2
ಪಕ್ಷಪಾತವನ್ನು ಕುರಿತದ್ದು
ನನ್ನ ಸಹೋದರರೇ, *ಮಹಿಮೆಯುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿರಬಾರದು. ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನು ಮತ್ತು ಉತ್ತಮವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬಂದಾಗ ಮತ್ತು ಒಬ್ಬ ಬಡ ಮನುಷ್ಯನು ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಬಂದಾಗ, ನೀವು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವವನನ್ನು ಗೌರವದಿಂದ ನೋಡಿ ಅವನಿಗೆ “ನೀವು ಇಲ್ಲಿ ಈ ಗೌರವ ಆಸನದಲ್ಲಿ ಕುಳಿತುಕೊಳ್ಳಿರಿ” ಎಂತಲೂ, ಆ ಬಡ ಮನುಷ್ಯನಿಗೆ “ನೀನು ಅಲ್ಲಿ ನಿಂತುಕೋ” ಇಲ್ಲವೇ “ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ” ಎಂತಲೂ ಹೇಳಿದರೆ, ನೀವು ನಿಮ್ಮ ನಿಮ್ಮಲ್ಲಿ §ಭೇದಭಾವ ಮಾಡುವವರಾಗಿದ್ದು, ತಾರತಮ್ಯ ಆಲೋಚನೆಗಳಂತೆ ನಡೆಯುವ ನಿರ್ಧಾರ ಮಾಡುವವರಾಗಿರುತ್ತೀರಿ ಅಲ್ಲವೇ?
ನನ್ನ ಪ್ರಿಯ ಸಹೋದರರೇ, ಕೇಳಿರಿ ದೇವರು *ಈ ಲೋಕದಲ್ಲಿನ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ, ತನ್ನನ್ನು ಪ್ರೀತಿಸುವವರಿಗೆ §ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ? ನೀವಾದರೋ *ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನದ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ? ನೀವು ಕರೆಯಲ್ಪಟ್ಟ ಆ ಶ್ರೇಷ್ಠವಾದ ನಾಮವನ್ನು ದೂಷಿಸುವವರು ಅವರಲ್ಲವೋ?
ಆದರೂ ಧರ್ಮಶಾಸ್ತ್ರಕ್ಕೆ ಸರಿಯಾಗಿ §“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ, ನೀವು ಒಳ್ಳೆಯದನ್ನೇ ಮಾಡುವವರಾಗಿರುವಿರಿ. ಒಂದು ವೇಳೆ ಅದನ್ನು ಬಿಟ್ಟು ನೀವು *ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದ ಪ್ರಕಾರ ತೀರ್ಮಾನಿಸಲ್ಪಡುತ್ತೀರಿ. 10 ಏಕೆಂದರೆ ಯಾರಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಅದರಲ್ಲಿ ಒಂದೇ ಒಂದು ವಿಷಯದಲ್ಲಿ ತಪ್ಪಿದರೆ ಅಂಥವರು ಎಲ್ಲಾ ವಿಷಯಗಳಲ್ಲಿಯೂ ಅಪರಾಧಿಯಾಗಿರುತ್ತಾರೆ. 11 ಏಕೆಂದರೆ ವ್ಯಭಿಚಾರ ಮಾಡಬಾರದೆಂದು ಹೇಳಿದವನೇ ನರಹತ್ಯ ಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರುತ್ತಿ. 12 ನೀವು §ಬಿಡುಗಡೆಯನ್ನುಂಟು ಮಾಡುವ ಧರ್ಮಶಾಸ್ತ್ರದ ಪ್ರಕಾರ ತೀರ್ಪುಹೊಂದುವವರಿಗೆ ತಕ್ಕಂತೆ ಮಾತನಾಡಿರಿ ಮತ್ತು ವಿಧೇಯರಾಗಿರಿ. 13 ಏಕೆಂದರೆ *ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ.
ನಂಬಿಕೆಯೊಂದೇ ಸಾಲದು ಅದರಂತೆ ನಡೆಯಬೇಕೆಂಬ ಬೋಧನೆ
14 ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ? 15 ನಿಮ್ಮಲ್ಲಿ ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಉಡಲು ಬಟ್ಟೆಯೂ ಮತ್ತು ದಿನನಿತ್ಯದ ಆಹಾರವೂ ಅಗತ್ಯವಾಗಿರುವಾಗ, 16 ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಪೂರೈಸದೆ “ಸಮಾಧಾನದಿಂದ ಹೋಗಿರಿ, ಬೆಚ್ಚಗೆ ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಾ ಊಟಮಾಡಿ” ಎಂದು §ಹೇಳಿದರೆ ಪ್ರಯೋಜನವೇನು? 17 ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ನಿರ್ಜೀವವಾದದು. 18 ಆದರೂ ಒಬ್ಬನು; “ನಿನಗೆ ನಂಬಿಕೆಯುಂಟು ಮತ್ತು ನನಗೆ ಕ್ರಿಯೆಗಳುಂಟು” *ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ತೋರಿಸು. ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ತೋರಿಸುತ್ತೇನೆ ಎಂದು ಹೇಳುವನಲ್ಲವೇ. 19 ದೇವರು ಒಬ್ಬನೇ ಎಂದು ನೀನು ನಂಬುತ್ತೀ; ಹಾಗೆ ನಂಬುವುದು ಸರಿ. ಆದರೆ §ದೆವ್ವಗಳು ಸಹ ಹಾಗೆಯೇ ನಂಬಿ ಹೆದರಿ ನಡುಗುತ್ತವೆ. 20 ಅವಿವೇಕಿಯೇ, ಕ್ರಿಯೆಗಳಿಲ್ಲದ ನಂಬಿಕೆಯು ವ್ಯರ್ಥವಾದದ್ದು ಎಂದು ನಿನಗೆ ಸಾಬಿತುಪಡಿಸಬೇಕೋ? 21 ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ *ನೀತಿವಂತನೆಂಬ ನಿರ್ಣಯವನ್ನು ಹೊಂದಿದ್ದು ನಂಬಿಕೆಯ ಕ್ರಿಯೆಗಳಿಂದಲ್ಲವೇ? 22 ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಕಾರ್ಯಮಾಡಿತ್ತು ಮತ್ತು ಆ ಕ್ರಿಯೆಗಳಿಂದಲೇ ಅವನ ನಂಬಿಕೆಯ ಉದ್ದೇಶವು ನೆರವೇರಿತು ಎಂದು ಕಾಣುತ್ತೇವಲ್ಲಾ. 23 §“ಅಬ್ರಹಾಮನು ದೇವರನ್ನು ನಂಬಿದನು ಮತ್ತು ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು” ಎಂಬ ಧರ್ಮಶಾಸ್ತ್ರದ ಮಾತು ಹೀಗೆ ನೆರವೇರಿತು. ಆದ್ದರಿಂದ ಅಬ್ರಹಾಮನು *ದೇವರ ಸ್ನೇಹಿತನೆಂದು ಕರೆಯಲ್ಪಟ್ಟನು. 24 ಆದುದರಿಂದ ಮನುಷ್ಯನು, ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಹೊರತು ಬರೀ ನಂಬಿಕೆಯಿಂದಲ್ಲ ಎಂದು ನೋಡುತ್ತೀರಿ. 25 ಅದೇ ರೀತಿಯಾಗಿ ವೇಶ್ಯೆಯಾದ ರಾಹಾಬಳು ಗೂಢಚಾರರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡು, ಬೇರೆ ದಾರಿಯಿಂದ ಅವರನ್ನು ಕಳುಹಿಸಿದ ಕ್ರಿಯೆಗಳಿಂದಲೇ ನೀತಿವಂತಳೆಂಬ, ನಿರ್ಣಯವನ್ನು ಹೊಂದಿದಳಲ್ಲವೇ? 26 ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿದೆ.
* 2:1 1 ಕೊರಿ 2:8, 2:1 ವ. 9; ಯಾಜ 19:15; ಧರ್ಮೋ 1:17; 10:17; ಜ್ಞಾ. 24:23; ರೋಮಾ. 2:11; ಎಫೆ 6:9: 2:3 ಜ್ಞಾ. 18:23: § 2:4 ಯೋಹಾ 7:24: * 2:5 1 ಕೊರಿ 1:27,28; ಯೋಬ. 34:19: 2:5 2 ಕೊರಿ 8:9; ಪ್ರಕ 2:9; ಲೂಕ 12:21: 2:5 ಯಾಕೋಬ. 1:12: § 2:5 ಮತ್ತಾ 5:3; ಲೂಕ 6:20; 12:32: * 2:6 1 ಕೊರಿ 11:22: 2:6 ಅ. ಕೃ. 8:3; 16:19; 18:12: 2:7 ಯೆಶಾ 63:19; ಆಮೋ. 9:12; ಅ. ಕೃ. 15:17: § 2:8 ಯಾಜ 19:18: * 2:9 ವ. 1: 2:10 ಮತ್ತಾ 5:19; ಗಲಾ. 3:10: 2:11 ವಿಮೋ 20:13,14: § 2:12 ಅಥವಾ, ಬಿಡುಗಡೆಯಾದವರಿಗೆ ಇರುವ. ಯಾಕೋಬ. 1:25: * 2:13 ಯೋಬ. 22:6-11; ಕೀರ್ತ 18:25; ಜ್ಞಾ. 21:13; ಲೂಕ 6:38: 2:14 ಯಾಕೋಬ. 1:22: 2:15 ಯೋಬ. 31:19,20: § 2:16 1 ಯೋಹಾ 3:17,18: * 2:18 ರೋಮಾ. 3:28; ಇಬ್ರಿ. 11:33: 2:18 ಮತ್ತಾ 7:16,17; ಗಲಾ. 5:6: 2:19 ಧರ್ಮೋ 6:4; 1 ಕೊರಿ 8:6: § 2:19 ಮತ್ತಾ 8:29; ಲೂಕ 4:33,34; ಅ. ಕೃ. 16:17; 19:15: * 2:21 ಆದಿ 22:9,12,16-18 2:22 ಇಬ್ರಿ. 11:17: 2:22 1 ಥೆಸ. 1:3: § 2:23 ಆದಿ 15:6; ರೋಮಾ. 4:3; ಗಲಾ. 3:6: * 2:23 2 ಪೂರ್ವ 20:7; ಯೆಶಾ 41:8: 2:25 ಇಬ್ರಿ. 11:31: 2:25 ಯೆಹೋ. 2:1-22; 6:23: