9
ಯೆಹೂದ್ಯರು ತಮ್ಮ ವೈರಿಗಳನ್ನು ಸಂಹರಿಸಿ ಮಹೋತ್ಸವ ಮಾಡಿದ್ದು
1 ಅರಸನ ಆಜ್ಞಾನಿರ್ಣಯಗಳನ್ನು ನೆರವೇರಿಸತಕ್ಕ ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನವು ಬಂದಿತು. ಆ ದಿನದಲ್ಲಿ ಯೆಹೂದ್ಯರನ್ನು ಸ್ವಾಧೀನ ಮಾಡಿಕೊಳ್ಳಬಹುದೆಂದು ಅವರ ವೈರಿಗಳು ನಿರೀಕ್ಷಿಸಿಕೊಂಡಿದ್ದರು. ಆದರೆ ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮ ವೈರಿಗಳನ್ನು ಸ್ವಾಧೀನಮಾಡಿಕೊಂಡರು.
2 ಆದುದರಿಂದ ಅರಸನಾದ ಅಹಷ್ವೇರೋಷನ ಸಮಸ್ತ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿದ್ದ ಯೆಹೂದ್ಯರು ತಮಗೆ ಕೇಡು ಬಯಸಿದವರಿಗೆ ವಿರುದ್ಧವಾಗಿ ಕೈಯೆತ್ತುವುದಕ್ಕೆ ಸೇರಿಕೊಂಡಾಗ ಯಾರಿಗೂ ಅವರ ಎದುರಿನಲ್ಲಿ ನಿಲ್ಲಲಾಗಲಿಲ್ಲ.
3 ಅವರಿಂದ ಎಲ್ಲಾ ಜನಾಂಗದವರಿಗೆ ಭಯವುಂಟಾಯಿತು; ಇದಲ್ಲದೆ ಅರಮನೆಯಲ್ಲಿ ಮೊರ್ದೆಕೈಯ ಪ್ರಾಬಲ್ಯವು ಹೆಚ್ಚಾಗುತ್ತಾ ಬಂದ ಹಾಗೆಲ್ಲಾ, ಅವನ ಸುದ್ದಿಯೂ ಸಕಲ ಸಂಸ್ಥಾನಗಳಲ್ಲಿಯೂ ಹಬ್ಬಿತು.
4 ಸರ್ವ ಸಂಸ್ಥಾನಾಧಿಕಾರಿಗಳೂ, ಉಪರಾಜರೂ, ದೇಶಾಧಿಪತಿಗಳೂ ಮತ್ತು ಇತರ ರಾಜೋದ್ಯೋಗಸ್ಥರೂ ಅವನಿಗೆ ಹೆದರಿ ಯೆಹೂದ್ಯರಿಗೆ ಸಹಾಯಕರಾದರು.
5 ಹೀಗೆ ಯೆಹೂದ್ಯರು ತಮ್ಮ ಎಲ್ಲಾ ವೈರಿಗಳನ್ನು ಸೋಲಿಸಿ, ಕತ್ತಿಯಿಂದ ಹೊಡೆದು ಕೊಂದು ನಿರ್ನಾಮಗೊಳಿಸಿದರು; ತಮ್ಮ ವೈರಿಗಳನ್ನು ಇಷ್ಟವಿದ್ದಂತೆ ಮಾಡಿದರು.
6 ಯೆಹೂದ್ಯರು ಶೂಷನ್ ಕೋಟೆಯಲ್ಲೇ ಐನೂರು ಜನರನ್ನು ಕೊಂದುಬಿಟ್ಟರು.
7 ಹತರಾದವರಲ್ಲಿ ಪರ್ಷಂದಾತ, ದಲ್ಫೋನ್, ಅಸ್ಪಾತ,
8 ಪೋರಾತ, ಆದಲ್ಯ, ಅರೀದಾತ,
9 ಪರ್ಮಷ್ಟ, ಅರೀಸೈ, ಅರಿದೈ, ವೈಜಾತ ಎಂಬುವವರಿದ್ದರು.
10 ಇವರು ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಹಮ್ಮೆದಾತನ ಮಗನಾದ ಹಾಮಾನನ ಹತ್ತು ಮಂದಿ ಮಕ್ಕಳು. ಇಷ್ಟು ಜನರನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈಹಾಕಲಿಲ್ಲ.
11 ಆ ದಿನ ಶೂಷನ್ ಕೋಟೆಯಲ್ಲಿ ಹತರಾದವರ ಸಂಖ್ಯೆಯನ್ನು ಅರಸನಿಗೆ ತಿಳಿಸಲಾಯಿತು.
12 ಆಗ ಅರಸನು ಎಸ್ತೇರ್ ರಾಣಿಗೆ, “ಯೆಹೂದ್ಯರು ಶೂಷನ್ ಕೋಟೆಯಲ್ಲೇ ಐನೂರು ಜನರನ್ನೂ, ಹಾಮಾನನ ಹತ್ತು ಮಂದಿ ಮಕ್ಕಳನ್ನೂ ಸಂಹರಿಸಿಬಿಟ್ಟಿದ್ದಾರೆ; ಉಳಿದ ರಾಜಸಂಸ್ಥಾನಗಳಲ್ಲಿ ಎಷ್ಟೋ ಜನರು ಹತರಾಗಿರಬಹುದು. ನಿನ್ನ ವಿಜ್ಞಾಪನೆ ಇನ್ನು ಯಾವುದಿದ್ದರೂ ನೆರವೇರುವುದು, ನೀನು ಏನು ಕೇಳಿಕೊಂಡರೂ ಕೊಡುವೆನು” ಎಂದು ಹೇಳಿದನು.
13 ಅದಕ್ಕೆ ಎಸ್ತೇರಳು, “ಅರಸನ ಇಷ್ಟವಿದ್ದರೆ ನಾಳೆಯೂ ಇಂದಿನ ರಾಜಾಜ್ಞೆಯ ಪ್ರಕಾರ ಮಾಡುವುದಕ್ಕೂ ಹಾಮಾನನ ಹತ್ತು ಮಕ್ಕಳ ಶವಗಳನ್ನು ಗಲ್ಲಿಗೆ ಹಾಕುವುದಕ್ಕೂ ಶೂಷನಿನಲ್ಲಿರುವ ಯೆಹೂದ್ಯರಿಗೆ ಅಪ್ಪಣೆಯಾಗಬೇಕು” ಎಂದು ಬೇಡಿಕೊಂಡಳು.
14 ಆಗ ಅರಸನು ಹಾಗೆ ಮಾಡುವುದಕ್ಕೆ ಅಪ್ಪಣೆಕೊಟ್ಟನು. ಕೂಡಲೆ ಈ ಸಂಬಂಧವಾದ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾಯಿತು ಮತ್ತು ಹಾಮಾನನ ಹತ್ತು ಮಕ್ಕಳನ್ನು ಗಲ್ಲಿಗೆ ಏರಿಸಲಾಯಿತು.
15 ಶೂಷನಿನ ಯೆಹೂದ್ಯರು ಫಾಲ್ಗುಣಮಾಸದ ಹದಿನಾಲ್ಕನೆಯ ದಿನದಲ್ಲೂ ಒಟ್ಟಿಗೆ ಸೇರಿ ಅಲ್ಲಿನ ಮುನ್ನೂರು ಜನರನ್ನು ಕೊಂದರು; ಆದರೆ ಕೊಳ್ಳೆಗೆ ಕೈಹಾಕಲಿಲ್ಲ.
16 ಅದೇ ಮೇರೆಗೆ ರಾಜಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಮ್ಮ ವಿರೋಧಿಗಳ ಕಾಟವನ್ನು ನಿಲ್ಲಿಸಿ, ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಕೂಡಿಕೊಂಡು ತಮ್ಮ ವೈರಿಗಳಲ್ಲಿ ಎಪ್ಪತ್ತೈದು ಸಾವಿರ ಜನರನ್ನು ಸಂಹರಿಸಿದರು; ಆದರೆ ಸುಲಿಗೆಮಾಡುವುದಕ್ಕೆ ಕೈ ಹಾಕಲಿಲ್ಲ.
17 ಇದು ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ನಡೆಯಿತು. ಅವರು ಹದಿನಾಲ್ಕನೆಯ ದಿನದಲ್ಲಿ ವಿಶ್ರಮಿಸಿಕೊಂಡು ಆ ದಿನವನ್ನು ಉತ್ಸವಭೋಜನ ದಿನವನ್ನಾಗಿ ಆಚರಿಸಿದರು. ಹಳ್ಳಿಪಳ್ಳಿಯ ಯೆಹೂದ್ಯರು ಫಾಲ್ಗುಣಮಾಸದ ಹದಿನಾಲ್ಕನೆಯ ದಿನವನ್ನು ನಗರಗಳ ಯೆಹೂದ್ಯರು ಹದಿನೈದನೆಯ ದಿನವನ್ನೂ ಶುಭದಿನವೆಂದು ಆಚರಿಸಿ ಉತ್ಸವಭೋಜನಮಾಡಿ ಒಬ್ಬರಿಗೊಬ್ಬರು ಭೋಜನ ಪದಾರ್ಥಗಳನ್ನು ವಿನಿಮಯ ಮಾಡಿಕೊಂಡರು.
18 ಆದರೆ ಶೂಷನಿನ ಯೆಹೂದ್ಯರು ಹದಿಮೂರನೆಯ ಮತ್ತು ಹದಿನಾಲ್ಕನೆಯ ದಿನಗಳನ್ನು ವೈರಿಗಳನ್ನು ವಧಿಸುವುದಕ್ಕೆ ನೇಮಿಸಿಕೊಂಡಿದ್ದರಿಂದ ಹದಿನೈದನೆಯ ದಿನದಲ್ಲಿ ವಿಶ್ರಮಿಸಿಕೊಂಡು ಆ ದಿನವನ್ನು ಉತ್ಸವಭೋಜನ ದಿನವನ್ನಾಗಿ ಆಚರಿಸಿದರು.
19 ಆದುದರಿಂದ ಪೌಳಿಗೋಡೆ ಇಲ್ಲದ ಹಳ್ಳಿಪಳ್ಳಿಯ ಯೆಹೂದ್ಯರು ಫಾಲ್ಗುಣಮಾಸದ ಹದಿನಾಲ್ಕನೆಯ ದಿನವನ್ನೂ ನಗರಗಳ ಯೆಹೂದ್ಯರು ಹದಿನೈದನೆಯ ದಿನವನ್ನೂ ಶುಭದಿನವೆಂದು ಆಚರಿಸಿ, ಉತ್ಸವಭೋಜನಮಾಡಿ ಒಬ್ಬರಿಗೊಬ್ಬರು ಭೋಜನ ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಪೂರೀಮ್ ಹಬ್ಬ
20 ಮೊರ್ದಕೈಯು ಸಮೀಪದಲ್ಲಿಯೂ ದೂರದಲ್ಲಿಯೂ ಇದ್ದ ಅಹಷ್ವೇರೋಷನ ಎಲ್ಲಾ ಸಂಸ್ಥಾನಗಳ ಯೆಹೂದ್ಯರಿಗೆ ಪತ್ರಗಳ ಮುಖಾಂತರ ತಿಳಿಯಪಡಿಸಿದ ಸಂಗತಿಗಳು:
21 ಪ್ರತಿವರ್ಷವೂ ಫಾಲ್ಗುಣಮಾಸದ ಹದಿನಾಲ್ಕನೆಯ ಮತ್ತು ಹದಿನೈದನೆಯ ದಿನಗಳನ್ನು ಉತ್ಸವದಿನಗಳನ್ನಾಗಿ ಆಚರಿಸುವುದು ಶಾಶ್ವತನಿಯಮ ಎಂದೆಣಿಸಬೇಕು.
22 ಆ ದಿನಗಳಲ್ಲಿ ಯೆಹೂದ್ಯರಿಗೆ ಶತ್ರುಪೀಡೆ ತಪ್ಪಿ ವಿಶ್ರಾಂತಿ ಉಂಟಾಯಿತು. ಆ ತಿಂಗಳಿನಲ್ಲಿ ಸಂತಾಪವು ಪರಿಹಾರವಾಗಿ ಅವರಿಗೆ ಸಂತೋಷವುಂಟಾಯಿತು; ದುಃಖವು ಹೋಗಿ ಸುಖಕಾಲವು ಬಂದಿತು. ಆದುದರಿಂದ ಅವರು ಆ ದಿನಗಳಲ್ಲಿ ಉತ್ಸವಭೋಜನ ಮಾಡಿ ಒಬ್ಬರಿಗೊಬ್ಬರು ಭೋಜನ ಪದಾರ್ಥಗಳನ್ನು ವಿನಿಮಯ ಮಾಡಿಕೊಂಡು ಬಡವರಿಗೆ ದಾನಧರ್ಮ ಮಾಡಬೇಕು.
23 ಅದರಂತೆ ಯೆಹೂದ್ಯರು ಮೊರ್ದೆಕೈಯ ಪತ್ರದಲ್ಲಿ ನಿರೂಪಿತವಾದದ್ದನ್ನು ಅಂಗೀಕರಿಸಿ, ಆ ವರ್ಷದಲ್ಲಿ ನಡೆದ ಉತ್ಸವವು ತಮ್ಮಲ್ಲಿ ವಾರ್ಷಿಕೋತ್ಸವವಾಗಿ ಆಚರಿಸಬೇಕೆಂದು ಗೊತ್ತುಮಾಡಿಕೊಂಡರು.
24 ಎಲ್ಲಾ ಯೆಹೂದ್ಯರನ್ನು ದ್ವೇಷಿಸುತ್ತಿದ್ದ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡು ಅವರನ್ನು ತಳಮಳಗೊಳಿಸಿ ಹಾಳುಮಾಡುವುದರ ವಿಷಯವಾಗಿ ಪೂರ್ ಅಂದರೆ ಚೀಟನ್ನು ಹಾಕಿಸಿದನಲ್ಲಾ.
25 ಇದು ಅರಸನ ಮುಂದೆ ಬಂದಾಗ ಅವನು, “ಹಾಮಾನನು ಯೆಹೂದ್ಯರಿಗೆ ವಿರುದ್ಧವಾಗಿ ಕಲ್ಪಿಸಿದ ಕುತಂತ್ರವು ಅವನ ತಲೆಯ ಮೇಲೆಯೇ ಬರಲಿ; ಅವನನ್ನೂ ಅವನ ಮಕ್ಕಳನ್ನೂ ಗಲ್ಲಿಗೆ ಹಾಕಬೇಕು” ಎಂದು ಪತ್ರದ ಮೂಲಕ ಅಪ್ಪಣೆಮಾಡಿದನಷ್ಟೆ.
26 ಆ “ಪೂರ್” ಎಂಬ ಶಬ್ದದ ಆಧಾರದಿಂದ ಆ ದಿನಗಳಿಗೆ “ಪೂರೀಮ್” ಎಂದು ಹೆಸರಾಯಿತು.
27 ಯೆಹೂದ್ಯರು ಆ ಪತ್ರದ ಮಾತುಗಳನ್ನೂ ಅವುಗಳ ಸಂಬಂಧವಾಗಿ ತಾವೇ ಅನುಭವಿಸಿದ್ದನ್ನೂ, ತಮಗೆ ಸಂಭವಿಸಿದ್ದನ್ನೂ ಮನಸ್ಸಿಗೆ ತೆಗೆದುಕೊಂಡು,
28 ಪ್ರತಿವರ್ಷವೂ ಆ ಎರಡು ದಿನಗಳನ್ನು ಅವುಗಳ ಕುರಿತಾದ ಶಾಸನದ ಪ್ರಕಾರ ನೇಮಿತವಾದ ಕಾಲದಲ್ಲಿ ಆಚರಿಸುವುದು ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಮೀರಬಾರದ ಪದ್ಧತಿ ನಿಯಮಗಳಾಗಬೇಕೆಂದೂ ಯುಗಯುಗಾಂತರಗಳಲ್ಲಿ ಎಲ್ಲಾ ಗೋತ್ರ ಸಂಸ್ಥಾನ ನಗರಗಳವರು ಈ ಪೂರೀಮ್ ಹಬ್ಬದ ಆಚರಣೆ ಯೆಹೂದ್ಯರಲ್ಲಿ ಎಂದೂ ನಿಂತುಹೋಗಬಾರದು. ಅದರ ಜ್ಞಾಪಕವು ಅವರ ಸಂತಾನದವರಲ್ಲಿ ಅಳಿದುಹೋಗಲೇಬಾರದು ಎಂದೂ ಗೊತ್ತುಮಾಡಿಕೊಂಡರು.
29 ಇದಲ್ಲದೆ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಅಧಿಕಾರಯುಕ್ತಳಾಗಿ ಪೂರೀಮ್ ಸಂಬಂಧವಾದ ಆ ಎರಡನೆಯ ಶಾಸನವನ್ನು ದೃಢಪಡಿಸುವುದಕ್ಕೋಸ್ಕರ ಯೆಹೂದ್ಯನಾದ ಮೊರ್ದೆಕೈಯ ಸಹಾಯದಿಂದ ಪತ್ರಗಳನ್ನು ಬರೆದಳು.
30 ಅವನು ಅಹಷ್ವೇರೋಷನ ರಾಜ್ಯದ ನೂರಿಪ್ಪತ್ತೇಳು ಸಂಸ್ಥಾನಗಳಲ್ಲಿದ್ದ ಯೆಹೂದ್ಯರೆಲ್ಲರಿಗೂ ಪತ್ರವನ್ನು ಕಳುಹಿಸಿದನು.
31 ಆಕೆಯು ದಯಾಸತ್ಯತೆಗಳುಳ್ಳ ಮಾತುಗಳಿಂದ ಆ ಪತ್ರಗಳಲ್ಲಿ, “ಯೆಹೂದ್ಯರು ತಮ್ಮಲ್ಲಿಯೂ ಮತ್ತು ತಮ್ಮ ಸಂತಾನದವರಲ್ಲಿಯೂ ಉಪವಾಸ ಮತ್ತು ಪ್ರಲಾಪ ದಿನಗಳನ್ನು ನೆನಪು ಮಾಡಿಕೊಳ್ಳುವುದಕ್ಕಾಗಿ ತಾವೇ ಗೊತ್ತುಮಾಡಿಕೊಂಡ ಪ್ರಕಾರ ಈ ಪೂರೀಮ್ ದಿನಗಳನ್ನೂ ನನ್ನ ಮತ್ತು ಯೆಹೂದ್ಯನಾದ ಮೊರ್ದೆಕೈಯ ನಿರೂಪದಂತೆ ಪ್ರತಿವರ್ಷ ತಪ್ಪದೆ ನೇಮಿತವಾದ ಕಾಲದಲ್ಲಿ ಆಚರಿಸಬೇಕು” ಎಂದು ಬರೆದಿದ್ದಳು.
32 ಎಸ್ತೇರಳ ಆ ಅಪ್ಪಣೆ ಪೂರೀಮ್ ಹಬ್ಬವನ್ನು ಸ್ಥಾಪಿಸಿತು. ಆ ನಿರೂಪವು ಅಪ್ಪಣೆಯು ಗ್ರಂಥದಲ್ಲಿ ದಾಖಲಿಸಲ್ಪಪಟ್ಟಿತು.