯೇಲನ ಮಗನಾದ ಯೆರೀಮೋತ್.
20 ಎಫ್ರಾಯೀಮ್ಯರಲ್ಲಿ ಅಜಜ್ಯನ ಮಗನಾದ ಹೊಷೇಯನು.
ಪಶ್ಚಿಮ ಮನಸ್ಸೆಯವರಲ್ಲಿ ಪೆದಾಯನ ಮಗ ಯೋವೇಲ್.
21 ಪೂರ್ವ ಮನಸ್ಸೆಯವರಲ್ಲಿ ಜೆಕರ್ಯನ ಮಗ ಇದ್ದೋ.
ಬೆನ್ಯಾಮೀನ್ಯರಲ್ಲಿ ಅಬ್ನೇರನ ಮಗ ಯಗಸೀಯೇಲ್.
22 ದಾನ್ಯರಲ್ಲಿ ಯೆರೋಹಾಮನ ಮಗ ಅಜರೇಲ್.
ಇವರು ಇಸ್ರೇಲ್ ಗೋತ್ರಪ್ರಧಾನರು.
ದಾವೀದನು ಇಸ್ರೇಲರನ್ನು ಲೆಕ್ಕಿಸಿದ್ದು
23 ದೇವರು ಇಸ್ರೇಲರನ್ನು ಆಕಾಶದ ನಕ್ಷತ್ರದಷ್ಟು ಹೆಚ್ಚಿಸುವೆನೆಂದು ವಾಗ್ದಾನ ಮಾಡಿದ್ದ ಪ್ರಕಾರ ಇಸ್ರೇಲರ ಸಂಖ್ಯೆ ಅಪರಿಮಿತವಾಗಿತ್ತು. ಆದ್ದರಿಂದ ದಾವೀದನು ಇಪ್ಪತ್ತು ವರ್ಷ ಪ್ರಾಯದ ಮೇಲ್ಪಟ್ಟ ಗಂಡಸರನ್ನು ಮಾತ್ರ ಲೆಕ್ಕಿಸುವ ಆಲೋಚನೆ ಮಾಡಿದನು.
24 ಚೆರೂಯಳ ಮಗನಾದ ಯೋವಾಬನು ಲೆಕ್ಕಿಸುವ ಕಾರ್ಯ ಪ್ರಾರಂಭಿಸಿದನು. ಆದರೆ ಅವನು ಪೂರ್ಣಗೊಳಿಸಲಿಲ್ಲ. ದೇವರು ಇಸ್ರೇಲರ ಮೇಲೆ ಕೋಪಗೊಂಡನು. ಇದರಿಂದಾಗಿ ಇಸ್ರೇಲರ ಜನಸಂಖ್ಯೆಯನ್ನು ದಾವೀದನ ಚರಿತ್ರಾ ಪುಸ್ತಕದಲ್ಲಿ ದಾಖಲೆ ಮಾಡಲಿಲ್ಲ.
ಅರಸನ ಆಡಳಿತ ವರ್ಗದವರು
25 ಅರಸನ ಆಸ್ತಿಗೆ ಜವಾಬ್ದಾರರಾಗಿದ್ದವರ ಪಟ್ಟಿ:
ಅದೀಯೇಲನ ಮಗನಾದ ಅಜ್ಮಾವೆತ್ ರಾಜನ ಉಗ್ರಾಣಗಳ ಅಧಿಕಾರಿಯಾಗಿದ್ದನು.
ಉಜ್ಜೀಯನ ಮಗನಾದ ಯೋನಾತಾನ್ ಚಿಕ್ಕ ಊರುಗಳಲ್ಲಿ, ಹಳ್ಳಿಗಳಲ್ಲಿ, ಹೊಲಗಳಲ್ಲಿ ಮತ್ತು ಗೋಪುರಗಳಲ್ಲಿ ಇದ್ದ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.
26 ಕೆಲೂಬನ ಮಗನಾದ ಎಜ್ರೀಯು ರಾಜನ ವ್ಯವಸಾಯಗಾರರಿಗೆ ಅಧಿಕಾರಿಯಾಗಿದ್ದನು.
27 ರಾಮಾದ ಶಿಮ್ಮೀಯು ರಾಜನ ದ್ರಾಕ್ಷಿತೋಟಗಳ ಅಧಿಕಾರಿಯಾಗಿದ್ದನು.
ಶಿಪ್ಮೀಯದ ಜಬ್ದೀಯು ರಾಜನ ದ್ರಾಕ್ಷಿತೋಟಗಳಿಂದ ದೊರಕಿದ ದ್ರಾಕ್ಷಾರಸದ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.
28 ಗೆದೆರಿನ ಬಾಳ್ಹಾನಾನ್ ಪಶ್ಚಿಮದ ಬೆಟ್ಟಪ್ರದೇಶದಲ್ಲಿ ಆಲಿವ್ ಮರಗಳ ಮತ್ತು ಸಿಖಮೊರ್ ಮರಗಳ ತೋಪುಗಳಿಗೆ ಅಧಿಕಾರಿಯಾಗಿದ್ದನು.
ಯೋವಾಷನು ಆಲಿವ್ ಎಣ್ಣೆಯ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.
29 ಶಾರೋನಿನ ಶಿಟ್ರೈಯು ಶಾರೋನಿನ ಸುತ್ತಮುತ್ತಲಿದ್ದ ರಾಜನ ಕುರಿದನಗಳ ಹಿಂಡುಗಳ ಅಧಿಕಾರಿಯಾಗಿದ್ದನು.
ಅದ್ಲ್ಯೆಯ ಮಗನಾದ ಶಾಫಾಟನುತಗ್ಗು ಪ್ರದೇಶಗಳಲ್ಲಿದ್ದ ರಾಜನ ಪಶುಗಳ ಹಿಂಡುಗಳಿಗೆ ಅಧಿಕಾರಿಯಾಗಿದ್ದನು.
30 ಇಷ್ಮಾಯೇಲ್ಯನಾದ ಓಬೀಲನು ಒಂಟೆಗಳ ಮೇಲೆ ಅಧಿಕಾರಿಯಾಗಿದ್ದನು. ಮೇರೊನೋತ್ಯನಾದ ಯೆಹ್ದೆಯು ರಾಜನ ಕತ್ತೆಗಳ ಹಿಂಡಿಗೆ ಅಧಿಕಾರಿಯಾಗಿದ್ದನು.
31 ಹಗ್ರೀಯನಾದ ಯಾಜೀಜನು ರಾಜನ ಕುರಿಹಿಂಡುಗಳ ಮೇಲೆ ಅಧಿಕಾರಿಯಾಗಿದ್ದನು.
ಇವರೆಲ್ಲರೂ ರಾಜನ ಆಸ್ತಿಪಾಸ್ತಿಗಳ ಮೇಲ್ವಿಚಾರಕರಾಗಿದ್ದರು.
32 ದಾವೀದನ ಚಿಕ್ಕಪ್ಪನಾದ ಯೋನಾತಾನನು ಉತ್ತಮ ಸಲಹೆಗಾರನಾಗಿದ್ದನು. ಹಕ್ಮೋನಿಯ ಮಗನಾದ ಯೆಹೀಯೇಲನು ರಾಜನ ಗಂಡುಮಕ್ಕಳನ್ನು ಪಾಲನೆ ಮಾಡುತ್ತಿದ್ದನು.
33 ಅಹೀತೋಫೆಲನು ರಾಜನ ಮಂತ್ರಾಲೋಚಕನಾಗಿದ್ದನು. ಹೂಷೈ ರಾಜನ ಮಿತ್ರನಾಗಿದ್ದನು. ಇವನು ಅರ್ಕೀಯ ಜನರಿಗೆ ಸೇರಿದವನಾಗಿದ್ದನು.
34 ಬೆನಾಯನ ಮಗನಾದ ಯೆಹೋಯಾದವನೂ ಎಬ್ಯಾತಾರನೂ ಅಹೀತೋಫೆಲನ ತರುವಾಯ ರಾಜನ ಮಂತ್ರಾಲೋಚಕರಾದರು. ರಾಜನ ಸೈನ್ಯಕ್ಕೆ ಯೋವಾಬನು ಪ್ರಧಾನಸೇನಾಪತಿಯಾಗಿದ್ದನು.