15
ಸಂಸೋನನು ಫಿಲಿಷ್ಟಿಯರ ಬೆಳೆಯನ್ನು ಹಾಳುಮಾಡಿದ್ದು
1 ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೋಸ್ಕರ ಹೊರಟುಹೋಗಿ ಆಕೆಯ ತಂದೆಗೆ, “ನಾನು ನನ್ನ ಹೆಂಡತಿಯ ಹತ್ತಿರ ಒಳಗಿನ ಕೋಣೆಗೆ ಹೋಗುತ್ತೇನೆ” ಅಂದನು. ಅದಕ್ಕೆ ಅವನು, “ಹೋಗಬಾರದು;
2 ನೀನು ನಿಜವಾಗಿ ಆಕೆಯನ್ನು ಹಗೆಮಾಡುತ್ತೀಯೆಂದು ತಿಳಿದು ಅವಳನ್ನು ನಿನ್ನ ಗೆಳೆಯರಲ್ಲೊಬ್ಬನಿಗೆ ಮದುವೆಮಾಡಿಕೊಟ್ಟೆನು. ಆಕೆಯ ತಂಗಿಯು ಆಕೆಗಿಂತ ಸುಂದರಿಯಾಗಿದ್ದಾಳಲ್ಲಾ; ಈಕೆಯು ನಿನಗಿರಲಿ” ಅಂದನು.
3 ಆಗ ಸಂಸೋನನು, “ಈ ಸಾರಿ ನಾನು ಫಿಲಿಷ್ಟಿಯರಿಗೆ ಕೇಡುಮಾಡುವುದಾದರೆ ತಪ್ಪು ನನ್ನದಲ್ಲ” ಎಂದುಕೊಂಡು ಹೋಗಿ
4 ಮುನ್ನೂರು ನರಿಗಳನ್ನು ಹಿಡಿದು, ಬಾಲಕ್ಕೆ ಬಾಲವನ್ನು ಸೇರಿಸಿ ಕಟ್ಟಿ, ಅವುಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ, ಪಂಜುಗಳಿಗೆ ಬೆಂಕಿಹೊತ್ತಿಸಿ,
5 ಆ ನರಿಗಳನ್ನು ಫಿಲಿಷ್ಟಿಯರ ಹೊಲಗಳಲ್ಲಿ ಬಿಟ್ಟು, ಅವರ ತೆನೆಗೂಡುಗಳನ್ನೂ, ಇನ್ನೂ ಕೊಯ್ಯದೆ ಇದ್ದ ಬೆಳೆಯನ್ನೂ, ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು.
6 ಫಿಲಿಷ್ಟಿಯರು ಇದನ್ನು ಮಾಡಿದವರು ಯಾರೆಂದು ವಿಚಾರಿಸುವಲ್ಲಿ ತಿಮ್ನಾ ಊರಿನವನ ಅಳಿಯನಾದ ಸಂಸೋನನೆಂದು ಗೊತ್ತಾಯಿತು. ಅವನ ಮಾವನು ಅವನ ಹೆಂಡತಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟದ್ದೇ ಇದಕ್ಕೆ ಕಾರಣವೆಂದು ಅವರು ತಿಳಿದು, ಆಕೆಯನ್ನೂ, ಆಕೆಯ ತಂದೆಯನ್ನೂ ಸುಟ್ಟುಬಿಟ್ಟರು.
7 ಸಂಸೋನನು ಅವರಿಗೆ, “ನೀವು ಹೀಗೆ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿತೀರಿಸದೆ ಬಿಡುವುದಿಲ್ಲ” ಎಂದು ಹೇಳಿ
8 ಅವರ ತೊಡೆ, ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿ, ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
ಸಂಸೋನನು ಲೇಹಿಯಲ್ಲಿ ಸಾವಿರ ಮಂದಿ ಫಿಲಿಷ್ಟಿಯರನ್ನು ಹೊಡೆದು ಸೋಲಿಸಿದ್ದು
9 ಆಗ ಫಿಲಿಷ್ಟಿಯರು ಹೊರಟು ಯೆಹೂದಾ ಪ್ರಾಂತ್ಯದ ಲೆಹೀ ಎಂಬಲ್ಲಿಗೆ ಹೋಗಿ ಪಾಳೆಯಮಾಡಿಕೊಂಡರು.
10 ನೀವು ನಮಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದೇಕೆ ಎಂದು ಯೆಹೂದ್ಯರು ಅವರನ್ನು ಕೇಳಲು ಅವರು, “ಸಂಸೋನನನ್ನು ಹಿಡಿದು ಕಟ್ಟಿ ಅವನು ನಮಗೆ ಮಾಡಿದಂತೆಯೇ ಅವನಿಗೂ ಮಾಡಬೇಕೆಂದು ಬಂದೆವು” ಎಂದು ಉತ್ತರಕೊಟ್ಟರು.
11 ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ, “ಫಿಲಿಷ್ಟಿಯರು ನಮ್ಮ ಮೇಲೆ ದೊರೆತನಮಾಡುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೋ? ಹೀಗೆ ಯಾಕೆ ಮಾಡಿದಿ?” ಎಂದು ಕೇಳಲು ಅವನು, “ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ” ಅಂದನು.
12 ಅವರು, “ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಬೇಕೆಂದು ಬಂದಿದ್ದೇವೆ” ಅನ್ನಲು ಸಂಸೋನನು, “ಹಾಗಾದರೆ ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿರಿ” ಎಂದನು.
13 ಅದಕ್ಕೆ ಅವರು, “ನಾವು ಸತ್ಯವಾಗಿ ನಿನ್ನನ್ನು ಕೊಲ್ಲುವುದಿಲ್ಲ; ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸುತ್ತೇವೆ” ಎಂದು ಹೇಳಿ ಅವನನ್ನು ಎರಡು ಹೊಸ ಹಗ್ಗಗಳಿಂದ ಕಟ್ಟಿ ಗುಡ್ಡದ ಮೇಲಿನಿಂದ ಕರತಂದರು.
14 ಸಂಸೋನನು ಲೆಹೀಯ ಸಮೀಪಕ್ಕೆ ಬರಲು ಫಿಲಿಷ್ಟಿಯರು ಅವನನ್ನು ಕಂಡು ಆರ್ಭಟಿಸಿದರು. ಯೆಹೋವನ ಆತ್ಮವು ಅವನ ಮೇಲೆ ಬಂದದ್ದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ್ದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು.
15 ಅಲ್ಲಿ ಒಂದು ಕತ್ತೆಯ ದವಡೇ ಎಲುಬು ಬಿದ್ದಿತ್ತು. ಅದು ಇನ್ನೂ ಹಸಿದಾಗಿತ್ತು. ಅವನು ಅದನ್ನು ತೆಗೆದುಕೊಂಡು ಅದರಿಂದ ಸಾವಿರ ಜನರನ್ನು ಸಂಹರಿಸಿಬಿಟ್ಟು,
16 “ಕತ್ತೆಯ ದವಡೇ ಎಲುಬಿನಿಂದ ಸಾವಿರ ಜನರನ್ನು ಸಾಯಿಸಿದೆನು; ಕತ್ತೆಯ ದವಡೇ ಎಲುಬಿನಿಂದ ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು” ಎಂದು ಹೇಳಿ,
17 ತನ್ನ ಕೈಯಲ್ಲಿದ್ದ ಎಲುಬನ್ನು ಬೀಸಾಡಿದನು. ಆ ಸ್ಥಳಕ್ಕೆ ರಾಮತ್ ಲೆಹೀ ಎಂದು ಹೆಸರಾಯಿತು.
18 ಅವನು ಬಹಳ ಬಾಯಾರಿದವನಾಗಿ ಯೆಹೋವನಿಗೆ, “ನೀನು ನಿನ್ನ ಸೇವಕನ ಮೂಲಕವಾಗಿ ಈ ಮಹಾಜಯವನ್ನುಂಟುಮಾಡಿದ ಮೇಲೆ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೋ” ಎಂದು ಮೊರೆಯಿಡಲು
19 ಆತನು ಲೇಹಿಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಲು ಅವನು ಅದನ್ನು ಕುಡಿದು ಪುನಃ ಚೈತನ್ಯಹೊಂದಿದನು. ಆದ್ದರಿಂದ ಅದಕ್ಕೆ ಏನ್ ಹಕ್ಕೋರೇ ಎಂದು ಹೆಸರಾಯಿತು; ಅದು ಇಂದಿನ ವರೆಗೂ ಲೆಹೀಯಲ್ಲಿರುತ್ತದೆ.
20 ಫಿಲಿಷ್ಟಿಯರ ಪ್ರಾಬಲ್ಯದಲ್ಲಿ ಸಂಸೋನನು ಇಸ್ರಾಯೇಲ್ಯರನ್ನು ಇಪ್ಪತ್ತು ವರ್ಷಗಳ ವರೆಗೆ ಪಾಲಿಸಿದನು.