17
ಯಾವುದೇ ಕುಂದುಕೊರತೆ ಅಥವಾ ಊನ ಇರುವ ಎತ್ತು ಮತ್ತು ಕುರಿಗಳನ್ನು ನಿಮ್ಮ ದೇವರಾದ ಯೆಹೋವನಿಗೆ ಸಮರ್ಪಿಸಬಾರದು. ಅಂಥವುಗಳನ್ನು ಸಮರ್ಪಿಸುವುದು ಆತನಿಗೆ ಅಸಹ್ಯವಾಗಿದೆ.
ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಯಾವುದೇ ಊರಿನಲ್ಲಿ, ಯಾವ ಪುರುಷನಾಗಲಿ ಅಥವಾ ಸ್ತ್ರೀಯಾಗಲಿ ನಿಮ್ಮ ದೇವರಾದ ಯೆಹೋವನ ನಿಬಂಧನೆಯನ್ನು ಮೀರಿ, ಆತನಿಂದ ದೂರಹೋಗಿ ಅನ್ಯದೇವರುಗಳನ್ನು ಪೂಜಿಸಬಾರದೆಂದು ಮತ್ತು ಆತನು ನಿಷೇಧಿಸಿರುವ ಸೂರ್ಯ, ಚಂದ್ರ ಅಥವಾ ನಕ್ಷತ್ರಮಂಡಲವನ್ನಾಗಲಿ ಸೇವಿಸಿ, ಪೂಜಿಸಿ ಯೆಹೋವನ ದೃಷ್ಟಿಯಲ್ಲಿ ಅಸಹ್ಯವಾದದ್ದನ್ನು ನಡಿಸಿದರೆ, ನೀವು ಆ ಸಂಗತಿಯನ್ನು ಕೇಳಿದಾಗ ಸೂಕ್ಷ್ಮವಾಗಿ ವಿಚಾರಣೆಯನ್ನು ಮಾಡಬೇಕು. ಆಗ ಇಸ್ರಾಯೇಲರಲ್ಲಿ ಯಾರಿಂದಾದರೂ ಆ ನಿಷಿದ್ಧಕಾರ್ಯವು ನಡೆದದ್ದು ನಿಜವೆಂದು ತಿಳಿದು ಬಂದರೆ, ಆಗ ಆ ಪುರುಷನನ್ನಾಗಲಿ ಅಥವಾ ಸ್ತ್ರೀಯನ್ನಾಗಲಿ ಹಿಡಿದು ಊರ ಹೊರಗೆ ತಂದು ಕಲ್ಲೆಸೆದು ಕೊಲ್ಲಬೇಕು. ಒಬ್ಬನೇ ಒಬ್ಬನ ಸಾಕ್ಷಿಯ ಮಾತಿನ ಮೇಲೆ ಯಾರಿಗೂ ಮರಣಶಿಕ್ಷೆಯಾಗಬಾರದು. ಮರಣಶಿಕ್ಷೆಯನ್ನು ವಿಧಿಸುವುದಕ್ಕೆ ಇಬ್ಬರು ಇಲ್ಲವೆ ಮೂವರ ಸಾಕ್ಷಿಗಳು ಬೇಕು. ಅಪರಾಧಿಯನ್ನು ಕೊಲ್ಲುವುದಕ್ಕೆ ಸಾಕ್ಷಿಗಳೇ ಮೊದಲು ಕಲ್ಲನ್ನು ಹಾಕಬೇಕು; ತರುವಾಯ ಜನರೆಲ್ಲರೂ ಹಾಕಲಿ. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
ನ್ಯಾಯವಿಚಾರಣೆಯ ಕ್ರಮ
ವಿಧವಿಧವಾದ ಕೊಲೆ, ನ್ಯಾಯ, ಹೊಡೆದಾಟ ಇವುಗಳ ವಿಷಯದಲ್ಲಿ ಅನುಮಾನ ಅಥವಾ ಚರ್ಚೆಗಳು ನಿಮ್ಮ ಊರಿನಲ್ಲಿ ಉಂಟಾದಾಗ, ನ್ಯಾಯ ತೀರಿಸುವುದು ಕಷ್ಟವಾದರೆ, ನೀವು ಊರಿನಿಂದ ಹೊರಟು ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳಕ್ಕೆ ಹೋಗಬೇಕು. ಅಲ್ಲಿ ಯಾಜಕಸೇವೆಯನ್ನು ಮಾಡುವ ಲೇವಿಯರ ಮತ್ತು ಆ ಕಾಲದ ನ್ಯಾಯಾಧಿಪತಿಯ ಬಳಿಗೆ ಹೋಗಿ ವಿಚಾರಿಸಲು ನೀವು ಕೊಡಬೇಕಾದ ತೀರ್ಪನ್ನು ಅವರು ತಿಳಿಸುವರು. 10 ಯೆಹೋವನು ಆರಿಸಿಕೊಂಡ ಆ ಸ್ಥಳದಿಂದ ಅವರು ನಿಮಗೆ ತಿಳಿಸುವ ಮಾತಿನ ಪ್ರಕಾರ ನೀವು ಮಾಡಬೇಕು. ಅವರು ಬೋಧಿಸುವುದನ್ನೇ ನೀವು ಅನುಸರಿಸಬೇಕು. 11 ಅವರು ಕಲಿಸಿಕೊಡುವ ಆಜ್ಞೆಗಳನ್ನು ಅನುಸರಿಸಿ, ಅವರು ಹೇಳಿಕೊಡುವ ತೀರ್ಪಿನಂತೆ ನೀವು ಮಾಡಬೇಕು; ಅವರು ತಿಳಿಸುವ ಮಾತನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತಿರುಗಬಾರದು. 12 ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸೇವೆ ಮಾಡುವ ಯಾಜಕರ ಅಥವಾ ನ್ಯಾಯಾಧಿಪತಿಯ ಮಾತನ್ನು ಯಾರು ಅಹಂಕಾರದಿಂದ ನಿರಾಕರಿಸುತ್ತಾರೋ ಅವರಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ಇಸ್ರಾಯೇಲರ ಮಧ್ಯದಿಂದ ತೆಗೆದುಹಾಕಬೇಕು. 13 ಆಗ ಜನರೆಲ್ಲರೂ ಕೇಳಿ ಭಯಪಟ್ಟು ಇನ್ನು ಅಹಂಕಾರದಿಂದ ನಡೆಯದೆ ಇರುವರು.
ಅರಸನನ್ನು ನೇಮಿಸುವ ವಿಷಯ
14 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಸೇರಿ ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿರುವಾಗ, “ಸುತ್ತಲಿರುವ ಎಲ್ಲಾ ಜನಾಂಗಗಳಂತೆ ನಾವೂ ಅರಸನನ್ನು ನೇಮಿಸಿಕೊಳ್ಳೋಣ” ಎಂದು ಹೇಳಿಕೊಳ್ಳುವ ಸಂದರ್ಭದಲ್ಲಿ, 15 ನೀವು ಅಗತ್ಯವಾಗಿ ನಿಮ್ಮ ದೇವರಾದ ಯೆಹೋವನು ಆರಿಸಿಕೊಂಡ ವ್ಯಕ್ತಿಯನ್ನೇ ನೇಮಿಸಿಕೊಳ್ಳಬೇಕು. ನಿಮ್ಮ ಬಂಧುಗಳಾದ ಸ್ವಜನರಲ್ಲೇ ಒಬ್ಬನನ್ನು ಅರಸನನ್ನಾಗಿ ನೇಮಿಸಿಕೊಳ್ಳಬೇಕೇ ಹೊರತು ಅನ್ಯದೇಶದವನನ್ನು ನೇಮಿಸಬಾರದು.
16 ಅವನು ಕುದುರೆಯ ದಂಡನ್ನು ಕೂಡಿಸಿಕೊಳ್ಳಬಾರದು. *ಕುದುರೆಗಳನ್ನು ಕೊಂಡುಕೊಳ್ಳುವುದಕ್ಕಾಗಿ ತನ್ನ ಪ್ರಜೆಗಳನ್ನು ಐಗುಪ್ತದೇಶಕ್ಕೆ ಹೋಗಗೊಡಿಸಬಾರದು. ನೀವು ಇನ್ನು ಆ ದೇಶಕ್ಕೆ ಹೋಗಲೇಬಾರದು ಎಂದು ಯೆಹೋವನು ಆಜ್ಞಾಪಿಸಿದ್ದಾನಲ್ಲಾ. 17 ಅವನು ಅನೇಕ ಸ್ತ್ರೀಯರನ್ನು ಮದುವೆ ಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವುದಕ್ಕೆ ಅವಕಾಶವಾಗುವುದು. ಅವನು ಹೆಚ್ಚು ಬೆಳ್ಳಿಬಂಗಾರವನ್ನು ಕೂಡಿಸಿಟ್ಟುಕೊಳ್ಳಬಾರದು.
18 ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು. 19 ಅವನು ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ಮತ್ತು ವಿಧಿಗಳನ್ನೂ ಅನುಸರಿಸುವುದಕ್ಕೆ ಅಭ್ಯಾಸಮಾಡಿಕೊಳ್ಳುವಂತೆ ಆ ಗ್ರಂಥವು ಅವನ ಬಳಿಯಲ್ಲೇ ಇರಬೇಕು. ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದನ್ನು ಓದಿಕೊಳ್ಳುತ್ತಾ ಇರಬೇಕು. 20 ಅವನೂ ಮತ್ತು ಅವನ ಸಂತತಿಯವರೂ ಬಹುಕಾಲ ರಾಜ್ಯಾಧಿಕಾರವನ್ನು ನಡಿಸುತ್ತಾ, ಇಸ್ರಾಯೇಲರ ನಡುವೆ ಬಾಳುವಂತೆಯೂ ಮತ್ತು ಅವನು ಮದದಿಂದ ತನ್ನ ಸ್ವದೇಶದವರನ್ನು ಹೀಯಾಳಿಸದಂತೆಯೂ ಅವನು ಯೆಹೋವನ ಆಜ್ಞೆಗಳನ್ನು ಅನುಸರಿಸಬೇಕು. ಅದನ್ನು ಮೀರಿ ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಳ್ಳಬಾರದು.
* 17:16 ಬಹಳ ಕುದುರೆಗಳನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ತನ್ನ ಪ್ರಜೆಗಳನ್ನು ದಾಸರನ್ನಾಗಿ ಕಳುಹಿಸಿ ವಿನಿಮಯ ಮಾಡಿಕೊಳ್ಳಬಾರದು.