3
ಹಬಕ್ಕೂಕನ ಪ್ರಾರ್ಥನೆ
1 ಶಿಗ್ಯೋನೋತ್ ಸ್ವರದ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ.
2 ಯೆಹೋವನೇ, ನಾನು ನಿನ್ನ ಸುದ್ದಿಯನ್ನು ಕೇಳಿ ಹೆದರಿದ್ದೇನೆ;
ಯೆಹೋವನೇ, ಯುಗದ ಮಧ್ಯದಲ್ಲಿ ನಿನ್ನ ರಕ್ಷಣಾಕಾರ್ಯವನ್ನು ಪುನಃ ಮಾಡು, ಯುಗದ ಮಧ್ಯದಲ್ಲಿ ಅದನ್ನು ಪ್ರಸಿದ್ಧಿಪಡಿಸು;
ನೀನು ರೋಷಗೊಂಡಿದ್ದರೂ ಕರುಣೆಯನ್ನು ಚಿತ್ತಕ್ಕೆ ತಂದುಕೋ.
3 ತೇಮಾನಿನಿಂದ ಕರುಣಾಸಾಗರನಾದ ದೇವರು ಬರುತ್ತಿದ್ದಾನೆ, ಸದಮಲಸ್ವಾಮಿಯು ಪಾರಾನ್ ಪರ್ವತದಿಂದ ಬರುತ್ತಾನೆ;
ಸೆಲಾ.
ಆತನ ಪ್ರಭಾವವು ಆಕಾಶಮಂಡಲವನ್ನೆಲ್ಲಾ ಆವರಿಸಿಕೊಂಡಿದೆ,
ಆತನ ಮಹಿಮೆಯು ಭೂಮಂಡಲವನ್ನು ತುಂಬುತ್ತಿದೆ;
4 ಆತನ ತೇಜಸ್ಸು ಸೂರ್ಯನಂತಿದೆ, ಆತನ ಕೈಗಳಿಂದ ಕಿರಣಗಳು ಹೊರಹೊಮ್ಮುತ್ತಿವೆ, ಆತನು ಶಕ್ತಿ ಸಾಮರ್ಥ್ಯಗಳ ನಿಧಿ.
5 ರೋಗಗಳು ಆತನಿಂದ ದೂರ ಓಡಿ ಹೋಗಿವೆ, ವ್ಯಾಧಿಯು ಆತನ ಹಿಂದೆ ಅಡಗಿಕೊಂಡಿದೆ.
6 ಆತನು ನಿಂತುಕೊಳ್ಳಲು ಭೂಮಿಯು ಅಳೆದನು. ಆತನು ದೃಷ್ಟಿಸಲು ಜನಾಂಗಗಳು ಬೆದರುತ್ತವೆ;
ಪುರಾತನ ಪರ್ವತಗಳು ಸೀಳಿಹೋಗುತ್ತವೆ; ಸನಾತನ ಗಿರಿಶಿಖರಗಳು ಕುಸಿದು ಬೀಳುತ್ತವೆ; ಆತನ ಆಗಮನವು ಅನಾದಿಯಿಂದ ಹೀಗೆಯೇ ಇರುವುದು.
7 ಇಗೋ, ಕೂಷಾನಿನ ಗುಡಾರಗಳು ತಳಮಳಗೊಂಡಿವೆ, ಮಿದ್ಯಾನ್ ದೇಶದ ಡೇರೆಗಳು ನಡುಗುತ್ತಿವೆ.
8 ಯೆಹೋವನೇ, ನಿನಗೆ ನದಿಗಳ ಮೇಲೆ ರೌದ್ರವೋ? ಹೊಳೆಗಳ ಮೇಲೆ ಸಿಟ್ಟುಗೊಂಡಿದ್ದಿಯಾ? ಸಮುದ್ರದ ಮೇಲೆ ಕೋಪವನ್ನು ಪ್ರದರ್ಶಿಸುತ್ತೀಯೋ?
ಇಲ್ಲಾ, ನೀನು ಜಯರಥಗಳಲ್ಲಿ ಆಸೀನನಾಗಿ ಮೋಡಗಳ ಮೇಲೆ ರಕ್ಷಣೆಯನ್ನು ಕಳುಹಿಸಿದಾತನು!
9 ನಿನ್ನ ಬಿಲ್ಲು ಈಚೆಗೆ ತೆಗೆಯಲ್ಪಟ್ಟಿದೆ. ಆಹಾ, ನಿನ್ನ ತೋಳ್ಬಲದಿಂದ ಪ್ರಯೋಗಿಸಿದ ಬಾಣಗಳ ಬಲವು ಜೀವಬುಗ್ಗೆಯನ್ನು ಭೂಮಿಯೊಳಗಿನಿಂದ ಹರಿದು ಬರುವಂತೆ ಮಾಡಿತು.
ಸೆಲಾ.
10 ಬೆಟ್ಟಗಳು ನಿನ್ನನ್ನು ನೋಡಿ ತಳಮಳಗೊಳ್ಳುತ್ತಿವೆ;
ಪ್ರವಾಹದೋಪಾದಿಯಲ್ಲಿ ಆಕಾಶವು ಮಳೆಗರೆಯುತ್ತಿದೆ;
ಸಾಗರವು ಆರ್ಭಟಿಸಿ ಅಲೆಗಳನ್ನು ಮೇಲಕ್ಕೆ ಎತ್ತುತ್ತದೆ.
11 ಹಾರಿ ಬರುವ ನಿನ್ನ ಬಾಣಗಳ ಬೆಳಕಿಗೆ,
ಮಿಂಚುವ ನಿನ್ನ ಈಟಿಯ ಹೊಳಪಿಗೆ, ಸೂರ್ಯಚಂದ್ರರು ಹೆದರಿ ತಮ್ಮ ಗೂಡಿನಲ್ಲಿ ಅಡಗಿಕೊಳ್ಳುತ್ತಾರೆ.
12 ನೀನು ಕೋಪ ತಿರಸ್ಕಾರದಿಂದ ಲೋಕವನ್ನು ತುಳಿದುಕೊಂಡು ಹೋಗುತ್ತೀ. ಕೋಪದಿಂದ ಜನಾಂಗಗಳನ್ನು ಇಲ್ಲದಂತೆ ಮಾಡುತ್ತಿ.
13 ನಿನ್ನ ಅಭಿಷಿಕ್ತನಿಗಾಗಿಯೂ ಮತ್ತು ನಿನ್ನ ಪ್ರಜೆಯ ರಕ್ಷಣೆಗಾಗಿಯೂ ನೀನು ಯಾವಾಗಲೂ ಮುಂದಾಗಿರುತ್ತಿ;
ದುಷ್ಟರ ಮನೆಯ ಮುಖ್ಯಸ್ಥರನ್ನು ಸದೆಬಡೆದು ಅವರ ಕುಟುಂಬಗಳನ್ನು ಬುಡಸಮೇತವಾಗಿ ಜನರ ಮುಂದೆ ಬೆತ್ತಲೆಯಾಗಿ ಮಾಡುವಿ.
ಸೆಲಾ.
14 ದಿಕ್ಕಿಲ್ಲದವರನ್ನು ಮರೆಯಲ್ಲಿ ನುಂಗಲು ಹೆಚ್ಚಳಪಡುವವರಾಗಿ ನನ್ನನ್ನು ಚದುರಿಸಬೇಕೆಂದು
ನನ್ನ ಮೇಲೆ ಬಿರುಗಾಳಿಯಂತೆ ನುಗ್ಗಿದ ಅವನ ಭಟರ ತಲೆಯನ್ನು ಅವನ ದೊಣ್ಣೆಗಳಿಂದಲೇ ಒಡೆದಿದ್ದೀ
15 ನಿನ್ನ ಅಶ್ವಗಳನ್ನು ಏರಿದವನಾಗಿ ಸಮುದ್ರವನ್ನು ತುಳಿಯುತ್ತಾ, ಮಹಾಜಲರಾಶಿಗಳನ್ನು ಹಾದುಹೋಗಿದ್ದೀ.
ಪ್ರವಾದಿಯ ಭಯವೂ ಭರವಸವೂ
16 ಅದು ನನಗೆ ಕೇಳಿಸಲು ನನ್ನ ಒಡಲು ನಡುಗಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು. ಕ್ಷಯವು ನನ್ನ ಎಲುಬುಗಳಲ್ಲಿ ಸೇರಿತು. ನಾನು ನಿಂತ ಹಾಗೆಯೇ ನಡುಗಿದೆನು.
ವಿಪತ್ಕಾಲವು ನಮ್ಮನ್ನು ಹಿಂಸಿಸುವ ಜನರನ್ನು ಎದುರಾಯಿಸಿ ಅವರ ಮೇಲೆ ಬೀಳುವವರೆಗೂ ನಾನು ಅದಕ್ಕಾಗಿ ತಾಳ್ಮೆಯಿಂದ ಎದುರುನೋಡುವೆನು.
17 ಆಹಾ, ಅಂಜೂರವು ಚಿಗುರದಿದ್ದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ,
ಎಣ್ಣೆ ಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗದ್ದೆಗಳು ಆಹಾರ ಧಾನ್ಯಗಳನ್ನು ಉತ್ಪತ್ತಿಮಾಡದಿದ್ದರೂ,
ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,
18 ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.
19 ನನ್ನ ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯಂತೆ ಚುರುಕುಗೊಳಿಸುತ್ತಾನೆ,
ನಾನು ಬೆಟ್ಟ ಗುಡ್ಡಗಳಲ್ಲಿ ಓಡಾಡುವಂತೆ ಮಾಡುತ್ತಾನೆ.
ಪ್ರಧಾನ ಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು;
ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.