46
ಸಬ್ಬತ್ತಿನ ಮತ್ತು ಹಬ್ಬದ ಆಚರಣೆ
1 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ವಾರದೊಳಗೆ ಕೆಲಸ ಮಾಡುವ ಆರು ದಿನಗಳಲ್ಲಿ ಒಳಗಿನ ಅಂಗಳದ ಪೂರ್ವದಿಕ್ಕಿನ ಹೆಬ್ಬಾಗಿಲನ್ನು ಮುಚ್ಚಿರಬೇಕು. ಅದನ್ನು ಸಬ್ಬತ್ ದಿನದಲ್ಲಿಯೂ, ಅಮಾವಾಸ್ಯೆಯಲ್ಲಿಯೂ ತೆರೆದಿರಬೇಕು.
2 ರಾಜನು ಹೊರಗಿನ ಕೈಸಾಲೆಯ ಮಾರ್ಗವಾಗಿ ಆ ಹೆಬ್ಬಾಗಿಲನ್ನು ಪ್ರವೇಶಿಸಿ, ಬಾಗಿಲಿನ ಕಂಬದ ಪಕ್ಕದಲ್ಲಿ ನಿಂತುಕೊಂಡು, ತಾನು ಒಪ್ಪಿಸಿದ ಸರ್ವಾಂಗಹೋಮ ಪಶುವನ್ನೂ, ಸಮಾಧಾನ ಯಜ್ಞ ಪಶುಗಳನ್ನೂ ಯಾಜಕರು ಅರ್ಪಿಸುತ್ತಿರುವಾಗ ಬಾಗಿಲಿನ ಹೊಸ್ತಿಲಿನಲ್ಲಿ ಅಡ್ಡಬೀಳಲಿ, ಆ ಮೇಲೆ ಹೊರಟು ಹೋಗಲಿ. ಅ ದಿನ ಸಂಜೆಯ ತನಕ ಬಾಗಿಲನ್ನು ಮುಚ್ಚಬಾರದು.
3 ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ ದೇಶದ ಜನರು ಆ ಹೆಬ್ಬಾಗಿಲಿನ ದ್ವಾರದ ಮುಂದೆ ಯೆಹೋವನ ಸಮ್ಮುಖವಾಗಿ ಅಡ್ಡಬೀಳಲಿ.
4 ಸಬ್ಬತ್ ದಿನದಲ್ಲಿ ಅರಸನು ಯೆಹೋವನಿಗೆ ಪೂರ್ಣಾಂಗವಾದ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಅರ್ಪಿಸತಕ್ಕದ್ದು.
5 ಟಗರಿನೊಡನೆ ಮೂವತ್ತು ಸೇರು ಗೋದಿಹಿಟ್ಟನ್ನೂ, ಕುರಿಗಳೊಡನೆ ಕೈಯಲಾದಷ್ಟು ಗೋದಿಹಿಟ್ಟನ್ನೂ, ಮೂವತ್ತು ಸೇರು ಗೋದಿಹಿಟ್ಟಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಕೊಡಲಿ.
6 ಅಮಾವಾಸ್ಯೆಯಲ್ಲಿ ಅವನು ಪೂರ್ಣಾಂಗವಾದ ಒಂದು ಹೋರಿಯನ್ನೂ, ಆರು ಕುರಿಗಳನ್ನೂ, ಒಂದು ಟಗರನ್ನೂ ಒಪ್ಪಿಸತಕ್ಕದ್ದು. ಅವು ಪೂರ್ಣಾಂಗವಾಗಿಯೇ ಇರಬೇಕು.
7 ಮತ್ತು ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಕೈಲಾದ್ದಷ್ಟು ಸೇರು ಗೋದಿಹಿಟ್ಟನ್ನೂ, ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.
ದೇವಾಲಯದ ಆಗಮನ ನಿರ್ಗಮನದ ಕ್ರಮ, ವಿವಿಧ ನಿಯಮಗಳು
8 “ಅರಸನು ಪ್ರವೇಶ ಮಾಡುವಾಗ ಹೆಬ್ಬಾಗಿಲಿನ ಕೈಸಾಲೆಯ ಮಾರ್ಗವಾಗಿ ಒಳಗೆ ಬಂದು, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.
9 ದೇಶದ ಜನರಾದರೋ ಹಬ್ಬಗಳಲ್ಲಿ ಯೆಹೋವನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಉತ್ತರ ಬಾಗಿಲಿನಿಂದ ಆರಾಧಿಸುವುದಕ್ಕೆ ಪ್ರವೇಶಿಸಿದವನು ದಕ್ಷಿಣ ಬಾಗಿಲಿಂದ ಹೊರಗೆ ಹೋಗಬೇಕು. ದಕ್ಷಿಣದ ಬಾಗಿಲಿನಿಂದ ಪ್ರವೇಶಿಸಿದವನು ಉತ್ತರ ಬಾಗಿಲಿನಿಂದ ಹೊರಗೆ ಹೋಗಬೇಕು. ತಾನು ಪ್ರವೇಶಿಸಿದ ಬಾಗಿಲಿನಿಂದ ಹಿಂದಿರುಗದೆ ಅದಕ್ಕೆ ಎದುರಾಗಿರುವ ಬಾಗಿಲಿಂದ ಹೊರಗೆ ಹೋಗಬೇಕು.
10 ಜನರು ಪ್ರವೇಶಿಸುವಾಗ ಅರಸನು ಅವರ ಮಧ್ಯದಲ್ಲಿ ಒಳಗೆ ಪ್ರವೇಶಿಸಲಿ. ಅವರು ಹೊರಗೆ ಹೋಗುವಾಗ ಅವರೂ ಹೊರಗೆ ಹೋಗಲಿ.
11 ಅರಸನು ಉತ್ಸವಗಳಲ್ಲಿಯೂ, ಹಬ್ಬಗಳಲ್ಲಿಯೂ ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಕೈಲಾದ್ದಷ್ಟು ಸೇರು ಗೋದಿಹಿಟ್ಟನ್ನೂ, ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ, ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.
12 ಅರಸನು ಸ್ವಂತ ಇಚ್ಛೆಯಿಂದ ಕಾಣಿಕೆಯನ್ನಾಗಲಿ, ಸರ್ವಾಂಗಹೋಮವನ್ನಾಗಲಿ, ಸಮಾಧಾನ ಯಜ್ಞಗಳನ್ನಾಗಲಿ ಯೆಹೋವನಿಗೆ ಸಮರ್ಪಿಸುವಾಗ ಅವನಿಗಾಗಿ ಪೂರ್ವದಿಕ್ಕಿನ ಹೆಬ್ಬಾಗಿಲನ್ನು ತೆರೆಯಬೇಕು. ಅವನು ಸಬ್ಬತ್ ದಿನದಲ್ಲಿ ಸಮರ್ಪಿಸುವಂತೆ ಸರ್ವಾಂಗಹೋಮ ಪಶುವನ್ನೂ, ಸಮಾಧಾನ ಯಜ್ಞಪಶುಗಳನ್ನೂ ಸಮರ್ಪಿಸಿ ಹೊರಡಲಿ. ಹೊರಟ ಮೇಲೆ ಬಾಗಿಲನ್ನು ಮುಚ್ಚಬೇಕು.
ನಿತ್ಯಸರ್ವಾಂಗಹೋಮ
13 “ನೀನು ಪೂರ್ಣಾಂಗವಾದ ವರ್ಷದ ಕುರಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಪ್ರತಿ ದಿನ ಅರ್ಪಿಸಬೇಕು. ಪ್ರತಿ ದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.
14 ಅದರೊಂದಿಗೆ ಪ್ರತಿ ದಿನ ಬೆಳಗ್ಗೆ ಧಾನ್ಯ ನೈವೇದ್ಯವಾಗಿ ಐದು ಸೇರು ಗೋದಿಹಿಟ್ಟನ್ನೂ, ಅದನ್ನು ಕಲಸುವುದಕ್ಕೆ ಎರಡು ಸೇರು ಎಣ್ಣೆಯನ್ನೂ ನೀನು ಸಮರ್ಪಿಸಬೇಕು. ಇವುಗಳನ್ನು ಪ್ರತಿನಿತ್ಯವೂ ಯೆಹೋವನಿಗೆ ಧಾನ್ಯನೈವೇದ್ಯವಾಗಿ ಅರ್ಪಿಸತಕ್ಕದ್ದು. ಇದು ಶಾಶ್ವತ ನಿಯಮವಾಗಿದೆ.
15 ಯಾಜಕರು ಕುರಿಯನ್ನೂ, ಧಾನ್ಯನೈವೇದ್ಯವನ್ನೂ, ಎಣ್ಣೆಯನ್ನೂ ನಿತ್ಯ ಸರ್ವಾಂಗಹೋಮವಾಗಿ ಪ್ರತಿ ದಿನ ಬೆಳಗ್ಗೆ ಸಮರ್ಪಿಸಬೇಕು.”
ಅರಸನ ಸ್ವತ್ತು ಪರಾಧೀನವಾಗಬಾರದು
16 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಅರಸನು ತನ್ನ ಮಕ್ಕಳಲ್ಲಿ ಒಬ್ಬನಿಗೆ ದಾನ ಕೊಟ್ಟರೆ, ಅದು ತಂದೆಯ ಸ್ವಾಸ್ತ್ಯವಾದ ಕಾರಣ, ಮಕ್ಕಳಿಗೆ ಹಕ್ಕು ಬರುವುದು, ಅದು ಬಾಧ್ಯವಾಗಿ ಸಿಕ್ಕಿದ ಸ್ವಾಸ್ತ್ಯವೇ.
17 ಆದರೆ ಅರಸನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ಸೇವಕರಲ್ಲಿ ಒಬ್ಬನಿಗೆ ದಾನ ಮಾಡಿದರೆ, ಬಿಡುಗಡೆಯ ವರ್ಷದವರೆಗೆ ಅದು ಅವನ ಅಧೀನವಾಗಿರುವುದು; ಆ ಮೇಲೆ ಅದು ಪುನಃ ಅರಸನ ವಶವಾಗುವುದು; ಆದರೆ ಅರಸನು ತನ್ನ ಮಕ್ಕಳಿಗೆ ಕೊಟ್ಟ ಸ್ವತ್ತು ಅವರಿಗೇ ಸೇರುವುದು.
18 ಇದಲ್ಲದೆ ಅರಸನು ಪ್ರಜೆಗಳ ಪಿತ್ರಾರ್ಜಿತ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಅವರ ಬಾಧ್ಯತೆಯನ್ನು ತಪ್ಪಿಸಬಾರದು. ಸ್ವಂತ ಭೂಮಿಯನ್ನೇ ವಿಭಾಗಿಸಿ ತನ್ನ ಮಕ್ಕಳಿಗೆ ಪಾಲುಕೊಡಲಿ. ಇಲ್ಲವಾದರೆ ನನ್ನ ಪ್ರಜೆಯಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಭೂಸ್ಥಿತಿಯನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗುವನು.
ದೇವಾಲಯದ ಪಾಕಶಾಲೆಗಳು
19 “ಬಳಿಕ ಆ ಪುರುಷನು ನನ್ನನ್ನು ಹೆಬ್ಬಾಗಿಲ ಪಕ್ಕದಲ್ಲಿನ ಪ್ರವೇಶದ ಮಾರ್ಗವಾಗಿ ಉತ್ತರಕ್ಕೆ ಅಭಿಮುಖವಾಗಿಯೂ, ಯಾಜಕರಿಗೆ ನೇಮಕವಾಗಿಯೂ ಇರುವ ಪರಿಶುದ್ಧವಾದ ಕೋಣೆಗಳಿಗೆ ಬರಮಾಡಿದನು. ಇಗೋ, ಅವುಗಳ ಹಿಂದೆ ಪಶ್ಚಿಮದ ಕಡೆಗೆ ಒಂದು ಸ್ಥಳವಿತ್ತು.”
20 ಆಗ ಅವನು ನನಗೆ, “ಯಾಜಕರು ಅಪರಾಧ ಬಲಿಯನ್ನೂ, ಪ್ರಾಯಶ್ಚಿತ್ತಯಜ್ಞ ಬಲಿಯನ್ನೂ, ಬೇಯಿಸಿದ ಧಾನ್ಯನೈವೇದ್ಯವನ್ನು ಸುಡುವುದಕ್ಕೆ ಏರ್ಪಡಿಸಿರುವ ಪರಿಶುದ್ಧ ಸ್ಥಳವು ಇದೆ” ಎಂದು ಹೇಳಿದನು.
21 ತರುವಾಯ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಬರಮಾಡಿ, ಅಲ್ಲಿನ ನಾಲ್ಕು ಮೂಲೆಗಳ ಮಾರ್ಗವಾಗಿ ಕರೆದುಕೊಂಡು ಹೋದನು. ಇಗೋ, ಅಂಗಳದ ಒಂದೊಂದು ಮೂಲೆಯಲ್ಲಿ ಒಂದೊಂದು ಒಳ ಅಂಗಳವು ಕಾಣಿಸಿತು.
22 ಹೌದು, ಅಂಗಳದ ನಾಲ್ಕು ಮೂಲೆಗಳಲ್ಲಿಯೂ ನಲ್ವತ್ತು ಮೊಳ ಉದ್ದದ, ಮೂವತ್ತು ಮೊಳ ಅಗಲದ ಪ್ರತ್ಯೇಕವಾದ ಅಂಗಳಗಳು ಇದ್ದವು; ಮೂಲೆಗಳಲ್ಲಿನ ಆ ನಾಲ್ಕು ಅಂಗಳಗಳು ಒಂದೇ ಅಳತೆಯಾಗಿದ್ದವು.
23 ಅವುಗಳೊಳಗೆ ಸುತ್ತಲು, ಅಂದರೆ ಆ ನಾಲ್ಕು ಅಂಗಳಗಳ ಸುತ್ತು ಮುತ್ತಲು ಕಲ್ಲಿನ ಸಾಲುಗಳು ಚಾಚಿಕೊಂಡಿತು. ಆ ಸಾಲುಗಳ ಕೆಳಗೆ ಒಲೆಗಳು ಸುತ್ತಲೂ ಇದ್ದವು.
24 ಆಗ ಅವನು ನನಗೆ, “ಇವು ದೇವಾಲಯದ ಸೇವಕರು. ಯಜ್ಞಪಶುಗಳನ್ನು ತಂದ ಜನರಿಗೋಸ್ಕರ ಅವುಗಳ ಮಾಂಸವನ್ನು ಬೇಯಿಸಿದ ಪಾಕಶಾಲೆಗಳು” ಎಂದು ಹೇಳಿದನು.