2
ಪ್ರಾರ್ಥನೆ ಮತ್ತು ಸಭಾಕೂಟಗಳ ಬಗ್ಗೆ ಕೆಲವು ಸಲಹೆಗಳು
1 ಮೊಟ್ಟ ಮೊದಲನೆಯದಾಗಿ ನಾನು ನಿಮಗೆ ಹೇಳುವುದೇನೆಂದರೆ, ಎಲ್ಲಾ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ, ವಿಜ್ಞಾಪಿಸಿರಿ, ಅವರ ಅಗತ್ಯಕ್ಕೆ ತಕ್ಕಂತೆ ಬಿನ್ನಹ ಮಾಡಿರಿ ಮತ್ತು ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
2 ನಮ್ಮಲ್ಲಿ ಶಾಂತಿ ಸಮಾಧಾನಗಳು ನೆಲಸಿ ನಾವು ದೇವರನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಆರಾಧಿಸಲು ಸಾಧ್ಯವಾಗುವಂತೆ ಅರಸರಿಗಾಗಿಯೂ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಿರಿ.
3 ಇದು ಒಳ್ಳೆಯದೂ ಮತ್ತು ನಮ್ಮ ರಕ್ಷಕನಾದ ದೇವರಿಗೆ ಮೆಚ್ಚಿಕೆಕರವೂ ಆಗಿದೆ.
4 ಎಲ್ಲಾ ಜನರು ರಕ್ಷಿಸಲ್ಪಡಬೇಕೆಂದು, ಸತ್ಯವನ್ನು ತಿಳಿದು ಕೊಳ್ಳಬೇಕೆಂದು ದೇವರು ಬಯಸುತ್ತಾನೆ.
5 ದೇವರು ಒಬ್ಬನೇ. ದೇವರಿಗೂ ಮನುಷ್ಯರಿಗೂ ಮಧ್ಯಸ್ತನು ಒಬ್ಬನೇ. ಮನುಷ್ಯನಾಗಿರುವ ಯೇಸುಕ್ರಿಸ್ತನೇ ಆತನು.
6 ಯೇಸುವು ಜನರೆಲ್ಲರ ಪಾಪಗಳಿಗೆ ತನ್ನನ್ನೇ ಉಚಿತವಾಗಿ ಒಪ್ಪಿಸಿಕೊಟ್ಟನು. ಜನರೆಲ್ಲರೂ ರಕ್ಷಣೆ ಹೊಂದಬೇಕೆಂಬ ದೇವರ ಅಪೇಕ್ಷೆಗೆ ಯೇಸುವು ತಕ್ಕಕಾಲದಲ್ಲಿ ಸಾಕ್ಷಿನೀಡಿದನು.
7 ಆದ ಕಾರಣವೇ ಸುವಾರ್ತೆಯನ್ನು ಸಾರುವುದಕ್ಕಾಗಿಯೂ ಅಪೊಸ್ತಲನಾಗುವುದಕ್ಕಾಗಿಯೂ ಯೆಹೂದ್ಯರಲ್ಲದ ಜನರಿಗೆ ಬೋಧಿಸುವುದಕ್ಕಾಗಿಯೂ ನನ್ನನ್ನು ಆರಿಸಿಕೊಳ್ಳಲಾಯಿತು. (ಇದು ಸತ್ಯ, ಖಂಡಿತವಾಗಿಯೂ ಸುಳ್ಳಲ್ಲ.) ಸತ್ಯವನ್ನು ತಿಳಿದುಕೊಳ್ಳಬೇಕೆಂತಲೂ ನಂಬಬೇಕೆಂತಲೂ ನಾನು ಅವರಿಗೆ ಬೋಧಿಸುತ್ತೇನೆ.
ಪುರುಷರಿಗೆ ಮತ್ತು ಸ್ತ್ರೀಯರಿಗೆ ವಿಶೇಷ ಸೂಚನೆಗಳು
8 ಎಲ್ಲಾ ಸ್ಥಳಗಳಲ್ಲಿ ಪುರುಷರು ಪ್ರಾರ್ಥನೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ತಮ್ಮ ಕೈಗಳನ್ನು ಮೇಲೆತ್ತಿ ಪ್ರಾರ್ಥಿಸುವ ಅವರು ಪರಿಶುದ್ಧರಾಗಿರಬೇಕು. ಅವರು ವಾಗ್ವಾದ ಮಾಡುವವರೂ ಕೋಪಗೊಳ್ಳುವವರೂ ಆಗಿರಬಾರದು.
9 ಸ್ತ್ರೀಯರು ತಮಗೆ ಯೋಗ್ಯವಾದ ಉಡುಪುಗಳನ್ನು ಧರಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರ ಉಡುಪುಗಳು ಅವರು ಮಾನಸ್ಥೆಯರು ಎಂಬುದನ್ನು ತೋರಿಸುವಂಥವುಗಳಾಗಿರಬೇಕು. ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ತಲೆಕೂದಲನ್ನು ಅಲಂಕಾರಿಕವಾಗಿ ಕಟ್ಟಿಕೊಳ್ಳಕೂಡದು; ಬಂಗಾರವನ್ನು ಮತ್ತು ಮುತ್ತುಗಳನ್ನು ತೊಟ್ಟುಕೊಳ್ಳಕೂಡದು ಮತ್ತು ಬೆಲೆಬಾಳುವ ಬಟ್ಟೆಗಳನ್ನು ಧರಿಸಿಕೊಳ್ಳಕೂಡದು.
10 ಆದರೆ ಅವರು ಯೋಗ್ಯಕಾರ್ಯಗಳನ್ನು ಮಾಡುವುದರ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು. ದೇವರನ್ನು ಆರಾಧಿಸುತ್ತೇವೆ ಎಂದು ಹೇಳುವ ಸ್ತ್ರೀಯರು ತಮ್ಮನ್ನು ಈ ರೀತಿಯಲ್ಲಿಯೇ ಅಲಂಕರಿಸಿಕೊಳ್ಳಬೇಕು.
11 ಸ್ತ್ರೀಯರು ಉಪದೇಶವನ್ನು ಕೇಳಬೇಕು ಮತ್ತು ವಿಧೇಯರಾಗಲು ಪೂರ್ಣಸಿದ್ಧರಾಗಿರಬೇಕು.
12 ಅವರು ಪುರುಷರಿಗೆ ಉಪದೇಶಿಸುವುದಕ್ಕಾಗಲಿ ಅವರ ಮೇಲೆ ಅಧಿಕಾರ ಚಲಾಯಿಸುವುದಕ್ಕಾಗಲಿ ನಾನು ಸಮ್ಮತಿಸುವುದಿಲ್ಲ. ಅವರು ಮೌನವಾಗಿರಬೇಕು.
13 ಏಕೆಂದರೆ ಮೊದಲು ನಿರ್ಮಿತನಾದವನು ಆದಾಮ. ಅನಂತರ ನಿರ್ಮಿತಳಾದದ್ದು ಹವ್ವಳು.
14 ಅಲ್ಲದೆ ಸೈತಾನನಿಂದ ವಂಚಿಸಲ್ಪಟ್ಟದ್ದು ಆದಾಮನಲ್ಲ. ಸ್ತ್ರೀಯು ವಂಚನೆಗೆ ಬಲಿಯಾಗಿ ಪಾಪಿಯಾದಳು.
15 ಆದರೆ ಸ್ತ್ರೀಯರು ನಂಬಿಕೆಯಲ್ಲಿ, ಪ್ರೀತಿಯಲ್ಲಿ, ಪರಿಶುದ್ಧತೆಯಲ್ಲಿ ಮತ್ತು ಸರಿಯಾದ ನಡವಳಿಕೆಯಲ್ಲಿ ದೃಢವಾಗಿದ್ದರೆ ಮಕ್ಕಳನ್ನು ಹೆರುವಾಗ ರಕ್ಷಿಸಲ್ಪಡುವರು.