13
1 ಯಾವ ಪ್ರವಾದಿಯಾಗಲಿ ಅಥವಾ ಕನಸುಗಾರನೇ ಆಗಲಿ ನಿಮ್ಮ ಮಧ್ಯದಲ್ಲಿ ಬಂದು, ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತೋರಿಸಿ,
2 “ಈ ದೇವತೆಗಳನ್ನು ಅವಲಂಬಿಸಿ ಅವುಗಳನ್ನು ಸೇವಿಸೋಣ” ಎಂದು ಬೋಧಿಸುತ್ತಾ, ಆ ಬೋಧನೆಯನ್ನು ಸ್ಥಾಪಿಸುವುದಕ್ಕೆ ಒಂದು ಅದ್ಭುತವನ್ನಾಗಲಿ ಅಥವಾ ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಹೇಳಿ ಅವನು ಹೇಳಿದಂತೆಯೇ ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು.
3 ಏಕೆಂದರೆ ನಿಮ್ಮ ದೇವರಾದ ಯೆಹೋವನು, “ಇವರು ಸಂಪೂರ್ಣ ಹೃದಯದಿಂದಲೂ ಮತ್ತು ಸಂಪೂರ್ಣ ಮನಸ್ಸಿನಿಂದಲೂ ತನ್ನನ್ನೇ ಪ್ರೀತಿಸುವವರು ಹೌದೋ ಅಲ್ಲವೋ” ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾನೆ.
4 ಆತನು ಹೇಳುವ ಮಾರ್ಗದಲ್ಲೇ ನೀವು ನಡೆದು, ಆತನಲ್ಲಿಯೇ ಭಯಭಕ್ತಿಯುಳ್ಳವರಾಗಿ, ಆತನ ಆಜ್ಞೆಗಳನ್ನೇ ಅನುಸರಿಸಿ, ಆತನಿಗೇ ವಿಧೇಯರಾಗಿ, ಆತನನ್ನೇ ಸೇವಿಸುತ್ತಾ ಹೊಂದಿಕೊಂಡಿರಬೇಕು.
5 ಆ ಪ್ರವಾದಿಗೆ ಅಥವಾ ಆ ಕನಸುಗಾರನಿಗೆ ಮರಣ ಶಿಕ್ಷೆಯಾಗಬೇಕು. ದಾಸತ್ವದಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ, ಐಗುಪ್ತದೇಶದೊಳಗಿಂದ ಕರೆದುಕೊಂಡು ಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ಅವನು ದ್ರೋಹದ ಮಾತುಗಳನ್ನಾಡಿ, ನಿಮ್ಮ ದೇವರಾದ ಯೆಹೋವನು ಹೇಳಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸಬೇಕೆಂದಿದ್ದನಲ್ಲಾ. ಅವನನ್ನು ಕೊಲ್ಲಿಸಿ, ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
6 ಒಡಹುಟ್ಟಿದ ಅಣ್ಣತಮ್ಮಂದಿರಾಗಲಿ, ಮಗನಾಗಲಿ, ಮಗಳಾಗಲಿ, ಪ್ರಾಣಪ್ರಿಯಳಾದ ಹೆಂಡತಿಯಾಗಲಿ, ಆಪ್ತಮಿತ್ರನಾಗಲಿ ಇತರ ದೇವರುಗಳನ್ನು ತೋರಿಸಿ, “ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಆ ದೇವರುಗಳನ್ನು ಸೇವಿಸೋಣ ಬನ್ನಿರಿ” ಎಂದು ರಹಸ್ಯವಾಗಿ ಆಕರ್ಷಿಸಿ, ನಿಮಗೆ ಬೋಧಿಸಿದರೆ,
7 ಆ ದೇವರುಗಳು ಹತ್ತಿರವಿರುವ ಜನಾಂಗಗಳ ದೇವರುಗಳಾದರೂ, ದೂರವಾದವರ ದೇವರುಗಳಾದರೂ, ಭೂಲೋಕದ ಯಾವ ಭಾಗದವರ ದೇವರುಗಳಾದರೂ
8 ನೀವು ಸಮ್ಮತಿಸಲೂ ಬಾರದು ಮತ್ತು ಕಿವಿಗೊಡಲೂಬಾರದು. ಅವನನ್ನು ಕನಿಕರಿಸಲೂಬಾರದು, ತಪ್ಪಿಸಲೂಬಾರದು, ಬಚ್ಚಿಡಲೂಬಾರದು ಅವನನ್ನು ಕೊಲ್ಲಿಸಲೇಬೇಕು.
9 ಆ ಶಿಕ್ಷೆಯನ್ನು ನಡಿಸುವಾಗ ತಪ್ಪು ಕಂಡವನೇ ಮೊದಲು ಕೈಹಾಕಬೇಕು.
10 ತರುವಾಯ ಜನರೆಲ್ಲರೂ ಕೈಹಾಕಲಿ, ದಾಸತ್ವದಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ, ಐಗುಪ್ತ ದೇಶದೊಳಗಿಂದ ಕರೆದುಕೊಂಡು ಬಂದ ನಿಮ್ಮ ದೇವರಾದ ಯೆಹೋವನ ಆಶ್ರಯದಿಂದ ಅವನು ನಿಮ್ಮನ್ನು ತಪ್ಪಿಸಬೇಕೆಂದಿದ್ದರಿಂದ ಅವನನ್ನು ಕಲ್ಲೆಸೆದು ಕೊಲ್ಲಲೇಬೇಕು.
11 ಇದನ್ನು ಇಸ್ರಾಯೇಲರೆಲ್ಲರೂ ಕೇಳಿ ಭಯಪಟ್ಟು ಅಂಥ ದುಷ್ಕಾರ್ಯವನ್ನು ಇನ್ನು ಮುಂದೆ ಮಾಡದೆ ಇರುವರು.
12 ನಿಮ್ಮ ದೇವರಾದ ಯೆಹೋವನು ನಿಮ್ಮ ನಿವಾಸಕ್ಕಾಗಿ ಕೊಡುವ ಯಾವುದಾದರೂ ಒಂದು ಊರಿನ ವಿಷಯದಲ್ಲಿ,
13 ಅಲ್ಲಿ ವಾಸವಾಗಿರುವ ಇಸ್ರಾಯೇಲರಲ್ಲಿ ಕೆಲವು ಜನ ದುಷ್ಟರು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತಮ್ಮ ಊರಿನವರಿಗೆ ತೋರಿಸಿ, “ಆ ದೇವರುಗಳನ್ನು ಸೇವಿಸೋಣ ಬನ್ನಿರಿ” ಎಂದು ಹೇಳಿ ಅವರನ್ನು ಸನ್ಮಾರ್ಗದಿಂದ ತಪ್ಪಿಸಿದ್ದಾರೆಂಬ ಸುದ್ದಿಯನ್ನು ನೀವು ಕೇಳಿದರೆ,
14 ಆ ಸಂಗತಿಯನ್ನು ಚೆನ್ನಾಗಿ ವಿಚಾರಿಸಿ ತಿಳಿದುಕೊಳ್ಳಬೇಕು. ಅಂತಹ ಅಸಹ್ಯಕಾರ್ಯವು ಇಸ್ರಾಯೇಲರಲ್ಲಿ ನಡೆದದ್ದು
15 ನಿಜವೆಂದು ತಿಳಿದುಬಂದರೆ ಆ ಊರನ್ನು ಸಂಪೂರ್ಣವಾಗಿ ಹಾಳು ಮಾಡಿ, ಅದರಲ್ಲಿರುವ ಎಲ್ಲಾ ಜನರನ್ನೂ, ದನಗಳನ್ನೂ ಕತ್ತಿಯಿಂದ ಸಂಹರಿಸಿಡಬೇಕು.
16 ಅದರಲ್ಲಿರುವ ಎಲ್ಲಾ ಸಾಮಾನುಗಳನ್ನು ಗ್ರಾಮಮಧ್ಯದಲ್ಲಿ ಕೂಡಿಸಿ, ಊರನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಿಮ್ಮ ದೇವರಾದ ಯೆಹೋವನಿಗೋಸ್ಕರ ಸಂಪೂರ್ಣವಾಗಿ ಸುಟ್ಟುಬಿಡಬೇಕು. ಅದು ಪುನಃ ಕಟ್ಟಲ್ಪಡದೆ ಯಾವಾಗಲೂ ಹಾಳುದಿಬ್ಬವಾಗಿರಬೇಕು.
17 “ಕೇವಲ ಯೆಹೋವನಿಗೇ ಆಗಲಿ” ಎಂದು ನೀವು ಗೊತ್ತು ಮಾಡಿದ್ದರಲ್ಲಿ ಸ್ವಲ್ಪವನ್ನಾದರೂ ತೆಗೆದುಕೊಳ್ಳಬಾರದು. ನಾನು ಈಗ ನಿಮಗೆ ಬೋಧಿಸುವ ಆತನ ಎಲ್ಲಾ ಆಜ್ಞೆಗಳನ್ನು ಕೈಕೊಂಡು ಆತನ ದೃಷ್ಟಿಗೆ ಸರಿಯಾದದ್ದನ್ನು ಮಾಡಬೇಕು.
18 ನೀವು ಹೀಗೆ ನಡೆದು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟರೆ, ಆಗ ಆತನು ತನ್ನ ರೋಷಾಗ್ನಿಯನ್ನು ಬಿಟ್ಟು ನಿಮಗೆ ದಯೆಯನ್ನು ತೋರಿಸಿ, ನಿಮ್ಮನ್ನು ಕರುಣಿಸಿ, ತಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂತೆ ನಿಮ್ಮ ಸಂತತಿಯನ್ನು ಹೆಚ್ಚಿಸುವನು.