ಎಜ್ರನು
ಗ್ರಂಥಕರ್ತೃತ್ವ
ಇಬ್ರಿಯ ಸಂಪ್ರದಾಯವು ಈ ಪುಸ್ತಕದ ಗ್ರಂಥಕರ್ತನ ಮನ್ನಣೆಯನ್ನು ಎಜ್ರನಿಗೆ ನೀಡುತ್ತದೆ. ಎಜ್ರನು ಮಹಾಯಾಜಕನಾದ ಆರೋನನ ಸಾಕ್ಷಾತ್ ವಂಶಸ್ಥನಾಗಿದ್ದಾನೆ ಎಂಬುದು ಅಜ್ಞಾತವಾಗಿದೆ, (7:1-5), ಹೀಗಾಗಿ ಅವನು ತನ್ನದೇ ಆದ ಹಕ್ಕಿನಿಂದ ಯಾಜಕನೂ ಮತ್ತು ಶಾಸ್ತ್ರಿಯೂ ಆಗಿದ್ದಾನೆ. ದೇವರಿಗಾಗಿ ಮತ್ತು ದೇವರ ಧರ್ಮಶಾಸ್ತ್ರಕ್ಕಾಗಿ ಇದ್ದ ಎಜ್ರನ ಹುರುಪು ಪರ್ಷಿಯ ಸಾಮ್ರಾಜ್ಯದ ಚಕ್ರವರ್ತಿಯಾದ ಅರ್ತಷಸ್ತನ ಆಳ್ವಿಕೆಯ ಸಮಯದಲ್ಲಿ ಯೆಹೂದ್ಯರ ಗುಂಪನ್ನು ಇಸ್ರಾಯೇಲಿಗೆ ಮುನ್ನಡೆಸುವಂತೆ ಅವನನ್ನು ಪ್ರೇರೇಪಿಸಿತು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ. ಪೂ. 457-440 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಈ ಪುಸ್ತಕವು ಯೆಹೂದದಲ್ಲಿ, ಬಹುಶಃ ಬಾಬೆಲಿನಿಂದ ಹಿಂದಿರುಗಿದ ನಂತರ ಯೆರೂಸಲೇಮಿನಲ್ಲಿ ಬರೆಯಲ್ಪಟ್ಟಿತು.
ಸ್ವೀಕೃತದಾರರು
ಸೆರೆವಾಸದಿಂದ ಹಿಂದಿರುಗಿದ ನಂತರ ಯೆರೂಸಲೇಮಿನಲ್ಲಿದ್ದ ಇಸ್ರಾಯೇಲ್ಯರು ಮತ್ತು ಪವಿತ್ರಗ್ರಂಥದ ಭವಿಷ್ಯತ್ತಿನ ಓದುಗಾರರೆಲ್ಲರು.
ಉದ್ದೇಶ
ಜನರನ್ನು ಶಾರೀರಿಕವಾಗಿ ತಮ್ಮ ತಾಯ್ನಾಡಿಗೆ ಹಿಂದಿರುಗಿಸುವುದರ ಮೂಲಕ ಮತ್ತು ಆಧ್ಯಾತ್ಮಿಕವಾಗಿ ಪಾಪದಿಂದ ಪಶ್ಚಾತ್ತಾಪಪಡುವ ಮೂಲಕ, ದೇವರ ಕಡೆಗೆ ಪುನಃಸ್ಥಾಪಿಸಲು ದೇವರು ಎಜ್ರನನ್ನು ದೃಷ್ಟಾಂತವಾಗಿ ಉಪಯೋಗಿಸಿದನು. ನಾವು ಕರ್ತನ ಕೆಲಸ ಮಾಡುವಾಗ ಅವಿಶ್ವಾಸಿಗಳಿಂದ ಮತ್ತು ಆಧ್ಯಾತ್ಮಿಕ ಪಡೆಗಳಿಂದ ವಿರೋಧವನ್ನು ನಾವು ನಿರೀಕ್ಷಿಸಬಹುದು, ನಾವು ಸಮಯಕ್ಕೆ ಮುಂಚಿತವಾಗಿಯೇ ಸಿದ್ಧರಾಗಿದ್ದರೆ, ನಾವು ವಿರೋಧವನ್ನು ಎದುರಿಸಲು ಉತ್ತಮವಾಗಿ ಸಜ್ಜಾಗಿರುತ್ತವೆ. ನಮ್ಮ ಪ್ರಗತಿಯನ್ನು ನಿಲ್ಲಿಸುವುದಕ್ಕೆ ರಸ್ತೆಯ ಅಡಿಗಲ್ಲಿಗೆ ನಾವು ನಂಬಿಕೆಯಿಂದ ಅನುವು ಮಾಡಿಕೊಡುವುದಿಲ್ಲ. ಎಜ್ರನ ಪುಸ್ತಕವು ನಮ್ಮ ಜೀವನದ ಕುರಿತಾಗಿರುವ ದೇವರ ಯೋಜನೆಯನ್ನು ನೆರವೇರಿಸುವಲ್ಲಿ ನಿರುತ್ಸಾಹ ಮತ್ತು ಭಯವು ಅತಿದೊಡ್ಡ ಅಡೆತಡೆಗಳಾಗಿವೆ ಎಂಬ ದೊಡ್ಡ ನೆನಪೋಲೆಯನ್ನು ನೀಡುತ್ತದೆ.
ಮುಖ್ಯಾಂಶ
ಪುನಃಸ್ಥಾಪನೆ
ಪರಿವಿಡಿ
1. ಜೆರುಬ್ಬಾಬೆಲನ ಮುಂದಾಳತ್ವದಲ್ಲಿ ಮೊದಲ ಹಿಂದಿರುಗುವಿಕೆ — 1:1-6:22
2. ಎಜ್ರನ ಮುಂದಾಳತ್ವದಲ್ಲಿ ಎರಡನೇ ಹಿಂದಿರುಗುವಿಕೆ — 7:1-10:44
1
ಅರಸನಾದ ಕೋರೆಷನು ಯೆಹೂದ್ಯರಿಗೆ ಸ್ವದೇಶಕ್ಕೆ ಹಿಂತಿರುಗಲು ಅಪ್ಪಣೆಕೊಟ್ಟದ್ದು
ಪರ್ಷಿಯ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಆ ಪರ್ಷಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರೇಪಿಸಿದನು. ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ, ಪತ್ರಗಳಿಂದಲೂ, “ಪರ್ಷಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ. ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು, ತನಗೋಸ್ಕರ ಯೆಹೂದ ದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ. ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ, ಅವರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ. ಅವರ ದೇವರು ಅವರ ಸಂಗಡ ಇರಲಿ. ಸೆರೆಯವರಲ್ಲಿ ಉಳಿದವರು ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರುಗಳವರು ಯೆರೂಸಲೇಮಿನ ದೇವಾಲಯಕ್ಕೋಸ್ಕರ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕು, ಪಶು ಇವುಗಳನ್ನೂ ಕೊಟ್ಟು ಅವರಿಗೆ ಸಹಾಯ ಮಾಡಲಿ” ಎಂದು ಪ್ರಕಟಿಸಿದನು.
ಆಗ ಯೆಹೂದ ಮತ್ತು ಬೆನ್ಯಾಮೀನ್ ಗೋತ್ರ ಪ್ರಧಾನರಲ್ಲಿಯೂ, ಯಾಜಕರಲ್ಲಿಯೂ ಮತ್ತು ಲೇವಿಯರಲ್ಲಿಯೂ ದೇವಪ್ರೇರಣೆಗೆ ಒಳಗಾದವರೆಲ್ಲರೂ ಯೆರೂಸಲೇಮಿನಲ್ಲಿ ಯೆಹೋವನಿಗೋಸ್ಕರ ಆಲಯವನ್ನು ಕಟ್ಟುವುದಕ್ಕಾಗಿ ಹೊರಟುಹೋದರು. ಅವರ ನೆರೆಯವರೆಲ್ಲರೂ ಕಾಣಿಕೆಗಳನ್ನು ಕೊಟ್ಟಿದ್ದಲ್ಲದೆ ಅವರಿಗೆ ಬೆಳ್ಳಿಯ ಸಾಮಾನು, ಬಂಗಾರ, ಸರಕು, ಪಶು, ಶ್ರೇಷ್ಠವಸ್ತು ಇವುಗಳನ್ನೂ ಕೊಟ್ಟು ಸಹಾಯಮಾಡಿದರು. ಅಲ್ಲಿಂದ ನೆಬೂಕದ್ನೆಚ್ಚರನು* ಯೆರೂಸಲೇಮಿನಿಂದ ಕೊಳ್ಳೆಯಾಗಿ ತಂದು ತನ್ನ ದೇವರ ಗುಡಿಯಲ್ಲಿ ಇಟ್ಟಿದ್ದ ಯೆಹೋವನ ಆಲಯದ ಸಾಮಾನುಗಳನ್ನು ಪರ್ಷಿಯ ರಾಜನಾದ ಕೋರೆಷನು ಅಲ್ಲಿಂದ ತೆಗೆಸಿದನು. ಅವನು ಅವುಗಳನ್ನು ಖಜಾನೆಯ ಅಧಿಕಾರಿಯಾದ ಮಿತ್ರದಾತನಿಗೆ ಒಪ್ಪಿಸಿದನು. ಇವನು ಅವುಗಳನ್ನು ಯೆಹೂದದ ಪ್ರಭುವಾಗಿರುವ ಶೆಷ್ಬಚ್ಚರನಿಗೆ ಲೆಕ್ಕಮಾಡಿ ಕೊಟ್ಟನು. ಆ ಸಾಮಾನುಗಳ ಲೆಕ್ಕ: ಬಂಗಾರದ ಬೋಗುಣಿಗಳು ಮೂವತ್ತು; ಬೆಳ್ಳಿಯ ಬೋಗುಣಿಗಳು ಒಂದು ಸಾವಿರ; ಕತ್ತಿಗಳು ಇಪ್ಪತ್ತೊಂಭತ್ತು; 10 ಚಿನ್ನದ ಬಟ್ಟಲುಗಳು ಮೂವತ್ತು; ಎರಡನೆಯ ದರ್ಜೆಯ ಬೆಳ್ಳಿಯ ಬಟ್ಟಲುಗಳು ನಾನೂರಹತ್ತು ಮತ್ತು ಇತರ ಪಾತ್ರೆಗಳು ಒಂದು ಸಾವಿರ. 11 ಬೆಳ್ಳಿಬಂಗಾರದ ಎಲ್ಲಾ ಸಾಮಾನುಗಳ ಒಟ್ಟು ಸಂಖ್ಯೆಯು ಐದು ಸಾವಿರದ ನಾನೂರು. ಶೆಷ್ಬಚ್ಚರನು ಸೆರೆಯಲ್ಲಿದ್ದವರನ್ನು ಬಾಬಿಲೋನಿನಿಂದ ಯೆರೂಸಲೇಮಿಗೆ ಕರೆದುಕೊಂಡು ಬಂದಾಗ ಈ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಂದನು.
* 1:7 ನೆಬೂಕದ್ನೆಚ್ಚರನು ನೆಬೂಕದ್ನೆಚ್ಚರನು ಕ್ರಿ.ಪೂ. 605-562 ರಲ್ಲಿ ಆಳಿದ ಬಾಬಿಲೋನಿಯನ್ ಅರಸನಾಗಿದ್ದನು. ಕ್ರಿ.ಪೂ. 597 ರಲ್ಲಿ ಯೆರೂಸಲೇಮಿಗೆ ಮುತ್ತಿಗೆ ಹಾಕಿದವನು, ಕ್ರಿ.ಪೂ. 586 ರಲ್ಲಿ ದೇವಾಲಯವನ್ನು ಹಾಳುಮಾಡಿದವನು, ಕ್ರಿ.ಪೂ. 597, 586 ಮತ್ತು 582 ರಲ್ಲಿ ಅನೇಕ ಜನರನ್ನು ಯೆಹೂದದಿಂದ ಸೆರೆವಾಸಿಗಳಾಗಿ ತೆಗೆದುಕೊಂಡು ಹೋದವನು, ಮತ್ತು ಕ್ರಿ.ಪೂ. 597 ಮತ್ತು 586 ರಲ್ಲಿ ದೇವಾಲಯದ ಬೆಲೆಬಾಳುವ ವಸ್ತುಗಳನ್ನು ಬಾಬಿಲೋನಿಯದ ದೇವರುಗಳನ್ನು ಆರಾಧಿಸಲು ಬಳಸಲಾಗುವುದಕ್ಕೆ ದೋಚಿಕೊಂಡು ಹೋದವನು ಇವನೇ (ಉದಾಹರಣೆಗೆ, ದಾನಿ. 5:1-4 ನೋಡಿರಿ).