8
ಜೆರುಸಲೇಮನ್ನು ಆಶೀರ್ವದಿಸುವೆನು ಎಂಬ ಯೆಹೋವನ ವಾಗ್ದಾನ
1 ಸರ್ವಶಕ್ತನಾದ ಯೆಹೋವನ ಸಂದೇಶ:
2 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಚೀಯೋನ್ ಪರ್ವತವನ್ನು ನಾನು ಸತ್ಯವಾಗಿಯೂ ಪ್ರೀತಿಸುತ್ತೇನೆ. ನನಗೆ ನಂಬಿಗಸ್ತಳಾಗದಿದ್ದಾಗ ನಾನು ಆಕೆಯ ಮೇಲೆ ಕೋಪಗೊಳ್ಳುವಷ್ಟರವರೆಗೆ ಪ್ರೀತಿಸುತ್ತೇನೆ.”
3 ಯೆಹೋವನು ಹೇಳುವುದೇನೆಂದರೆ, “ನಾನು ಚೀಯೋನಿಗೆ ಹಿಂದಿರುಗಿ ಬಂದಿದ್ದೇನೆ. ನಾನು ಜೆರುಸಲೇಮಿನಲ್ಲಿ ವಾಸಿಸುತ್ತೇನೆ. ಜೆರುಸಲೇಮ್ ನಂಬಿಗಸ್ತನಗರವೆಂದು ಕರೆಯಲ್ಪಡುವುದು. ಸರ್ವಶಕ್ತನ ಪರ್ವತವು ಪವಿತ್ರ ಪರ್ವತವೆಂದು ಕರೆಯಲ್ಪಡುವುದು.”
4 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ವೃದ್ಧವೃದ್ಧೆಯರು ಜೆರುಸಲೇಮಿನ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಿ ಕಾಣಸಿಗುವರು. ಅವರು ಬಹು ದೀರ್ಘ ಆಯುಷ್ಯವನ್ನು ಹೊಂದುವದರಿಂದ ಅವರಿಗೆ ಕೈಕೋಲು ಬೇಕಾಗುತ್ತದೆ.
5 ನಗರದ ತುಂಬಾ ಬಾಲಬಾಲೆಯರು ಆಡುವರು.”
6 ಅಳಿದುಳಿದುವರು “ಇದು ಆಶ್ಚರ್ಯಕರ” ಎಂದು ಹೇಳುವರು. ನಾನೂ ಇದು ಆಶ್ಚರ್ಯಕರವೆಂದು ತಿಳಿಯುತ್ತೇನೆ.
7 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನೂ ಪೂರ್ವ ಪಶ್ಚಿಮದಲ್ಲಿರುವ ದೇಶಗಳೊಳಗಿಂದ ನನ್ನ ಜನರನ್ನು ರಕ್ಷಿಸುವುದನ್ನು ನೋಡಿರಿ.
8 ನಾನು ಅವರನ್ನು ಇಲ್ಲಿಗೆ ಕರೆತರುವೆನು. ಅವರು ಜೆರುಸಲೇಮಿನಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು; ನಾನು ಅವರಿಗೆ ಒಳ್ಳೆಯವನಾದ ನಂಬಿಗಸ್ತನಾದ ದೇವರಾಗಿರುವೆನು.”
9 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಬಲಗೊಳ್ಳಿರಿ! ಸರ್ವಶಕ್ತನಾದ ಯೆಹೋವನು ತನ್ನ ಆಲಯವನ್ನು ತಿರುಗಿ ಕಟ್ಟಲು ಅಸ್ತಿವಾರವನ್ನು ಹಾಕುವಾಗ ಪ್ರವಾದಿಗಳು ಕೊಟ್ಟ ಸಂದೇಶವನ್ನೇ ನೀವು ತಿರುಗಿ ಕೇಳುತ್ತಿದ್ದೀರಿ!
10 ಇದಕ್ಕಿಂತ ಮುಂಚೆ ಜನರ ಕೈಯಲ್ಲಿ ಕೆಲಸಗಾರರಿಗೆ ಕೂಲಿ ಕೊಡುವದಕ್ಕಾಗಲಿ ಪ್ರಾಣಿಗಳ ಬಾಡಿಗೆ ಕೊಡುವದಕ್ಕಾಗಲಿ ಹಣವಿರಲಿಲ್ಲ. ಅದೇ ಸಮಯದಲ್ಲಿ ಜನರು ಹೋಗುತ್ತಾ ಬರುತ್ತಾ ಇರುವದಕ್ಕೆ ಸುರಕ್ಷತೆ ಇರಲಿಲ್ಲ. ಎಲ್ಲಾ ತೊಂದರೆಗಳು ತೊರೆಯಲ್ಪಡಲಿಲ್ಲ. ಪ್ರತಿ ಮನುಷ್ಯನು ತನ್ನ ನೆರೆಯವನ ಮೇಲೆ ಎದುರುಬೀಳುವಂತೆ ನಾನು ಮಾಡಿದ್ದೆನು.
11 ಆದರೆ ಈಗ ಹಾಗಿಲ್ಲ. ಅಳಿಯದೆ ಉಳಿದವರಿಗೆ ಹಾಗೆ ಆಗುವದಿಲ್ಲ. ಇದು ಸರ್ವಶಕ್ತನಾದ ಯೆಹೋವನ ನುಡಿ.
12 “ಈ ಜನರು ನೆಮ್ಮದಿಯಿಂದ ಭೂಮಿಯ ಮೇಲೆ ನಡೆಯುವರು. ಅವರ ದ್ರಾಕ್ಷಾಲತೆಗಳು ದ್ರಾಕ್ಷಿಹಣ್ಣನ್ನು ಕೊಡುವವು. ದೇಶವು ಸಮೃದ್ಧಿಯಾದ ಬೆಳೆಯನ್ನು ಕೊಡುವದು. ಆಕಾಶವು ಮಳೆಯನ್ನು ಸುರಿಸುವದು. ಇವೆಲ್ಲವನ್ನು ನಾನು ನನ್ನ ಜನರಿಗೆ ಕೊಡುವೆನು.
13 ಜನರು ಇಸ್ರೇಲ್ ಮತ್ತು ಯೆಹೂದದ ಹೆಸರುಗಳನ್ನು ಶಾಪ ಇಡುವದಕ್ಕಾಗಿ ಉಪಯೋಗಿಸುವರು. ಆದರೆ ನಾನು ಇಸ್ರೇಲ್ ಮತ್ತು ಯೆಹೂದವನ್ನು ಸಂರಕ್ಷಿಸುವೆನು. ಆ ಹೆಸರುಗಳು ಆಶೀರ್ವದಿಸುವದಕ್ಕಾಗಿ ಉಪಯೋಗಿಸಲ್ಪಡುವದು. ಆದ್ದರಿಂದ ಭಯಪಡಬೇಡಿ, ಬಲಶಾಲಿಗಳಾಗಿರಿ.”
14 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಿಮ್ಮ ಪೂರ್ವಿಕರು ನನ್ನನ್ನು ಕೋಪಗೊಳಿಸಿದರು. ಆದ್ದರಿಂದ ಅವರನ್ನು ನಾಶಮಾಡಲು ನಾನು ತೀರ್ಮಾನಿಸಿದೆನು. ಮತ್ತು ಈ ತೀರ್ಮಾನವನ್ನು ಬದಲಾಯಿಸುವದೇ ಇಲ್ಲವೆಂದು ನಿರ್ಧರಿಸಿದೆನು.
15 ಆದರೆ ಈಗ ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ. ಜೆರುಸಲೇಮಿಗೂ ಯೆಹೂದದ ಜನರಿಗೂ ಒಳ್ಳೆಯದನ್ನೇ ಮಾಡುವೆನು. ಆದ್ದರಿಂದ ಭಯಪಡಬೇಡಿ.
16 ಆದರೆ ನೀವು ಮಾಡಬೇಕಾದದ್ದೇನೆಂದರೆ, ನಿಮ್ಮ ನೆರೆಯವರ ಸಂಗಡ ಸತ್ಯವನ್ನೇ ಆಡಿರಿ. ನಿಮ್ಮ ನಗರಗಳಲ್ಲಿ ಯಾವುದೇ ತೀರ್ಮಾನಗಳನ್ನು ಮಾಡುವುದಾಗಿದ್ದರೂ ಅವು ನ್ಯಾಯವಾದವುಗಳಾಗಿಯೂ ಸತ್ಯವಾದವುಗಳಾಗಿಯೂ ಸಮಾಧಾನವನ್ನು ತರುವಂಥವುಗಳಾಗಿಯೂ ಇರಲಿ.
17 ನಿಮ್ಮ ನೆರೆಯವನಿಗೆ ಹಾನಿಮಾಡುವುದನ್ನು ಗುಟ್ಟಾಗಿ ಆಲೋಚಿಸಬೇಡಿರಿ. ಸುಳ್ಳು ವಾಗ್ದಾನ ಮಾಡಬೇಡಿರಿ. ಅವುಗಳನ್ನೆಲ್ಲಾ ಮಾಡುವದರಲ್ಲಿ ಆನಂದಿಸಬೇಡಿರಿ. ಯಾಕೆಂದರೆ ಅವುಗಳನ್ನು ನಾನು ದ್ವೇಷಿಸುತ್ತೇನೆ.” ಇದು ಯೆಹೋವನ ನುಡಿ.
18 ಸರ್ವಶಕ್ತನಾದ ಯೆಹೋವನಿಂದ ನಾನು ಈ ಸಂದೇಶವನ್ನು ಹೊಂದಿದೆನು.
19 ಆತನು ಹೇಳುವುದೇನೆಂದರೆ, “ನಾಲ್ಕನೇ, ಐದನೇ, ಏಳನೇ ಮತ್ತು ಹತ್ತನೇ ತಿಂಗಳಿನಲ್ಲಿ ನೀವು ದುಃಖದಿಂದ ಉಪವಾಸ ಮಾಡುವ ವಿಶೇಷ ದಿವಸಗಳಿವೆ. ಆ ದುಃಖದ ದಿವಸಗಳು ನಿಮ್ಮ ಸಂತಸದ ದಿವಸಗಳಾಗಿ ಪರಿಗಣಿಸಬೇಕು. ಮತ್ತು ನೀವು ಸತ್ಯವನ್ನೂ ಸಮಾಧಾನವನ್ನೂ ಪ್ರೀತಿಸುವವರಾಗಬೇಕು.”
20 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
“ಮುಂದಿನ ದಿವಸಗಳಲ್ಲಿ ಬೇರೆಬೇರೆ ನಗರದ ಜನರು ಜೆರುಸಲೇಮಿಗೆ ಬರುವರು.
21 ಬೇರೆಬೇರೆ ನಗರದ ಜನರು ಪರಸ್ಪರ ವಂದಿಸುವರು. ಅವರಲ್ಲಿ ಕೆಲವರು,
‘ನಾವು ಸರ್ವಶಕ್ತನಾದ ಯೆಹೋವನನ್ನು ಆರಾಧಿಸಲು ಹೋಗುತ್ತಿದ್ದೇವೆ’ ಅನ್ನುವರು.
ಅದಕ್ಕೆ ಇನ್ನೊಬ್ಬನು,
‘ನಾನು ನಿಮ್ಮೊಂದಿಗೆ ಬರುತ್ತೇನೆ’ ” ಅನ್ನುವನು.
22 ಎಷ್ಟೋ ಜನರು, ಎಷ್ಟೋ ಬಲಶಾಲಿ ಜನಾಂಗಗಳು ಜೆರುಸಲೇಮಿಗೆ ಸರ್ವಶಕ್ತನಾದ ಯೆಹೋವನನ್ನು ಕಂಡುಕೊಳ್ಳಲೂ ಆತನನ್ನು ಆರಾಧಿಸಲೂ ಬರುವರು.
23 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ ಬೇರೆಬೇರೆ ಭಾಷೆಗಳನ್ನು ಮಾತಾಡುವ ಅನೇಕ ವಿದೇಶಿಯರು ಯೆಹೂದ್ಯನೊಬ್ಬನ ಬಳಿಗೆ ಬಂದು, ಅವನ ಬಟ್ಟೆಯ ಅಂಚನ್ನು ಹಿಡಿದು, ‘ದೇವರು ನಿಮ್ಮೊಂದಿಗಿದ್ದಾನೆಂದು ನಾವು ಕೇಳಿದ್ದೇವೆ. ನಿಮ್ಮೊಂದಿಗೆ ನಾವೂ ಬಂದು ಆತನನ್ನು ಆರಾಧಿಸಬಹುದೋ?’ ” ಎಂದು ಕೇಳುವರು.