6
ಪಾಪದ ಪಾಲಿಗೆ ಸತ್ತವರು, ಆದರೆ ಕ್ರಿಸ್ತನಲ್ಲಿ ಜೀವಂತರು
1 ಹಾಗಾದರೆ ನಿಮ್ಮ ಅಭಿಪ್ರಾಯವೇನು? ದೇವರು ನಮಗೆ ಹೆಚ್ಚುಹೆಚ್ಚು ಕೃಪೆಯನ್ನು ತೋರಿಸಲೆಂದು ನಾವು ಪಾಪದಲ್ಲೇ ಮುಂದುವರಿಯಬೇಕೇ?
2 ಇಲ್ಲ! ನಾವು ನಮ್ಮ ಹಿಂದಿನ ಪಾಪಮಯ ಜೀವಿತಗಳ ಪಾಲಿಗೆ ಸತ್ತುಹೋದೆವು. ಹೀಗಿರಲು, ನಾವು ಪಾಪದಲ್ಲೇ ಜೀವಿಸಲು ಹೇಗೆ ಸಾಧ್ಯ?
3 ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನಲ್ಲಿ ಪಾಲುಗಾರರಾದೆವು ಎಂಬುದನ್ನು ನೀವು ಮರೆತುಬಿಟ್ಟಿರಾ? ನಮ್ಮ ದೀಕ್ಷಾಸ್ನಾನದ ಮೂಲಕ ನಾವು ಆತನ ಮರಣದಲ್ಲಿ ಪಾಲುಗಾರರಾದೆವು.
4 ಹೀಗಿರಲಾಗಿ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು ಮತ್ತು ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ನಾವು ಜೀವಂತವಾಗಿ ಎದ್ದು ಹೊಸ ಜೀವಿತವನ್ನು ನಡೆಸಬೇಕೆಂದು ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು. ಕ್ರಿಸ್ತನು ತಂದೆಯ ಅದ್ಭುತವಾದ ಶಕ್ತಿಯ ಮೂಲಕ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಜೀವಂತವಾಗಿ ಎದ್ದುಬಂದೆವು.
5 ಕ್ರಿಸ್ತನ ಮರಣಕ್ಕೆ ಸದೃಶ್ಯವಾದ ಮರಣದ ಮೂಲಕ ನಾವು ಸಹ ಆತನೊಂದಿಗೆ ಐಕ್ಯರಾದೆವು. ಆದ್ದರಿಂದ ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಸಹ ಜೀವಂತವಾಗಿ ಎದ್ದುಬರುವುದರ ಮೂಲಕವಾಗಿ ಆತನೊಂದಿಗೆ ಐಕ್ಯರಾಗುವೆವು.
6 ನಮ್ಮ ಹಳೆಯ ಜೀವಿತವು ಕ್ರಿಸ್ತನೊಂದಿಗೆ ಶಿಲುಬೆಯ ಮೇಲೆ ಸತ್ತುಹೋಯಿತೆಂಬುದು ನಮಗೆ ಗೊತ್ತಿದೆ. ನಮ್ಮ ಪಾಪಸ್ವಭಾವಕ್ಕೆ ನಮ್ಮ ಮೇಲೆ ಯಾವ ಅಧಿಕಾರ ಇರಬಾರದೆಂತಲೂ ನಾವು ಪಾಪಕ್ಕೆ ಗುಲಾಮರಾಗಿರಬಾರದೆಂತಲೂ ಹೀಗಾಯಿತು.
7 ಪಾಪದ ಪಾಲಿಗೆ ಸತ್ತವನು ಪಾಪದ ಹಿಡಿತದಿಂದ ಬಿಡುಗಡೆ ಹೊಂದಿದ್ದಾನೆ.
8 ನಾವು ಕ್ರಿಸ್ತನೊಂದಿಗೆ ಸತ್ತಿದ್ದರೆ, ಆತನೊಂದಿಗೆ ಜೀವಿಸುತ್ತೇವೆ ಎಂಬುದೂ ನಿಶ್ಚಯವಾಗಿದೆ.
9 ಕ್ರಿಸ್ತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಆತನು ಮತ್ತೆ ಸಾಯಲು ಸಾಧ್ಯವಿಲ್ಲವೆಂಬುದು ನಮಗೆ ತಿಳಿದಿದೆ. ಈಗ ಮರಣಕ್ಕೆ ಆತನ ಮೇಲೆ ಯಾವ ಅಧಿಕಾರವೂ ಇಲ್ಲ.
10 ಹೌದು, ಕ್ರಿಸ್ತನು ಪಾಪದ ಶಕ್ತಿಯನ್ನು ಸೋಲಿಸುವುದಕ್ಕಾಗಿ ಒಂದೇ ಸಲ ಸತ್ತನು; ಅದು ಎಲ್ಲಾ ಕಾಲಕ್ಕೂ ಸಾಕಾಗಿದೆ. ಈಗ ಆತನಲ್ಲಿ ಹೊಸ ಜೀವಿತವಿದೆ. ದೇವರೊಂದಿಗೆ ಜೀವಿಸುವುದೇ ಆ ಹೊಸ ಜೀವಿತ.
11 ಅದೇ ರೀತಿಯಲ್ಲಿ ನೀವು ಸಹ ನಿಮ್ಮನ್ನು ಪಾಪದ ಶಕ್ತಿಯ ಪಾಲಿಗೆ ಸತ್ತವರೆಂದು ಮತ್ತು ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸುವವರೆಂದು ಪರಿಗಣಿಸಿರಿ.
12 ಆದರೆ ನೀವು ಭೂಲೋಕದ ಜೀವನದಲ್ಲಿ ಪಾಪಕ್ಕೆ ಅಧೀನರಾಗಿರಬೇಡಿ; ನಿಮ್ಮ ಪಾಪಾಧೀನಸ್ವಭಾವದ ದುರಾಶೆಗಳ ಆಡಳಿತಕ್ಕೆ ಒಳಗಾಗಬೇಡಿ.
13 ನಿಮ್ಮ ದೇಹದ ಅಂಗಗಳನ್ನು ಪಾಪದ ಸೇವೆಗೆ ಒಪ್ಪಿಸಬೇಡಿ; ನಿಮ್ಮ ದೇಹಗಳನ್ನು ಪಾಪಕ್ಕೆ ಒಪ್ಪಿಸಿ ದುಷ್ಟತ್ವವನ್ನು ನಡೆಸುವ ಸಾಧನಗಳಾಗಬೇಡಿ. ಅದಕ್ಕೆ ಬದಲಾಗಿ, ನಿಮ್ಮನ್ನೇ ದೇವರಿಗೆ ಸಮರ್ಪಿಸಿಕೊಳ್ಳಿರಿ; ಸತ್ತು ಈಗ ಜೀವಂತವಾಗಿ ಎದ್ದುಬಂದಿರುವವರಂತೆ ಜೀವಿಸಿರಿ; ಒಳ್ಳೆಯ ಕಾರ್ಯಗಳನ್ನು ಮಾಡುವ ಸಾಧನಗಳನ್ನಾಗಿ ನಿಮ್ಮ ದೇಹದ ಅಂಗಗಳನ್ನು ದೇವರಿಗೆ ಸಮರ್ಪಿಸಿರಿ.
14 ಪಾಪವು ನಿಮ್ಮ ಒಡೆಯನಾಗಿರುವುದಿಲ್ಲ. ಏಕೆಂದರೆ, ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ಈಗ ನೀವು ದೇವರ ಕೃಪೆಯಲ್ಲಿ ಜೀವಿಸುವವರಾಗಿದ್ದೀರಿ.
ನೀತಿಯ ಗುಲಾಮರು
15 ಹೀಗಿರಲಾಗಿ ನಾವೇನು ಮಾಡಬೇಕು? ನಾವು ಧರ್ಮಶಾಸ್ತ್ರದ ಅಧೀನದಲ್ಲಿರದೆ ಕೃಪೆಯ ಅಧೀನದಲ್ಲಿರುವುದರಿಂದ ಪಾಪ ಮಾಡಬೇಕೇ? ಇಲ್ಲ!
16 ನೀವು ಯಾವನಿಗೆ ಗುಲಾಮರಂತೆ ವಿಧೇಯರಾಗುತ್ತೇವೆ ಎಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ವ್ಯಕ್ತಿಗೆ ನೀವು ನಿಜವಾಗಿಯೂ ಗುಲಾಮರಾಗಿದ್ದೀರಿ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನೀವು ಯಾವನಿಗೆ ವಿಧೇಯರಾಗುತ್ತೀರೋ ಅವನೇ ನಿಮ್ಮ ಒಡೆಯನಾಗಿದ್ದಾನೆ. ನೀವು ಪಾಪವನ್ನಾದರೂ ಅನುಸರಿಸಬಹುದು ಅಥವಾ ದೇವರಿಗಾದರೂ ವಿಧೇಯರಾಗಬಹುದು. ಪಾಪವು ಆತ್ಮಿಕ ಮರಣವನ್ನು ಉಂಟುಮಾಡುತ್ತದೆ. ಆದರೆ ನೀವು ದೇವರಿಗೆ ವಿಧೇಯರಾದರೆ, ಆ ವಿಧೇಯತೆಯು ನಿಮ್ಮನ್ನು ನೀತಿವಂತರನ್ನಾಗಿ ಮಾಡುತ್ತದೆ.
17 ಹಿಂದಿನ ಕಾಲದಲ್ಲಿ ನೀವು ಪಾಪಕ್ಕೆ ಗುಲಾಮರಾಗಿದ್ದಿರಿ. ಪಾಪವು ನಿಮ್ಮನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ನಿಮಗೆ ಬೋಧಿಸಿದ ವಿಷಯಗಳಿಗೆ ನೀವು ಸಂಪೂರ್ಣವಾಗಿ ವಿಧೇಯರಾದ್ದರಿಂದ ದೇವರಿಗೆ ಸ್ತೋತ್ರವಾಗಲಿ.
18 ನೀವು ಪಾಪದಿಂದ ಬಿಡುಗಡೆ ಹೊಂದಿದ್ದೀರಿ. ಈಗ ನೀವು ನೀತಿಗೆ ಗುಲಾಮರಾಗಿದ್ದೀರಿ.
19 ಜನರಿಗೆ ತಿಳಿದಿರುವ ಉದಾಹರಣೆಯ ಮೂಲಕ ನಾನು ಇದನ್ನು ನಿಮಗೆ ವಿವರಿಸುತ್ತೇನೆ. ಹಿಂದಿನ ಕಾಲದಲ್ಲಿ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೂ ದುಷ್ಟತ್ವಕ್ಕೂ ಗುಲಾಮರನ್ನಾಗಿ ಒಪ್ಪಿಸಿಕೊಟ್ಟಿದ್ದಿರಿ. ನೀವು ದುಷ್ಟತ್ವಕ್ಕಾಗಿ ಮಾತ್ರ ಜೀವಿಸಿದಿರಿ. ಅದೇ ರೀತಿಯಲ್ಲಿ ಈಗ ನೀವು ನಿಮ್ಮ ದೇಹದ ಅಂಗಗಳನ್ನು ನೀತಿಗೆ ಗುಲಾಮರನ್ನಾಗಿ ಒಪ್ಪಿಸಿಕೊಡಬೇಕು. ಆಗ ನೀವು ದೇವರಿಗಾಗಿ ಮಾತ್ರ ಜೀವಿಸುತ್ತೀರಿ.
20 ಹಿಂದಿನ ಕಾಲದಲ್ಲಿ ನೀವು ಪಾಪಕ್ಕೆ ಗುಲಾಮರಾಗಿದ್ದಿರಿ ಮತ್ತು ನೀತಿಯ ಹತೋಟಿಗೆ ಒಳಗಾಗಿರಲಿಲ್ಲ.
21 ನೀವು ದುಷ್ಕೃತ್ಯಗಳನ್ನು ಮಾಡಿದಿರಿ. ಈಗ ನೀವು ಆ ಕಾರ್ಯಗಳ ವಿಷಯದಲ್ಲಿ ನಾಚಿಕೆಪಡುತ್ತೀರಿ. ಆ ಕಾರ್ಯಗಳು ನಿಮಗೆ ಸಹಾಯ ಮಾಡಿದವೇ? ಇಲ್ಲ. ಆ ಕಾರ್ಯಗಳು ಆತ್ಮಿಕ ಮರಣವನ್ನು ಮಾತ್ರ ಉಂಟುಮಾಡುತ್ತವೆ.
22 ಆದರೆ ಈಗ ನೀವು ಪಾಪದಿಂದ ಬಿಡುಗಡೆಯಾಗಿ ದೇವರ ಗುಲಾಮರಾಗಿದ್ದೀರಿ. ಇದರಿಂದ ನಿಮಗೆ ಪರಿಶುದ್ಧ ಜೀವನವೂ ನಿತ್ಯಜೀವವೂ ದೊರೆಯುತ್ತವೆ.
23 ಜನರು ಮಾಡುವ ಪಾಪಕ್ಕೆ ಮರಣವೇ ಸಂಬಳ. ಆದರೆ ದೇವರ ಉಚಿತವಾದ ಕೊಡುಗೆಯು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.