25
ಅಪರಾಧಿಗೆ ಆಗಬೇಕಾದ ಶಿಕ್ಷೆ
1 ಇಬ್ಬರು ವ್ಯಾಜ್ಯವಾಡುತ್ತಾ ನ್ಯಾಯಾಧಿಪತಿಗಳ ಬಳಿಗೆ ಬಂದರೆ, ನ್ಯಾಯಾಧಿಪತಿಗಳು ತಪ್ಪಿಲ್ಲದವನನ್ನು ನಿರಪರಾಧಿ ಎಂದೂ ತಪ್ಪುಳ್ಳವನನ್ನು ಅಪರಾಧಿ ಎಂದೂ ತೀರ್ಮಾನಿಸಬೇಕು.
2 ಅಪರಾಧಿಗೆ ಪೆಟ್ಟಿನ ಶಿಕ್ಷೆ ತೀರ್ಮಾನವಾದರೆ ನ್ಯಾಯಾಧಿಪತಿಯು ಅವನನ್ನು ಮಲಗಿಸಿ, ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು ತನ್ನ ಮುಂದೆಯೇ ಹೊಡಿಸಿ ಲೆಕ್ಕಿಸಬೇಕು.
3 ಪೆಟ್ಟುಗಳ ಶಿಕ್ಷೆಯು ನಲ್ವತ್ತಕ್ಕಿಂತ ಹೆಚ್ಚಿರಬಾರದು. ಅದಕ್ಕಿಂತ ಹೆಚ್ಚು ಪೆಟ್ಟುಗಳನ್ನು ನೀವು ಹೊಡಿಸಿದರೆ ನಿಮ್ಮ ಸ್ವದೇಶದವನನ್ನು ನೀವು ಕೇವಲ ನೀಚನನ್ನಾಗಿ ಕಂಡಂತೆ ಆಗುವುದು.
4 ಕಣತುಳಿಯುವ ಎತ್ತಿನ ಬಾಯಿಯನ್ನು ಕಟ್ಟಬಾರದು.
ಮೈದುನನಿಂದ ವಂಶಾಭಿವೃದ್ಧಿ ಆಗಬೇಕೆಂಬ ವಿಷಯ
5 ಅಣ್ಣತಮ್ಮಂದಿರು ಒಂದೇ ಕುಟುಂಬದಲ್ಲಿರುವಾಗ ಅಣ್ಣನು ಮಗನಿಲ್ಲದೆ ಸತ್ತರೆ, ಅವನ ಹೆಂಡತಿ ಬೇರೆ ಪುರುಷನನ್ನು ಮದುವೆಯಾಗಬಾರದು. ಅವಳ ಮೈದುನನು ಅವಳನ್ನು ಹೆಂಡತಿಯನ್ನಾಗಿ ತೆಗೆದುಕೊಂಡು ಮೈದುನಧರ್ಮವನ್ನು ನೆರವೇರಿಸಬೇಕು.
6 ಅವಳಲ್ಲಿ ಹುಟ್ಟುವ ಚೊಚ್ಚಲಮಗನು ಸತ್ತವನ ಮಗನೆಂದು ಎಣಿಸಲ್ಪಡಬೇಕು. ಹೀಗೆ ಮಾಡುವುದರಿಂದ ಸತ್ತವನ ಹೆಸರು ಇಸ್ರಾಯೇಲರೊಳಗಿಂದ ಅಳಿಸಿ ಹೋಗುವುದಿಲ್ಲ.
7 ತಮ್ಮನು ಅಣ್ಣನ ಹೆಂಡತಿಯನ್ನು ಪರಿಗ್ರಹಿಸದೆ ಹೋದರೆ ಅವಳು ಊರ ಬಾಗಿಲಿಗೆ ಹೋಗಿ ಅಲ್ಲಿಯ ಹಿರಿಯರಿಗೆ, “ನನ್ನ ಗಂಡನ ತಮ್ಮನು ತನ್ನ ಅಣ್ಣನ ಹೆಸರನ್ನು ಉಳಿಸುವುದಕ್ಕೆ ಸಿದ್ಧನಿಲ್ಲ. ಅವನು ಮೈದುನಧರ್ಮವನ್ನು ನಡೆಸುವುದಿಲ್ಲ ಅನ್ನುತ್ತಾನೆ” ಎಂದು ತಿಳಿಸಬೇಕು.
8 ಆಗ ಆ ಊರಿನ ಹಿರಿಯರು ಅವನನ್ನು ಕರೆಯಿಸಿ ವಿಚಾರಿಸಿದಲ್ಲಿ ಅವನು ಅವರ ಮುಂದೆ ನಿಂತು, “ಈಕೆಯನ್ನು ಪರಿಗ್ರಹಿಸುವುದಕ್ಕೆ ನನಗೆ ಇಷ್ಟವಿಲ್ಲ” ಎಂದು ಹೇಳುವ ಪಕ್ಷಕ್ಕೆ,
9 ಅವನ ಅತ್ತಿಗೆ ಹಿರಿಯರ ಎದುರಿನಲ್ಲಿ ಅವನ ಕೆರವನ್ನು ಅವನ ಕಾಲಿನಿಂದ ತೆಗೆದುಬಿಟ್ಟು, ಅವನ ಮುಖದ ಮೇಲೆ ಉಗುಳಿ, “ಅಣ್ಣನಿಗೋಸ್ಕರ ಸಂತಾನವನ್ನು ವೃದ್ಧಿಗೊಳಿಸುವುದಕ್ಕೆ ಮನಸ್ಸಿಲ್ಲದವರೆಲ್ಲರಿಗೆ ಇಂಥ ಅವಮಾನವಾಗಲಿ” ಎಂದು ಹೇಳಬೇಕು.
10 ಇಸ್ರಾಯೇಲರಲ್ಲಿ ಆ ಮನುಷ್ಯನ ಮನೆಯವರಿಗೆ, “ಕೆರವನ್ನು ಬಿಚ್ಚಿಸಿಕೊಂಡವನ ಮನೆಯವರು” ಎಂದು ಹೆಸರುಂಟಾಗುವುದು.
ಲಜ್ಜಾಹೀನಳಿಗೆ ಆಗಬೇಕಾದ ಶಿಕ್ಷೆ
11 ಇಬ್ಬರು ಜಗಳವಾಡುತ್ತಿರಲಾಗಿ ಅವರಲ್ಲಿ ಒಬ್ಬನ ಹೆಂಡತಿ ಬಂದು ತನ್ನ ಗಂಡನನ್ನು ಬಿಡಿಸಬೇಕೆಂದು ಆ ಪರಪುರುಷನ ಜನನೇಂದ್ರಿಯವನ್ನು ಹಿಡಿದುಕೊಂಡರೆ,
12 ಅವನು ಅವಳನ್ನು ಕನಿಕರಿಸದೆ ಅವಳ ಕೈಯನ್ನು ಕಡಿದುಹಾಕಬೇಕು.
ವ್ಯಾಪಾರದ ಅಳತೆತೂಕಗಳ ವಿಧಿ
13 ಹೆಚ್ಚು ಕಡಿಮೆಯಾಗಿರುವ ಎರಡು ವಿಧವಾದ ತೂಕದ ಕಲ್ಲುಗಳನ್ನು ನಿಮ್ಮ ಚೀಲದಲ್ಲಿ ಇಟ್ಟುಕೊಳ್ಳಬಾರದು.
14 ಹೆಚ್ಚುಕಡಿಮೆಯಾದ ಎರಡು ವಿಧವಾದ ಸೇರುಗಳು ಹಾಗೂ ಮೋಸ ಮಾಡುವ ತೂಕದ ಕಲ್ಲುಗಳು ನಿಮ್ಮ ಮನೆಯಲ್ಲಿ ಇರಬಾರದು.
15 ನಿಮ್ಮ ತೂಕದ ಕಲ್ಲೂ ಮತ್ತು ನಿಮ್ಮ ಅಳತೆಯ ಸೇರೂ ನ್ಯಾಯವಾಗಿಯೇ ಇರಬೇಕು. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.
16 ನ್ಯಾಯವಿರುದ್ಧವಾದ ಅಳತೆತೂಕಗಳನ್ನು ಮಾಡುವವರೆಲ್ಲರೂ ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯರಾಗಿದ್ದಾರೆ.
ಅಮಾಲೇಕ್ಯರನ್ನು ಸಂಹಾರಮಾಡಬೇಕೆಂಬ ವಿಧಿ
17 ನೀವು ಐಗುಪ್ತದೇಶದಿಂದ ಬರುವಾಗ ದಾರಿಯಲ್ಲಿ ಅಮಾಲೇಕ್ಯರು ನಿಮ್ಮನ್ನು ಎದುರಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ.
18 ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರಾಗಿ, ನೀವು ದಣಿದು ಮತ್ತು ಬಳಲಿದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರ ಮಾಡಿದರು.
19 ಆದಕಾರಣ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶದಲ್ಲಿ ನಿಮ್ಮನ್ನು ಸೇರಿಸಿ ಸುತ್ತಲು ಯಾವ ಶತ್ರುಗಳೂ ಇಲ್ಲದಂತೆ ಮಾಡಿದಾಗ ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಉಳಿಯದಂತೆ ನೀವು ಮಾಡಬೇಕು; ಇದನ್ನು ಮರೆಯಬಾರದು.