ಕೊಲೊಸ್ಸೆಯವರಿಗೆ
ಗ್ರಂಥಕರ್ತೃತ್ವ
ಕೊಲೊಸ್ಸೆಯು ಪೌಲನ ಯಥಾರ್ಥವಾದ ಪತ್ರಿಕೆಯಾಗಿದೆ (1:1). ಆದಿ ಸಭೆಯಲ್ಲಿ, ಗ್ರಂಥಕರ್ತನ ವಿಷಯದ ಬಗ್ಗೆ ಮಾತನಾಡುವ ಎಲ್ಲರೂ ಅದು ಪೌಲನಿಗೆ ಸೇರಿದ್ದು ಎಂದು ಹೇಳುತ್ತಿದ್ದರು. ಕೊಲೊಸ್ಸೆಯಲ್ಲಿದ್ದ ಸಭೆಯು ಪೌಲನಿಂದ ಸ್ಥಾಪಿಸಲ್ಪಟ್ಟಿರಲಿಲ್ಲ. ಪೌಲನ ಜೊತೆಕೆಲಸದವರು, ಪ್ರಾಯಶಃ ಅವರಲ್ಲಿ ಒಬ್ಬನಾದ ಎಪಫ್ರನೆಂಬವನು ಕೊಲೊಸ್ಸೆಯಲ್ಲಿ ಮೊದಲು ಸುವಾರ್ತೆಯನ್ನು ಸಾರಿರಬಹುದು (4:12,13). ಸುಳ್ಳು ಬೋಧಕರು ಅನ್ಯವಾದ, ಹೊಸದಾದ ಸಿದ್ಧಾಂತದೊಂದಿಗೆ ಕೊಲೊಸ್ಸೆಗೆ ಬಂದಿದ್ದರು. ಅವರು ಅನ್ಯಧರ್ಮದ ಮತ್ತು ಯೆಹೂದ್ಯ ಧರ್ಮದ ತತ್ತ್ವಶಾಸ್ತ್ರವನ್ನು ಕ್ರೈಸ್ತತ್ವದೊಂದಿಗೆ ಬೆರಕೆಮಾಡಿದರು. ಕ್ರಿಸ್ತನು ಎಲ್ಲವುಗಳಿಗಿಂತ ಮೇಲಾಗಿರುವನೆಂದು ತೋರಿಸುವ ಮೂಲಕ ಪೌಲನು ಈ ಸುಳ್ಳು ಬೋಧನೆಯನ್ನು ವಿರೋಧಿಸಿದನು. ಕೊಲೊಸ್ಸೆಯವರಿಗೆ ಬರೆದ ಪತ್ರಿಕೆಯನ್ನು ಹೊಸ ಒಡಂಬಡಿಕೆಯಲ್ಲಿಯೇ ಅತ್ಯಂತ ಕ್ರಿಸ್ತ ಕೇಂದ್ರಿತ ಪತ್ರಿಕೆಯೆಂದು ಕರೆಯಲಾಗುತ್ತದೆ. ಯೇಸು ಕ್ರಿಸ್ತನು ಎಲ್ಲಾ ವಿಷಯಗಳ ಮೇಲೆ ಶಿರಸ್ಸಾಗಿದ್ದಾನೆ ಎಂದು ಇದು ತೋರಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60 ರಲ್ಲಿ ಬರೆಯಲ್ಪಟ್ಟಿದೆ.
ರೋಮಾಪುರದಲ್ಲಿನ ಆತನ ಮೊದಲನೆಯ ಸೆರೆವಾಸದ ಸಮಯದಲ್ಲಿ ಪೌಲನು ಇದನ್ನು ಬರೆದಿರಬಹುದು.
ಸ್ವೀಕೃತದಾರರು
ಪೌಲನು ಈ ಪತ್ರಿಕೆಯನ್ನು ಕೊಲೊಸ್ಸೆಯಲ್ಲಿರುವ ಸಭೆಗೆ ಎಂದು ಸಂಬೋಧಿಸಿ ಬರೆದಿದ್ದಾನೆ, “ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗು ಕ್ರಿಸ್ತನಲ್ಲಿ ನಂಬಿಗಸ್ತರಾದ ಸಹೋದರರಿಗೆ” (1:1-2), ಎಫೆಸದಿಂದ ನೂರು ಮೈಲುಗಳಷ್ಟು ದೂರದಲ್ಲಿರುವ ಒಳನಾಡಿನಲ್ಲಿದ್ದ ಅಂದರೆ ಲಿಕಸ್ ಕಣಿವೆಯ ಮಧ್ಯಭಾಗದಲ್ಲಿದ್ದ ಸಭೆ. ಅಪೊಸ್ತಲನು ಈ ಸಭೆಗೆ ಭೇಟಿನೀಡಿರಲಿಲ್ಲ (1:4; 2:1).
ಉದ್ದೇಶ
ಕೊಲೊಸ್ಸೆಯಲ್ಲಿ ಉದ್ಭವಿಸಿದ ಅಪಾಯಕಾರಿ ದುರ್ಪದೇಶದ ಬಗ್ಗೆ ಸಲಹೆ ನೀಡಲು, ಸರ್ವ ಸೃಷ್ಟಿಯ ಮೇಲಿರುವ ಕ್ರಿಸ್ತನ ಸಂಪೂರ್ಣ, ನೇರ ಮತ್ತು ನಿರಂತರವಾದ ಪರಮಾಧಿಪತ್ಯವನ್ನು ದೃಢಪಡಿಸುವ ಮೂಲಕ ದುರ್ಪದೇಶದ ಸಮಸ್ಯೆಗಳಿಗೆ ಉತ್ತರಿಸಲು (1:15; 3:4), ಕ್ರಿಸ್ತನು ಸೃಷ್ಟಿಗೆಲ್ಲಾ ಸರ್ವೋನ್ನತನು ಎಂಬ ದೃಷ್ಟಿಕೋನದೊಟ್ಟಿಗೆ ಜೀವನವನ್ನು ನಡೆಸುವುದಕ್ಕೆ ತನ್ನ ಓದುಗರನ್ನು ಉತ್ತೇಜಿಸಲು (3:5; 4:6) ಮತ್ತು ಸಭೆಯವರು ತಮ್ಮ ಕ್ರಮಬದ್ಧವಾದ ಕ್ರೈಸ್ತ ಜೀವನವನ್ನು ನಡೆಸುವುದಕ್ಕೆ ಹಾಗೆಯೇ ಸುಳ್ಳು ಬೋಧಕರ ಬೆದರಿಕೆಯ ನಡುವೆಯು ನಂಬಿಕೆಯಲ್ಲಿ ತಮ್ಮ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಕ್ಕೆ ಪ್ರೋತ್ಸಾಹಿಸಲು ಪೌಲನು ಇದನ್ನು ಬರೆದನು (2:2-5).
ಮುಖ್ಯಾಂಶ
ಕ್ರಿಸ್ತನ ಪರಮಾಧಿಪತ್ಯ
ಪರಿವಿಡಿ
1. ಪೌಲನ ಅಭಿನಂದನೆಗಳು ಮತ್ತು ಪ್ರಾರ್ಥನೆ — 1:1-14
2. ಕ್ರಿಸ್ತನಲ್ಲಿರುವ ವ್ಯಕ್ತಿತ್ವದ ಕುರಿತು ಪೌಲನ ಸಿದ್ಧಾಂತ — 1:15-23
3. ದೇವರ ಯೋಜನೆ ಮತ್ತು ಉದ್ದೇಶಗಳಲ್ಲಿ ಪೌಲನ ಭಾಗ — 1:24-2:5
4. ಸುಳ್ಳು ಬೋಧನೆಗೆ ವಿರುದ್ಧವಾಗಿ ಎಚ್ಚರಿಕೆ — 2:6-15
5. ಧರ್ಮದ್ರೋಹಿಗಳಿಗೆ ಬೆದರಿಕೆಯೊಡ್ಡುವ ಪೌಲನ ಪ್ರತಿಭಟನೆ — 2:16-3:4
6. ಕ್ರಿಸ್ತನಲ್ಲಿರುವ ಹೊಸ ಮನುಷ್ಯನ ವಿವರಣೆ — 3:5-25
7. ಪ್ರಶಂಸೆ ಮತ್ತು ಅಂತಿಮ ವಂದನೆ — 4:1-18
1
ಪೀಠಿಕೆ
1 ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ ಅಪೊಸ್ತಲನಾಗಿರುವ ಪೌಲನೂ ಮತ್ತು ಸಹೋದರನಾದ ತಿಮೊಥೆಯನು,
2 ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗು ಕ್ರಿಸ್ತನಲ್ಲಿ ನಂಬಿಗಸ್ತರಾದ ಸಹೋದರರಿಗೆ ಬರೆಯುವುದೇನೆಂದರೆ, ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಮತ್ತು ಶಾಂತಿಯೂ ಉಂಟಾಗಲಿ.
ಕೃತಜ್ಞತಾಸ್ತುತಿ ಮತ್ತು ಪ್ರಾರ್ಥನೆ
3 ನಿಮಗೋಸ್ಕರ ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ನಿಮಿತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
4 ನೀವು ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ನಂಬಿಕೆ ಹಾಗು ದೇವಜನರೆಲ್ಲರಲ್ಲಿ ನೀವು ಇಟ್ಟಿರುವ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ.
5 ಪರಲೋಕದಲ್ಲಿ ನಿಮಗೋಸ್ಕರ ಕಾದಿರಿಸಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದ್ದಿರಿ.
6 ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳಿದುಕೊಂಡ ದಿನದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ನಿಮ್ಮಲ್ಲಿ ಫಲಕೊಟ್ಟಂತೆ ಲೋಕದಲ್ಲೆಲ್ಲಾ ಫಲಕೊಟ್ಟು ವೃದ್ಧಿಯಾಗುತ್ತಿದೆ.
7 ಈ ಸುವಾರ್ತೆಯನ್ನು ಕ್ರಿಸ್ತನ ನಂಬಿಗಸ್ತ ಸೇವಕನೂ, ನಮ್ಮ ಪ್ರಿಯ ಜೊತೆಸೇವಕನೂ ಆದ ಎಪಫ್ರನಿಂದ ನೀವು ಕಲಿತುಕೊಂಡಿದ್ದೀರಿ.
8 ಪವಿತ್ರಾತ್ಮಪ್ರೇರಿತವಾದ ನಿಮ್ಮ ಪ್ರೀತಿಯ ವಿಷಯವನ್ನು ನನಗೆ ತಿಳಿಸಿದವನು ಆತನೇ.
9 ಹೀಗಿರುವುದ್ದರಿಂದ ಈ ನಿಮ್ಮ ಪ್ರೀತಿಯ ಕುರಿತು ನಾವು ಕೇಳಿದ ದಿನದಿಂದ ನಿಮಗೋಸ್ಕರ ಪ್ರಾರ್ಥಿಸುವುದನ್ನು ನಿಲ್ಲಿಸದೆ, ನೀವು ಸಕಲ ಆತ್ಮೀಕ ಗ್ರಹಿಕೆಯಿಂದಲೂ ಜ್ಞಾನದಿಂದಲೂ ದೇವರ ಚಿತ್ತದ ತಿಳಿವಳಿಕೆಯ ಕುರಿತು ಸಂಪೂರ್ಣರಾಗಬೇಕೆಂತಲೂ,
10 ಕರ್ತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನೀವು ಯೋಗ್ಯರಾಗಿ ಜೀವಿಸಬೇಕೆಂತಲೂ, ಸಕಲ ಸತ್ಕಾರ್ಯಗಳಲ್ಲಿ ಫಲವನ್ನು ಕೊಡುತ್ತಾ ದೈವಜ್ಞಾನದಲ್ಲಿ ವೃದ್ಧಿಯಾಗಬೇಕೆಂತಲೂ,
11 ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ,
12 ದೇವಭಕ್ತರಿಗಾಗಿ ಬೆಳಕಿನಲ್ಲಿರುವ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಯಾದ ದೇವರಿಗೆ ಆನಂದಪೂರ್ವಕವಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರಾಗಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇನೆ.
13 ದೇವರು ನಮ್ಮನ್ನು ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ಸಾಮ್ರಾಜ್ಯಕ್ಕೆ ಸೇರಿಸಿದನು.
14 ಈ ಕುಮಾರನಲ್ಲಿ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಮಗೆ ವಿಮೋಚನೆಯಾಯಿತು.
ಕ್ರಿಸ್ತನ ಉತ್ಕೃಷ್ಟತೆ
15 ಕ್ರಿಸ್ತನು ಅದೃಶ್ಯನಾದ ದೇವರ ಪ್ರತಿರೂಪನೂ, ಸೃಷ್ಟಿಗೆಲ್ಲಾ ಜೇಷ್ಠಪುತ್ರನೂ ಆಗಿದ್ದಾನೆ.
16 ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು. ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು.
17 ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ.
18 ಸಭೆಯೆಂಬ ದೇಹಕ್ಕೆ ಆತನು ತಲೆಯಾಗಿದ್ದಾನೆ, ಆತನೇ ಆದಿಸಂಭೂತನು, ಎಲ್ಲಾದರಲ್ಲಿ ಆತನು ಮೊದಲಿಗನಾಗುವುದಕ್ಕಾಗಿ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ.
19 ಏಕೆಂದರೆ ಆತನಲ್ಲಿಯೇ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ,
20 ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನುಂಟುಮಾಡಿ, ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ತನ್ನ ಕುಮಾರನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ತಂದೆಯಾದ ದೇವರು ಇಚ್ಛಿಸಿದನು.
21 ಇದಲ್ಲದೆ ನೀವು ಪೂರ್ವದಲ್ಲಿ ಅನ್ಯರು ನಿಮ್ಮ ದುಷ್ಕೃತ್ಯಗಳಿಂದಲೂ ದ್ವೇಷಮನಸ್ಸುಳ್ಳವರಾಗಿ ಆತನಿಗೆ ವಿರೋಧಿಗಳೂ ಆಗಿದ್ದಿರಿ.
22 ಈಗಲಾದರೋ ದೇವರು ನಿಮ್ಮನ್ನು ಯೇಸುಕ್ರಿಸ್ತನ ಶಾರೀರಿಕ ಮರಣದ ಮೂಲಕವಾಗಿ ಸಂಧಾನಪಡಿಸಿಕೊಂಡಿದ್ದಾನೆ. ದೇವರು ತನ್ನ ಸನ್ನಿಧಿಯಲ್ಲಿ ನಿಮ್ಮನ್ನು ಪರಿಶುದ್ಧರನ್ನಾಗಿಯೂ, ನಿರ್ದೋಷಿಗಳನ್ನಾಗಿಯೂ, ನಿರಪರಾಧಿಗಳನ್ನಾಗಿಯೂ ನಿಲ್ಲಿಸಬೇಕೆಂದು ಹೀಗೆ ಮಾಡಿದ್ದಾನೆ.
23 ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ದೃಢವಾಗಿರಿ ಮತ್ತು ನೆಲೆಗೊಂಡಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ.
ಸಭೆಗಾಗಿ ಪೌಲನ ಸೇವೆ
24 ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ.
25 ದೇವರ ಸಂಕಲ್ಪದ ಮೇರೆಗೆ ನಿಮ್ಮ ಪ್ರಯೋಜನಕ್ಕೋಸ್ಕರವಾಗಿ ನಾನು ಸಭೆಗೆ ಸೇವಕನಾದೆನು. ದೇವರು ತನ್ನ ವಾಕ್ಯವನ್ನು ಸಂಪೂರ್ಣವಾಗಿ ತಿಳಿಸುವ ಕಾರ್ಯವನ್ನು ನನಗೆ ದಯಪಾಲಿಸಿದನು.
26 ಈ ರಹಸ್ಯವಾದ ಸತ್ಯವಾಕ್ಯವು ಹಿಂದಿನ ಯುಗಯುಗಗಳಿಂದಲೂ, ತಲತಲಾಂತರಗಳಿಂದಲೂ ಮರೆಯಾಗಿತ್ತು, ಆದರೆ ಈಗ ದೇವರು ಅದನ್ನು ತನ್ನ ದೇವಜನರಿಗೆ ಪ್ರಕಟಿಸಿದ್ದಾನೆ.
27 ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು ಅನ್ಯಜನಗಳಿಗೂ ತಿಳಿಸಲಿಕ್ಕೆ ದೇವರು ಇಚ್ಛಿಸಿದನು. ಈ ಮರ್ಮವು ಏನೆಂದರೆ ಮಹಿಮೆಯ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದೇ.
28 ನಾವು ಆತನನ್ನು ಸಾರುತ್ತಲಿದ್ದೇವೆ, ಸಕಲರಿಗೂ ಬುದ್ಧಿ ಹೇಳುತ್ತಾ, ಸರ್ವರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ, ದೇವರ ಮುಂದೆ ಎಲ್ಲರನ್ನೂ ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ನಿಲ್ಲಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ.
29 ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲದಿಂದ ಇದಕ್ಕೊಸ್ಕರವೇ ಶ್ರಮಿಸಿ ಹೋರಾಡುತ್ತೇನೆ.