1 ಥೆಸಲೋನಿಕದವರಿಗೆ
ಗ್ರಂಥಕರ್ತೃತ್ವ
ಅಪೊಸ್ತಲನಾದ ಪೌಲನು ಈ ಪತ್ರಿಕೆಯ ಗ್ರಂಥಕರ್ತನೆಂದು ಎರಡು ಸಾರಿ ಗುರುತಿಸಿಕೊಂಡಿದ್ದಾನೆ (1:1; 2:18). ಸೀಲ ಮತ್ತು ತಿಮೊಥೆಯರು (3:2,6), ಎರಡನೆಯ ಮಿಷನರಿ ಪ್ರಯಾಣದಲ್ಲಿ ಈ ಸಭೆಯನ್ನು ಸ್ಥಾಪಿಸುವಾಗ ಪೌಲನ ಸಂಗಡಿಗರಾಗಿದ್ದರು (ಅ.ಕೃ. 17:1-9), ಅವನು ಅವರನ್ನು ಬಿಟ್ಟು ಬಂದ ಕೆಲವೇ ಕೆಲವು ತಿಂಗಳುಗಳೊಳಗೆ ಈ ಮೊದಲ ಪತ್ರಿಕೆಯನ್ನು ಬರೆದನು. ಥೆಸಲೋನಿಕದಲ್ಲಿನ ಪೌಲನ ಸೇವೆಯು ಯೆಹೂದ್ಯರನ್ನು ಮಾತ್ರವಲ್ಲದೆ ಅನ್ಯಜನರನ್ನು ಸಹ ಸ್ಪಷ್ಟವಾಗಿ ಸ್ಪರ್ಶಿಸಿತು. ಸಭೆಯಲ್ಲಿರುವ ಅನೇಕ ಅನ್ಯಜನರು ವಿಗ್ರಹಾರಾಧನೆಯಿಂದ ಹೊರಬಂದವರಾಗಿದ್ದರು, ಇದು ಆ ಸಮಯದಲ್ಲಿನ ಯೆಹೂದ್ಯರ ನಡುವೆ ಒಂದು ನಿರ್ದಿಷ್ಟ ಸಮಸ್ಯೆಯಾಗಿರಲಿಲ್ಲ (1 ಥೆಸ. 1:9).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 51 ರಲ್ಲಿ ಬರೆಯಲ್ಪಟ್ಟಿದೆ.
ಪೌಲನು ಕೊರಿಂಥ ಪಟ್ಟಣದಿಂದ ಥೆಸಲೋನಿಕದ ಸಭೆಗೆ ತನ್ನ ಮೊದಲ ಪತ್ರಿಕೆಯನ್ನು ಬರೆದನು.
ಸ್ವೀಕೃತದಾರರು
ಥೆಸಲೋನಿಕದವರಿಗೆ ಬರೆದ ಮೊದಲನೆಯ ಪತ್ರಿಕೆಯ ಉದ್ದೇಶಿತ ಓದುಗರು “ಥೆಸಲೋನಿಕದ ಸಭೆಯ” ಸದಸ್ಯರು ಎಂದು 1 ಥೆಸ. 1:1 ತಿಳಿಸುತ್ತದೆ, ಆದರೆ ಸಾಮಾನ್ಯವಾಗಿ ಎಲ್ಲೆಡೆಯಿರುವ ಕ್ರೈಸ್ತರೆಲ್ಲರಿಗೂ ಎಂದು ಇದು ಹೇಳುತ್ತದೆ.
ಉದ್ದೇಶ
ಹೊಸದಾಗಿ ರಕ್ಷಣೆಗೆ ಬಂದವರನ್ನು ಅವರು ಅನುಭವಿಸುವ ಶೋಧನೆಗಳಲ್ಲಿ ಉತ್ತೇಜಿಸುವುದು (3:3-5), ದೈವಭಕ್ತಿಯುಳ್ಳ ಜೀವನದ ಬಗ್ಗೆ ಆದೇಶ ನೀಡುವುದಕ್ಕೆ (4:1-12) ಮತ್ತು ಕ್ರಿಸ್ತನ ಪುನರಾಗಮನಕ್ಕಿಂತ ಮೊದಲು ಸತ್ತುಹೋದ ವಿಶ್ವಾಸಿಗಳ ಭವಿಷ್ಯದ ಬಗ್ಗೆ ಭರವಸೆ ನೀಡುವುದು (4:13-18), ಇನ್ನಿತರ, ನೈತಿಕ ಮತ್ತು ಪ್ರಾಯೋಗಿಕ ವಿಷಯಗಳನ್ನು ಸರಿಪಡಿಸುವುದು ಈ ಪತ್ರಿಕೆಯನ್ನು ಬರೆಯುವುದರ ಪೌಲನ ಉದ್ದೇಶವಾಗಿತ್ತು.
ಮುಖ್ಯಾಂಶ
ಸಭೆಯ ಕುರಿತಾದ ಕಾಳಜಿ
ಪರಿವಿಡಿ
1. ಕೃತಜ್ಞತಾಸ್ತುತಿ — 1:1-10
2. ಅಪೊಸ್ತಲಿಕ ಕ್ರಿಯೆಗಳ ಸಮರ್ಥನೆ — 2:1-3:13
3. ಥೆಸಲೋನಿಕದವರಿಗೆ ಪ್ರಬೋಧನೆಗಳು — 4:1-5:22
4. ಅಂತಿಮ ಪ್ರಾರ್ಥನೆ ಮತ್ತು ಆಶೀರ್ವಾದ — 5:23-28
1
ಪೀಠಿಕೆ
1 ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದ ಸಭೆಗೆ ಪೌಲ ಸಿಲ್ವಾನ, ತಿಮೊಥೆಯ ಎಂಬ ನಾವು ಬರೆಯುವುದೇನಂದರೆ, ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.
ಪೌಲನು ಥೆಸಲೋನಿಕದವರ ನಂಬಿಕೆಗಾಗಿ ದೇವರಿಗೆ ಮಾಡಿದ ಕೃತಜ್ಞತಾಸ್ತುತಿ
2-3 ನಾವು ನಂಬಿಕೆಯ ಫಲವಾದ ನಿಮ್ಮ ಕಾರ್ಯವನ್ನೂ, ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಿನ ನೀವಿಟ್ಟಿರುವ ಅಚಲವಾದ ನಿರೀಕ್ಷೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕ ಮಾಡಿಕೊಂಡು, ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ.
4 ದೇವರಿಂದ ಪ್ರೀತಿಸಲ್ಪಟ್ಟಿರುವ ಸಹೋದರರೇ, ಆತನು ನಿಮ್ಮನ್ನು ಆರಿಸಿಕೊಂಡನೆಂಬದನ್ನೂ ಬಲ್ಲೆವು.
5 ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಮತ್ತು ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ.
6 ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ.
7 ಹೀಗೆ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ.
8 ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಘೋಷಿತವಾದದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು. ಆದುದರಿಂದ ಆ ವಿಷಯದಲ್ಲಿ ನಾವು ಏನನ್ನೂ ಹೇಳಬೇಕಾಗಿಲ್ಲ.
9 ನಾವು ನಿಮ್ಮಲ್ಲಿಗೆ ಬಂದಾಗ ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ನೀವು ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡು ಜೀವಸ್ವರೂಪನಾದ ಸತ್ಯ ದೇವರನ್ನು ಸೇವಿಸುವವರಾಗಿದ್ದೀರಿ
10 ಮತ್ತು ಆತನು ಸತ್ತವರೊಳಗಿಂದ ಎಬ್ಬಿಸಿದ, ಆಕಾಶದೊಳಗಿಂದ ಬರಲಿಕ್ಕಿರುವಂಥ ಆತನ ಕುಮಾರನನ್ನು ಕಾದುಕುಳಿತಿರುವಿರೆಂತಲೂ ಆ ಜನರೇ ಹೇಳುತ್ತಾರೆ. ಈ ಯೇಸು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾತನು.