13
ಸಂಸೋನನ ಜನನ
1 ಇಸ್ರಾಯೇಲರು ತಿರುಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದುದರಿಂದ ಆತನು ಅವರನ್ನು ನಲ್ವತ್ತು ವರ್ಷಗಳ ಕಾಲ ಫಿಲಿಷ್ಟಿಯರ ಕೈಗೆ ಒಪ್ಪಿಸಿದನು.
2 ಚೊರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಬಂಜೆಯಾಗಿದ್ದರಿಂದ ಅವನಿಗೆ ಮಕ್ಕಳಿರಲಿಲ್ಲ.
3 ಒಂದಾನೊಂದು ದಿನ ಯೆಹೋವನ ದೂತನು ಆಕೆಗೆ ಪ್ರತ್ಯಕ್ಷನಾಗಿ, “ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಮಗನನ್ನು ಹೆರುವಿ.
4 ಆದುದರಿಂದ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು; ಯಾವ ನಿಷಿದ್ಧ ಪದಾರ್ಥಗಳನ್ನು ಊಟಮಾಡದಿರು.
5 ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇಬಾರದು; ಅವನು ಹುಟ್ಟಿದಂದಿನಿಂದ ದೇವರಿಗೆ ಪ್ರತಿಷ್ಠಿತನಾಗಿರುವನು; ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಲು ಪ್ರಾರಂಭಿಸುವನು” ಅಂದನು.
6 ತರುವಾಯ ಆ ಸ್ತ್ರೀಯು ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವರಪುರುಷನು ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದಂತಿದ್ದು ಭಯಂಕರನಾಗಿದ್ದನು. ನೀನು ಎಲ್ಲಿಂದ ಬಂದಿ ಎಂದು ನಾನು ಅವನನ್ನು ಕೇಳಲಿಲ್ಲ; ಅವನೂ ತನ್ನ ಹೆಸರನ್ನು ತಿಳಿಸಲಿಲ್ಲ.
7 ಆದರೆ ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವಿ; ಆದುದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು, ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಹುಡುಗನು ಹುಟ್ಟಿದಂದಿನಿಂದ ಸಾಯುವ ವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು’ ಎಂದು ಹೇಳಿದನು” ಅಂದಳು.
8 ಮಾನೋಹನು ಇದನ್ನು ಕೇಳಿ ಯೆಹೋವನಿಗೆ, “ಸ್ವಾಮೀ, ದಯವಿರಲಿ; ನೀನು ಕಳುಹಿಸಿದ ದೇವಪುರುಷನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿಕ್ಕಿರುವ ಮಗುವಿಗೋಸ್ಕರ ಮಾಡಬೇಕಾದದ್ದನ್ನು ನಮಗೆ ಬೋಧಿಸಲಿ” ಎಂದು ಬೇಡಿಕೊಳ್ಳಲು ದೇವರು ಅವನ ಮೊರೆಯನ್ನು ಕೇಳಿದನು.
9 ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ ದೇವದೂತನು ಪುನಃ ಬಂದನು. ಆಕೆಯ ಗಂಡನಾದ ಮಾನೋಹನು ಅಲ್ಲಿರಲಿಲ್ಲ.
10 ಆದ್ದರಿಂದ ಆಕೆಯು ಬೇಗನೆ ಗಂಡನ ಬಳಿಗೆ ಹೋಗಿ, “ಮೊನ್ನೆ ನನಗೆ ಪ್ರತ್ಯಕ್ಷನಾದ ಪುರುಷನು ತಿರುಗಿ ಬಂದಿದ್ದಾನೆ” ಎಂದು ತಿಳಿಸಲು
11 ಅವನೆದ್ದು ಹೆಂಡತಿಯೊಡನೆ ಬಂದು ಆ ಪುರುಷನಿಗೆ, “ಮೊನ್ನೆ ಈಕೆಯೊಡನೆ ಮಾತನಾಡಿದವನು ನೀನೋ” ಎಂದು ಕೇಳಲು ಅವನು, “ಹೌದು, ನಾನೇ” ಅಂದನು.
12 ಆಗ ಮಾನೋಹನು, “ನೀನು ಹೇಳಿದ್ದು ನೆರವೇರಿದಾಗ ನಾವು ಆ ಮಗುವಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ಬೆಳೆಸಬೇಕು” ಎಂದು ಕೇಳಲು
13 ಯೆಹೋವನ ದೂತನು ಮಾನೋಹನಿಗೆ, “ನಾನು ಹೇಳಿದ್ದನ್ನೆಲ್ಲಾ ಈಕೆಯು ಜಾಗರೂಕತೆಯಿಂದ ಕೈಕೊಳ್ಳಲಿ.
14 ದ್ರಾಕ್ಷಾಫಲವನ್ನು ತಿನ್ನದಿರಲಿ; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರಲಿ; ನಿಷಿದ್ಧಾಹಾರವನ್ನು ಮುಟ್ಟದಿರಲಿ; ಹೀಗೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಳ್ಳಲಿ” ಅಂದನು.
15 ಮತ್ತು ಮಾನೋಹನು ಯೆಹೋವನ ದೂತನನ್ನು, “ನಾವು ನಿನಗೋಸ್ಕರ ಒಂದು ಹೋತಮರಿಯನ್ನು ಪಕ್ವಮಾಡಿ ತರುವವರೆಗೆ ದಯವಿಟ್ಟು ಇಲ್ಲೇ ನಿಲ್ಲಬೇಕು” ಎಂದು ಬೇಡಿಕೊಂಡನು.
16 ಯೆಹೋವನ ದೂತನು ಮಾನೋಹನಿಗೆ, “ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ಆಹಾರವನ್ನು ಊಟಮಾಡುವುದಿಲ್ಲ; ಯಜ್ಞಮಾಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಯೆಹೋವನಿಗೆ ಸಮರ್ಪಿಸು” ಅಂದನು. ಅವನು ಯೆಹೋವನ ದೂತನೆಂಬುದು ಮಾನೋಹನಿಗೆ ಗೊತ್ತಿರಲಿಲ್ಲ.
17 ಆದ್ದರಿಂದ ಅವನು ಆ ದೂತನನ್ನು, “ನೀನು ಹೇಳಿದ್ದು ನೆರವೇರಿದಾಗ ನಿನ್ನನ್ನು ಸನ್ಮಾನಿಸಬೇಕೆಂದಿರುತ್ತೇವೆ, ನಿನ್ನ ಹೆಸರೇನು” ಎಂದು ಕೇಳಿದನು.
18 ಯೆಹೋವನ ದೂತನು, “ನನ್ನ ಹೆಸರನ್ನು ಕೇಳುವುದೇಕೆ? ಅದು ಆಶ್ಚರ್ಯಕರವಾದದ್ದು” ಅಂದನು.
19 ಮಾನೋಹನು ಹೋತಮರಿಯನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಯೆಹೋವನಿಗೆ ಸಮರ್ಪಿಸಿದನು. ಮಾನೋಹನೂ ಅವನ ಹೆಂಡತಿಯೂ ನೋಡುತ್ತಿರುವಾಗಲೇ ಯೆಹೋವನ ದೂತನು ಆಶ್ಚರ್ಯವನ್ನು ನಡಿಸಿದನು.
20 ಏನೆಂದರೆ ಅವನು ಯಜ್ಞವೇದಿಯಿಂದ ಆಕಾಶಕ್ಕೆ ಹೋಗುತ್ತಿರುವ ಅಗ್ನಿಜ್ವಾಲೆಯೊಳಗೆ ಮೇಲಕ್ಕೇರಿ ಹೋದನು. ಅವರು ಇದನ್ನು ನೋಡುತ್ತಲೆ ನೆಲದ ಮೇಲೆ ಬೋರಲುಬಿದ್ದರು.
21 ಯೆಹೋವನ ದೂತನು ಮಾನೋಹನಿಗೂ ಅವನ ಹೆಂಡತಿಗೂ ಮತ್ತೆ ಕಾಣಿಸಲಿಲ್ಲ. ಆಗ ಮಾನೋಹನು ಆತನು ಯೆಹೋವನ ದೂತನೆಂದು ತಿಳಿದು
22 ತನ್ನ ಹೆಂಡತಿಗೆ, “ನಾವು ಸಾಯುವುದು ನಿಜ, ದೇವರನ್ನು ಕಣ್ಣಾರೆ ಕಂಡೆವಲ್ಲಾ” ಅಂದನು.
23 ಆದರೆ ಆಕೆಯು ಅವನಿಗೆ, “ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ ಆತನು ನಮ್ಮ ಕೈಯಿಂದ ಯಜ್ಞವನ್ನೂ, ನೈವೇದ್ಯವನ್ನೂ ಸ್ವೀಕರಿಸುತ್ತಿರಲಿಲ್ಲ; ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ, ಹೇಳುತ್ತಿರಲಿಲ್ಲ” ಅಂದಳು.
24 ಆ ಸ್ತ್ರೀಯು ಮಗನನ್ನು ಹೆತ್ತು ಅವನಿಗೆ ಸಂಸೋನನೆಂದು ಹೆಸರಿಟ್ಟಳು. ಹುಡುಗನು ದೊಡ್ಡವನಾದನು. ಯೆಹೋವನ ಆಶೀರ್ವಾದವು ಅವನ ಮೇಲಿತ್ತು.
25 ಇದಲ್ಲದೆ ಅವನು ಚೊರ್ಗಕ್ಕೂ, ಎಷ್ಟಾವೋಲಿಗೂ ಮಧ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಯೆಹೋವನ ಆತ್ಮವು ಅವನನ್ನು ಪ್ರೇರೇಪಿಸುವುದಕ್ಕೆ ಪ್ರಾರಂಭಿಸಿತು.