ಆಮೋಸನು
ಗ್ರಂಥಕರ್ತೃತ್ವ
ಆಮೋಸ 1:1 ಪ್ರವಾದಿಯಾದ ಆಮೋಸನನ್ನು ಆಮೋಸ ಗ್ರಂಥದ ಗ್ರಂಥಕರ್ತನು ಎಂದು ಗುರುತಿಸುತ್ತದೆ. ಪ್ರವಾದಿಯಾದ ಆಮೋಸನು ತೆಕೋವದಲ್ಲಿದ್ದ ಕುರುಬರ ಗುಂಪಿನ ಮಧ್ಯದಲ್ಲಿ ವಾಸಿಸುತ್ತಿದ್ದನು. ಆಮೋಸನು ತನ್ನ ಬರಹಗಳಲ್ಲಿ ತಾನು ಪ್ರವಾದಿಗಳ ಕುಟುಂಬದಿಂದ ಬಂದವನಲ್ಲವೆಂದು, ಅಥವಾ ತಾನು ಅವರಲ್ಲಿ ಒಬ್ಬನೆಂದು ಪರಿಗಣಿಸಲ್ಪಡುವುದಿಲ್ಲವೆಂದು ಸ್ಪಷ್ಟಪಡಿಸಿದನು. ದೇವರು ಮಿಡತೆಗಳಿಂದ ಮತ್ತು ಬೆಂಕಿಯಿಂದ ನ್ಯಾಯತೀರ್ಪು ಮಾಡುವುದಾಗಿ ಬೆದರಿಸಿದನು, ಆದರೆ ಆಮೋಸನ ಪ್ರಾರ್ಥನೆಗಳು ಇಸ್ರಾಯೇಲ್ಯರನ್ನು ಕಾಪಾಡಿದವು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 760-750 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಆಮೋಸನು ಇಸ್ರಾಯೇಲಿನ ಉತ್ತರದ ರಾಜ್ಯದಲ್ಲಿ, ಬೇತೇಲ್ ಮತ್ತು ಸಮಾರ್ಯದಿಂದ ಬೋಧಿಸಿದನು.
ಸ್ವೀಕೃತದಾರರು
ಆಮೋಸನ ಮೂಲ ಪ್ರೇಕ್ಷಕರು ಇಸ್ರಾಯೇಲಿನ ಉತ್ತರ ರಾಜ್ಯದವರು ಮತ್ತು ಭವಿಷ್ಯದಲ್ಲಿ ಓದುಗಾರರು.
ಉದ್ದೇಶ
ದೇವರು ಆಹಂಕಾರವನ್ನು ದ್ವೇಷಿಸುತ್ತಾನೆ. ಜನರು ತಾವು ಸ್ವಯಂ-ಸಮರ್ಥರಾಗಿದ್ದರೆಂದು ನಂಬಿದ್ದರು ಮತ್ತು ಅವರಿಗಿರುವಂಥದ್ದೆಲ್ಲವು ದೇವರಿಂದ ಬಂದದ್ದು ಎಂಬುದನ್ನು ಮರೆತುಹೋಗಿದ್ದರು. ನೀಡುವಂತೆ ದೇವರು ಎಲ್ಲ ಜನರನ್ನು ಗೌರವಿಸುತ್ತಾನೆ, ಬಡವರನ್ನು ಹೀನಾಯವಾಗಿ ನಡೆಸಿಕೊಳ್ಳುವರಿಗೆ ಎಚ್ಚರಿಕೆ ನೀಡಿದನು. ಅಂತಿಮವಾಗಿ, ಆತನನ್ನು ಗೌರವಿಸುವಂತಹ ವರ್ತನೆಯೊಂದಿಗಿನ ಯಥಾರ್ಥವಾದ ಆರಾಧನೆಯನ್ನು ದೇವರು ಬಯಸುತ್ತಾನೆ. ಆಮೋಸನ ಮೂಲಕ ಬಂದ ದೇವರ ವಾಕ್ಯವು, ತಮ್ಮ ನೆರೆಯವರಿಗಾಗಿ ಪ್ರೀತಿ ಇಲ್ಲದಂಥ ಜನರಾದ, ಇತರರನ್ನು ಶೋಷಿಸುವಂಥವವರಾದ, ಮತ್ತು ತಮ್ಮ ಸ್ವಂತ ಕಾಳಜಿಯನ್ನು ಮಾತ್ರ ನೋಡಿಕೊಳ್ಳುವವರಾದ ಸವಲತ್ತವುಳ್ಳ ಇಸ್ರಾಯೇಲ್ ಜನರಿಗೆ ವಿರುದ್ಧವಾಗಿದೆ.
ಮುಖ್ಯಾಂಶ
ನ್ಯಾಯತೀರ್ಪು
ಪರಿವಿಡಿ
1. ದೇಶಗಳ ಮೇಲೆ ನಾಶನ — 1:1-2:16
2. ಪ್ರವಾದನಾತ್ಮಕವಾದ ಕರೆ — 3:1-8
3. ಇಸ್ರಾಯೇಲಿನ ನ್ಯಾಯತೀರ್ಪು — 3:9-9:10
4. ಪುನಃಸ್ಥಾಪನೆ — 9:11-15
1
ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಇಸ್ರಾಯೇಲಿನ ಅರಸನೂ, ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ಭೂಕಂಪಕ್ಕೆ ಎರಡು ವರ್ಷಗಳ ಮೊದಲೇ ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನಿಗೆ ಇಸ್ರಾಯೇಲಿನ ವಿಷಯವಾಗಿ ಕೇಳಿಬಂದ ದೈವೋಕ್ತಿಗಳು.
ಯೆಹೋವನ ಗರ್ಜನೆ
ಆಮೋಸನು ಹೀಗೆ ಪ್ರಕಟಿಸಿದನು,
“ಯೆಹೋವನು ಚೀಯೋನಿನಿಂದ ಗರ್ಜಿಸಿ,
ಯೆರೂಸಲೇಮಿನಿಂದ ಧ್ವನಿಗೈಯುವನು.
ಆಗ ಕುರುಬರ ಹುಲ್ಲುಗಾವಲುಗಳು ಬಾಡಿಹೋಗುವವು.
ಕರ್ಮೆಲ್ ಬೆಟ್ಟದ ತುದಿಯು ಒಣಗಿಹೋಗುವವು.”
ದಮಸ್ಕದ ಪಾಪಕ್ಕೆ ದಂಡನೆ
ಯೆಹೋವನು ಇಂತೆನ್ನುತ್ತಾನೆ,
“ದಮಸ್ಕವು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅದು ಗಿಲ್ಯಾದನ್ನು ಕಬ್ಬಿಣದ ಹಂತಿ ಕುಂಟೆಗಳಿಂದ ಒಕ್ಕಿ ನುಗ್ಗುಮಾಡಿತಷ್ಟೆ.
ನಾನು ಹಜಾಯೇಲನ ವಂಶದ ಮೇಲೆ ಬೆಂಕಿಯನ್ನು ಸುರಿಸುವೆನು.
ಅದು ಬೆನ್ಹದದನ ಅರಮನೆಯನ್ನು ನುಂಗಿಬಿಡುವುದು.
ನಾನು ದಮಸ್ಕದ ಹೆಬ್ಬಾಗಿಲುಗಳನ್ನು ಮುರಿಯುವೆನು
ಮತ್ತು ಆವೆನ್ ತಗ್ಗಿನೊಳಗಿನಿಂದ ನಿವಾಸಿಗಳನ್ನು* ಮತ್ತು
ಬೇತ್ ಎದೆನ್ ಪಟ್ಟಣದ ಆಡಳಿತಾಧಿಕಾರಿಯನ್ನು ನಿರ್ಮೂಲಮಾಡುವೆನು;
ಅರಾಮ್ಯರು ಕೀರ್ ಪಟ್ಟಣಕ್ಕೆ ಸೆರೆಯಾಗಿ ಹೋಗುವರು.”
ಇದು ಯೆಹೋವನ ನುಡಿ.
ಫಿಲಿಷ್ಟಿಯದ ಪಾಪಕ್ಕೆ ಆದ ದಂಡನೆ
ಯೆಹೋವನು ಇಂತೆನ್ನುತ್ತಾನೆ,
“ಗಾಜವು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ,
ಏಕೆಂದರೆ ಅದು ಜನರನ್ನು ಗುಂಪುಗುಂಪಾಗಿ ಸೆರೆಹಿಡಿದು ಎದೋಮಿಗೆ ವಶಮಾಡಿಬಿಟ್ಟಿತು.
ನಾನು ಗಾಜದ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು,
ಅದು ಅದರ ಅರಮನೆಗಳನ್ನು ನುಂಗಿಬಿಡುವುದು.
ನಾನು ಅಷ್ದೋದಿನೊಳಗಿಂದ ಸಿಂಹಾಸನಾಸೀನನನ್ನೂ
ಮತ್ತು ಅಷ್ಕೆಲೋನಿನೊಳಗಿಂದ ರಾಜದಂಡ ದಾರಿಯನ್ನೂ ನಿರ್ಮೂಲಮಾಡುವೆನು.
ನಾನು ಎಕ್ರೋನಿನ ವಿರುದ್ಧವಾಗಿ ಕೈಯೆತ್ತುವೆನು,
ಉಳಿದ ಫಿಲಿಷ್ಟಿಯರೆಲ್ಲರೂ ನಾಶವಾಗಿ ಹೋಗುವರು.”
ಇದು ಕರ್ತನಾದ ಯೆಹೋವನ ನುಡಿ.
ತೂರಿನ ಪಾಪಕ್ಕೆ ಆದ ದಂಡನೆ
ಯೆಹೋವನು ಇಂತೆನ್ನುತ್ತಾನೆ:
“ತೂರ್ ಪಟ್ಟಣವು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅದು ಒಡಹುಟ್ಟಿದವರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೇ,
ಜನರನ್ನು ಗುಂಪುಗುಂಪಾಗಿ ಎದೋಮಿಗೆ ವಶಮಾಡಿಬಿಟ್ಟಿತು.
10 ನಾನು ತೂರಿನ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು,
ಮತ್ತು ಅದು ಅದರ ಅರಮನೆಗಳನ್ನು ನುಂಗಿಬಿಡುವುದು.”
ಎದೋಮಿನ ಪಾಪಕ್ಕೆ ಆದ ದಂಡನೆ
11 ಯೆಹೋವನು ಇಂತೆನ್ನುತ್ತಾನೆ:
“ಎದೋಮ್ ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅವನು ಕತ್ತಿ ಹಿಡಿದು ತನ್ನ ಸಹೋದರರನ್ನು ಹಿಂದಟ್ಟಿದನು,
ಕರುಣೆಯನ್ನು ತೋರಿಸಲಿಲ್ಲ. ರೋಷವನ್ನು ಸಾಧಿಸಿದ್ದಾರೆ.
ಇದರಿಂದ ಅವನ ಕೋಪವು ಸದಾ ಹರಿಯುತ್ತಿತ್ತು,
ಆತನು ರೌದ್ರವನ್ನು ನಿರಂತರವಾಗಿ ಇಟ್ಟುಕೊಂಡನು.
12 ನಾನು ತೇಮಾನಿನ ಮೇಲೆ ಬೆಂಕಿಯನ್ನು ಸುರಿಸುವೆನು,
ಮತ್ತು ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವುದು.”
ಅಮ್ಮೋನಿನ ಪಾಪಕ್ಕೆ ಆದ ದಂಡನೆ
13 ಯೆಹೋವನು ಇಂತೆನ್ನುತ್ತಾನೆ,
“ಅಮ್ಮೋನ್ಯರು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅವರು ತಮ್ಮ ದೇಶವನ್ನು ವಿಸ್ತರಿಸಬೇಕೆಂದು
ಗಿಲ್ಯಾದಿನ ಗರ್ಭಿಣಿಯರ ಹೊಟ್ಟೆಯನ್ನು ಸೀಳಿಬಿಟ್ಟರು.
14 ನಾನು ರಬ್ಬದ ಕೋಟೆಯನ್ನು ಬೆಂಕಿಯಿಂದ ಉರಿಸುವೆನು,
ಅದು ಅದರ ಅರಮನೆಗಳನ್ನು ನುಂಗಿಬಿಡುವುದು;
ಆ ಯುದ್ಧದ ದಿನದಲ್ಲಿ ಆರ್ಭಟವಾಗುವುದು,
ಆ ಸುಂಟರಗಾಳಿಯಂತ ದಿನದಲ್ಲಿ ಪ್ರಚಂಡ ಕಾದಾಟವೂ ಉಂಟಾಗುವುದು.
15 ಅವರ ಅರಸನೂ ಮತ್ತು ಅವನ ರಾಜ್ಯಾಧಿಕಾರಗಳೂ ಒಟ್ಟಿಗೆ ಸೆರೆಯಾಗಿ ಹೋಗುವರು.”
ಇದು ಯೆಹೋವನ ನುಡಿ.
* 1:5 ನಿವಾಸಿಗಳನ್ನು ಅಥವಾ ಸಿಂಹಾಸನರೂಢನಾಗಿರುವವನನ್ನು.